ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣು ರೆಪ್ಪೆ ಹೊಟ್ಟಿನ ನಿವಾರಣೆಗೆ ಮನೆಮದ್ದು

Last Updated 9 ಜುಲೈ 2020, 9:52 IST
ಅಕ್ಷರ ಗಾತ್ರ

ತಲೆಹೊಟ್ಟು ಇಂದು ಅನೇಕರನ್ನು ಕಾಡುವ ಸಾಮಾನ್ಯ ಸಮಸ್ಯೆ. ಆದರೆ ಕಣ್ಣಿನ ರೆಪ್ಪೆ ಹಾಗೂ ಹುಬ್ಬಿನಲ್ಲೂ ಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.ಕಣ್ಣಿನ ರೆಪ್ಪೆಗಳ ಉರಿಯೂತ ಹಾಗೂ ಚರ್ಮದ ಅತಿ ಮೇದಸ್ರಾವದ ಕಾರಣದಿಂದ ಕಣ್ಣಿನ ರೆಪ್ಪೆ ಹಾಗೂ ಹುಬ್ಬಿನಲ್ಲಿ ಹೊಟ್ಟು ಕಾಣಿಸಿಕೊಳ್ಳಬಹುದು. ರೆಪ್ಪೆಯಲ್ಲಿ ಹೊಟ್ಟು ಕಾಣಿಸಿಕೊಂಡಾಗ ಉರಿಯಾಗುವುದು, ಕಿರಿಕಿರಿ ಎನ್ನಿಸುವುದು ಸಾಮಾನ್ಯ. ನಂತರ ದೀರ್ಘಕಾಲದವರೆಗೂ ಚರ್ಮದಲ್ಲಿ ಉರಿಯೂತ ಕಾಣಿಸಿಕೊಳ್ಳಬಹುದು. ಮನೆಯಲ್ಲೇ ಇರುವ ಕೆಲವೊಂದು ವಸ್ತುಗಳಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇಂತಹ ಕೆಲವು ವಸ್ತುಗಳು ಹಾಗೂ ಅವುಗಳನ್ನು ಉಪಯೋಗಿಸುವ ವಿಧಾನ ಇಲ್ಲಿದೆ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯು ನೋವು ನಿವಾರಕವಾಗಿದೆ. ಕಣ್ಣಿನ ಸುತ್ತಲೂ ಹಾಗೂ ಹುಬ್ಬಿಗೆ ಬಾದಾಮಿ ಎಣ್ಣೆಯನ್ನು ಹಚ್ಚುವುದರಿಂದ ಕೂದಲಿನ ಫಾಲಿಕಲ್ಸ್‌ ಮರುಜೀವ ಪಡೆದುಕೊಳ್ಳುತ್ತವೆ.

ಬಳಸುವ ವಿಧಾನ: ಮೊದಲು ಒಂದು ಟೇಬಲ್ ಚಮಚ ಬಾದಾಮಿ ಎಣ್ಣೆಯನ್ನು ಬಿಸಿಮಾಡಿ. ರಾತ್ರಿ ಮಲಗುವ ಮೊದಲು ಉಗುರು ಬೆಚ್ಚಗಿನ ಎಣ್ಣೆಯನ್ನು ಕಣ್ಣಿನ ಸುತ್ತಲೂ, ರೆಪ್ಪೆ ಹಾಗೂ ಹುಬ್ಬಿನ ಮೇಲೆ ಹಚ್ಚಿ ನಿಧಾನಕ್ಕೆ ಮಸಾಜ್ ಮಾಡಿ. ರಾತ್ರಿ ಪೂರ್ತಿ ಹಾಗೇ ಇರಲಿ. ಬೆಳಿಗ್ಗೆ ಎದ್ದು ತಣ್ಣೀರಿನಿಂದ ತೊಳೆದುಕೊಳ್ಳಿ.

ಹರಳೆಣ್ಣೆ

ಹರಳೆಣ್ಣೆ ಕೂದಲು ಹಾಗೂ ಚರ್ಮದ ಸಮಸ್ಯೆಗೆ ಒಳ್ಳೆಯ ಪರಿಹಾರ. ತಲೆಹೊಟ್ಟು ಹಾಗೂ ರೆಪ್ಪೆಯ ಹೊಟ್ಟಿಗೂ ಹರಳೆಣ್ಣೆ ಸಹಕಾರಿ. ಇದು ಹೊಟ್ಟನ್ನು ನಿವಾರಿಸುವುದಲ್ಲದೇ ಕೂದಲು ಬೆಳೆಯಲು ಕೂಡ ನೆರವಾಗುತ್ತದೆ. ‌

ಬಳಸುವ ವಿಧಾನ: ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿನಿಂದ ಕಣ್ಣಿನ ಸುತ್ತಲೂ ಚೆನ್ನಾಗಿ ಸ್ವಚ್ಛ ಮಾಡಿಕೊಳ್ಳಿ. ನಂತರ ಹುಬ್ಬು, ರೆಪ್ಪೆ ಹಾಗೂ ಕಣ್ಣಿನ ಸುತ್ತಲೂ ಹರಳೆಣ್ಣೆ ಹಚ್ಚಿಕೊಂಡು ರಾತ್ರಿ ಹಾಗೇ ಬಿಡಿ. ಬೆಳಿಗ್ಗೆ ಎದ್ದು ಉಗುರು ಬೆಚ್ಚಗಿನ ನೀರಿನಿಂದ ಕಣ್ಣನ್ನು ತೊಳೆದುಕೊಳ್ಳಿ. ಇದರಿಂದ ಬೇಗನೆ ಈ ಸಮಸ್ಯೆಯಿಂದ ಪಾರಾಗಬಹುದು. ರೆಪ್ಪೆಯ ಕೂದಲೂ ಸೊಂಪಾಗಿ ಬೆಳೆಯುತ್ತದೆ.

ಟೀ ಟ್ರೀ ಎಣ್ಣೆ

ಟೀ ಟ್ರೀ ಎಣ್ಣೆಯಲ್ಲಿ ಶಿಲೀಂಧ್ರ ವಿರೋಧಿ ಗುಣ ಅಧಿಕವಾಗಿದೆ.

ಬಳಸುವ ವಿಧಾನ: ಮೊದಲು ಒಂದು ಚಮಚ ಟೀ ಟ್ರೀ ಎಣ್ಣೆಯನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡಿ. ನಂತರ ಹತ್ತಿಯ ಸಹಾಯದಿಂದ ರೆಪ್ಪೆ ಹಾಗೂ ಹುಬ್ಬಿನ ಮೇಲೆ ಹಚ್ಚಿ. ಹತ್ತು ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಇದನ್ನು ದಿನದಲ್ಲಿ ಮೂರು ಬಾರಿ ಮಾಡುವುದರಿಂದ ಬೇಗನೇ ಹೊಟ್ಟು ನಿವಾರಣೆಯಾಗುತ್ತದೆ.

ಬಿಸಿ ನೀರಿನ ಶಾಖ

ಒಣಗಿದ ಚರ್ಮ ಹಾಗೂ ಉರಿಯೂತವು ಕಣ್ಣಿನ ರೆಪ್ಪೆಯ ಹೊಟ್ಟಿಗೆ ಕಾರಣವಿರಬಹುದು. ಅದರಿಂದ ತಕ್ಷಣಕ್ಕೆ ಪರಿಹಾರ ಪಡೆಯಲು ಕಣ್ಣಿಗೆ ಬಿಸಿನೀರಿನ ಶಾಖ ಕೊಡಬೇಕು.

ವಿಧಾನ: ಮೊದಲು ನೀರನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಿ. ಒಗೆದು ಒಣಗಿಸಿದ ಸ್ವಚ್ಛ ಬಟ್ಟೆಯನ್ನು ಕೆಲ ನಿಮಿಷಗಳ ಕಾಲ ನೀರಿನಲ್ಲಿ ಅದ್ದಿ ಇಡಿ. ನಂತರ ಬಟ್ಟೆಯನ್ನು ಹಿಂಡಿಕೊಂಡು ಕಣ್ಣಿನ ಸುತ್ತಲೂ ಇರಿಸಿಕೊಳ್ಳಿ. ಹದಿನೈದು ನಿಮಿಷ ಹಾಗೇ ಬಿಡಿ. ಪ್ರತಿದಿನ ಹೀಗೆ ಮಾಡಿ. ಆದಷ್ಟು ಬೇಗ ಈ ಸಮಸ್ಯೆಯಿಂದ ಮುಕ್ತಿ ಹೊಂದುತ್ತೀರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT