ಗುರುವಾರ , ಜನವರಿ 28, 2021
27 °C
ವಿಶ್ವ ಏಡ್ಸ್‌ ದಿನ ಇಂದು : ಶಿವಮೊಗ್ಗ, ಕೊಡಗಿನವರಲ್ಲಿ ಕಾಣದ ಸೋಂಕು

ಗರ್ಭಿಣಿಯರಲ್ಲಿ ಎಚ್‌ಐವಿ: ಬೆಂಗಳೂರು ನಗರದಲ್ಲೇ ಹೆಚ್ಚು

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಬಳ್ಳಾರಿ: ರಾಜ್ಯದಲ್ಲೇ ಬೆಂಗಳೂರು ನಗರದ ಗರ್ಭಿಣಿಯರಲ್ಲಿ ಎಚ್ಐವಿ ಸೋಂಕು ಅತಿ ಹೆಚ್ಚು ಕಂಡು ಬಂದಿದೆ. ಗರ್ಭಿಣಿಯರಲ್ಲದವರಿಗೆ ಸೋಂಕು ತಗುಲಿರುವ ವಿಷಯದಲ್ಲಿ ಮಹಾನಗರವು 3ನೇ ಸ್ಥಾನದಲ್ಲಿದೆ. ಈ ಎರಡರಲ್ಲಿಯೂ ವಿಜಯಪುರ 2ನೇ ಸ್ಥಾನದಲ್ಲಿದ್ದರೆ, ಕೊಡಗು ಮತ್ತು ಶಿವಮೊಗ್ಗದ ಗರ್ಭಿಣಿಯರಲ್ಲಿ ಸೋಂಕು ಕಂಡು ಬಂದಿಲ್ಲ ಎಂದು ಆರೋಗ್ಯ ಇಲಾಖೆಯ ಸಮೀಕ್ಷೆಯ ಅಂಕಿ–ಅಂಶಗಳು ತಿಳಿಸುತ್ತವೆ.

ಸಾಮಾನ್ಯರಲ್ಲಿ ಅತಿ ಹೆಚ್ಚು ಸೋಂಕು ತಗುಲಿರುವ ಜಿಲ್ಲೆ ಬಾಗಲಕೋಟೆ, ಗರ್ಭಿಣಿಯರಿಗೆ ಸೋಂಕಿನ ವಿಚಾರದಲ್ಲಿ 3ನೇ ಸ್ಥಾನದಲ್ಲಿದೆ. ಬೆಳಗಾವಿ, ದಾವಣಗೆರೆಯಲ್ಲೂ ಗರ್ಭಿಣಿಯರಿಗೆ ಹೆಚ್ಚು ಸೋಂಕು ತಗುಲಿದ್ದು, ಇವು ಎರಡನೇ ಸ್ಥಾನದಲ್ಲಿವೆ.

ಗರ್ಭಿಣಿಯರಲ್ಲಿ ಸೋಂಕು ಪತ್ತೆಗೆ ಸಂಬಂಧಿಸಿ ಪ್ರತಿ ಎರಡು ವರ್ಷಕ್ಕೊಮ್ಮೆ ಆರೋಗ್ಯ ಇಲಾಖೆಯು ಸಮೀಕ್ಷೆ (HIV Sentinel surveillance) ನಡೆಸುತ್ತಿದ್ದು, 2018–19ರಲ್ಲಿ ನಡೆದಿರುವ ಸಮೀಕ್ಷೆಯ ಅಂಕಿ–ಅಂಶ ಬಿಡುಗಡೆಯಾಗಿದೆ. 2020–21ನೇ ಸಾಲಿನ ಸಮೀಕ್ಷೆಗೆ ಇಲಾಖೆಯು ಸಿದ್ಧತೆ ನಡೆಸಿದೆ.

ರಾಯಚೂರು 4ನೇ ಸ್ಥಾನದಲ್ಲಿದ್ದರೆ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಧಾರವಾಡ, ಕಲಬುರ್ಗಿ, ಹಾವೇರಿ, ತುಮಕೂರು, ಉಡುಪಿ, ಯಾದಗಿರಿ 5ನೇ ಸ್ಥಾನದಲ್ಲಿವೆ. ಬೀದರ್‌, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಗದಗ, ಹಾಸನ, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, 6ನೇ ಸ್ಥಾನದಲ್ಲಿವೆ. ಬಳ್ಳಾರಿ, ಕೊಡಗು, ಶಿವಮೊಗ್ಗ 7ನೇ ಸ್ಥಾನದಲ್ಲಿವೆ.

‘ಜಿಲ್ಲಾ, ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆಗೊಳಗಾಗುವ ಗರ್ಭಿಣಿಯರ ಎಚ್‌ಐವಿ ವರದಿಯ 1,200 ಮಾದರಿಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗುತ್ತದೆ. ನಗರ ಪ್ರದೇಶಗಳಲ್ಲಿ 800 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 400 ಗರ್ಭಿಣಿಯರ ವರದಿಯನ್ನು ಅದಕ್ಕಾಗಿ ಪರಿಗಣಿಸಲಾಗುತ್ತದೆ’ ಎಂದು ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ ತಿಳಿಸಿದರು.

‘ಗರ್ಭಿಣಿಯರಿಗೆ ಕಡ್ಡಾಯವಾಗಿ ಎಚ್‌ಐವಿ ತಪಾಸಣೆ ಮಾಡಲಾಗುತ್ತದೆ. ಗರ್ಭದಲ್ಲಿದ್ದಾಗ, ಹೆರಿಗೆ ಸಂದರ್ಭದಲ್ಲಿ ಹಾಗೂ ಎದೆಹಾಲುಣಿಸುವ ಸಂದರ್ಭಗಳಲ್ಲಿ ಮಗುವಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಗರ್ಭಿಣಿಯರ ಸೋಂಕಿನ ಕುರಿತು ಹೆಚ್ಚು ಕಾಳಜಿ ವಹಿಸಲಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು