ಬುಧವಾರ, ಜುಲೈ 28, 2021
23 °C

ಆತ್ಮಹತ್ಯೆ ಮನಸ್ಥಿತಿ ಗುರುತಿಸುವುದು ಹೇಗೆ?

ಡಾ. ಕೃಷ್ಣ ಪ್ರಸಾದ ಮುಳಿಯಾಲ Updated:

ಅಕ್ಷರ ಗಾತ್ರ : | |

ಕೊರೊನಾ ಪಿಡುಗಿನಿಂದಾಗಿ ವೈಯಕ್ತಿಕ ಹಾಗೂ ಸಾಮಾಜಿಕ ಮಟ್ಟದಲ್ಲಿ ಮಾನಸಿಕ ಒತ್ತಡ ಹೆಚ್ಚಿದೆ. ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ತೆಗೆದುಕೊಂಡ ಲಾಕ್‌ಡೌನ್‌ನಿಂದ ಕೂಡ ಹಲವು ರೀತಿಯ ಸಮಸ್ಯೆಗಳು ಉಂಟಾಗಿವೆ. ಆತ್ಮಹತ್ಯೆಯ ಪ್ರಕರಣಗಳು ಕಾಯಿಲೆ  ಶಂಕಿತರಲ್ಲಿ ಹಾಗೂ ದೃಢಪಟ್ಟವರಲ್ಲಿ, ಆರ್ಥಿಕ ಸಮಸ್ಯೆಯಾದವರಲ್ಲಿ, ನಿರುದ್ಯೋಗಿಗಳಲ್ಲಿ, ಮದ್ಯವ್ಯಸನಿಗಳಲ್ಲಿ ಮತ್ತು ವಲಸೆ ಕಾರ್ಮಿಕರಲ್ಲಿ ವರದಿಯಾಗಿವೆ.

ಈ ಸಂದರ್ಭದಲ್ಲಿ ಮಾನಸಿಕ ಕಾಯಿಲೆ ಇರುವವರಿಗೆ ತಪಾಸಣೆ ಹಾಗೂ ಚಿಕಿತ್ಸೆ, ಇನ್ನಿತರ ಸೇವೆಗಳನ್ನು ಪಡೆಯುವುದು ಕೂಡ ಸುಲಭವಿಲ್ಲ. ಕ್ವಾರಂಟೈನ್ ಹಾಗೂ ಐಸೊಲೇಷನ್ ಸಂದರ್ಭದಲ್ಲಿ ತಮ್ಮ ಆಪ್ತರಿಂದ ದೂರವಿರುವುದರಿಂದ ಹಾಗೂ ಸಮಾಜವು ಅವರನ್ನು ಬೇರೆ ರೀತಿ ಕಾಣುವುದರಿಂದ ಒತ್ತಡವನ್ನು ಅನುಭವಿಸಿದ ಸನ್ನಿವೇಶಗಳು ಹಲವು.

ಲಕ್ಷಣಗಳು

ಬಿಕ್ಕಟಿನ ಪರಿಸ್ಥಿತಿ ನಿರ್ಮಾಣವಾದಾಗ ಸಹಜವಾಗಿ ಆಯಾಯ ವ್ಯಕ್ತಿಯ ಒತ್ತಡ ನಿರ್ವಹಣಾ ಶಕ್ತಿಯನ್ನು ಹೊಂದಿಕೊಂಡು - ಕೋಪ, ಬೇಸರ, ದುಃಖ, ಖಿನ್ನತೆ, ಆತಂಕ, ಗಾಬರಿಯಂತಹ ಭಾವನೆಗಳು ಅವರಲ್ಲಿ ಆವರಿಸುತ್ತವೆ. ನಿರಾಸೆ ಹಾಗೂ ನಿಷ್ಪ್ರಯೋಜಕತೆಯ ಯೋಚನೆಗಳೂ ಸಹ ಬರಬಹುದು. ಬಂಧುಮಿತ್ರರಿಂದ ದೂರ ಸರಿದು ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡು ಖಿನ್ನತೆಗೆ ಒಳಗಾಗಬಹುದು. ನಿದ್ರಾಹೀನತೆ ಅಥವಾ ಹೆಚ್ಚು ನಿದ್ರಿಸುವುದು, ತಿನ್ನದೇ ಇರುವುದು ಹಾಗೆಯೆ ಹೆಚ್ಚು ತಿನ್ನುವುದನ್ನು ಕಾಣಬಹುದು. ಮದ್ಯವ್ಯಸನಿಗಳು ಏಕಾಏಕಿ ಹೆಚ್ಚು ಕುಡಿಯಲು ಪ್ರಾರಂಭಿಸಬಹುದು. ಸಾಯುವುದರ ಬಗ್ಗೆ ಮಾತನಾಡಬಹುದು ಇಲ್ಲವೆ ಸಾಯಲು ಸಾಧನಗಳನ್ನು ಹುಡುಕಬಹುದು.

ಇವೆಲ್ಲವನ್ನೂ ಆತ್ಮಹತ್ಯೆಯ ಎಚ್ಚರಿಕೆಯ ಚಿಹ್ನೆಗಳೆಂದು ಗಂಭೀರವಾಗಿ ಪರಿಗಣಿಸಬೇಕು. ಹಿಂದೆ ಆತ್ಮಹತ್ಯೆಗೆ ಪ್ರಯ
ತ್ನಿಸಿದವರಲ್ಲಿ, ಇತ್ತೀಚಿಗೆ ತೀವ್ರವಾದ ಆರ್ಥಿಕ ಅಥವಾ ಔದ್ಯೋಗಿಕ ಹಿನ್ನಡೆ ಕಂಡವರಲ್ಲಿ, ಪರಸ್ಪರ ಸಂಬಂಧಗಳ ಹೊಂದಾಣಿಕೆ ಇಲ್ಲದೆ ಇರುವ ಸನ್ನಿವೇಶಗಳಲ್ಲಿ, ಕುಟುಂಬದಲ್ಲಿ ಆತ್ಮಹತ್ಯೆಗೆ ಯತ್ನಿಸಿದವರಿದ್ದಲ್ಲಿ ಆತ್ಮಹತ್ಯೆಯ ಅಪಾಯ ಹೆಚ್ಚು.

ನೆರವಿನ ಹಸ್ತ

ಇಂತಹ ಚಿಹ್ನೆಗಳು ನೀವು ಅನುಭವಿಸಿದಲ್ಲಿ ಅಥವಾ ನಿಮ್ಮಲ್ಲಿ ಕಂಡುಬಂದಲ್ಲಿ ಸಹಾಯ ಕೋರುವುದು ಆವಶ್ಯಕ. ಅಲ್ಲದೆ, ಇಂತಹ ಸಮಸ್ಯೆ ಉಳ್ಳವರನ್ನು ನಮ್ಮ ಸುತ್ತಮುತ್ತ ಗುರುತಿಸುವುದರಿಂದ ಹಾಗೂ ಅವರಿಗೆ ಸಹಾಯಹಸ್ತ ಚಾಚುವುದರಿಂದ ಅವರಲ್ಲಿ ಆತ್ಮಹತ್ಯೆಯನ್ನು ತಡೆಗಟ್ಟಬಹುದು. ಆತ್ಮಹತ್ಯೆಯ ಸಾಧನಗಳಿಂದ ದೂರವಿಡುವುದು ಹೆಚ್ಚು ಅನಿವಾರ್ಯ. ಅವರಲ್ಲಿ ಆಶಾಭಾವನೆಯನ್ನು ಮೂಡಿಸಿ ಧೈರ್ಯ ತುಂಬಿಸಬೇಕು. ಯಾವುದೇ ಕಾರಣಕ್ಕೂ ಅವರ ಪರಿಸ್ಥಿತಿಯನ್ನು ಸರಿ-ತಪ್ಪುಗಳ ದೃಷ್ಟಿಯಿಂದ ಅಳೆಯಬಾರದು. ಅವರ ಭಾವನೆಗಳನ್ನು ಹಂಚಿಕೊಳ್ಳಲು ಸಮಯ ನೀಡುವುದರಿಂದ ಅವರಿಗೆ ಮನಸ್ಸು ಹಗುರವೆನಿಸಬಹುದು. ವ್ಯಾಯಾಮ, ಯೋಗ, ಪ್ರೇರಣಾತ್ಮಕ ಪುಸ್ತಕಗಳನ್ನು ಓದುವುದರಿಂದ ಮತ್ತಿತರ ಹವ್ಯಾಸಗಳಲ್ಲಿ ತೊಡಗಿಸಿಕೊಂಡಲ್ಲಿ ಬೇಡದಿರುವ ಆಲೋಚನೆಗಳಿಂದ ಗಮನ ದೂರ ಸರಿಯಬಹುದು.

ಕೆಲವು ತೀವ್ರ ಸಮಸ್ಯೆ ಅಥವಾ ಮಾನಸಿಕ ಕಾಯಿಲೆ ಉಳ್ಳವರಿಗೆ ಮಾನಸಿಕ ತಜ್ಞರ ಸಲಹೆ ಹಾಗೂ ಚಿಕಿತ್ಸೆ ಬೇಕಾಗಬಹುದು. ತುರ್ತು ಸೇವೆಗಳನ್ನು ಬಳಸಬೇಕಾಗಬಹುದು. ಈ ಸಮಸ್ಯೆಯು ಎಲ್ಲಾ ವರ್ಗ ಹಾಗೂ ವಯೋಮಿತಿಗಳಲ್ಲೂ ಕಾಣುವ ಸಮಸ್ಯೆಯಾದರೂ, ಮಹಿಳೆಯರಲ್ಲಿ, ವಯಸ್ಕರಲ್ಲಿ ಮತ್ತು ಮಕ್ಕಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು.

***

ನಿಮ್ಹಾನ್ಸ್ ಸಹಾಯವಾಣಿ ಮತ್ತು ಸಮಾಲೋಚನೆ ಸೇವೆಗೆ: ಶುಲ್ಕರಹಿತ ಸಂಖ್ಯೆ - 080 – 4611 0007. ಟೆಲಿ ಹಾಗೂ ವಿಡಿಯೊ ಸಮಾಲೋಚನೆಗೆ ಕೂಡ ಅವಕಾಶ ಕಲ್ಪಿಸಲಾಗಿದೆ. ಮುಂಚೆ ನಿಮ್ಹಾನ್ಸ್ ಆಸ್ಪತ್ರೆಯ ಸೇವೆಗಳ ಲಾಭ ಪಡೆದಿದ್ದಲ್ಲಿ (ನೋಂದಣಿ ಇದ್ದಲ್ಲಿ) – ಐ.ವಿ.ಆರ್.ಎಸ್ ಸಂಖ್ಯೆ 080 – 26991699 ಮೂಲಕ ಸಮಾಲೋಚನೆಗೆ ಬರಬಹುದು.

ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ, ಆತ್ಮಹತ್ಯೆ ಕಾವಲಿನ (ಸೂಸೈಡ್ gatekeeper) ಪ್ರಶಿಕ್ಷಣಾ ಕಾರ್ಯಾಗಾರಗಳನ್ನು ಕಳೆದ 8 ವರ್ಷಗಳಿಂದ ನಡೆಸಲಾಗುತ್ತಿದೆ. ಆಸಕ್ತಿ ಇದ್ದಲ್ಲಿ, ನಿಮ್ಹಾನ್ಸ್ ವೆಬ್‌ಸೈಟ್‌ https://nimhans.ac.in/ ನಲ್ಲಿ ಮತ್ತು ದೂರವಾಣಿ ಸಂಖ್ಯೆ -080- 26685948 ಯನ್ನು ಸಂಪರ್ಕಿಸಬಹುದು.

 (ಲೇಖಕರು ಹೆಚ್ಚುವರಿ ಪ್ರಾಧ್ಯಾಪಕ, ಮನೋವೈದ್ಯಶಾಸ್ತ್ರ ವಿಭಾಗ, ನಿಮ್ಹಾನ್ಸ್, ಬೆಂಗಳೂರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು