ಬುಧವಾರ, ಜನವರಿ 19, 2022
28 °C

ಫಲವಂತಿಕೆ ಚಿಕಿತ್ಸೆ: ಕಾಯುವಿಕೆಗೆ ಕೊನೆಯೆಂದು?

ಡಾ. ವಿದ್ಯಾ ಭಟ್ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗದ ದಂಪತಿ ಅನಿಲ್‌ ಮತ್ತು ರೇಣುಕಾಗೆ ಮದುವೆಯಾಗಿ 6–7 ವರ್ಷಗಳಾದರೂ ಮಕ್ಕಳಿಲ್ಲ. ಸ್ಥಳೀಯ ವೈದ್ಯರ ಚಿಕಿತ್ಸೆ ಪಡೆದರೂ ಪ್ರಯೋಜನವಾಗದಿದ್ದಾಗ ಬೆಂಗಳೂರಿನಲ್ಲಿ ಆಧುನಿಕ ಚಿಕಿತ್ಸೆ ನೀಡುವ ಆಸ್ಪತ್ರೆಯ ಮೊರೆ ಹೋದರು. ಐವಿಎಫ್‌ ಚಿಕಿತ್ಸೆ ಆಗಷ್ಟೇ ಆರಂಭಿಸಿದ್ದರಷ್ಟೇ. ಆದರೆ ಕೋವಿಡ್‌ ಕಾರಣದಿಂದಾಗಿ ಅರ್ಧಕ್ಕೇ ನಿಲ್ಲಿಸಬೇಕಾಯಿತು. ಕೋವಿಡ್‌ ಕಡಿಮೆಯಾದ ಮೇಲೆ ಪುನಃ ಚಿಕಿತ್ಸೆ ಆರಂಭಿಸುವುದಾಗಿ ವೈದ್ಯರು ಭರವಸೆಯನ್ನೇನೋ ನೀಡಿದ್ದರು. ಆದರೆ ಒಂದೂವರೆ ವರ್ಷದ ನಂತರ ಇನ್ನಿತರ ಆರೋಗ್ಯ ಸಮಸ್ಯೆಗಳಿಂದಾಗಿ ಸಂತಾನಹೀನತೆಗೆ ಚಿಕಿತ್ಸೆ ಪಡೆಯಲು ದಂಪತಿ ಹಿಂದೆಮುಂದೆ ನೋಡುತ್ತಿದ್ದಾರೆ.

ಇದು ಅನಿಲ್‌– ರೇಣುಕಾ ಸಮಸ್ಯೆ ಮಾತ್ರವಲ್ಲ, ಕೋವಿಡ್-19 ಸಾಂಕ್ರಾಮಿಕವು ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದಂತೆಯೇ ಮಕ್ಕಳಿಗಾಗಿ ಪರಿತಪಿಸುತ್ತಿರುವ ದಂಪತಿ ಮೇಲೆ ಒತ್ತಡ ಜಾಸ್ತಿ ಮಾಡಿದೆ. ಭಾವನಾತ್ಮಕ, ಸಾಮಾಜಿಕ, ವೈಯಕ್ತಿಕ ಮತ್ತು ಹಣಕಾಸು ಪರಿಸ್ಥಿತಿಗಳಿಂದಾಗಿ ಒತ್ತಡ ಉಂಟಾಗುತ್ತಿದ್ದು, ಪೋಷಕರಾಗಲು ಬಯಸುವ ದಂಪತಿ ಹತಾಶರಾಗಿದ್ದಾರೆ. ದೇಶದಲ್ಲಿ ಕೋವಿಡ್‌ ಹಿನ್ನೆಲೆಯಲ್ಲಿ ರೂಪುಗೊಂಡ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಸೂಚಿಗಳಿಂದಾಗಿ ಸಾಕಷ್ಟು ಜನರು ಉದ್ಯೋಗ ಕಳೆದುಕೊಂಡರು. ಕುಟುಂಬದಲ್ಲಿ ದುಡಿಯುವ ಕೈಗಳ ಸಂಖ್ಯೆಯೂ ಕಡಿಮೆಯಾಯಿತು. ಆರ್ಥಿಕ ಪರಿಸ್ಥಿತಿಯಿಂದಾಗಿ ಫಲವಂತಿಕೆ ಚಿಕಿತ್ಸೆಯನ್ನು ತಿಂಗಳುಗಟ್ಟಲೆ ಸ್ಥಗಿತಗೊಳಿಸಬೇಕಾಯಿತು.

ವಿಶ್ವದಾದ್ಯಂತ ಸಂತಾನಹೀನತೆ ಎಂಬುದು ಗಂಭೀರ ಸಮಸ್ಯೆ. ವಿಶ್ವದಾದ್ಯಂತ ಶೇ 8-10 ರಷ್ಟು ದಂಪತಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. 60-80 ಮಿಲಿಯನ್ ದಂಪತಿಗಳು ಪ್ರತಿವರ್ಷ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಭಾರತ ಒಂದರಲ್ಲೇ ಇವರ ಸಂಖ್ಯೆ 15 ರಿಂದ 20 ಮಿಲಿಯನ್ (ಶೇ 25)ನಷ್ಟು.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಪ್ರತಿ ನಾಲ್ಕು ದಂಪತಿಗಳ ಪೈಕಿ ಒಂದು ದಂಪತಿಯಲ್ಲಿ ಸಂತಾನಹೀನತೆ ಕಂಡುಬರುತ್ತಿದೆ. ಭಾರತದಲ್ಲಿ ಪ್ರಾಥಮಿಕ ಸಂತಾನಹೀನತೆ ಪ್ರಮಾಣ ಶೇ 3.9 ರಿಂದ 16.8 ರಷ್ಟಿದೆ ಎಂದು ಅಂದಾಜಿಸಲಾಗಿದೆ.

ಮನೆಯಿಂದಲೇ ಕಚೇರಿ ಕೆಲಸವೂ ಒಂದು ಕಾರಣವೇ?

ಮನೆಯಿಂದಲೇ ಹೆಚ್ಚು ಸಮಯದವರೆಗೆ ಕೆಲಸ ಮಾಡುತ್ತಿರುವುದರಿಂದ ಒತ್ತಡ ಹೆಚ್ಚಾಗುತ್ತಿದೆ. ತೂಕದಲ್ಲಿ ಹೆಚ್ಚಳ, ಅನಾರೋಗ್ಯಕರವಾದ ಜೀವನಶೈಲಿ, ಚಿಕಿತ್ಸೆ ಪಡೆಯುವಲ್ಲಿ ವಿಳಂಬ, ಅನಿಯಮಿತವಾಗಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುವುದು ಮತ್ತು ಫಾಲೋಅಪ್ ಮಾಡದೇ ಇರುವುದು ಸಂತಾನಹೀನತೆ ಹೆಚ್ಚಲು ಕಾರಣ. ಪಿಸಿಒಎಸ್, ಅನಿಯಮಿತ ಋತುಚಕ್ರದ ಬಗ್ಗೆ ನಿರ್ಲಕ್ಷ್ಯ ಸಹ ಸಂತಾನಹೀನತೆಗೆ ಕಾರಣ.

ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಕಾರಣದಿಂದಾಗಿ ಸಾಕಷ್ಟು ಜನರು ಗರ್ಭಧಾರಣೆಯನ್ನು ಮುಂದಕ್ಕೆ ಹಾಕಿದ್ದಾರೆ. ಎರಡು ವರ್ಷಗಳ ಹಿಂದೆ 30 ವರ್ಷದವರಾಗಿದ್ದ ಮಹಿಳೆಯರು ಈಗ 32 ಕ್ಕೆ ತಲುಪಿದ್ದಾರೆ. 34 ಇದ್ದವರು 36 ಕ್ಕೆ ತಲುಪಿದ್ದಾರೆ. ಈ ಕಾರಣದಿಂದಾಗಿ ಮಹಿಳೆಯರ ಅಂಡಾಶಯದಲ್ಲಿ ಅಂಡಾಣುಗಳ ಸಂಖ್ಯೆ ಕಡಿಮೆಯಾಗಿದೆ ಮತ್ತು ಬಹುಶಃ ಗರ್ಭಧಾರಣೆಯ ಸಾಧ್ಯತೆಗಳು ಕಡಿಮೆಯಾಗುತ್ತವೆ. ಮಹಿಳೆಯರು ಫೈಬ್ರಾಯ್ಡ್‌ ಮತ್ತು ಎಂಡ್ರೋಮೆಟ್ರಿಯೊಸಿಸ್ ಹೊಂದಿದ್ದರೆ ಎರಡು ವರ್ಷಗಳವರೆಗೆ ಚಿಕಿತ್ಸೆ ಇಲ್ಲದೇ ಮನೆಯಲ್ಲೇ ಇದ್ದಾಗ ಅದು ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ. ಅಲ್ಲದೇ, ಫೈಬ್ರಾಯ್ಡ್‌ ದೊಡ್ಡದಾಗುತ್ತದೆ ಮತ್ತು ಎಂಡ್ರೋಮೆಟ್ರಿಯೊಸಿಸ್ ಸಮಸ್ಯೆ ತೀವ್ರವಾಗುತ್ತದೆ. ಸುಮಾರು 2 ಸೆಂಟಿಮೀಟರ್‌ನಷ್ಟು ಇರುವ ಎಂಡೋಮೆಟ್ರಿಯಾಟಿಕ್ ಸಿಸ್ಟ್ 5 ಸೆಂಟಿಮೀಟರ್‌ವರೆಗೆ ಹಿಗ್ಗಬಹುದು. ಹೀಗಾಗಿ ಫಲವಂತಿಕೆ ಹೆಚ್ಚಿಸುವ ಶಸ್ತ್ರ ಚಿಕಿತ್ಸೆಯ ಅಗತ್ಯವೂ ಹೆಚ್ಚಾಗುತ್ತದೆ.

ಕಳೆದ ಎರಡುವ ವರ್ಷಗಳಿಂದ ಅಂಡಾಶಯದ ಮಿತಿಯು ಕೆಲವು ಕಾರಣಗಳಿಂದ ಕಡಿಮೆಯಾದರೆ ಗರ್ಭಧಾರಣೆಯ ಸಾಧ್ಯತೆಗಳು ಕಡಿಮೆಯಾಗುತ್ತವೆ. ಹೊಸದಾಗಿ ಮದುವೆಯಾದವರ ಪೈಕಿ ಕಡಿಮೆ ವೀರ್ಯ ಪ್ರಮಾಣ ಇರುವ ಪುರುಷರಿಗೆ ಹಾಗೂ ಫಲವತ್ತತೆ ಮತ್ತು ಅಂಡಾಶಯದ ಮಿತಿ ಇರುವ ಮಹಿಳೆಯರಿಗೆ ಫಲವಂತಿಕೆ ಪರೀಕ್ಷೆಯಲ್ಲಾಗುವ ವಿಳಂಬದ ಬಗ್ಗೆ ಸೂಕ್ತ ಮಾಹಿತಿ ಇದ್ದಂತೆ ಕಾಣುವುದಿಲ್ಲ.

ಗರ್ಭಾವಸ್ಥೆಯ ಮಧುಮೇಹ

ತಡವಾದ ಗರ್ಭಧಾರಣೆಯು ಗರ್ಭಿಣಿಯರಲ್ಲಿ ಗರ್ಭಾವಸ್ಥೆಯ ಮಧುಮೇಹ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಬಹುದು. ಇದು ಕೆಲವೊಮ್ಮೆ ಟೈಪ್ 2 ಮಧುಮೇಹವಾಗಿ ಬದಲಾಗುತ್ತದೆ. ತಡವಾಗಿ ಗರ್ಭಧಾರಣೆಯನ್ನು ಹೊಂದಿರುವ ಮಹಿಳೆಯರು ತಮ್ಮ ಗರ್ಭಧಾರಣೆಯ ಆರಂಭದಿಂದಲೂ ದೀರ್ಘಕಾಲದ ಅಧಿಕ ರಕ್ತದೊತ್ತಡದಿಂದ ಬಳಲುವ ಸಾಧ್ಯತೆ ಹೆಚ್ಚು.

ಅವರು ಹೆರಿಗೆ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬಹುದು. ಉದಾಹರಣೆಗೆ ಹೆರಿಗೆಯ ಪ್ರಗತಿಯಾಗದಿರುವುದು ಮತ್ತು ಭ್ರೂಣದ ತಲೆಯ ಮೂಲದಿಂದ ಕೆಳಗಿಳಿಯದಿರುವುದು. 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಸ್ವಾಭಾವಿಕ ಗರ್ಭಪಾತದ ಅಪಾಯವೂ ಹೆಚ್ಚಿರುತ್ತದೆ. ಇದರ ಜೊತೆಗೆ ಮಗುವಿನಲ್ಲಿ ಕಂಡು ಬರುವ ವರ್ಣತಂತು ವೈಪರೀತ್ಯಗಳು ಸಹ ಉಂಟಾಗುತ್ತವೆ. ಸ್ಥೂಲಕಾಯತೆಯು ಫಲವತ್ತತೆಗೆ ಸಂಬಂಧಿಸಿದಂತೆ ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಗರ್ಭಾವಸ್ಥೆಯಲ್ಲಿನ ಹೆಚ್ಚಿನ ತೂಕವನ್ನು ಹೊಂದಿರುವ ಮಹಿಳೆಯರು ಮೆಟಾಬಾಲಿಕ್ ಸಿಂಡ್ರೋಮ್‌ ಮತ್ತು ಪದೇ ಪದೇ ಗರ್ಭಸ್ರಾವ ಎದುರಿಸಬಹುದು.

ಐವಿಎಫ್ ಅಗತ್ಯವಿರುವ ದಂಪತಿಗಳಿಗೆ ಐವಿಎಫ್‌ಗೆ ಹೋಗಲು ಸಾಧ್ಯವಾಗಿಲ್ಲ. ಕೆಲವರು ದಾನಿಗಳಿಂದ ಎಗ್‌ ಪಡೆಯಬಹುದು.

ಪರಿಹಾರ

 ಆದಷ್ಟೂ ಬೇಗ ವೈದ್ಯರನ್ನು ಭೇಟಿ ಮಾಡಿ ಸರಿಯಾದ ಕೌನ್ಸೆಲಿಂಗ್ ಮತ್ತು ಚಿಕಿತ್ಸೆಯ ಯೋಜನೆಯನ್ನು ರೂಪಿಸಿಕೊಳ್ಳಬೇಕು.

ದಂಪತಿ ಆದಷ್ಟೂ ಬೇಗ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

ಫಲವತ್ತತೆಯನ್ನು ಹೆಚ್ಚಿಸುವ ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದಲ್ಲಿ, ಅದನ್ನು ತಕ್ಷಣವೇ ಮಾಡಬೇಕು. ತೂಕ ನಷ್ಟ ಮತ್ತು ಸಂತಾನಹೀನತೆಗೆ ಆರಂಭಿಕ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕು.

ಕಳಪೆ ಅಂಡಾಶಯದ ಮಿತಿ ಅಥವಾ ಕಡಿಮೆ ವೀರ್ಯಾಣು ಸಾಂದ್ರತೆಯಿರುವ ಜನರು ಅಗತ್ಯವಿದ್ದರೆ ಗ್ಯಾಮೆಟ್ ದಾನಕ್ಕಾಗಿ ಪ್ರಯತ್ನಿಸಬೇಕು.

ಎಗ್‌ ಫ್ರೀಜಿಂಗ್‌

‘ಎಗ್‌ ಫ್ರೀಜಿಂಗ್‌’ ಪ್ರಸ್ತುತ ಪೀಳಿಗೆಯಲ್ಲಿ ನಿಧಾನವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಆದರೆ, ಸಮಾಜದಲ್ಲಿ ಇದರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಮದುವೆಯಾಗಲು ಅಥವಾ ಮಗುವನ್ನು ಮಾಡಿಕೊಳ್ಳಲು ಪ್ರಸ್ತುತ ವಿಳಂಬದ ಪ್ರವೃತ್ತಿಯಿದೆ. ಹೀಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಎಗ್‌ ಫ್ರೀಜ್‌ ಮಾಡುವ ಮೂಲಕ ನಂತರದ ಹಂತದಲ್ಲಿ ಆರೋಗ್ಯಕರವಾದ ಮಗುವನ್ನು ಹೊಂದುವ ಅವಕಾಶ ಇರುತ್ತದೆ. ಇದು ವಿಶೇಷವಾಗಿ ಗರ್ಭಧಾರಣೆಯನ್ನು ಯೋಜಿಸದ ಮಹಿಳೆಯರಿಗೆ ಸುರಕ್ಷಿತವಾದ ಮತ್ತು ಸಹಾಯಕವಾದ ವಿಧಾನವಾಗಿದೆ. ಆದರೆ, ಭವಿಷ್ಯದಲ್ಲಿ ಗರ್ಭ ಧರಿಸುವ ಅಥವಾ ಜೈವಿಕ ಮಗುವನ್ನು ಹೊಂದುವ ಅವರ ಸಾಮರ್ಥ್ಯದ ಬಗ್ಗೆ ಖಚಿತತೆ ಒದಗಿಸುತ್ತದೆ. ಮೊಟ್ಟೆಗಳನ್ನು 35 ವರ್ಷಕ್ಕಿಂತ ಮುನ್ನವೇ ಫ್ರೀಜ್‌ ಮಾಡಬೇಕು. ಈ ವಯೋಮಾನದ ನಂತರವಾದರೆ ಮೊಟ್ಟೆಗಳ ಸಂಖ್ಯೆ ಮತ್ತು ಗುಣಮಟ್ಟವು ತೀವ್ರವಾಗಿ ಕುಸಿಯುತ್ತದೆ.

(ಲೇಖಕಿ: ಮೆಡಿಕಲ್ ಡೈರೆಕ್ಟರ್, ರಾಧಾಕೃಷ್ಣ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು