ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾರಿ ಯಾವುದಯ್ಯಾ ಶ್ವಾಸಕೋಶಕ್ಕೆ...’

Last Updated 5 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ವೈದ್ಯಕೀಯ ತಂತ್ರಜ್ಞಾನ ಮುಂದುವರಿದಂತೆ ಹೆಚ್ಚಿನ ಕಾಯಿಲೆಗಳಿಗೆ ಜೀವಕೋಶದ ಮಟ್ಟದಲ್ಲಿರುವ ಸೂಕ್ಷ್ಮ ಕಾರಣಗಳು ಮುನ್ನೆಲೆಗೆ ಬಂದವು. ಕೆಲವು ರೋಗಗಳು ಆಯಾ ಅಂಗಾಂಗಗಳಿಗೆ ಸೀಮಿತವಾಗುತ್ತಾ ಹೋದಂತೆ ಆಯಾ ಅಂಗಾಂಗಗಳ ಸಮಸ್ಯೆಗಳನ್ನು ಮಾತ್ರ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ವಿಶೇಷ ಪರಿಣತಿಯಿರುವ ತಜ್ಞವೈದ್ಯರೂ ಮುನ್ನೆಲೆಗೆ ಬಂದರು. ದೇಹದ ಒಂದು ಅಂಗಾಂಗದಲ್ಲಿರುವ ರೋಗವನ್ನು ನಿವಾರಿಸಲು ಇಡೀ ದೇಹಕ್ಕೆ ಔಷಧಿಯನ್ನು ಕೊಡುವುದು ಸಮಂಜಸವಲ್ಲವೆಂಬ ವಾದವೂ ಪ್ರಾಮುಖ್ಯ ಪಡೆಯಿತು. ಇಡೀ ದೇಹದೊಳಗೆ ಔಷಧಿಯು ಕೆಲಸ ಮಾಡಬೇಕೆಂದಿದ್ದಲ್ಲಿ ಮಾತ್ರ ಔಷಧಿಯನ್ನು ಮಾತ್ರೆ ಅಥವಾ ಚುಚ್ಚುಮದ್ದಿನ ರೂಪದಲ್ಲಿ ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ಆ ಔಷಧಿಯು ಆರೋಗ್ಯವಂತ ಅಂಗಾಂಗಗಳ ಮೇಲೆ ಅನಗತ್ಯವಾದ ಅಡ್ಡ ಪರಿಣಾಮಗಳನ್ನು ಬೀರುವುದನ್ನು ಕಡಿಮೆ ಮಾಡಬೇಕೆನ್ನುವ ಕಾರಣಕ್ಕೆ ಕಣ್ಣಿನ ರೋಗಗಳಿಗೆ ಡ್ರಾಪ್ಸ್‌, ಚರ್ಮದ ಕಾಯಿಲೆಗಳಿಗೆ ಮುಲಾಮುಗಳನ್ನು ನೀಡುವುದನ್ನು ವೈದ್ಯರು ಪ್ರಾರಂಭಿಸಿದರು.

ಆದರೆ ಕೆಲವೊಂದು ಕಾಯಿಲೆಗಳ ಚಿಕಿತ್ಸಾ ವಿಧಾನದ ಬಗ್ಗೆ ಭಾರತದಲ್ಲಿ ಅರಿವಿನ ಕೊರತೆಯಿರುವ ಕಾರಣದಿಂದ ರೋಗಿಗಳನ್ನು ಕಳಂಕಿತರಂತೆ ಕೀಳಾಗಿ ಕಾಣುತ್ತಾರೆ. ಅಜ್ಞಾನದ ಕಾರಣದಿಂದಾಗಿ ತಪ್ಪು ಮಾಹಿತಿ ಕಾಡ್ಗಿಚ್ಚಿನಂತೆ ಹಬ್ಬಿ ಸತ್ಯಾಂಶವನ್ನು ಸ್ವೀಕರಿಸಲು ವಿದ್ಯಾವಂತರೂ ಹಿಂದೇಟು ಹಾಕುತ್ತಾರೆ. ಶ್ವಾಸಕೋಶದಲ್ಲಿನ ಅಲರ್ಜಿಯಿಂದಾಗಿ ‘ವೀಝಿಂಗ್’ ಸಮಸ್ಯೆಯಿಂದ ಬಳಲುವ ಲಕ್ಷಾಂತರ ಮಕ್ಕಳು ನಮ್ಮ ದೇಶದಲ್ಲಿದ್ದಾರೆ. ಬಾಲ್ಯದಲ್ಲಿ ಈ ಆಸ್ತಮಾ ಕಾಯಿಲೆಯಿಂದ ಬಳಲುವ ಹೆಚ್ಚಿನ ಮಕ್ಕಳು ತಾವು ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ರೋಗಮುಕ್ತರಾಗುತ್ತಾರೆ. ಮಕ್ಕಳ ದೇಹ ಬೆಳೆದಂತೆ ಅವರ ಶ್ವಾಸಕೋಶದ ನಾಳಗಳು ವಿಸ್ತಾರ ಮತ್ತು ಬಲಿಷ್ಠವಾಗುವ ಕಾರಣದಿಂದಾಗಿ ಅವರ ವೀಝಿಂಗ್ ಸಮಸ್ಯೆಗಳು ಕಡಿಮೆಯಾಗುತ್ತವೆ. ಈ ಶ್ವಾಸಕೋಶದ ಸ್ಥಳೀಯ ಸಮಸ್ಯೆಗಳಿಗೆ ‘ಇನ್ಹೇಲರ್’ ಮೂಲಕ ಔಷಧಿಯನ್ನು ನೇರವಾಗಿ ಶ್ವಾಸಕೋಶಕ್ಕೆ ತಲುಪುವಂತೆ ಮಾಡುವುದೇ ಸರಿಯಾದ ವಿಧಾನವೆಂಬ ವಿಚಾರವನ್ನು ವೈದ್ಯಕೀಯ ವಿಜ್ಞಾನವು ಒಪ್ಪಿಕೊಂಡಿದೆ. ‘ಸರ್ಜಿಕಲ್ ಸ್ಟ್ರೈಕ್’ ಮಾದರಿಯಲ್ಲಿ ನಿಖರವಾಗಿ ರೋಗಗ್ರಸ್ತ ಅಂಗಾಂಗದ ಮೇಲೆ ಮಾತ್ರ ಕಾರ್ಯಾಚರಣೆ ನಡೆಸುವುದು ಇಡೀ ದೇಹದ ಮೇಲೆ ಯುದ್ಧ ಸಾರುವುದಕ್ಕಿಂತ ಉತ್ತಮವೆಂಬುದಕ್ಕೆ ಪುರಾವೆಗಳಿವೆ. ಹೀಗಿದ್ದರೂ ಭಾರತದಲ್ಲಿ ಇನ್ಹೇಲರ್ ಬಗ್ಗೆ ಪ್ರಸ್ತಾಪಿಸಿದ ತಕ್ಷಣ ಹೆತ್ತವರು ಬೆವರಲಾರಂಭಿಸುತ್ತಾರೆ. ಇನ್ಹೇಲರ್ ಒಮ್ಮೆ ಬಳಸಲು ಆರಂಭಿಸಿದರೆ ಮಕ್ಕಳು ಅದನ್ನು ಜೀವನಪರ್ಯಂತ ಬಳಸುವ ಚಟಕ್ಕೆ ತುತ್ತಾಗುತ್ತಾರೆ ಎಂದು ವಿನಾಕಾರಣ ಆತಂಕ ಪಡುತ್ತಾರೆ. ನಮ್ಮ ಜನಪ್ರಿಯ ಮನೋರಂಜನಾ ಮಾಧ್ಯಮಗಳೂ ಕೈಯಲ್ಲಿ ಇನ್ಹೇಲರ್ ಹಿಡಿದಿರುವವರನ್ನು ಶಾಶ್ವತ ರೋಗಿಗಳಂತೆ ಬಿಂಬಿಸುತ್ತಾ ಬಂದಿವೆ. ಇಂಥ ಕಾರಣಗಳಿಂದಾಗಿ ಜನರು ಕಾಯಿಲೆಗಿಂತ ಚಿಕಿತ್ಸಾ ವಿಧಾನದ ಬಗ್ಗೆ ಭಯಪಡುವಂತಾಗಿದೆ.

ಆಸ್ತಮಾ ಮಾದರಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಶ್ವಾಸಕೋಶದ ನಾಳಗಳನ್ನು ಸಡಿಲಗೊಳಿಸುವ ಔಷಧಿ ಮತ್ತು ಅಲರ್ಜಿಯನ್ನು ಕಡಿಮೆ ಮಾಡಬಲ್ಲ ಸ್ಟಿರಾಯ್ಡ್ ಔಷಧಿಗಳನ್ನು ಬಳಸುತ್ತೇವೆ. ಈ ಔಷಧಿಗಳನ್ನು ಮಾತ್ರೆ, ದ್ರಾವಣ ಅಥವಾ ಚುಚ್ಚುಮದ್ದಿನ ರೂಪದಲ್ಲಿ ಸ್ವೀಕರಿಸಿದರೆ ಅದು ದೇಹದ ಎಲ್ಲಾ ಅಂಗಾಂಗಗಳ ಮೇಲೆ ತನ್ನ ಪರಿಣಾಮವನ್ನು ಬೀರುತ್ತದೆ. ಈ ಔಷಧಿಗಳಿಂದ ಹೃದಯದ ಬಡಿತವು ಹೆಚ್ಚಾಗುವುದರಿಂದ ಹಿಡಿದು ಸ್ಟಿರಾಯ್ಡ್ ಮಾದರಿಯ ಔಷಧಿಗಳನ್ನು ಮಾತ್ರೆ ಅಥವಾ ಚುಚ್ಚುಮದ್ದಿನ ರೂಪದಲ್ಲಿ ದೀರ್ಘಕಾಲ ಸೇವಿಸಿದಲ್ಲಿ ದೇಹದ ಪ್ರತಿಯೊಂದು ಅಂಗಾಂಗಗಳಿಗೂ ಇವು ಹಾನಿಯನ್ನು ಉಂಟುಮಾಡುತ್ತವೆ. ಇನ್ಹೇಲರ್ ಮೂಲಕ ತೆಗೆದುಕೊಳ್ಳುವ ಔಷಧಿಗಳು ಮಾತ್ರ ನೇರ ಶ್ವಾಸಕೋಶದೊಳಗೆ ಮಾತ್ರ ಪರಿಣಾಮ ಬೀರುವುದರಿಂದ ಅದು ದೇಹದ ಇತರ ಅಂಗಾಂಗಗಳಿಗೆ ಯಾವುದೇ ಸಮಸ್ಯೆಯನ್ನು ಮಾಡುವುದಿಲ್ಲ. ಇದೇ ಔಷಧಿಯನ್ನು ‘ನೆಬ್ಯುಲೈಸರ್’ ಯಂತ್ರದೊಳಗಡೆ ಹಾಕಿ ಮಕ್ಕಳು ತೆಗೆದುಕೊಳ್ಳುವುದು ಹೆತ್ತವರಿಗೆ ಇನ್ಹೇಲರ್ ಕ್ರಮಕ್ಕಿಂತ ಹೆಚ್ಚು ಒಪ್ಪಿಗೆಯಿದೆ. ಆದರೆ ನೆಬ್ಯುಲೈಸರ್ ಮಾದರಿಯಲ್ಲಿ ಈ ಔಷಧಿಗಳು ಶ್ವಾಸಕೋಶವನ್ನು ತಲುಪುವುದಕ್ಕಿಂತ ಹೆಚ್ಚು ವಾತಾವರಣದಲ್ಲಿ ಸೋರಿಕೆಯಾಗುವ ಸಾಧ್ಯತೆಯಿರುತ್ತದೆ. ಸರಿಯಾದ ರೀತಿಯಲ್ಲಿ ಇನ್ಹೇಲರ್ ಮೂಲಕ ಔಷಧಿಯನ್ನು ತೆಗೆದುಕೊಂಡಲ್ಲಿ ಪೂರ್ಣಪ್ರಮಾಣದ ಔಷಧಿಯು ನೇರವಾಗಿ ಶ್ವಾಸಕೋಶವನ್ನು ತಲುಪುತ್ತದೆ.

ತಮ್ಮ ಮಗುವಿನ ಕೈಯಲ್ಲಿ ಇನ್ಹೇಲರ್ ಇರುವುದನ್ನು ಹೆತ್ತವರು ಮಾನಸಿಕವಾಗಿ ಸ್ವೀಕರಿಸಲು ತಯಾರಿರುವುದಿಲ್ಲ. ಹೀಗಾಗಿ ಮಕ್ಕಳು ಸೂಕ್ತ ಚಿಕಿತ್ಸೆಯಿಲ್ಲದೆ ಬಳಲುತ್ತಾರೆ. ಮನೆಯಲ್ಲಿ ‘ಕಾಫ್ ಸಿರಫ್’ಅನ್ನು ಶೇಖರಿಸಿಟ್ಟುಕೊಂಡು ಆಸ್ತಮಾದಿಂದ ಉಂಟಾಗಿರುವ ಕೆಮ್ಮನ್ನು ಬಗ್ಗಿಸುವ ವಿಫಲ ಯತ್ನವನ್ನು ಮಾಡುತ್ತಾರೆ. ಇನ್ಹೇಲರ್ ಮೂಲಕ ಚಿಕಿತ್ಸೆ ಪಡೆದಲ್ಲಿ ಮಾತ್ರ ಇಂತಹ ಮಕ್ಕಳು ರಾತ್ರಿ ಉಸಿರಾಟದ ಸಮಸ್ಯೆಯಿಲ್ಲದೆ ನೆಮ್ಮದಿಯಾಗಿ ನಿದ್ದೆ ಮಾಡುತ್ತಾರೆ. ಅಂತಹ ಮಕ್ಕಳು ಮರುದಿನ ಶಾಲೆಯಲ್ಲೂ ಕ್ರಿಯಾಶೀಲರಾಗಿರುತ್ತಾರೆ. ಉಸಿರಾಟದ ಸಮಸ್ಯೆ ಉಲ್ಬಣವಾದಲ್ಲಿ ತಕ್ಷಣಕ್ಕೆ ಬಳಸಲು ನೆರವಾಗುವ ಇನ್ಹೇಲರ್ ಜೊತೆಯಲ್ಲಿದ್ದಲ್ಲಿ ಅಂತಹ ಮಕ್ಕಳು ಆಟದ ಮೈದಾನದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗುತ್ತದೆ. ಈ ಮೂಲಕ ಅವರ ಸರ್ವಾಂಗೀಣ ವ್ಯಕ್ತಿತ್ವದ ನಿರ್ಮಾಣವಾಗುತ್ತದೆ. ಶಾಲೆಗಳಲ್ಲಿಯೂ ಇನ್ಹೇಲರ್ ಬಳಸುವ ಮಕ್ಕಳನ್ನು ತಾರತಮ್ಯವಿಲ್ಲದೆ ನಡೆಸಿಕೊಳ್ಳುವ ಪದ್ಧತಿ ಹೆಚ್ಚಾಗಬೇಕು. ಆಗ ಅಂತಹ ಮಕ್ಕಳ ಆತ್ಮವಿಶ್ವಾಸಕ್ಕೂ ಧಕ್ಕೆ ಬರುವುದಿಲ್ಲ.

ಔಷಧಿಯನ್ನು ಯಾವ ರೂಪದಲ್ಲಿ ಯಾವ ಅಂಗಾಂಗಕ್ಕೆ ಎಷ್ಟು ಪ್ರಮಾಣದಲ್ಲಿ ತಲುಪಿಸಬೇಕೆನ್ನುವುದು ತೀರಾ ತಾಂತ್ರಿಕವಾದ ವಿಚಾರ. ವೈದ್ಯಕೀಯ ವಿಜ್ಞಾನ ಮುಂದುವರಿದಂತೆ ಈಗ ಹೆಚ್ಚಿನ ಶಸ್ತ್ರಚಿಕಿತ್ಸೆಗಳನ್ನು ಮಾಡುವಾಗ ಶಸ್ತ್ರಚಿಕಿತ್ಸೆ ನಡೆಯುವ ಆಯಾ ಸ್ಥಳೀಯ ಅಂಗಾಂಗದ ಮೇಲೆ ಮಾತ್ರ ಪರಿಣಾಮ ಬೀರಬಲ್ಲ ಸ್ಥಳೀಯ ಅರವಳಿಕೆ ಔಷಧಿಗಳು ಬಂದಿವೆ. ಮಾತ್ರೆಯ ಮೂಲಕ ತೆಗೆದುಕೊಂಡಲ್ಲಿಯೂ ಚುಚ್ಚುಮದ್ದಿನಷ್ಟೇ ಸಮರ್ಥವಾಗಿ ಮತ್ತು ಕಡಿಮೆ ಅಪಾಯದೊಂದಿಗೆ ಕೆಲಸ ಮಾಡುವ ಔಷಧಿಗಳಿದ್ದರೂ ಗ್ರಾಮೀಣ ಭಾರತದಲ್ಲಿ ವೈದ್ಯರನ್ನು ಚುಚ್ಚುಮದ್ದಿಗಾಗಿ ಪೀಡಿಸುವ ರೋಗಿಗಳೂ ಇದ್ದಾರೆ. ಶ್ವಾಸಕೋಶದ ವೀಝಿಂಗ್ ಮತ್ತು ಆಸ್ತಮಾ ಸಮಸ್ಯೆಗಳಿಗೆ ಇನ್ಹೇಲರ್ ಮೂಲಕ ನೇರವಾಗಿ ಶ್ವಾಸಕೋಶಕ್ಕೆ ಔಷಧಿಯನ್ನು ತಲುಪಿಸದೆ ಸಿರಫ್ ಮತ್ತು ಚುಚ್ಚುಮದ್ದಿನ ಮೊರೆಹೋಗುವುದು ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ಹಾಗೆ.

ಒಂದು ಊರನ್ನು ತಲುಪಲು ನೂರು ದಾರಿಗಳಿರಬಹುದು. ಆದರೆ ಅಡ್ಡದಾರಿ ಹಿಡಿದರೆ ಅಪಾಯ ಜಾಸ್ತಿ. ಹಾಗೆಯೇ ಒಂದು ಔಷಧಿಯನ್ನು ರೋಗನಿವಾರಣೆಗಾಗಿ ದೇಹದ ಅಂಗಾಂಗಕ್ಕೆ ತಲುಪಿಸಲು ವೈದ್ಯರು ಸೂಚಿಸಿದ ಅತ್ಯಂತ ಸಮರ್ಪಕವಾದ ದಾರಿಯಲ್ಲಿ ಹೆಜ್ಜೆ ಹಾಕಿದರೆ ಮಾತ್ರ ಪರಿಣಾಮ ಜಾಸ್ತಿ. ಆಗ ಅಡ್ಡಪರಿಣಾಮಗಳಿಗೆ ಅವಕಾಶವೂ ಕಡಿಮೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT