14ವರ್ಷದ ಬಾಲಕ. ಎನ್‌ಸಿಸಿ ಜೂನಿಯರ್ ಡಿವಿಷನ್‌ನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಆದರೆ, ಕಮಾಂಡ್ ಕೊಡುವಾಗ ನನಗೆ ಜೋರಾಗಿ ಕಿರುಚಲು ಸಾಧ್ಯವಾಗುತ್ತಿಲ್ಲ. ಧ್ವನಿ ವೃದ್ಧಿಸಿಕೊಳ್ಳುವುದು ಹೇಗೆ? ನಾನು ನಿತ್ಯ ದೈಹಿಕ ತರಬೇತಿ ಮಾಡುತ್ತಿದ್ದೇನೆ. ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕ ಪಡೆಯಲು ಏನಾದರೂ ಸಲಹೆ ನೀಡಿ. ಕೋಪ ಬಂದಾಗ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸೂಚನೆ ನೀಡಿ. ಓದ್ದಿದ್ದನ್ನು ಹೆಚ್ಚು ಕಾಲ ನೆನಪಿಡಲು ಸಲಹೆ ನೀಡಿ.
ಹೆಸರು ಊರು ತಿಳಿಸಿಲ್ಲ.
ಮಗೂ ನಿನ್ನನ್ನು ನೀನೇ ಸುಧಾರಿಸಿಕೊಳ್ಳಬೇಕೆನ್ನುವ ಆಸಕ್ತಿ ನನಗೆ ಹಿಡಿಸಿತು. ಆದರೆ ನಿನ್ನ ಬೇಡಿಕೆಯ ಪಟ್ಟಿ ಬಹಳ ಉದ್ದವಾಗಿದೆ! ಪತ್ರದ ಧಾಟಿಯನ್ನು ನೋಡಿದರೆ ನೀನು ಇರುವ ರೀತಿಯ ಕುರಿತು ನಿನಗೆ ಬಹಳ ಅಸಮಾಧಾನವಿರುವಂತಿದೆ. ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಭಿನ್ನವೇ. ಹಾಗಾಗಿ ನಿನ್ನ ಬಗೆಗೆ ಇರುವ ಕೀಳರಿಮೆಯಿಂದ ಹೊರಬರಬೇಕಲ್ಲವೇ? ಮೊದಲು ನಿನ್ನ ಆಸಕ್ತಿಗಳೇನು ಎಂದು ಗುರುತಿಸಿಕೊ. ಹೀಗೆ ಗುರುತಿಸಲು ಸಮಯದ ಅಗತ್ಯವಿದೆ. ಅಲ್ಲಿಯವರೆಗೆ ಹೊಸದರ
ಹುಡುಕಾಟ ಮುಂದುವರಿಸುತ್ತಲೇ ಇರು. ಒಮ್ಮೆ ನಿನ್ನ ಮನಸ್ಸನ್ನು ಸಂಪೂರ್ಣ ತೊಡಗಿಸಲು ಸಾಧ್ಯವಾಗುವ ಕ್ಷೇತ್ರವನ್ನು ಗುರುತಿಸಿಕೊಂಡರೆ ಆದರಲ್ಲಿ ಮಾತ್ರ ಹೆಚ್ಚಿನ ಶ್ರಮ ಹಾಕುವುದು ಸಾಧ್ಯವಾಗುತ್ತದೆ. ಎಲ್ಲರ ಧ್ವನಿ ವಿಶಿಷ್ಟವಾಗಿರುತ್ತದೆ. ನಿನ್ನ ಧ್ವನಿಯನ್ನು ಬೇರೆಯವರ ಧ್ವನಿಗೆ ಹೋಲಿಸಿ ಹಿಂಜರಿಕೆಯನ್ನು ಅನುಭವಿಸಬೇಕಾಗಿಲ್ಲ. ಧ್ವನಿಯನ್ನು ವೃದ್ಧಿಸಿಕೊಳ್ಳಲು ಸತತ ಅಭ್ಯಾಸದ ಅಗತ್ಯವಾಗಿರುತ್ತದೆ. ಪ್ರತಿದಿನ ಸ್ವಲ್ಪಸ್ವಲ್ಪ ಧ್ವನಿ ಎತ್ತರಿಸಿ ಕಮಾಂಡ್ ನೀಡಲು ಪ್ರಯತ್ನಿಸುತ್ತಿರು. ಉಸಿರನ್ನು ಒಳಗೆಳೆದು ನಿಯಂತ್ರಿಸಿ ಹೊರಬಿಡುವ ಅಭ್ಯಾಸವನ್ನೂ ಮಾಡಬೇಕಾಗುತ್ತದೆ. ಧ್ವನಿಪೆಟ್ಟಿಗೆ ಮತ್ತು ಶ್ವಾಸಕೋಶಗಳ ಮೇಲೆ ಒಮ್ಮೆಲೆ ಹೆಚ್ಚಿನ ಒತ್ತಡ ಹೇರಬಾರದು. ಹಲವಾರು ತಿಂಗಳುಗಳ ಪ್ರಯತ್ನದಿಂದ ಧ್ವನಿಯನ್ನು ಸ್ವಲ್ಪ ಸುಧಾರಿಸಿಕೊಳ್ಳಬಹುದು.
ಓದಿದ್ದನ್ನು ನೆನಪಿಟ್ಟುಕೊಳ್ಳಲು ಮತ್ತು ಹೆಚ್ಚಿನ ಅಂಕ ಗಳಿಸಲು ಓದುವ ವಿಷಯಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದು ಅಗತ್ಯ. ಕೇವಲ ಪರೀಕ್ಷೆಯ ದೃಷ್ಟಿಯಿಂದ ಓದಿದರೆ ನೆನಪನ್ನು ಉಳಿಸಿಕೊಳ್ಳುವುದು ಸುಲಭವಲ್ಲ. ವಿಷಯದ ಆಳಕ್ಕೆ ಹೋಗಿ ಅದನ್ನು ಸಂಪೂರ್ಣವಾಗಿ ಗ್ರಹಿಸಿದರೆ ನೆನಪಿಟ್ಟುಕೊಳ್ಳಲು ಹೆಚ್ಚಿನ ಶ್ರಮಪಡುವ ಅಗತ್ಯವಿಲ್ಲ. ನೋಟ್ಸ್‌ಗಳನ್ನು ಓದುವುದರ ಜೊತೆಗೆ ಮೂಲ ಪಠ್ಯಗಳನ್ನು ಓದಬೇಕು. ಪಠ್ಯವಲ್ಲದೆ ಸಂಬಂಧಿಸಿದ ಇತರ ಪುಸ್ತಕಗಳನ್ನು ಓದಿದರೆ ಸಹಾಯವಾಗುತ್ತದೆ. ಇದಕ್ಕಾಗಿ ಸಮಯ ಹೊಂದಿಸಿಕೊಳ್ಳಬೇಕು ಮತ್ತು ಸೂಕ್ತ ಮಾರ್ಗದರ್ಶನ ಪಡೆಯಬೇಕು. ಕೋಪವನ್ನು ನಿಯಂತ್ರಿಸಬೇಕು ಎನ್ನುವುದು ತಪ್ಪುಕಲ್ಪನೆ. ಆದರೆ ನಿನ್ನ ಕೋಪ ಕೆಟ್ಟ ಮಾತು ಮತ್ತು ವರ್ತನೆಯಾಗುವುದನ್ನು ತಡೆಯಲೇಬೇಕು. ಇದನ್ನು ಮಾಡಲು ಮೊದಲು ನಿನ್ನ ಕೋಪ ಏನನ್ನು ಹೇಳುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಬೇರೆಯವರ ಮಾತು ವರ್ತನೆಗಳ ಕುರಿತು ನಿನಗೆ ಬೇಸರ ಅಸಮಧಾನ ಇದ್ದಾಗ ಅವುಗಳನ್ನು ಗೌರವ ಘನತೆಯಿಂದ ವ್ಯಕ್ತಪಡಿಸಲು ಕಲಿಯಬೇಕು. ಇಂತಹ ಅಸಮಾಧಾನವನ್ನು ಹತ್ತಿಕ್ಕಿದರೆ ನಿನಗೆ ಗೊತ್ತಿಲ್ಲದಂತೆಯೇ ಅದು ಕೋಪವಾಗಿ ಹೊರಬರುತ್ತದೆ. ಹಾಗಾಗಿ ನಿನ್ನ ಕೋಪದ ಹಿಂದಿರುವ ಭಾವನೆಗಳನ್ನು ಗುರುತಿಸುವ ಅಭ್ಯಾಸ ಮಾಡಿಕೊ. ನಂತರ ನಿಧಾನವಾಗಿ ಅವುಗಳನ್ನು ಸರಿಯಾದ ಮಾತುಗಳಲ್ಲಿ ವ್ಯಕ್ತಪಡಿಸಲು ಕಲಿಯುತ್ತಾ ಹೋಗಬಹುದು. ಇದರ ಅರ್ಥವೇನೆಂದರೆ ಕೋಪದ ಭಾವನೆ ಕೆಟ್ಟದ್ದಲ್ಲ. ಕೋಪ ನಮ್ಮ ಸ್ವಂತಿಕೆ ರಕ್ಷಿಸಿಕೊಳ್ಳಲು ಪ್ರಕೃತಿ ಸೃಷ್ಟಿಸಿರುವ ರಕ್ಷಣಾ ಕವಚ. ಆದರೆ ಕೋಪ ಬಂದಾಗ ನಮ್ಮ ಮೇಲೆ ಹಿಡಿತ ಕಳೆದುಕೊಂಡು ಕೆಟ್ಟ ಮಾತು ಮತ್ತು ವರ್ತನೆಗಳನ್ನು ತೋರಿಸುವುದು ಸೂಕ್ತವಲ್ಲ. ಕೋಪ ಬಂದಿರುವುದನ್ನು ಆದಷ್ಟು ಬೇಗ ಗುರುತಿಸಿ ದೀರ್ಘವಾಗಿ ಉಸಿರಾಡುತ್ತಾ ದೇಹವನ್ನು ಸಡಿಲಬಿಡಬೇಕು. ನಂತರ ನನ್ನ ಅಭಿಪ್ರಾಯವನ್ನು ಗೌರವದಿಂದ ಹೇಳುವುದು ಹೇಗೆ ಎಂದು ಯೋಚಿಸಿ ಮಾತನಾಡಬೇಕು. ಶುಭವಾಗಲಿ.
ಏನಾದ್ರೂ ಕೇಳ್ಬೋದು
ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.