ಮಂಗಳವಾರ, ಫೆಬ್ರವರಿ 25, 2020
19 °C

ಕ್ಯಾಲರಿ ಕರಗಿಸಲು ಎಚ್‌ಐಐಟಿ ವ್ಯಾಯಾಮಗಳು

ಪೃಥ್ವಿರಾಜ್ Updated:

ಅಕ್ಷರ ಗಾತ್ರ : | |

Prajavani

ಜಿಮ್‌ಗಳಿಗೆ ಹೋಗುವವರು, ದೇಹದ ತೂಕ ಇಳಿಸಿಕೊಳ್ಳಲು ಇಚ್ಛಿಸುವವರು, ಸಪೂರವಾಗಬೇಕೆಂದು ಬಯಸುವವರಿಗೆ ಬಹುತೇಕರು ನೀಡುವ ಸಲಹೆ ‘ದೇಹದಲ್ಲಿನ ಕ್ಯಾಲೊರಿಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು’ ಎಂಬುದು. ಕ್ಯಾಲೊರಿಗಳನ್ನು ಕರಗಿಸಲು ಹಲವು ವ್ಯಾಯಾಮಗಳು ಮಾಡಬಹುದು. ಆದರೆ ಎಚ್‌ಐಐಟಿ ವ್ಯಾಯಾಮಗಳು ಹೆಚ್ಚು ಸೂಕ್ತ ಮತ್ತು ಉಪಯೋಗಕಾರಿ. ಈ ವ್ಯಾಯಾಮಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಫಿಟ್‌ನೆಸ್ ಕಾಪಾಡಿಕೊಳ್ಳಬೇಕೆಂದು ಬಯಸುವವರು ದೇಹದಂಡಿಸುವುದು ಅನಿವಾರ್ಯ. ಆದರೆ ಸಮಯದ ಅಭಾವದಿಂದಲೋ, ಸ್ಥಳಾವಕಾಶದ ಕೊರತೆಯಿಂದಲೊ ಹಲವರಿಗೆ ವ್ಯಾಯಾಮ ಮಾಡುವ ಆಸಕ್ತಿ ಬರುವುದಿಲ್ಲ. ಇಂಥವರಿಗೆ ಹೈ ಇಂಟೆನ್ಸಿಟಿ ಇಂಟರ್ವೆಲ್‌ ಟ್ರೇನಿಂಗ್ (ಎಚ್‌ಐಐಟಿ) ವ್ಯಾಯಾಮಗಳು ಹೆಚ್ಚು ಸೂಕ್ತ ಮತ್ತು ಅನುಕೂಲಕರ.

ಸೀಮಿತ ಕಾಲಾವಧಿಯಲ್ಲೇ ಮಾಡಬಹುದಾದ ಈ ವ್ಯಾಯಾಮಗಳು ಕ್ಯಾಲೊರಿಗಳನ್ನು ಕರಗಿಸಲು ಹೆಚ್ಚು ನೆರವಾಗುತ್ತವೆ. ಹೀಗಾಗಿ ತೂಕ ಇಳಿಸಿಕೊಳ್ಳಬೇಕು ಎನ್ನುವವರಿಗೆ ಇವು ಹೆಚ್ಚು ಸೂಕ್ತ. ಈ ವ್ಯಾಯಾಮಗಳನ್ನು ಮಾಡುವುದಕ್ಕೆ ಉಪಕರಣಗಳಾಗಲಿ, ವಸ್ತುಗಳಾಗಲಿ ಅಗತ್ಯವಿಲ್ಲ.

ಫಿಟ್‌ನೆಸ್‌ ತರಬೇತುದಾರರು, ಜಿಮ್‌ ಕೇಂದ್ರಗಳನ್ನು ನಡೆಸುವವರು ಈಚೆಗೆ ಈ ವ್ಯಾಯಾಮಗಳ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಮಿಷನ್ ಲೀನ್ ಸಂಸ್ಥೆಯ ಸಂಸ್ಥಾಪಕ ಲ್ಯೂಡಾ ಬೌಜಿನೊವಾ ಅವರು ಈಚೆಗೆ 20 ನಿಮಿಷದಲ್ಲಿ ಮಾಡಬಹುದಾದ ಎಚ್‌ಐಐಟಿ ವ್ಯಾಯಾಮವೊಂದನ್ನು ಪರಿಚಯಿಸಿದ್ದಾರೆ.

‘ಎಚ್‌ಐಐಟಿ ವ್ಯಾಯಾಮಗಳನ್ನು ಅಭ್ಯಾಸ ಮಾಡುವುದರಿಂದ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗುತ್ತದೆ. ನಿತ್ಯ ಅಭ್ಯಾಸ ಮಾಡುವುದರಿಂದ ಉಸಿರಾಟದ ಸಮಸ್ಯೆಗಳೂ ಕಾಡುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಎಚ್‌ಐಐಟಿ ವ್ಯಾಯಾಮದಿಂದ ಆಗುವ ಬಹುಮುಖ್ಯ ಅನುಕೂಲವೆಂದರೆ, ದೇಹದ ಚಯಾಪಚ ಕ್ರಿಯೆಗಳು ಚುರುಕಾಗುತ್ತವೆ. ಇದರಿಂದ ದೀರ್ಘಕಾಲಿಕ ಪ್ರಯೋಜನಗಳೇ ಹೆಚ್ಚು’ ಎಂದು ಹೇಳುತ್ತಾರೆ ಅವರು.

ಹಲವು ಅನುಕೂಲಗಳು

ಮುಂಜಾನೆಯಲ್ಲಿ ಸಾಧ್ಯವಾದಷ್ಟು ಖಾಲಿ ಹೊಟ್ಟೆಯಲ್ಲಿ ಈ ವ್ಯಾಯಾಮ ಮಾಡುವುದು ಒಳಿತು. ಸೀಮಿತಾವಧಿಯ ವ್ಯಾಯಾಮವಾಗಿರುವುದರಿಂದ ಸುಸ್ತು, ಆಯಾಸ ಎಂಬ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಎಚ್‌ಐಐಟಿ ವ್ಯಾಯಾಮ ಮಾಡುವಾಗ ಮುಖ್ಯವಾಗಿ ದೇಹದ ಎಲ್ಲ ಅಂಗಾಂಗಗಳಿಗೂ ಕಸರತ್ತು ನೀಡಿದಂತಾಗುತ್ತದೆ. ಹೀಗಾಗಿ ಮಾಂಸಖಂಡಗಳು ಹೆಚ್ಚು ದೃಢವಾಗುತ್ತವೆ.

ಎಚ್‌ಐಐಟಿಯಲ್ಲಿ ಹಲವು ವ್ಯಾಯಾಮಗಳಿದ್ದು, ಅನುಕೂಲ ಎನಿಸಿದ್ದನ್ನು ಅಭ್ಯಸಿಸಬಹುದು. ಆದರೆ ಪ್ರತಿ ವ್ಯಾಯಾಮದ ನಡುವೆ 2 ನಿಮಿಷವಷ್ಟೇ ಅಂತರವಿರಬೇಕು. ಇದರಿಂದ ಕ್ಯಾಲೊರಿಗಳು ಮತ್ತು ಅಧಿಕ ಪ್ರಮಾಣದಲ್ಲಿ ಸೇರಿರುವ ಕೊಬ್ಬು ಕರಗುವುದಕ್ಕೆ ನೆರವಾಗುತ್ತದೆ. 

ಕೆಲವು ಎಚ್‌ಐಐಟಿ ವ್ಯಾಯಾಮಗಳು

ಬರ್ಪೀಸ್‌: 8 ಬಾರಿ

ಟ್ರಿಸೆಪ್ ಡಿಪ್ಸ್‌: 15 ಬಾರಿ

ಸ್ನ್ಯಾಪ್ ಜಂಪ್ಸ್: 8 ಬಾರಿ

ಲೆಗ್ ರೈಸೆಸ್‌: 15 ಬಾರಿ

ಲಂಗ್ ಜಂಪ್ಸ್: 8 ಬಾರಿ

ಸುಮೊ ಸ್ಕ್ವಾಟ್ : 15 ಬಾರಿ

ಮಾಡುವುದು ಹೇಗೆ?

ಹಲವು ಎಚ್‌ಐಐಟಿ ವ್ಯಾಯಾಮಗಳು ನಮಗೆ ಈಗಾಗಲೇ ಗೊತ್ತಿವೆ. ಪುಷ್‌ ಅಪ್ಸ್‌, ಬರ್ಪೀಸ್‌ನಂತಹ ವ್ಯಾಯಾಮಗಳು ಎಚ್‌ಐಐಟಿ ವ್ಯಾಯಾಮಗಳೇ. ಆದರೆ ಇವನ್ನು ಕ್ರಮಬದ್ಧವಾಗಿ ಮಾಡುವುದಕ್ಕೆ ಗೊತ್ತಿರಬೇಕು. ಆಗಷ್ಟೇ ವ್ಯಾಯಾಮಕ್ಕೆ ಹೆಚ್ಚು ಪ್ರತಿಫಲ ದೊರೆಯಲು ಸಾಧ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು