ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು: ಕೋಪವನ್ನು ಆರೋಗ್ಯಕರವಾಗಿ ಹೊರಹಾಕುವುದು ಹೇಗೆ?

Last Updated 21 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

*ಆಚಾರ ವಿಚಾರವನ್ನು ಪಾಲಿಸುವ ಸುಸಂಸ್ಕೃತ ಮನೆತನದ ಗೃಹಿಣಿ ನಾನು. ಈಚೀಚೆಗೆ ವಿಪರೀತ ಸಿಟ್ಟು ಬರುತ್ತದೆ. ಸಿಟ್ಟು ಬಂದಾಗ ಕೆಟ್ಟ ಕೊಳಕ ಬೈಗುಳಗಳನ್ನು ಬೈಯುತ್ತೀನಿ. ನನ್ನ ಅಭಿರುಚಿಗೆ ತಕ್ಕ ಗಂಡ ಸಿಗಲಿಲ್ಲ ಎಂಬ ಬೇಸರವಿದೆ. ಅಪ್ಪ ಅಮ್ಮನ ಪ್ರೀತಿ ಸಿಗಲಿಲ್ಲ, ಹೆಣ್ಣುಮಗಳು ಎಂಬ ಕಾರಣಕ್ಕೆ ಆದ ಅವಮಾನ ಸಂಕಟ ಇವೆಲ್ಲವೂ ನನ್ನೊಳಗೆ ಸೇರಿ ಹೀಗೆ ಮಾಡಿಸುತ್ತಿರಬಹುದೇ? ಎರಡು ವರ್ಷದ ಮಗನಿದ್ದಾನೆ. ನನ್ನ ಬೈಗುಳ ಅವನಿಗೆಲ್ಲಿ ಬಂದುಬಿಡುತ್ತೋ ಅನ್ನೋ ಭಯ. ಸಿಟ್ಟು ಬಂದಾಗ ಕೆಟ್ಟ ಬೈಗುಳ ಬಾರದೇ ಇರುವ ಹಾಗೇ ಮಾಡಲು ಏನಾದರೂ ಉಪಾಯ ಇದೆಯೇ? ನನ್ನ ಸುತ್ತಮುತ್ತ ಯಾರೂ ಕೆಟ್ಟಮಾತನ್ನು ಬಳಸುವುದಿಲ್ಲ. ನನ್ನ ಬಾಲ್ಯದಲ್ಲಿಯೂ ಈ ಬೈಗುಳ ಕೇಳಿದವಳಲ್ಲ. ಆದರೂ ಈ ಬೈಗುಳಗಳು ಹೇಗೆ ಬರುತ್ತಿವೆ ಎಂಬುದು ಅರ್ಥವಾಗುತ್ತಿಲ್ಲ. ಎಷ್ಟೇ ನಿಯಂತ್ರಣ ಮಾಡಿಕೊಂಡರೂ ಸಾಧ್ಯವಾಗುತ್ತಿಲ್ಲ. ಉಳಿದಂತೆ ನಾನು ನಾರ್ಮಲ್ ಆಗಿದ್ದೇನೆ. ಪರಿಹಾರವೇನು?

ವಿಂದ್ಯಾಬುಧ್ಯ, ಊರು ತಿಳಿಸಿಲ್ಲ.

ನಿಮ್ಮೊಳಗೆ ಮೂಡುವ ಕೋಪ ಹೊರಬರಲೇಬೇಕು. ಅದಿಲ್ಲದಿದ್ದರೆ ನಿಮ್ಮ ಆರೋಗ್ಯ ಹಾಳಾಗಬಹುದು. ಹಾಗಾಗಿ ಕೋಪ ಬಂದಾಗ ಬೈಗುಳಗಳನ್ನು ನಿಲ್ಲಿಸುವುದನ್ನು ಮಾತ್ರ ಗುರಿಯಾಗಿ ಇಟ್ಟುಕೊಳ್ಳದೆ ನಿಮ್ಮ ಕೋಪವನ್ನು ಬೇರೆ ರೀತಿಯಲ್ಲಿ ಅರ್ಥಮಾಡಿಕೊಂಡು ನಿಭಾಯಿಸುವುದನ್ನು ಕಲಿಯಬಹುದಲ್ಲವೇ? ಮೊದಲನೆಯದಾಗಿ ಎಷ್ಟು ಚಂದವಾಗಿ ಪತ್ರವನ್ನು ಬರೆದಿದ್ದೀರಿ. ನಿಮ್ಮ ಪ್ರಾಮಾಣಿಕತೆ ಮತ್ತು ಸಂವೇದನಾ ಶೀಲತೆಗಾಗಿ ಅಭಿನಂದಿಸುತ್ತೇನೆ. ಇವೆರೆಡನ್ನು ಬಳಸಿಕೊಂಡು ನೀವು ಸಂತೋಷ ಸಮಾಧಾನಗಳಿಂದ ಬದುಕುವುದು ಹೇಗೆ ಎಂದು ಯೋಚಿಸೋಣ.

ಎರಡನೆಯದಾಗಿ ಕೋಪದ ಆರಂಭವನ್ನು ಗುರುತಿಸುವ ಅಭ್ಯಾಸ ಮಾಡಿ. ಕೋಪ ನಿಮ್ಮ ದೇಹದ ಬೇರೆಬೇರೆ ಅಂಗಾಂಗಗಳಲ್ಲಿ ತನ್ನ ಸೂಚನೆ ನೀಡುತ್ತದೆ. ಇವುಗಳಿಂದ ನಿಮ್ಮ ಕೋಪ ಹೆಚ್ಚುತ್ತಿರುವುದರ ಅರಿವನ್ನು ಬೆಳೆಸಿಕೊಳ್ಳಿ. ತಕ್ಷಣ ನಿಧಾನವಾಗಿ ಉಸಿರಾಡುತ್ತಾ ಸಾಧ್ಯವಿರುವಷ್ಟು ದೇಹವನ್ನು ಸಡಿಲಬಿಡುತ್ತಾ ದೇಹವನ್ನು ಸಂತೈಸಿಕೊಳ್ಳಿ. ನಾನು ಕೋಪದಲ್ಲಿದ್ದೇನೆ, ಹಾಗಾಗಿ ಕೆಟ್ಟಮಾತು ಬರಬಹುದು ಎಂದು ನಿಮ್ಮನ್ನು ಎಚ್ಚರಿಸಿಕೊಳ್ಳಿ. ಸಾಧ್ಯವಿದ್ದರೆ ಆ ಸ್ಥಳದಿಂದ ದೂರಹೋಗಿ. ಅಥವಾ ‘ನನಗೆ ಕೋಪ ಬಂದಿದೆ, ಈಗ ಮಾತನಾಡುವುದಿಲ್ಲ, ನಂತರ ಹೇಳುತ್ತೇನೆ‘ ಎಂದಷ್ಟೇ ಹೇಳಿ ಅಲ್ಲಿಂದ ದೂರಹೋಗಿ.

ಮೂರನೆಯದಾಗಿ ನಿಮ್ಮ ಕೋಪವನ್ನು ಶತ್ರುವನ್ನಾಗಿ ಮಾಡಿಕೊಳ್ಳದೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಪೋಷಕರಿಂದ ಸಿಗದ ಪ್ರೀತಿ, ಬದಲಾಗಿ ಸಿಕ್ಕ ನೋವು ಅವಮಾನ, ಸೂಕ್ತ ಸಂಗಾತಿ ಸಿಗದಿರುವ ಹತಾಶೆ ಮುಂತಾದವು ನಿಮ್ಮೊಳಗೆ ಮೂಡಿಸುತ್ತಿರುವ ಭಾವನೆಗಳೇನು? ಅದು ಹತಾಶೆಯೆ? ಅಸಹಾಕತೆಯೇ? ಕೀಳರಿಮೆಯೇ? ನಿಮ್ಮನ್ನೇ ನೀವು ಕಳೆದುಕೊಂಡ ಮತ್ತು ಗೌರವಿಸಿಕೊಳ್ಳಲಾಗದ ಅನುಭವವೇ? ಇವೆಲ್ಲವನ್ನೂ ಸಹಜವೆಂದು ಸ್ವೀಕರಿಸಿ. ಬಾಲ್ಯದಲ್ಲಿ ಪೋಷಕರ ಮೇಲೆ ಅವಲಂಬಿತರಾಗಿದ್ದಾಗ ನೀವು ಅಸಹಾಯಕರಾಗಿದ್ದು ನಿಜ. ಆದರೆ ಈಗ ನೀವು ವಯಸ್ಕರು, ನಿಮ್ಮೊಳಗೆ ಇರುವ ಯಾವ ಶಕ್ತಿಯೂ ನಾಶವಾಗಿಲ್ಲ, ಜೀವನವನ್ನು ಬೇರೆ ರೀತಿಯಲ್ಲಿ ರೂಪಿಸಿಕೊಳ್ಳಲು ನೀವು ಸಮರ್ಥರು ಎಂದು ನೆನಪಿಸಿಕೊಳ್ಳಿ. ನಂತರ ಎಂತಹ ಬದುಕು ನನಗೆ ಇಷ್ಟ ಮತ್ತು ಅದನ್ನು ನಿಧಾನವಾಗಿ ರೂಪಿಸಿಕೊಳ್ಳುವುದು ಹೇಗೆ ಎಂದು ಯೋಚಿಸಿ. ಹಾಗೆಯೇ ಹಂತಹಂತವಾಗಿ ಬೆಳೆಯುವ ಪ್ರಯತ್ನ ಪ್ರಾರಂಭಿಸಿ.

ನೆನಪಿಡಿ; ಬಾಲ್ಯದ ಅನುಭವಗಳು ನಿಮ್ಮೊಳಗೆ ಅಸಹಾಯಕತೆ ಹತಾಶೆ ಕೀಳರಿಮೆಗಳನ್ನು ಮೂಡಿಸುತ್ತಿವೆ. ಇವುಗಳೇ ಇವತ್ತು ಕೋಪವಾಗಿ ಬದಲಾಗುತ್ತಿವೆ. ಭಿನ್ನಾಭಿಪ್ರಾಯ ಬೇಸರ ಕೋಪಗಳನ್ನು ಗೌರವಯುತವಾಗಿ ವ್ಯಕ್ತಪಡಿಸುವುದು ಹೇಗೆ ಎಂದು ಯೋಚಿಸಿ. ನಿಮ್ಮ ಯಾವುದೇ ಶಕ್ತಿಯೂ ಬಾಲ್ಯದ ಕಹಿ ಅನುಭವಗಳಿಂದ ಅಳಿಸಿ ಹೋಗಿರುವುದಿಲ್ಲ. ಅವುಗಳನ್ನು ಗುರುತಿಸಿ ಬಳಸುವುದನ್ನು ಕಲಿಯಬೇಕಾಗಿರುವುದು ಮಾತ್ರ ನೀವೇ? ಆರಂಭದ ದಾರಿ ಕಠಿಣವಾಗಿರಬಹುದು. ಪ್ರಯತ್ನವನ್ನು ಮಾಡುತ್ತಲೇ ಇದ್ದರೆ ಬದಲಾವಣೆಗಳು ಆಗಲೇಬೇಕಲ್ಲವೇ?

ಏನಾದ್ರೂ ಕೇಳ್ಬೋದು
ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT