ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ತೆರವು: ದೇಹದಲ್ಲಿ ಶಕ್ತಿ ಕಾಪಾಡುವುದು ಹೇಗೆ?

Last Updated 2 ಜುಲೈ 2020, 5:44 IST
ಅಕ್ಷರ ಗಾತ್ರ

ಕೊರೊನಾ ಸೋಂಕು ಹರಡಲು ಆರಂಭವಾದಾಗ, ಲಾಕ್‌ಡೌನ್ ಘೋಷಣೆಯಾದಾಗ ಎಲ್ಲರ ಬಾಯಲ್ಲೂ ಒಂದೇ ಪದ ‘ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ‘.

ಈಗ ಹಂತ ಹಂತವಾಗಿ ಲಾಕ್‌ಡೌನ್ ತೆರವಾಗಿದೆ. ಕೆಲವರು ಕಚೇರಿ ಕೆಲಸಕ್ಕೆ ಹೋಗಲು ಶುರು ಮಾಡಿದ್ದಾರೆ. ಹಲವರು ವ್ಯಾಪಾರ – ವ್ಯವಹಾರಗಳಿಗಾಗಿ ಓಡಾಟ ಆರಂಭಿಸಿದ್ದಾರೆ. ಈಗ ನಮ್ಮೆಲ್ಲರ ಎದುರಿಗಿರುವ ಸವಾಲೆಂದರೆ ಕೊರೊನಾ ಸೋಂಕಿನಿಂದ ದೇಹವನ್ನು ರಕ್ಷಿಸಿಕೊಳ್ಳುವುದು. ಅದಕ್ಕಾಗಿ, ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಇದಕ್ಕಾಗಿ ಸ್ವಲ್ಪ ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು. ಈಗ ಮಳೆಗಾಲವೂ ಶುರುವಾಗಿರುವುದರಿಂದ, ಈ ಕಾಲದಲ್ಲಿ ಹರಡುವ ರೋಗಗಳನ್ನು ಎದುರಿಸಲು ದೇಹವನ್ನು ಸಜ್ಜುಗೊಳಿಸಬೇಕು ಎಂಬುದು ವೈದ್ಯರ ಸಲಹೆ.

ಕೆಲವರು ಲಾಕ್‌ಡೌನ್‌ ಅವಧಿಯಲ್ಲಿ ಮಿತ ಆಹಾರ– ನಿತ್ಯ ವ್ಯಾಯಾಮ ಮಾಡುತ್ತಾ ಆರೋಗ್ಯಕರ ಜೀವನಶೈಲಿ ರೂಢಿಸಿಕೊಂಡಿ ದ್ದರು. ಇನ್ನೂ ಕೆಲವರುಮನೆಯಲ್ಲಿ ತಿಂದುಂಡು ಕಾಲ ಕಳೆದಿದ್ದರು. ‘ಲಾಕ್‌ಡೌನ್‌ ಅವಧಿಯಲ್ಲಿ ಬೆಳೆಸಿಕೊಂಡ ಸೋಮಾರಿತನ ವನ್ನು ಪಕ್ಕಕ್ಕಿಟ್ಟು ಕೆಲ ಸರಳ ಕ್ರಮಗಳನ್ನು ದಿನನಿತ್ಯ ಪಾಲಿಸಬೇಕು‘ ಎಂದು ಸಲಹೆ ನೀಡುತ್ತಾರೆ ಬೆಂಗಳೂರಿನ ಪ್ರಮೇಯಾ ಆಸ್ಪತ್ರೆಯ ನ್ಯೂಟ್ರಿಷನಿಸ್ಟ್‌ ಡಾ. ಲಲಿತಾ ಪ್ರಿಯಾ.

ಸಮಯಕ್ಕೆ ಸರಿಯಾಗಿ ತಿನ್ನಬೇಕು

‘ವರ್ಕ್‌ ಫ್ರಂ ಹೋಮ್‘‌ ಆಗಿದ್ದರಿಂದತಡವಾಗಿ ಏಳುವುದು, ಮಲಗುವುದು ಅಭ್ಯಾಸವಾಗಿದ್ದರೆ ಅದನ್ನು ಬದಲಾಯಿಸಿಕೊಳ್ಳಬೇಕು. ನಿಯಮಿತ ಆಹಾರ ಕ್ರಮ ಪಾಲಿಸಬೇಕು. ವೇಳಾಪಟ್ಟಿಯ ಪ್ರಕಾರ ಆಹಾರ ಸೇವಿಸುವುದರಿಂದ, ನಮ್ಮ ದೇಹದೊಳಗೆ ನಡೆಯುವ ‘ಕೆಲಸ‘ಗಳು ಒಂದೇ ರೀತಿಯಾಗಿರುತ್ತದೆ. ಹಾರ್ಮೋನುಗಳು ಸಮತೋಲನದಲ್ಲಿರುತ್ತವೆ. ಇದರಿಂದ ದೇಹ ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ. ಆಫೀಸಿಗೆ ಹೋಗುವವರೂ ಆಹಾರ ಸೇವಿಸುವುದರ ಬಗ್ಗೆ ನಿರ್ಲಕ್ಷ್ಯ ಮಾಡಬಾರದು.

ಪೋಷಕಾಂಶಗಳಿರುವ ಸಮೃದ್ಧ ಆಹಾರ ಸೇವನೆ

ನೈಸರ್ಗಿಕ ಆಹಾರ, ಕಡಿಮೆ ಸಂಸ್ಕರಿಸಿದ ಹಾಗೂ ಕಾಲಕ್ಕೆ ಅನುಗುಣವಾಗಿ ಲಭಿಸುವ ಆಹಾರ ನಮ್ಮ ಆರೋಗ್ಯಕ್ಕೆ ಉತ್ತಮ. ಚೀಸ್‌, ಮೈದಾದಂತಹ ಪದಾರ್ಥಗಳಿಂದ ಮಾಡಿದ ಆಹಾರವನ್ನು ಕಡಿಮೆ ಮಾಡಬೇಕು. ಅದು ದೇಹಕ್ಕೆ ಒಳ್ಳೆಯದಲ್ಲ. ಪೋಷಕಾಂಶ ಗಳಿಂದ ಸಮೃದ್ಧ ಆಹಾರ ಸೇವಿಸಬೇಕು. ಎಣ್ಣೆ, ಸಕ್ಕರೆ ಹೆಚ್ಚು ಬಳಸಬಾರದು. ಬೇಳೆ ಕಾಳು, ಮೊಳಕೆ ಬರಿಸಿದ ಕಾಳುಗಳು, ತಾಜಾ ಹಣ್ಣುಗಳನ್ನು ಸೇವಿಸಬೇಕು.

ನೀರು ಜಾಸ್ತಿ ಕುಡಿಯಿರಿ

ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ದಿನಕ್ಕೆ ಕನಿಷ್ಠ ಎರಡು ಲೀಟರ್‌ ನೀರು ಕುಡಿಯಬೇಕು. ಇದು ದೇಹದಲ್ಲಿರುವ ನಂಜಿನ(ಟಾಕ್ಸಿನ್‌) ಅಂಶಗಳನ್ನು ಹೊರಹಾಕುತ್ತದೆ. ನೀರಿನಂಶ ಸ್ವಲ್ಪ ಕಡಿಮೆಯಾದರೂ ಬಳಲಿಕೆಯಾಗುತ್ತದೆ. ನೀರಿನ ಜೊತೆಗೆ ನಿಂಬೆರಸ, ಎಳನೀರು, ಸಕ್ಕರೆ ಹಾಕದೇ ಹಣ್ಣಿನ ಜ್ಯೂಸ್‌ಗಳನ್ನು ಕುಡಿಯಬಹುದು. ಆದರೆ ಕಾಫಿ, ಟೀ ಸೇವನೆ ನಿಯಂತ್ರಣದಲ್ಲಿರಲಿ. ಕಾಳುಮೆಣಸು, ಜೀರಿಗೆ, ಶುಂಠಿ, ನಿಂಬೆರಸ ಬೆರೆಸಿ ಮಾಡಿದ ಕಷಾಯ ಸೇವಿಸಿದರೆ ಉತ್ತಮ. ಬರೀ ಜೀರಿಗೆ ಕಷಾಯ ಮಾಡಿ ಕುಡಿದರೂ ಒಳ್ಳೆಯದು. ಆಫೀಸಿಗೆ ಹೋಗುವವರು ಫ್ಲಾಸ್ಕ್‌‌ನಲ್ಲಿ ಕಾಳುಮೆಣಸು, ತುಳಸಿ, ಶುಂಠಿ ಬೆರೆಸಿದ ಬಿಸಿ ನೀರನ್ನು ಕೊಂಡೊಯ್ಯಬೇಕು. ಆಗಾಗ ಬಿಸಿನೀರು ಕುಡಿಯುತ್ತಿರಬೇಕು.

ಒಣಹಣ್ಣುಗಳ ಸೇವನೆ

ಒಣಹಣ್ಣುಗಳ ಜ್ಯೂಸ್‌ ಮಾಡಿಕೊಂಡು ಕುಡಿಯಬಹುದು. ಇಲ್ಲವೇ ಆಗಾಗ ತಿನ್ನಬಹುದು. ಈ ಹಣ್ಣುಗಳಲ್ಲಿ ಕೊಬ್ಬು, ನಾರಿನಾಂಶ, ಪ್ರೊಟೀನ್ ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ವ್ಯಾಯಾಮ ತಪ್ಪಿಸಬಾರದು

ಒಂದು ವೇಳೆ ಲಾಕ್‌ಡೌನ್ ಅವಧಿಯಲ್ಲಿ ವ್ಯಾಯಾಮ ನಿಲ್ಲಿಸಿದ್ದರೆ ಪುನಃ ಶುರು ಮಾಡಿ. ಲಾಕ್‌ಡೌನ್‌ ಅವಧಿಯಲ್ಲಿ ತೂಕ ಹೆಚ್ಚಾಗುವುದು, ಮಾನಸಿಕ ಸಮಸ್ಯೆ ಸೇರಿದಂತೆ ಬೇರೆ ಬೇರೆ ಸಮಸ್ಯೆಗಳು ಕಾಡಿರುತ್ತವೆ. ಕೊರೊನಾ ಸೋಂಕು ಹದಕ್ಕೆ ಬರುವವರೆಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ನಿಧಾನವಾಗಿ ಸರಳ ವ್ಯಾಯಾಮದಿಂದ ಚಟುವಟಿಕೆಗಳನ್ನು ಆರಂಭಿಸಿ. ದಿನಕ್ಕೆ ಕನಿಷ್ಠ ಅರ್ಧಗಂಟೆಯಾದರೂ ವ್ಯಾಯಾಮ ಮಾಡಬೇಕು. ಪ್ರಾಣಾಯಾಮ ಮಾಡುವುದರಿಂದ ನಮ್ಮ ಉಸಿರಾಟದ ವ್ಯವಸ್ಥೆಯನ್ನು ಜಾಸ್ತಿ ಮಾಡುತ್ತದೆ. ಪ್ರತಿದಿನ ಎಂಟು ಗಂಟೆ ನಿದ್ದೆ ಮಾಡಬೇಕು.

ಒಂದು ವಿಚಾರ ಗಮನದಲ್ಲಿರಲಿ

ಹೊರಗಡೆ ಹೋಗುವಾಗ ಮೂಗಿಗೆ, ಶುದ್ಧ ತೆಂಗಿನೆಣ್ಣೆ ಅಥವಾ ಹರಳೆಣ್ಣೆ ಒಂದು ಬಿಂದು ಹಾಕಿಕೊಂಡು ಹೋಗಬೇಕು. ವೈರಸ್‌ ಮೂಗಿನ ಮೂಲಕ ದೇಹ ಸೇರುವುದನ್ನು ಇದು ತಡೆಯುತ್ತದೆ. ಫ್ಲಾಸ್ಕ್‌‌ನಲ್ಲಿ ಬಿಸಿನೀರು ಕೊಂಡೊಯ್ಯಿರಿ. ಸ್ಯಾನಿಟೈಸರ್‌ ಯಾವಾಗಲೂ ಬ್ಯಾಗಿನಲ್ಲಿರಲಿ ಎಂದು ಸಲಹೆ ನೀಡುತ್ತಾರೆ ಡಾ.ಲಲಿತಾ ಪ್ರಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT