ಗುರುವಾರ , ನವೆಂಬರ್ 26, 2020
20 °C

ಮಕ್ಕಳ ಊಟದ ತಟ್ಟೆಯಲ್ಲಿರಲಿ ಆರೋಗ್ಯಪೂರ್ಣ ಆಹಾರ

ವಿದ್ಯಾಶ್ರೀ ಎಸ್‌. Updated:

ಅಕ್ಷರ ಗಾತ್ರ : | |

ಮಕ್ಕಳಿಗೆ ಚಿಕ್ಕಂದಿನಿಂದ ಯಾವ ರೀತಿಯ ಆಹಾರ ಪದ್ಧತಿಯನ್ನು ರೂಢಿ ಮಾಡುತ್ತೇವೆಯೋ ಅದನ್ನೇ ದೊಡ್ಡವರಾದ ಮೇಲೂ ಮುಂದುವರಿಸುತ್ತಾರೆ. ಹೀಗಾಗಿ ಪುಟ್ಟ ಮಕ್ಕಳಿದ್ದಾಗಲೇ ಪೌಷ್ಟಿಕ ಆಹಾರವನ್ನು ತಿನ್ನಿಸುವ ಅಭ್ಯಾಸ ಬೆಳೆಸಬೇಕು ಎನ್ನುತ್ತಾರೆ ತಜ್ಞರು.

ನನ್ನ ಮಗನಿಗೆ ಚಾಕೊಲೇಟ್‌, ಪ್ಯಾಕೆಟ್‌ ತಿನಿಸುಗಳು ಅಂದ್ರೆ ಅಷ್ಟಕಷ್ಟೆ. ಕಾಳು, ಹಣ್ಣುಗಳನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾನೆ... ಹೀಗೆ ಮಗನ ಆಹಾರ ಕ್ರಮದ ಬಗ್ಗೆ ರಮ್ಯಾ ಗುಣಗಾನ ಮಾಡುತ್ತಿದ್ದರೆ, ಕವಿತಾ ಮತ್ತು ಸರಿತಾಗೆ ಆಶ್ಚರ್ಯ. ‘ನಮ್ಮ ಮಕ್ಕಳೂ ಇದ್ದಾರೆ, ದಿನದ ಮೂರು ಹೊತ್ತು ಕುರುಕಲು ತಿಂಡಿನೇ ಬೇಕು ಅಂತಾರೆ. ಸರಿಯಾಗಿ ಊಟನೇ ಮಾಡಲ್ಲ’ ಎಂದು ಇಬ್ಬರೂ ಪೆಚ್ಚು ಮೋರೆ ಹಾಕಿಕೊಂಡರು.

ಮಕ್ಕಳ ಆಹಾರಕ್ರಮದಲ್ಲಿ ಏಕಿಷ್ಟು ವೈರುಧ್ಯ ಎಂದು ಹುಡುಕ ಹೊರಟರೆ ಅದಕ್ಕೆ ಕಾರಣ ಪೋಷಕರೇ ಎಂಬ ಉತ್ತರ ದೊರಕುತ್ತದೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಮಕ್ಕಳಿಗೆ ಆಹಾರ ಅಭಿರುಚಿಯನ್ನು ಬೆಳೆಸುವವರು ಮನೆಯವರೇ’ ಎನ್ನುತ್ತಾರೆ ವೈದ್ಯರು.

ಚಿಕ್ಕ ಮಕ್ಕಳಿಗೆ ಆಹಾರಗಳ ಒಳಿತು ಕೆಡುಕುಗಳ ಬಗ್ಗೆ ಅರಿವಿರುವುದಿಲ್ಲ. ಮನೆಯಲ್ಲಿ ರೂಢಿಸಿದ್ದಂತೆಯೇ ಅವರ ಆಹಾರ ಪದ್ಧತಿ ಬೆಳೆಯುತ್ತದೆ. ಜಂಕ್‌ಫುಡ್‌ಗಳ ರುಚಿ ಹತ್ತದಂತೆ, ಮನೆಯಲ್ಲಿಯೇ ತಯಾರಿಸಿದ ಆಹಾರಗಳನ್ನು ನೀಡುವುದರಿಂದ ಅವರ ಆರೋಗ್ಯವೂ ಸ್ವಸ್ಥವಾಗಿರುತ್ತದೆ.

‘ಮಗು ಕಡಿಮೆ ಊಟ ಮಾಡಿದರೆ ಪೋಷಕರು ಚಾಕೊಲೇಟ್‌, ಬಿಸ್ಕತ್ತು ಸೇರಿದಂತೆ ಪ್ಯಾಕೆಟ್‌ ತಿಂಡಿಗಳನ್ನು ನೀಡಲು ಪ್ರಾರಂಭಿಸುತ್ತಾರೆ. ಪ್ರಾರಂಭದಲ್ಲಿ ಕಡಿಮೆ ಪ್ರಮಾಣದಲ್ಲಿ ಇರುವ ಈ ಅಭ್ಯಾಸ ಮಗುವಿನ ಹಠದ ಅನುಸಾರವಾಗಿ ಏರುತ್ತಲೇ ಸಾಗುತ್ತದೆ. ಪ್ಯಾಕೆಟ್‌ ತಿನಿಸುಗಳು ರುಚಿಯಾಗಿರುವುದರಿಂದ ಮಕ್ಕಳು ಬಹುಬೇಗ ಆಕರ್ಷಿತರಾಗುತ್ತಾರೆ. ಆಕರ್ಷಕ ಜಾಹೀರಾತುಗಳು ಈ ತಿನಿಸುಗಳ ಮೇಲಿನ ಅವರ ಮೋಹವನ್ನು ಇನ್ನಷ್ಟು ಬಲಗೊಳಿಸುತ್ತವೆ’ ಎನ್ನುತ್ತಾರೆ ಬೆಂಗಳೂರಿನ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಬಿ.ಕೆ. ವಿಶ್ವನಾಥ ಭಟ್‌.

ಜಂಕ್‌ಫುಡ್‌ಗಳಿಂದ ಅವರನ್ನು ಸಂಪೂರ್ಣವಾಗಿ ದೂರ ಇಡುವುದು ಸಾಧ್ಯವಾಗದಿರಬಹುದು. ಆದರೆ, ಮಕ್ಕಳಿಗೆ ನೀಡುವ ಆಹಾರ ಸಮತೋಲಿತವಾಗಿರಬೇಕು. ಯಾವುದೂ ಅತಿ ಹೆಚ್ಚು, ಅತಿ ಕಡಿಮೆ ಆಗಬಾರದು. ಧಾವಂತದ ಬದುಕಿನ ಮಧ್ಯೆಯೂ ಮಕ್ಕಳಿಗೆ ನಮ್ಮ ಆಹಾರ ಪದ್ಧತಿಯಲ್ಲಿ ಆಸಕ್ತಿ ಉಂಟುಮಾಡುವಂಥ ಪ್ರಯೋಗಗಳನ್ನು ಮಾಡಬಹುದು ಎನ್ನುವುದು ಅವರ ಅಂಬೋಣ.

*ಮನೆಯವರ ಆಹಾರಕ್ರಮವೂ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಮನೆಯಲ್ಲಿ ಆರೋಗ್ಯಕರ ಆಹಾರ ಸೇವನೆಗೆ ಆದ್ಯತೆ ನೀಡಿ.

* ಯಾವುದೇ ಮಗು ಒಮ್ಮೆ ಮೆಚ್ಚಿದ್ದನ್ನು ಮತ್ತೊಮ್ಮೆ ಮೆಚ್ಚುವುದಿಲ್ಲ. ದಿನವೂ ಅದಕ್ಕೆ ಬೇರೆಯದೇ ಆಹಾರ, ರುಚಿ ಇರಬೇಕು. ಮಕ್ಕಳಿಗೆ ಕೊಡುವ ಆಹಾರವನ್ನು ವಿವಿಧ ವಿನ್ಯಾಸ, ಬಣ್ಣಗಳಲ್ಲಿ ಮಾಡಿಕೊಟ್ಟರೆ ಅವು ಖುಷಿಯಿಂದ ತಿನ್ನುತ್ತವೆ. ಆಹಾರ ಪೌಷ್ಟಿಕಾಂಶಗಳ ಜತೆಗೆ ಆಕರ್ಷಕವಾಗಿಯೂ ಕಾಣಬೇಕು.

* ಜಂಕ್‌ಫುಡ್‌ಗಳನ್ನು ಮಗು ಕೇಳಿದರೂ, ಅದು ಆರೋಗ್ಯಕ್ಕೆ ಹಾನಿಕರ ಎಂಬುದನ್ನು ಪ್ರೀತಿಯಿಂದ ವಿವರಿಸಿ. ಆ ಕ್ಷಣಕ್ಕೆ ನಿಮ್ಮ ಮಾತು ಕೇಳದಿದ್ದರೂ, ಕ್ರಮೇಣ ಅಂತಹ ತಿನಿಸುಗಳ ಮೇಲೆ ಪ್ರೀತಿ ಕಡಿಮೆ ಆಗುತ್ತದೆ.

* ಎಲ್ಲರೂ ಒಟ್ಟಿಗೆ ಕುಳಿತು, ಹರಟುತ್ತಾ, ನಗುತ್ತಾ ತಿನ್ನುವುದರಿಂದ ಮಗುವೂ ಖುಷಿಯಿಂದ ತಿನ್ನುತ್ತದೆ.

***

ಆಹಾರ ಸಮತೋಲಿತವಾಗಿರಲಿ


ಡಾ.ಬಿ.ಕೆ. ವಿಶ್ವನಾಥ್‌ ಭಟ್

ಪೋಷಕರು ನನ್ನ ಮಗು ಏನನ್ನೂ ತಿನ್ನುತ್ತಿಲ್ಲ ಎಂಬ ಮನಃಸ್ಥಿತಿಯಿಂದ ಮೊದಲು ಹೊರಬರಬೇಕು. ಮಕ್ಕಳಿಗೆ ಜಂಕ್‌ಫುಡ್‌ಗಳ ರುಚಿ ಹತ್ತಲು ಬಿಡಲೇ ಬಾರದು. ಮಕ್ಕಳಿಗೆ ಸಮತೋಲಿತ ಆಹಾರ ನೀಡುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ನಾಲ್ಕು ಹೊತ್ತು ಮಕ್ಕಳಿಗೆ ಸರಿಯಾದ ಸಮಯಕ್ಕೆ ಆಹಾರ ನೀಡಬೇಕು. ಸ್ನ್ಯಾಕ್ಸ್‌ಗೆ ಮನೆಯಲ್ಲಿಯೇ ಕಾಳು, ತರಕಾರಿಗಳಿಂದ ಮಾಡಿದ ಸಲಾಡ್‌ ನೀಡಬಹುದು. ಬಾಲ್ಯದಲ್ಲಿ ಮಕ್ಕಳಲ್ಲಿ ಬೆಳೆಸುವ ಆಹಾರ ಪದ್ಧತಿಯೇ ಅವರ ಬೆಳವಣಿಗೆಯ ಪ್ರತಿ ಹಂತದಲ್ಲಿಯೂ ಮುಂದುವರಿಯುತ್ತದೆ. ಮಗು ಏನಾದರೂ ತಿಂದರೆ ಸಾಕಪ್ಪ ಎಂದು, ಅದು ಕೇಳಿದ್ದನೆಲ್ಲಾ ಕೊಟ್ಟು ಹೊಟ್ಟೆ ತುಂಬಿಸುವ ಪರಿಪಾಠವನ್ನು ಮೊದಲು ಬಿಡಬೇಕು.

- ಡಾ.ಬಿ.ಕೆ. ವಿಶ್ವನಾಥ್‌ ಭಟ್‌, ಮಕ್ಕಳ ತಜ್ಞರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು