ಶನಿವಾರ, ಸೆಪ್ಟೆಂಬರ್ 26, 2020
27 °C

ತಾಯಿಯಿಂದ ಶಿಶುವಿಗೆ ಸೋಂಕು ಹರಡಬಹುದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

‘ಹೆ ಪಟೈಟಿಸ್‌ ಬಿ ಸೋಂಕು ತಾಯಿಯಿಂದ ಶಿಶುವಿಗೆ ಹರಡುವ ಸಾಧ್ಯತೆಯನ್ನು ಹೆರಿಗೆ ಸಂದರ್ಭದಲ್ಲೇ ತಡೆಗಟ್ಟಬಹುದು. ಗರ್ಭಿಣಿಗೆ ಈ ಸೋಂಕಿನ ಲಕ್ಷಣವಿಲ್ಲದಿದ್ದರೂ ತಪಾಸಣೆ ಮಾಡಿಸುವುದು ಸೂಕ್ತ’ ಎನ್ನುತ್ತಾರೆ ಬೆಂಗಳೂರಿನ ಬಿಜಿಎಸ್‌ ಗ್ಲೆನೆಗಲ್ಸ್‌ ಗ್ಲೋಬಲ್‌ ಆಸ್ಪತ್ರೆಯ ಕನ್ಸಲ್ಟೆಂಟ್‌, ಹೆಪಟಾಲಜಿ ಮತ್ತು ಟ್ರಾನ್ಸ್‌ಪ್ಲಾಂಟ್‌ ತಜ್ಞ ಡಾ. ಕಿರಣ್‌ಕುಮಾರ್‌. ಅವರು ‘ಅಂತರರಾಷ್ಟ್ರೀಯ ಹೆಪಟೈಟಿಸ್‌ ಬಿ ಜಾಗೃತಿ ದಿನ’ ವಾದ ಇಂದು ಈ ಕುರಿತಂತೆ ಉಪಯುಕ್ತ ಮಾಹಿತಿ ಹಂಚಿಕೊಂಡಿದ್ದಾರೆ.

ಹೆಪಟೈಟಿಸ್‌ ಬಿ ಎಂದರೇನು?

ಯಕೃತ್ತಿನಲ್ಲಿ ಉರಿಯೂತ ಉಂಟು ಮಾಡುವ ಹೆಪಟೈಟಿಸ್‌ ಬಿ ವೈರಸ್‌ (ಎಚ್‌ಬಿವಿ) ಒಮ್ಮೆ ದೇಹವನ್ನು ಪ್ರವೇಶಿಸಿದರೆ ಸಾಕು, ಇದು ಆ ವ್ಯಕ್ತಿಯ ದೇಹದಲ್ಲಿ ಜೀವನ ಪರ್ಯಂತವಿರುತ್ತದೆ.

ಈ ಸೋಂಕು ತಾಯಿಯಿಂದ ಶಿಶುವಿಗೆ ಹರಡಬಹುದೇ?

ಇದು ಸೋಂಕಿತರಲ್ಲಿ ಯಾವುದೇ ಲಕ್ಷಣವನ್ನು ತೋರಿಸದೇ ಇರಬಹುದು. ಅಂತಹ ಬಹಳಷ್ಟು ಮಂದಿ ಎಚ್‌ಬಿವಿಯೊಂದಿಗೆ ಬದುಕುತ್ತಿದ್ದಾರೆ. ಗರ್ಭಿಣಿಯರಲ್ಲೂ ಕೂಡ ಲಕ್ಷಣರಹಿತ ಎಚ್‌ಬಿವಿ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಇದು ಹೆರಿಗೆಯ ಸಂದರ್ಭದಲ್ಲಿ ತಾಯಿಯಿಂದ ಮಗುವಿಗೆ ಹರಡಬಹುದು. ಸಹಜ ಹೆರಿಗೆಯಿರಲಿ ಅಥವಾ ಸಿ– ಸೆಕ್ಷನ್‌ ಮೂಲಕವಿರಲಿ, ಸೋಂಕು ಹರಡಬಹುದಾದ್ದರಿಂದ ಗರ್ಭಿಣಿಯರು ಈ ಸೋಂಕಿನ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು. ಲಸಿಕೆಯ ಮೂಲಕ ಮಗುವಿಗೆ ಸೋಂಕಾಗದಂತೆ ತಡೆಯಲು ಸಾಧ್ಯವಿದೆ.


ಡಾ.ಕಿರಣ್‌ಕುಮಾರ್‌

ಶಿಶುಗಳಲ್ಲಿ ಎಷ್ಟು ಅಪಾಯಕಾರಿ?

ಶಿಶುಗಳಲ್ಲಿ ರೋಗ ನಿರೋಧಕ ಶಕ್ತಿ ದುರ್ಬಲವಿರುವುದರಿಂದ ಎಚ್‌ಬಿವಿ ಸೋಂಕು ತಗಲುವ ಸಾಧ್ಯತೆ ಶೇ 90ರಷ್ಟು. ಜೀವನದುದ್ದಕ್ಕೂ ಇರುವ ಇದು ಕ್ರೋನಿಕ್‌ ಹೆಪಟೈಟಿಸ್‌ ಬಿ. ಈ ಹಂತದವರಲ್ಲಿ ಶೇ 25ರಷ್ಟು ಮಂದಿಯಲ್ಲಿ ತೀವ್ರತರದ ಯಕೃತ್ತಿನ ಸಮಸ್ಯೆ ಕಾಣಿಸುವುದಲ್ಲದೇ ಯಕೃತ್ತಿನ ಸಿರೋಸಿಸ್‌ ಹಾಗೂ ಯಕೃತ್ತಿನ ಕ್ಯಾನ್ಸರ್‌ ಕಾಣಿಸಿಕೊಳ್ಳಬಹುದು.

ಸೋಂಕು ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ?

ತಾಯಿಯಿಂದ ಮಗುವಿಗೆ ಹೆಪಟೈಟಿಸ್‌ ಬಿ ಬರದಂತೆ ಹೆರಿಗೆಯಾದ ತಕ್ಷಣ ಎರಡು ಬಗೆಯ ಚುಚ್ಚುಮದ್ದುಗಳನ್ನು ನೀಡಬೇಕಾಗುತ್ತದೆ. ಒಂದು ಹೆಪಟೈಟಿಸ್‌ ಬಿ ಲಸಿಕೆ, ಇನ್ನೊಂದು ಆ್ಯಂಟಿಬಾಡಿ ಎಚ್‌ಬಿಐಜಿ. ಇದು ವೈರಸ್‌ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ. ಮಗು ಜನಿಸಿದ 12 ಗಂಟೆಯೊಳಗೆ ಇದನ್ನು ನೀಡಿದರೆ ಅಪಾಯದ ಸಾಧ್ಯತೆ ಕಡಿಮೆ. ತಾಯಿಗೆ ಸೋಂಕು ಇರದಿದ್ದರೆ, ಹೆಪಟೈಟಿಸ್‌ ಬಿ ಲಸಿಕೆ ಸಾಕು.

ಯಾವುದರಿಂದ ಸೋಂಕು ಹರಡುವುದಿಲ್ಲ?

ಸ್ತನ್ಯಪಾನ: ಸೋಂಕಿರುವ ತಾಯಿ ಮಗುವಿಗೆ ಹಾಲೂಡಿಸಬಹುದು.

ಸೋಂಕಿರುವವರು ಮಾಡಿದ ಅಡುಗೆಯನ್ನು ಇತರರು ಸೇವಿಸಿದರೆ ಅದರ ಮೂಲಕವೇನೂ ಹರಡಲಾರದು.

ಸೋಂಕಿತ ವ್ಯಕ್ತಿ ಮಗುವನ್ನು ಅಪ್ಪಿ, ಮುದ್ದಾಡುವುದರಿಂದ ತೊಂದರೆಯೇನೂ ಇಲ್ಲ. ಇದು ಕೆಮ್ಮು ಅಥವಾ ಸೀನುವುದರಿಂದ ಕೂಡ ಹರಡಲಾರದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು