ಕಾಯಿಲೆಗಳು ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿಬಿಟ್ಟಿವೆ. ಎಲ್ಲರ ತುಡಿತ ಆರೋಗ್ಯದತ್ತಲೇ ಇದ್ದರೂ ಆಗೀಗ ಅನಾರೋಗ್ಯ ನಮ್ಮನ್ನು ಕಾಡುವುದು ಸಾಮಾನ್ಯ. ನಾವು ಆರೋಗ್ಯದಿಂದ ಇದ್ದರೂ ನಮ್ಮ ಕುಟುಂಬದವರೋ ಸ್ನೇಹಿತರೋ ಅಥವಾ ಮತ್ಯಾರೋ ಪರಿಚಯದವರೋ ಅನಾರೋಗ್ಯದಿಂದ ಬಳಲಿರುವುದನ್ನು ನಾವು ನೋಡೇ ನೋಡಿರುತ್ತೇವೆ. ಆಯಾ ಕಾಯಿಲೆಗಳ ಅಗತ್ಯತೆಗೆ ತಕ್ಕಂತೆ ರೋಗಿಗೆ ಕೆಲವೊಮ್ಮೆ ಆಸ್ಪತ್ರೆಯಲ್ಲಿ ದಾಖಲಾಗುವ, ಶಸ್ತ್ರಚಿಕಿತ್ಸೆಗೆ ಒಳಗಾಗುವ ಪ್ರಮೇಯವೂ ಬರಬಹುದು.

ಒಮ್ಮೆ ದೊಡ್ಡಾಸ್ಪತ್ರೆಗೆ ಬಂದರೆ ರೋಗಿಗೆ ಅಲ್ಲಿ ಅನೇಕ ಚಿಕಿತ್ಸಾ ಸೌಲಭ್ಯಗಳು ದೊರಕುವುದಷ್ಟೇ ಅಲ್ಲ, ಕೆಲವೊಮ್ಮೆ ವಿಚಲಿತರಾಗುವ ಸನ್ನಿವೇಶಗಳೂ ಎದುರಾಗುತ್ತವೆ. ಒಂದೆಡೆ ಚೀಟಿ ಮಾಡಿಸಲು ಸರದಿ ಇದ್ದರೆ ಇನ್ನೊಂದೆಡೆ ಔಷಧಗಳನ್ನು ಪಡೆಯುವ ಸರದಿ ಇರುತ್ತದೆ. ‘ಸ್ಕ್ಯಾನ್ ಮಾಡಿಸಲು ಬರೆದು ಕೊಟ್ಟಿದ್ದಾರೆ, ಎಲ್ಲಿದೆ ಆ ಕೋಣೆ?’ ಎಂದು ಕೆಲವರು ಹುಡುಕಿದರೆ, ‘ರಕ್ತಪರೀಕ್ಷೆಯ ರಿಪೋರ್ಟ್ ಎಲ್ಲಿ ಸಿಗುತ್ತದೆ’ ಎಂದು ಮತ್ತೊಬ್ಬರು ಓಡಾಡುತ್ತಿರುತ್ತಾರೆ. ತಕ್ಕಮಟ್ಟಿಗೆ ಫಲಕಗಳು ಇದ್ದರೂ ಆಸ್ಪತ್ರೆಯಲ್ಲಿ ಕಾಲಿಟ್ಟಾಗ ರೋಗಿಗಾಗಲಿ, ಅವರ ಸಂಬಂಧಿಕರಿಗಾಗಲಿ ಕೊಂಚ ಗಾಬರಿ, ಅಳುಕು ಇದ್ದೇ ಇರುತ್ತದೆ.

ಈ ಎಲ್ಲದರ ನಡುವೆ ನಮಗೆ ಗಮನಕ್ಕೆ ಬರುವುದು ಮೂಲೆಯಲ್ಲೆಲ್ಲೋ ಕಂಡುಬರುವ ‘ICU’ (ಐಸಿಯು) ಎಂಬ ಹೆಸರಿನ ಫಲಕ. ICU (ಇಂಟೆನ್ಸಿವ್ ಕೇರ್ ಯೂನಿಟ್) ಅಥವಾ ‘ತೀವ್ರನಿಗಾ ಘಟಕ’ ಎಂದು ಪ್ರಾಮುಖ್ಯವನ್ನು ಪಡೆದಿರುವ ಈ ಕೋಣೆ ಆಸ್ಪತ್ರೆಯ ಒಂದು ವಿಶಿಷ್ಟ ಸ್ಥಳ. ಸಾಮಾನ್ಯವಾಗಿ ದೊಡ್ಡ ದೊಡ್ಡ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಕಂಡುಬರುವ ಈ ‘ಐಸಿಯು’ ಎಂಬ ಘಟಕ ಹೆಸರೇ ಸೂಚಿಸುವಂತೆ ರೋಗ ತೀವ್ರ ಉಲ್ಬಣಗೊಂಡ ಸ್ಥಿತಿಯಲ್ಲಿರುವ ರೋಗಿಗಳನ್ನು ಆರೈಕೆ ಮಾಡುವ ವಿಭಾಗ. ಜನರಿಗೂ ಐಸಿಯು ಎಂದರೆ ಏನೋ ಒಂದು ರೀತಿಯ ಹೆದರಿಕೆ. ಇಲ್ಲಿಗೆ ರೋಗಿಯನ್ನು ದಾಖಲಿಸಿದರೆ ಆತನ ಕಥೆ ಮುಗಿದೇಹೋಯ್ತು ಎಂಬುದು ಜನರ ಸಾಮಾನ್ಯ ನಂಬಿಕೆ. ಹಾಗಾದರೆ ಈ ಐಸಿಯು ಎಂದರೇನು, ಜನ ಯಾತಕ್ಕಾಗಿ ಹೆದರುತ್ತಾರೆ ಎಂದು ಕೊಂಚ ತಿಳಿದುಕೊಳ್ಳೋಣ.

ಐಸಿಯು ಆಸ್ಪತ್ರೆಯ ಒಂದು ಪ್ರಮುಖ ವಿಭಾಗ. ಸಾಮಾನ್ಯವಾಗಿ ಇದು ಜನರ ಓಡಾಟದಿಂದ ಮುಕ್ತವಾಗಿದ್ದು ಪ್ರವೇಶ ಕೂಡ ನಿರ್ಬಂಧಿಸಿರುತ್ತದೆ. ಆಸ್ಪತ್ರೆಯ ಉಳಿದ ವಾರ್ಡುಗಳಿಗಿಂತ ತುಂಬಾ ಭಿನ್ನವಾಗಿರುವ ಇದರಲ್ಲಿ ಕಾಲಿಟ್ಟರೆ ಸಾಕು ಒಂದು ವಿಚಿತ್ರ ಲೋಕವೇ ತೆರೆದುಕೊಳ್ಳುತ್ತದೆ. ಬೆಡ್ಡಿನ ಮೇಲೆ ರೋಗಿಗಳು ಮಲಗಿದ್ದರೆ, ಅವರನ್ನು ಅನೇಕ ಎಲೆಕ್ಟ್ರಾನಿಕ್ ಉಪಕರಣಗಳು, ವೈರ್ಗಳು ಸುತ್ತುವರೆದಿರುತ್ತವೆ. ಅವುಗಳಿಂದ ಬೀಪ್ನಂಥ ಅಸಂಖ್ಯಾತ ಶಬ್ದಗಳು ಹೊರಹುಮ್ಮುತ್ತಿರುತ್ತದೆ. ಟಿ.ವಿ. ತರಹದ ಪರದೆ ಮೇಲೆ ಅನೇಕ ರೇಖೆಗಳು, ಅಂಕಿ–ಸಂಖ್ಯೆಗಳು ಮೂಡಿ ಮಾಯವಾಗುತ್ತಿರುತ್ತವೆ. ವೈದ್ಯರು, ದಾದಿಯರು ಲಗುಬಗೆಯಿಂದ ಓಡಾಡುತ್ತಾ ರೋಗಿಯ ಆರೈಕೆ ಮಾಡುತ್ತಿರುತ್ತಾರೆ. ಹವಾನಿಯಂತ್ರಣ, ಪ್ರತ್ಯೇಕ ಕ್ಯಾಬಿನ್, ವಿಶೇಷ ಹಾಸಿಗೆಗಳು, ಅತ್ಯಾಧುನಿಕ ಯಂತ್ರೋಪಕರಣಗಳು, ಮತ್ತು ಸೋಂಕುಮುಕ್ತ ವಾತಾವರಣಕ್ಕಾಗಿ ಪದೇಪದೇ ಮಾಡುವ ಸ್ವಚ್ಛತೆ ಇಲ್ಲಿನ ಕೆಲ ವಿಶೇಷಗಳು.

ಈ ಮೊದಲೇ ಹೇಳಿದಂತೆ ರೋಗ ವಿಷಮಿಸಿದಾಗ ರೋಗಿಯನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡುತ್ತಾರೆ. ಕೆಲಬಾರಿ ತೀವ್ರ ಅಪಘಾತಕ್ಕೀಡಾದ ರೋಗಿಗಳು, ಮಿದುಳು, ಹೃದಯದ ಅಥವಾ ಇನ್ನಾವುದೇ ದೊಡ್ಡ ಶಸ್ತ್ರಚಿಕಿತ್ಸೆಗಳ ನಂತರ ಕೂಡ ರೋಗಿಗೆ ಐಸಿಯು ಅವಶ್ಯಕತೆಯಿರುತ್ತದೆ. ವಾರ್ಡಿನಲ್ಲಿ ನೀಡಲಾಗದ ಹೆಚ್ಚಿನ ಚಿಕಿತ್ಸೆಗಳನ್ನು ಇಲ್ಲಿ ನೀಡಬಹುದು. ಉದಾಹರಣೆಗೆ, ವಾರ್ಡಿನಲ್ಲಿ ಆಮ್ಲಜನಕವನ್ನು ಮಾಸ್ಕ್ ಮುಖಾಂತರ ನೀಡಬಹುದಾದರೆ ಇಲ್ಲಿ ವೆಂಟಿಲೇಟರ್ ಮೂಲಕ ಉಸಿರಾಟವನ್ನೇ ನಿಯಂತ್ರಿಸಬಹುದು. ಕೆಲವು ಇಂಜೆಕ್ಷನ್ಗಳನ್ನು ಇಲ್ಲಿರುವ ವಿಶೇಷ ಉಪಕರಣಗಳ ಮೂಲಕ ನೀಡಬಹುದು. ರೋಗಿಗೆ ಮೂತ್ರಪಿಂಡದ ವೈಫಲ್ಯವಾದಾಗ ಇಲ್ಲಿಯೇ ಡಯಾಲಿಸಿಸ್ ನೀಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಯೊಬ್ಬ ರೋಗಿಗೆ ಒಬ್ಬ ದಾದಿ ಸತತವಾಗಿ ಆರೈಕೆ ಮಾಡುತ್ತಿರುತ್ತಾಳೆ. ಜೊತೆಗೆ ‘ಇಂಟೆನ್ಸಿವಿಸ್ಟ್’ ಎಂಬ ತಜ್ಞವೈದ್ಯ ಕೂಡ ಇಲ್ಲಿದ್ದು ರೋಗಿಯ ಆಗುಹೋಗುಗಳನ್ನು ಕೂಲಂಕಷವಾಗಿ ನೋಡಿಕೊಳ್ಳುತ್ತಾರೆ. ಇದರ ಜೊತೆ ಇತರೆ ತಜ್ಞವೈದ್ಯರೂ ಲಭ್ಯವಿರುತ್ತಾರೆ.

ವೆಂಟಿಲೇಟರ್ ಮೇಲೆ ರೋಗಿಯು ಅವಲಂಬಿತರಾದರೆ ಅವರ ಕಥೆ ಮುಗಿಯಿತು ಎಂದೇ ಬಹುತೇಕ ಜನ ಭಾವಿಸುತ್ತಾರೆ. ಕೋವಿಡ್ ಸಮಯದಲ್ಲಿ ಅನೇಕ ರೋಗಿಗಳು ವೆಂಟಿಲೇಟರಿನಿಂದ ಹೊರಬರಲಿಲ್ಲ. ಆದರೆ ನಿಜಾಂಶ ಅದಲ್ಲ. ವೆಂಟಿಲೇಟರ್ ತಾತ್ಪೂರ್ತಿಕವಾಗಿ ರೋಗಿಯ ಉಸಿರಾಟವನ್ನು ನಿಯಂತ್ರಿಸುತ್ತದೆ. ಬಹುತೇಕ ರೋಗಿಗಳು ವೆಂಟಿಲೇಟರಿನಿಂದ ಹೊರಬಂದು ಗುಣಮುಖರಾಗುತ್ತಾರೆ. ಅದರಂತೆ ಐಸಿಯುನಲ್ಲಿ ಡಯಾಲಿಸಿಸ್ ಮಾಡಿದರೆ ಜೀವನಪರ್ಯಂತ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾಗುತ್ತದೆ ಎಂಬುದು ಕೂಡ ನಿಜವಲ್ಲ. ಅನೇಕ ಬಾರಿ ಮೂತ್ರಪಿಂಡದ ವೈಫಲ್ಯ ಗುಣವಾಗುತ್ತದೆ ಮತ್ತು ಅವರಿಗೆ ಡಯಾಲಿಸಿಸ್ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಸಾಮಾನ್ಯವಾಗಿ ಶೇ 70-90ರಷ್ಟು ರೋಗಿಗಳು ಗುಣಮುಖರಾಗಿ ಐಸಿಯುನಿಂದ ಹೊರಬರುತ್ತಾರೆ.

ಜನರು ಐಸಿಯು ಎಂದರೆ ಬೆಚ್ಚಿಬೀಳುವ ಇನ್ನೊಂದು ವಿಷಯವೆಂದರೆ ಅಲ್ಲಿನ ಖರ್ಚು-ವೆಚ್ಚ. ಈಗಾಗಲೇ ತಿಳಿಸಿದಂತೆ ಐಸಿಯುನಲ್ಲಿ ಹೆಚ್ಚಿನ ಉಪಕರಣಗಳು, ದಾದಿಯರು, ತಜ್ಞವೈದ್ಯರು ರೋಗಿಯ ಆರೈಕೆಗೆ ನಿಯೋಜಿಸಲ್ಪಡುವುದರಿಂದ ಅಲ್ಲಿನ ಪ್ರತಿದಿನದ ಖರ್ಚು ವಾರ್ಡಿಗಿಂತ ಖಂಡಿತ ಹೆಚ್ಚಿರುತ್ತದೆ. ಅದಲ್ಲದೆ ಐಸಿಯುವನ್ನು ವಿಶೇಷವಾಗಿ ನಿರ್ಮಿಸಿರುವುದರಿಂದ ಆಸ್ಪತ್ರೆಗೂ ಹೆಚ್ಚಿನ ಭಾರ ಬೀಳುತ್ತದೆ. ಆದ್ದರಿಂದ ಐಸಿಯು ಎಂದರೆ ಜೀವನ್ಮರಣದ ನಡುವೆ ಹೋರಾಡುತ್ತಿರುವ ರೋಗಿಗಳಿಗೆ ಮರುಜನ್ಮ ನೀಡುವ ಸಂಜೀವಿನಿ ಎಂದರೆ ತಪ್ಪೇನಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.