ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ–ಕುಶಲ: ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಿಸುವುದು ಹೇಗೆ?

ಡಾ. ಕುಶ್ವಂತ್‌ ಕೋಳಿಬೈಲು
Published 12 ಫೆಬ್ರುವರಿ 2024, 23:30 IST
Last Updated 12 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಉತ್ತಮವಾದ ಜ್ಞಾಪಕ ಶಕ್ತಿಯು ಮಕ್ಕಳಿಗೆ ಶೈಕ್ಷಣಿಕವಾಗಿ ಹೆಚ್ಚು ಸಾಧನೆ ಮಾಡಲು ಸಹಕಾರಿಯಾಗುತ್ತದೆಯೆಂಬುದು ಎಲ್ಲರೂ ಒಪ್ಪುವಂತಹ ವಿಚಾರವಾಗಿದೆ. ಸ್ಥಳ ಮತ್ತು ವ್ಯಕ್ತಿಗಳ ಹೆಸರುಗಳನ್ನು, ಇಸವಿ ಮತ್ತು ದಿನಾಂಕಗಳ ಅಂಕಿ–ಅಂಶಗಳನ್ನು ಅಥವಾ ಘಟನೆಗಳ ವಿವರವನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಎಲ್ಲಾ ಮಕ್ಕಳಲ್ಲಿ ಒಂದೇ ರೀತಿಯಲ್ಲಿರುವುದಿಲ್ಲ. ಮಕ್ಕಳ ಜ್ಞಾಪಕಶಕ್ತಿಯನ್ನು ಹೆಚ್ಚು ಮಾಡುವುದರ ಕಡೆಗೆ ಪೋಷಕರು ಮತ್ತು ಶಿಕ್ಷಕರು ಒತ್ತು ಕೊಡುವುದು ಸಹಜ. ತಾರ್ಕಿಕವಾಗಿ ಮತ್ತು ವಿಮರ್ಶಾತ್ಮಕವಾಗಿ ಉತ್ತಮ ರೀತಿಯಲ್ಲಿ ಯೋಚಿಸಬಲ್ಲ ಮಗುವು ಅಂಕಿ–ಅಂಶಗಳನ್ನು ಮತ್ತು ಹೆಸರುಗಳನ್ನು ನೆನಪಿಟ್ಟುಕೊಳ್ಳುವಲ್ಲಿ ಎಡವಬಹುದು. ಮಗುವಿನ ಬೌದ್ಧಿಕ ಸಾಮರ್ಥ್ಯವನ್ನು ಅಂಕಗಳ ಆಧಾರದಲ್ಲಿ ಅಳೆಯುವ ಈಗಿನ ಶಿಕ್ಷಣ ವ್ಯವಸ್ಥೆಯು ಅಂತಹ ಮಕ್ಕಳ ಸಾಮರ್ಥ್ಯವನ್ನು ಅಳೆಯುವಲ್ಲಿ ಸೋಲಬಹುದು.

ಲಕ್ಷಾಂತರ ವರ್ಷಗಳ ವಿಕಸನ ಪ್ರಕ್ರಿಯೆಯಲ್ಲಿ ಮಾನವನ ಮಿದುಳಿನಲ್ಲಿ ನಿಯೋಕೋರ್ಟೆಕ್ಸ್ ಮುಂತಾದ ಭಾಗಗಳು ವಿಕಸನವನ್ನು ಹೊಂದಿವೆ. ಅವು ಮನುಷ್ಯನು ಹೆಚ್ಚು ತಾರ್ಕಿಕವಾಗಿ ಯೋಚಿಸುವುದರ ಜೊತೆಗೆ ತನಗೆ ಅಗತ್ಯವಾದ ಮಾಹಿತಿಗಳನ್ನು ಜ್ಞಾಪಕವಿಟ್ಟುಕೊಳ್ಳುವುದಕ್ಕೆ ಸಹಕಾರಿಯಾಗಿವೆ. ಕೆಲವು ವಿವರಗಳನ್ನು ಮನುಷ್ಯ ಅಲ್ಪಾವಧಿಗೆ ಜ್ಞಾಪಕದಲ್ಲಿಟ್ಟುಕೊಂಡರೆ ಕೆಲವು ವಿವರಗಳನ್ನು ಮಿದುಳು ದೀರ್ಘಕಾಲದ ತನಕ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಘಟನೆಗಳಿಗೆ ನಮ್ಮ ಮೆದುಳು ನೀಡುವ ಪ್ರಾಮುಖ್ಯದ ಮೇಲೆ ಯಾವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಯಾವ ವಿವರಗಳು ನೆನಪಿನಲ್ಲಿಟ್ಟುಕೊಳ್ಳಲು ಯೋಗ್ಯವಲ್ಲವೆಂಬುವಲ್ಲ ಎಂಬುದು ನಿರ್ಧಾರವಾಗುತ್ತದೆ.

ಮನುಷ್ಯರಲ್ಲಿ ಶೇ 90ರಷ್ಟು ಮಿದುಳು ಮೊದಲ ಐದು ವರ್ಷಗಳಲ್ಲಿ ಬೆಳೆಯುವ ಮತ್ತು ವಿಕಸನ ಹೊಂದುವ ಕಾರಣದಿಂದ ಬಾಲ್ಯದಲ್ಲಿ ಮಕ್ಕಳು ಸಕಾರಾತ್ಮಕ ವಾತಾವರಣದಲ್ಲಿ ಬೆಳೆಯುವಂತೆ ನೋಡಿಕೊಳ್ಳುವುದು ಅತ್ಯಗತ್ಯವಾಗಿದೆ. ಸಕಾರಾತ್ಮಕ ವಾತಾವರಣದ ಜೊತೆಗೆ ಉತ್ತಮ ಆಹಾರ, ವ್ಯಾಯಾಮ ಮತ್ತು ನಿದ್ದೆಯು ಮಿದುಳಿನ ವಿಕಸನದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ದೊಡ್ಡವರಿಗೆ ದಿನಕ್ಕೆ ಏಳರಿಂದ ಎಂಟು ಗಂಟೆಗಳಷ್ಟು ನಿದ್ದೆಯ ಅವಶ್ಯಕತೆಯಿದ್ದರೆ, ಮಕ್ಕಳು ಸುಮಾರು ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ಮಲಗುತ್ತಾರೆ. ಮಕ್ಕಳಲ್ಲಿ ವೇಗವಾಗಿ ಬೆಳೆಯುತ್ತಿರುವ ನರಮಂಡಲಗಳಿಗೆ ಅಷ್ಟು ವಿಶ್ರಾಂತಿಯ ಅವಶ್ಯಕತೆಯಿರುತ್ತದೆ. ಐದರಿಂದ ಹನ್ನೆರಡು ವರ್ಷಗಳ ವಯಸ್ಸಿನ ಮಕ್ಕಳಿಗೆ ನಿದ್ರಾಹೀನತೆಯುಂಟಾದಲ್ಲಿ ಅದು ಅವರ ಜ್ಞಾಪಕಶಕ್ತಿ ಮತ್ತು ಕಲಿಯುವ ಸಾಮರ್ಥ್ಯವನ್ನು ಕುಗ್ಗಿಸಬಲ್ಲದು. ಅಲ್ಪಾವಧಿಯ ನೆನಪುಗಳನ್ನು ದೀರ್ಘಕಾಲದ ನೆನಪುಗಳಾಗಿ ಪರಿವರ್ತಿಸುವ ಕ್ರಿಯೆಯನ್ನು ಮನುಷ್ಯ ನಿದ್ರಿಸುವ ಅವಧಿಯಲ್ಲಿ ಮಿದುಳು ಪೂರ್ಣಗೊಳಿಸುತ್ತದೆ. ಅಂಕಿ–ಅಂಶ ಮತ್ತು ಹೆಸರುಗಳನ್ನು ಮಿದುಳು ಒಂದು ಕಡೆ ಸಂಗ್ರಹಿಸಿಟ್ಟುಕೊಂಡರೆ ಮಗುವು ಕಲಿಯುವ ದೈಹಿಕ ಚಟುವಟಿಕೆಗಳ ಸ್ನಾಯು ಸ್ಮರಣೆಯು ಮಿದುಳಿನ ಇನ್ನೊಂದು ಕಡೆಯಲ್ಲಿ ಸಂಗ್ರಹವಾಗಿರುತ್ತದೆ. ಹಾಗಾಗಿ ಬಾಲ್ಯದಲ್ಲಿ ಕಲಿತ ಈಜು ಅಥವಾ ಸೈಕಲ್ ಸವಾರಿಯನ್ನು ಹಲವು ವರ್ಷಗಳ ವಿರಾಮದ ಬಳಿಕವೂ ಮನುಷ್ಯ ಮತ್ತೆ ಮಾಡಬಲ್ಲವನಾಗಿರುತ್ತಾನೆ.

ದೈನಂದಿನ ಜೀವನದಲ್ಲಿ ಮಕ್ಕಳು ತಮ್ಮ ಶೈಕ್ಷಣಿಕ ಕಾರಣಕ್ಕಾಗಿ ಜ್ಞಾಪಕ ಶಕ್ತಿಯನ್ನು ಚುರುಕಾಗಿಟ್ಟುಕೊಳ್ಳುವುದು ಅನಿವಾರ್ಯ. ಹೊಸ ವಿಚಾರವನ್ನು ಗ್ರಹಿಸುವಾಗ ಮಕ್ಕಳು ತಮ್ಮ ಏಕಾಗ್ರತೆಯನ್ನು ಉನ್ನತ ಮಟ್ಟದಲ್ಲಿಟ್ಟುಕೊಳ್ಳಬೇಕು. ದೇಹವು ತರಗತಿಯಲ್ಲಿದ್ದು ಮನಸ್ಸು ಆಟದ ಮೈದಾನದಲ್ಲಿ ಓಡಾಡುತ್ತಿದ್ದರೆ ಕಿವಿಯ ಮೂಲಕ ಹರಿದು ಬರುತ್ತಿರುವ ಮಾಹಿತಿಯನ್ನು ಮಿದುಳು ಹಿಡಿದಿಟ್ಟುಕೊಳ್ಳುವಲ್ಲಿ ಸೋಲಬಹುದು. ಒಂದು ವಿಚಾರವನ್ನು ಮಿದುಳು ತನ್ನೊಳಗೆ ಹೊಸ ನರಕೋಶವನ್ನು (synapse) ನಿರ್ಮಿಸುವುದರ ಮೂಲಕ ಸಂಗ್ರಹ ಮಾಡುತ್ತದೆ. ಅದೇ ವಿಚಾರವನ್ನು ಒಂದೆರಡು ಬಾರಿ ಮತ್ತೆ ಮತ್ತೆ ಮನನ ಮಾಡಿದರೆ ಆ ನರಕೋಶ ಹೆಚ್ಚು ಬಲಿಷ್ಠವಾಗುತ್ತದೆ. ತಾವು ನೆನಪಿಟ್ಟುಕೊಳ್ಳಲು ಬಯಸುವ ಹೆಸರು ಅಥವಾ ದಿನಾಂಕಗಳನ್ನು ಒಮ್ಮೆ ಓದಿದ ಬಳಿಕ ಸ್ಪಲ ಸಮಯದ ನಂತರ ಮತ್ತೆ ಜ್ಞಾಪಿಸಿಕೊಳ್ಳಲು ಪ್ರಯತ್ನಿಸಬೇಕು. ಹೀಗೆ ಹಲವು ಬಾರಿ ಪರಿಷ್ಕರಣೆ ಮಾಡಿದಾಗ ನರಕೋಶಗಳು ಸದೃಢವಾಗಿ ಅಲ್ಪಾವಧಿಯ ನೆನಪು ದೀರ್ಘಕಾಲದ ನೆನಪಾಗಿ ಪರಿವರ್ತನೆಯಾಗುತ್ತದೆ.

ಮನುಷ್ಯರಿಗೆ ವಿವಿಧ ಕ್ಷೇತ್ರಗಳಲ್ಲಿ ಇರುವ ವಿಭಿನ್ನ ಸಾಮರ್ಥ್ಯವು ಅವರ ಮೆದುಳಿನ ನೈಸರ್ಗಿಕ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಕೆಲವರಲ್ಲಿ ಭಾಷಾಕೌಶಲ ಹೆಚ್ಚಿದ್ದರೆ, ಕೆಲವರು ಅಂಕೆಗಳನ್ನು ಮತ್ತು ಚಿತ್ರಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಬಲ್ಲರು. ಕೆಲವರು ಕೇಳಿದ್ದನ್ನು ಹೆಚ್ಚು ಚೆನ್ನಾಗಿ ನೆನಪಿಟ್ಟುಕೊಳ್ಳಬಲ್ಲವರಾದರೆ, ಕೆಲವರು ನೋಡಿದನ್ನು ಅಷ್ಟು ಸುಲಭದಲ್ಲಿ ಮರೆಯಲಾರರು. ಈ ಕಾರಣದಿಂದಾಗಿ ಮಕ್ಕಳಿಗೆ ಹೊಸ ವ್ಯಕ್ತಿಯ, ವಸ್ತು ಅಥವಾ ಸ್ಥಳದ ಕುರಿತು ಮಾಹಿತಿ ನೀಡುವ ಸಮಯದಲ್ಲಿ ಅದರ ಚಿತ್ರವನ್ನು ತೋರಿಸಿದಾಗ ಅವರು ಅದನ್ನು ನೆನಪಿನಲ್ಲಿಟ್ಟುಕೊಳ್ಳುವ ಸಂಭವ ಜಾಸ್ತಿಯಾಗಿರುತ್ತದೆ. ಮಕ್ಕಳು ತಮ್ಮ ಪಂಚೇಂದ್ರಿಗಳನ್ನು ಬಳಸಿಕೊಂಡು ಒಂದು ವಿಚಾರ ಅಥವಾ ವಸ್ತುವನ್ನು ಗ್ರಹಿಸಲು ಪ್ರಯತ್ನಿಸಿದಾಗ ಅವರು ಅದನ್ನು ಮರೆಯಲಾರರು. ಉದಾಹರಣೆಗೆ, ನೀವು ಮಕ್ಕಳಿಗೆ ವಿವಿಧ ಪ್ರಾಣಿಗಳ ಹೆಸರನ್ನು ಹೇಳಿ ಅದರ ಚಿತ್ರವನ್ನು ತೋರಿಸಿದಾಗಲೂ ಅವರು ಆ ವಿವರಗಳನ್ನು ಸ್ವಲ ಕಾಲದ ಬಳಿಕ ಮರೆತುಬಿಡಬಹುದು ಆದರೆ ಒಂದು ದಿನದ ಮೃಗಾಲಯದ ಪ್ರವಾಸದಲ್ಲಿ ಅವರು ನೋಡಿದ ಪ್ರಾಣಿಗಳ ಹೆಸರು ಮತ್ತು ವಿವರಗಳು ಹೆಚ್ಚು ಕಾಲ ನೆನಪಿನಲ್ಲಿ ಉಳಿಸಿಕೊಳ್ಳಬಲ್ಲರು.

ಸತ್ಯಾಂಶಗಳನ್ನು ಮಕ್ಕಳ ಮಿದುಳು ಗ್ರಹಿಸುವಾಗ ಅವುಗಳು ಮಕ್ಕಳ ಮನಸ್ಸಿನಲ್ಲಿ ವಿವಿಧ ಭಾವನೆಗಳನ್ನು ಕಲಕಿದರೆ ಅವುಗಳು ಹೆಚ್ಚು ಕಾಲ ನೆನಪಿನಲ್ಲಿ ಉಳಿಯಬಲ್ಲವು. ಚಂದಿರನನ್ನು ಉಪಗ್ರಹವಾಗಿ ಮಕ್ಕಳಿಗೆ ಪರಿಚಯಿಸುವುದಕ್ಕಿಂತ ಚಂದಿರನನ್ನು ಚಂದಾಮಾಮನ ರೂಪದಲ್ಲಿ ತಿಳಿಸುವುದು ಉತ್ತಮ. ಒಂದು ಸಂಕೀರ್ಣ ಸನ್ನಿವೇಶದ ವಿವರವನ್ನು ಪ್ರಬಂಧದ ರೂಪದಲ್ಲಿ ಮಕ್ಕಳ ಮುಂದಿಡುವುದಕ್ಕಿಂತ ಕಥೆಯ ರೂಪದಲ್ಲಿ ಪ್ರಸ್ತುತ ಪಡಿಸುವುದು ಹೆಚ್ಚು ಸೂಕ್ತ. ವಾಸ್ತವವಿಕ ವಿವರ ಅಥವಾ ಅಂಕಿ–ಅಂಶಗಳನ್ನು ಮಕ್ಕಳ ಮುಂದಿಡುವಾಗ ಅವುಗಳಿಗೆ ಭಾವನೆಗಳ ಹೊದಿಕೆ ಹೊದಿಸಿದರೆ ಅವುಗಳನ್ನು ಮಕ್ಕಳು ಹೆಚ್ಚು ಕಾಲ ನೆನಪಿನಲ್ಲಿಟ್ಟುಕೊಳ್ಳಬಲ್ಲರು. ನೈತಿಕ ಶಿಕ್ಷಣದ ಪಾಠಗಳನ್ನು ನೀತಿಕಥೆಗಳ ಮೂಲಕ ಅಥವಾ ರಾಮಾಯಣ–ಮಹಾಭಾರತಗಳ ಪಾತ್ರಗಳ ಮೂಲಕ ಹೇಳುವುದು ಹೆಚ್ಚು ಪರಿಣಾಮವನ್ನು ಬೀರಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT