ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಸ್ಟರೆಕ್ಟಮಿ ಪರ್ಯಾಯ ಇಲ್ಲವೇ?

Last Updated 18 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಗರ್ಭಾಶಯವು ಕೇವಲ ಮಗುವಿಗೆ ಜನ್ಮ ನೀಡುವ ಅಂಗವಾಗಷ್ಟೇ ಮಹತ್ವ ಪಡೆಯದೇ ಅದು ಹೆಣ್ಣಿನ ಒಟ್ಟಾರೆ ಸ್ವಾಸ್ಥ್ಯ ಹಾಗೂ ದೈಹಿಕ, ಭಾವನಾತ್ಮಕ ಮತ್ತು ಲೈಂಗಿಕ ಆರೋಗ್ಯದ ವಿಚಾರದಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಆದರೆಇತ್ತೀಚೆಗೆ ಬಹಳಷ್ಟು ಮಹಿಳೆಯರು, ಅವರಲ್ಲೂ ಗ್ರಾಮೀಣ ಭಾಗದವರು ಹಿಸ್ಟರೆಕ್ಟಮಿ (ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಾಶಯ ತೆಗೆಯುವುದು)ಗೆ ಒಳಗಾಗುತ್ತಿರುವುದು ಆತಂಕದ ಸಂಗತಿ.

ಗರ್ಭಾಶಯವನ್ನು ಉಳಿಸಿಕೊಳ್ಳಲು ಸರಳ ಶಸ್ತ್ರಚಿಕಿತ್ಸೆ ಅಥವಾ ವೈದ್ಯಕೀಯದಲ್ಲಿ ಇತರೆ ಆಯ್ಕೆಗಳಿದ್ದರೂ ಸ್ತ್ರೀಯರು ತಮ್ಮ ಗರ್ಭಾಶಯವನ್ನು ತೆಗೆಸಿಕೊಳ್ಳುತ್ತಿದ್ದಾರೆ. ಹೆರಿಗೆ ಸಂದರ್ಭದಲ್ಲಿ ಸಿಝೇರಿಯನ್ ಮೂಲಕ ಮಗುವಿನ ಜನನವಾದ ನಂತರ ಗರ್ಭಾಶಯ
ವನ್ನು ತೆಗೆಸಿಕೊಳ್ಳುವುದು ಕೂಡ ಸಾಮಾನ್ಯ ಎಂಬಂತಾಗಿದೆ. 20– 30 ವರ್ಷ ವಯಸ್ಸಿನ ಯುವತಿಯರಿಗೆ ಹಿಸ್ಟರೆಕ್ಟಮಿ ನಂತರದ ದೀರ್ಘಕಾಲೀನ ಆರೋಗ್ಯದ ಸಮಸ್ಯೆಗಳ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲದಿರುವುದು ಕೂಡ ಇದಕ್ಕೆ ಕಾರಣ ಎನ್ನಬಹುದು.

ಜೀವಕ್ಕೆ ಎರವಾಗುವಂತಹ ಗರ್ಭಾಶಯದ ತೊಂದರೆಗಳಿರುವ ಸಂದರ್ಭದಲ್ಲಿ ಮಹಿಳೆಯ ಜೀವವನ್ನು ಉಳಿಸುವುದು ಹಿಸ್ಟರೆಕ್ಟಮಿಯ ಉದ್ದೇಶ. ಈ ಶಸ್ತ್ರಚಿಕಿತ್ಸೆಯಿಂದಾಗುವ ಪಾರ್ಶ್ವ ಪರಿಣಾಮಗಳನ್ನು ಕಡಿಮೆ ಮಾಡುವುದಕ್ಕಾಗಿ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮಾಡಬೇಕು.

ಕಾರಣಗಳು

ಫೈಬ್ರಾಯ್ಡ್‌ (ಗರ್ಭಾಶಯದ ಗಡ್ಡೆಗಳು): ಇದನ್ನು ಆರಂಭದಲ್ಲೇ ಕಂಡು ಹಿಡಿದು ನೋವು ನಿವಾರಕ ಮಾತ್ರೆಗಳು, ಹಾರ್ಮೋನ್‌ ಮಾತ್ರೆಗಳು ಮತ್ತು ಇದಕ್ಕೆ ರಕ್ತ ಪೂರೈಸುವ ನಾಳಗಳ ಸಂಪರ್ಕವನ್ನು ಕಡಿತಗೊಳಿಸುವ ವೈದ್ಯಕೀಯ ವಿಧಾನಗಳಿಂದ ಉಪಚರಿಸಬಹುದು.

ಋತುಸ್ರಾವದಲ್ಲಿ ಅತೀ ರಕ್ತಸ್ರಾವ: ಹಾರ್ಮೋನ್‌ ಮಾತ್ರೆಗಳು, ಹಾರ್ಮೋನ್‌ ಬಿಡುಗಡೆ ಮಾಡುವ ಕಾಪರ್‌ ಟಿಯಂತಹ ಸಾಧನಗಳು, ಎಂಡೊಮೆಟ್ರಿಯಮ್ ಹೆರೆಯುವ ತಂತ್ರ ಮೊದಲಾದ ಪದ್ಧತಿಗಳು ವಿಫಲಗೊಂಡಾಗ ಮಾತ್ರ ಹಿಸ್ಟರೆಕ್ಟಮಿಯನ್ನು ಅನುಸರಿಸುತ್ತಾರೆ.

ದೀರ್ಘಕಾಲೀನ ಹಾಗೂ ಅತಿಯಾದ ಬಿಳಿ ಸ್ರಾವ (ಸರ್ವಿಸೈಟಿಸ್): ಉಳಿದವುಗಳಂತೆ ಇದಕ್ಕೂ ಕೂಡ ಹಿಸ್ಟರೆಕ್ಟಮಿ ಅವಶ್ಯಕತೆಯಿಲ್ಲ. ಲೂಪ್ ಛೇದನ, ಕ್ರಯೊ ಚಿಕಿತ್ಸೆ ಮೊದಲಾದ ಪದ್ಧತಿಯ ಮೂಲಕ ಬಾಧಿತ ಭಾಗವನ್ನು ತೆಗೆದುಹಾಕಬಹುದು.

ಅಡೆನೊಮಯೊಸಿಸ್: ಗರ್ಭಕೋಶದ ಭಿತ್ತಿ ಅಂದರೆ ಎಂಡೊಮೆಟ್ರಿಯಮ್‌ ಪದರವು ಗರ್ಭಕೋಶದ ಸ್ನಾಯುಗಳಿಂದ ಬೇರ್ಪಡುತ್ತದೆ. ಆಗ ಅತಿಯಾದ ರಕ್ತಸ್ರಾವ, ಹೊಟ್ಟೆನೋವು ಬರಬಹುದು. ಇದರ ತೀವ್ರತೆ
ಯನ್ನು ನೋವು ನಿವಾರಕ ಮಾತ್ರೆಗಳು, ಹಾರ್ಮೋನ್‌ ಮಾತ್ರೆಗಳು, ಹಾರ್ಮೋನ್‌ ಬಿಡುಗಡೆ ಮಾಡುವ ಕಾಪರ್‌ ಟಿ ಸಾಧನಗಳಿಂದ ಉಪಚರಿಸಬಹುದು. ಇದಕ್ಕೆ ಸ್ಪಂದಿಸದಿದ್ದರೆ ಅಡೆನೊಮಯೊಕ್ಟಮಿ ಮಾಡಬಹುದು.

ಮಹಿಳೆಯರು ಅವರಲ್ಲೂ ಬಹುತೇಕ ಆರ್ಥಿಕ ಸಮಸ್ಯೆ ಉಳ್ಳವರು ಕ್ಯಾನ್ಸರ್ ಭಯದಿಂದ ಸಾಮಾನ್ಯವಾಗಿ ಹಿಸ್ಟರೆಕ್ಟಮಿಗೆ ಒಳಗಾಗುತ್ತಾರೆ. ಇನ್ನು ಕೆಳ ಉದರ ನೋವು, ಬೆನ್ನು ನೋವು, ಬಿಳಿ ಸೆರಗು, ಸಾಮಾನ್ಯ ಹೆರಿಗೆ ಸಮಸ್ಯೆಗಳಲ್ಲಿ ಕೂಡ ನೇರವಾಗಿ ಗರ್ಭಾಶಯಕ್ಕೆ ಸಂಬಂಧಿಸದಿದ್ದರೂ ಹಿಸ್ಟರೆಕ್ಟಮಿಗೆ ಶಿಫಾರಸ್ಸು ಮಾಡುವ ಪದ್ಧತಿಯಿದ್ದು, ಇದರ ಬಗ್ಗೆ ಅರಿವು ಮೂಡಿಸಬೇಕಾಗಿದೆ.

ಗ್ರಾಮೀಣ ಮಹಿಳೆಯರಿಗೆ ಋತುಸ್ರಾವದ ದಿನಗಳಲ್ಲಿ ಸರಿಯಾದ ವೈದ್ಯಕೀಯ ಸಲಹೆಗಳ ಕೊರತೆಯಿರುತ್ತದೆ. ಋತುಸ್ರಾವದ ಸಂದರ್ಭದಲ್ಲಿ ಅವರು ಹೊಲಗಳಲ್ಲಿ ಕೆಲಸ ಮಾಡಲು ನಿರ್ಬಂಧವಿರಬಹುದು. ಕಠಿಣ ಕೆಲಸ ಮಾಡುವುದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸ್ಥಳೀಯ ವೈದ್ಯರು ಕೆಲವು ಬೇರೆಲ್ಲಾ ಚಿಕಿತ್ಸೆಗಳಿದ್ದರೂ ಕೂಡಹಿಸ್ಟರೆಕ್ಟಮಿ ಶಿಫಾರಸ್ಸು ಮಾಡುತ್ತಾರೆ.

ಅಡ್ಡ ಪರಿಣಾಮಗಳು

ಹಿಸ್ಟರೆಕ್ಟಮಿಯಿಂದ ಎಳೆಯ ವಯಸ್ಸಿನ ಯುವತಿಯರು ಹೆಚ್ಚಿನ ಸಮಸ್ಯೆಗೆ ಒಳಗಾಗುವುದು ಕಂಡು ಬಂದಿದೆ. ಅವರ ಅಂಡಾಶಯವು ಕೆಳಗೆ ಜರಿಯುತ್ತದೆ. ಒಣ ಚರ್ಮದ ಸಮಸ್ಯೆಯಲ್ಲದೇ ಕಾಮಾಸಕ್ತಿ ಕಡಿಮೆಯಾಗುತ್ತದೆ. ಅಂಡಾಶಯದ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡುವುದಕ್ಕಾಗಿ ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅಂಡಾಶಯವನ್ನು ಕೂಡ ತೆಗೆಯಲಾಗುತ್ತದೆ. ಜನನಾಂಗದಲ್ಲಿ ಉರಿ, ಪದೆ ಪದೆ ಮೂತ್ರ ವಿಸರ್ಜನೆ, ಅಕಾಲಿಕ ಋತುಬಂಧ ಕೂಡ ತಲೆದೋರಬಹುದು. ಹೃದಯದ ಸಮಸ್ಯೆ ತಲೆದೋರುವ ಸಾಧ್ಯತೆ ಹೆಚ್ಚು. ಆಸ್ಟಿಯೊಪೊರೋಸಿಸ್ ಲಕ್ಷಣ ಸಣ್ಣ ವಯಸ್ಸಿನಲ್ಲಿ ಕಂಡುಬರುತ್ತದೆ.

ಚಿಕಿತ್ಸೆ

ಅತೀ ಮಾಸಿಕ ಋತುಸ್ರಾವಕ್ಕೆ ಮಾತ್ರೆಗಳು, ಹಾರ್ಮೋನ್‌ ಇಂಜೆಕ್ಷನ್, ಸಂಪೂರ್ಣ ಗರ್ಭಾಶಯದ ಬದಲಿಗೆ ಫೈಬ್ರಾಯ್ಡ್ ತೆಗೆದುಹಾಕುವುದು ಹಿಸ್ಟರೆಕ್ಟಮಿಗೆ ಪರ್ಯಾಯವಾಗಿ ಚಾಲ್ತಿಯಲ್ಲಿವೆ. ಭಾರತೀಯ ಮಹಿಳೆ ವಿಶೇಷವಾಗಿ ಗ್ರಾಮೀಣ ಭಾಗ ಮತ್ತು ಚಿಕ್ಕ ಪಟ್ಟಣಗಳಲ್ಲಿ ವಾಸಿಸುವ ಮಹಿಳೆಯರಿಗೆ ಪ್ರಜನನ ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡಬೇಕಾಗಿದೆ. ನಿಯಮಿತ ಸರ್ವಿಕಲ್ ಕ್ಯಾನ್ಸರ್ ತಪಾಸಣೆ ಸಹ ಹಿಸ್ಟರೆಕ್ಟಮಿ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

2018ರಲ್ಲಿ ಕೇಂದ್ರ ಸರ್ಕಾರವು 70 ಸಾವಿರ ಮಹಿಳೆಯರನ್ನು ಸಮೀಕ್ಷೆ ಮಾಡಿತ್ತು. ಇವರಲ್ಲಿ 15– 49 ವರ್ಷ ವಯಸ್ಸಿನ 22 ಸಾವಿರ ಮಹಿಳೆಯರು ಗರ್ಭಕೋಶವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಸಿಕೊಂಡಿದ್ದರು. 30– 49 ವರ್ಷ ವಯಸ್ಸಿನ ಹೆಂಗಳೆಯರಲ್ಲಿ ಶೇ 6ರಷ್ಟು ಮಂದಿ ಗರ್ಭಾಶಯವನ್ನು ತೆಗೆಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಇಲಾಖೆಯ ಸಮೀಕ್ಷೆ ತಿಳಿಸಿದೆ.

(ಲೇಖಕಿ ಲ್ಯಾಪ್ರೊಸ್ಕೋಪಿಕ್‌ ಹಾಗೂ ಫರ್ಟಿಲಿಟಿ ವೈದ್ಯೆ, ವೈದ್ಯಕೀಯ ನಿರ್ದೇಶಕಿ, ರಾಧಾಕೃಷ್ಣ ಮಲ್ಟಿಸ್ಪೆಷಲಿಟಿ ಮತ್ತು ಐವಿಎಫ್‌ ಆಸ್ಪತ್ರೆ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT