ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ: ಸ್ನೇಹದ ಸೌರಭದಲ್ಲಿ ಬದುಕಿನ ಭರವಸೆ

Last Updated 22 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಮುಚ್ಚುಮರೆಯಿಲ್ಲದೆ ಯಾರೊಂದಿಗೆ ನಾವು ಎಲ್ಲ ಭಾವಗಳನ್ನೂ ಹಂಚಿಕೊಳ್ಳಬಲ್ಲೆವೋ ಅವರು ಮಾತ್ರವೇ ನಿಜವಾದ ಸ್ನೇಹಿತರು. ಸಾಮಾನ್ಯವಾಗಿ ನಾವು ಬೆತ್ತಲಾಗಲು ಸಂಕೋಚ ಪಡುತ್ತೇವೆ.

ಜೀವನಯಾನದಲ್ಲಿ ನಾವು ಅನುಭವಿಸುವ ಅನೇಕ ಸೊಗಸುಗಳಲ್ಲಿ ಸ್ನೇಹವೂ ಒಂದು. ಇದು ಬದುಕನ್ನು ಸಹನೀಯವೂ ಸಿಹಿಯೂ ಆಗಿಸುವಂತಹ ಸಂಬಂಧ. ಉಳಿದ ಸಂಬಂಧಗಳೆಲ್ಲ ಹುಟ್ಟಿನಿಂದ, ಕಟ್ಟಿಕೊಳ್ಳುವುದರಿಂದ ಬರುವುದಾದರೆ, ಸ್ನೇಹ ಮಾತ್ರ ನಮ್ಮ ಆಯ್ಕೆಯಿಂದ ಬರುವಂತಹದ್ದು. ಹೀಗಾಗಿ ಸಮಾನ ಮನಸ್ಕರಲ್ಲಿ ಸ್ನೇಹ ಮೂಡುತ್ತದೆ. ಉಳಿದ ಸಂಬಂಧಗಳು ನಿರ್ಧರಿತ ಪಾತ್ರಗಳನ್ನು ನಿರ್ವಹಿಸಲು ಒಂದು ವಿಧಿತ ಚೌಕಟ್ಟಿರುತ್ತದೆ. ಆದರೆ ಸ್ನೇಹದ ಪರಿಧಿ ವಿಸ್ತಾರವಾದದ್ದು ಮತ್ತು ಅದು ಸದಾ ವಿಕಾಸಗೊಳ್ಳುವಂತಹದ್ದು, ಬದುಕಿನುದ್ದಕ್ಕೂ ಹರಡಿಕೊಂಡಿರುವುದು.

ಮುಚ್ಚುಮರೆಯಿಲ್ಲದೆ ಯಾರೊಂದಿಗೆ ನಾವು ಎಲ್ಲ ಭಾವಗಳನ್ನೂ ಹಂಚಿಕೊಳ್ಳಬಲ್ಲೆವೋ ಅವರು ಮಾತ್ರವೇ ನಿಜವಾದ ಸ್ನೇಹಿತರು. ಸಾಮಾನ್ಯವಾಗಿ ನಾವು ಬೆತ್ತಲಾಗಲು ಸಂಕೋಚ ಪಡುತ್ತೇವೆ. ಏಕೆಂದರೆ ಈ ದೇಹ ನಮ್ಮ ಖಾಸಗಿ ವಸ್ತು. ವ್ಯಾವಹಾರಿಕ ಜಗತ್ತಿಗೆ ಎಷ್ಟುಬೇಕೋ ಅಷ್ಟು ಮಾತ್ರ ಅದರ ಪ್ರದರ್ಶನ, ಉಳಿದಂತೆ ಅದು ಸದಾ ಗುಪ್ತ. ಮನಸ್ಸು ಮತ್ತು ಅದರ ಭಾವನೆಗಳೂ ನಮ್ಮ ಸೂಕ್ಷ್ಮರೂಪವೇ. ಹೀಗಾಗಿ ಇದು ಇನ್ನಷ್ಟು ಗೌಪ್ಯ ಮತ್ತು ಗಹನ. ಇವುಗಳನ್ನು ಹಂಚಿಕೊಳ್ಳುವಾಗ ಸ್ನೇಹಸಂಬಂಧದ ಜವಾಬ್ದಾರಿ ಹೆಚ್ಚಾಗುತ್ತದೆ. ಸ್ನೇಹವೆಂಬುದು ಮಾನಸಿಕವಾಗಿ ಬೆತ್ತಲಾಗುವ ವಿಶ್ವಾಸ, ಧೈರ್ಯ. ಹಾಗೆಂದ ಮಾತ್ರಕ್ಕೆ ಇದು ನಮ್ಮ ಮನಸ್ಸಿನ ಹಳವಂಡಗಳನ್ನೆಲ್ಲ ಹಂಚಿಕೊಳ್ಳುವ ಕೊಳಕು ಕಾಲುವೆಯೂ ಅಲ್ಲ. ಒಟ್ಟಿನಲ್ಲಿ ಭಾವಿಸಿದಷ್ಟೂ ಬತ್ತದ ಮಹತ್ವ ಸ್ನೇಹಕ್ಕಿದೆ.

ಆದರೆ ನಿಜ ಹೇಳಬೇಕೆಂದರೆ, ನಮಗೆ ಸ್ನೇಹಿತರು ಎನಿಸಿಕೊಳ್ಳುವವರು ದಿಟದಲ್ಲಿ ಸ್ನೇಹಿತರೊ? ಏಕೆಂದರೆ ಪರಿಚಿತರೆಲ್ಲ ಸ್ನೇಹಿತರಾಗಲು ಸಾಧ್ಯವಿಲ್ಲ. ಒಂದು ಉಕ್ತಿಯಿದೆ, ‘ನಿನಗೊಬ್ಬ ಸ್ನೇಹಿತನಿದ್ದಾನೆಂದರೆ ನೀನು ಅದೃಷ್ಟಶಾಲಿ, ಇಬ್ಬರಿದ್ದಾರೆಂದರೆ ಪುಣ್ಯವಂತ, ಮೂವರಿದ್ದಾರೆಂದೆಯಾದರೆ ನೀನು ಸುಳ್ಳು ಹೇಳುತ್ತಿದ್ದೀ ಎಂದರ್ಥ’. ಇಷ್ಟೊಂದು ಬೆಲೆಬಾಳುವ ಈ ಸಂಬಂಧದ ಮಹತ್ವವನ್ನು ಕಗ್ಗ ಕೂಡ ಸೊಗಸಾಗಿ ಬಣ್ಣಿಸುತ್ತದೆ: ‘ಕಾರಿರುಳೊಳಾಗಸದಿ ತಾರೆ ನೂರಿದ್ದೇನು? ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು, ದೂರದಾ ದೈವವಂತಿರಲಿ, ಮಾನುಷಸಖನ ಕೋರುವುದು ಬಡಜೀವ’ ಎನ್ನುವ ಕವಿಯ ಆಶಯ ಪ್ರಶಂಸನೀಯ. ಭರವಸೆಯ, ಸಾಂತ್ವನದ ಸಕಲ ಸಾರ ಸ್ನೇಹದಲ್ಲಡಗಿದೆ ಎಂಬ ವಿಚಾರವನ್ನು ಕಗ್ಗದ ಈ ಪದ್ಯದಲ್ಲಿ ಬಿಂಬಿಸಲಾಗಿದೆ.

ಖಲೀಲ್‌ ಗಿಬ್ರಾನ್‌ ಸ್ನೇಹದ ಬಗ್ಗೆ ಬಹಳ ಹೃದ್ಯವಾದ ಮಾತುಗಳನ್ನಾಡಿದ್ದಾನ: ’ನಿನ್ನ ಸ್ನೇಹಿತನೆಂದರೆ ನಿನ್ನ ಆವಶ್ಯಕತೆಗಳ ಪೂರೈಕೆ . ಅವನು ನಿನ್ನ ಪ್ರೀತಿಯ ಬಿತ್ತಗಳನ್ನು ಬಿತ್ತುವ ಹೊಲ ಮತ್ತು ಕೃತಜ್ಞತೆಯಿಂದ ತುಂಬಿಕೊಳ್ಳುವ ಬೆಳೆ ಅವನು.’ ಮುಂದುವರೆದು ಗೆಳೆಯರ ನಡುವಣ ಸಂವಾದ ಹೇಗಿರಬೇಕು ಎಂದೂ ಮನೋಜ್ಞವಾಗಿ ಸೂಚಿಸುತ್ತಾನೆ: ’ನಿನ್ನ ಗೆಳೆಯ ಮನಬಿಚ್ಚಿ ಮಾತನಾಡುವಾಗ ನಿನ್ನ ಮನದಲ್ಲಿ ತಿರಸ್ಕಾರದ ಭಯ ಸುಳಿಯದಿರಲಿ ಹಾಗೆಯೇ ಸಹಮತ ಸೂಚಿಸಲು ಹಿಂಜರಿಕೆ ಬೇಡ.’

ಗೆಳೆತನದಲ್ಲಿ ವಿದಾಯಗಳಿಗೂ, ಅಗಲಿ ದೂರವಿರುವುದರಲ್ಲೂ ಒಂದು ಸೊಗವಿದೆ. ಗಿಬ್ರಾನ್‌ ಈ ಕುರಿತು ಹೀಗೆನ್ನುತ್ತಾನೆ: ’ಗೆಳೆಯನಿಂದ ಬೀಳ್ಗೊಳ್ಳುವಾಗ ದುಃಖಿಸದಿರು. ನೀನವನಲ್ಲಿ ಕಂಡ ಒಲವು ಮತ್ತೂ ನಿಚ್ಚಳವಾಗಬಹುದು, ಅಂತರದಲ್ಲಿ ಚಾರಣಿಗನಿಗೆ ಬಯಲಿಂದ ಸ್ಪಷ್ಟವಾಗಿ ಕಾಣುವ ಬೆಟ್ಟದಂತೆ.’ ಗೆಳೆಯ ಆಯ್ದ ಮುತ್ತಿನಂತಿರಬೇಕು ಎಂಬುದು ಅವನ ಅಭಿಪ್ರಾಯ. ’ಅತಿ ಉತ್ತಮನು ನಿನ್ನ ಗೆಳೆಯನಾಗಲಿ. ನಿನ್ನ ಇಳಿತ ತಿಳಿದಂತೆ ಅವನಿಗೆ ನಿನ್ನ ಉಬ್ಬರವೂ ತಿಳಿದಿರಲಿ. ಕಾಲ ಕಳೆಯಲು ಅವನು ನಿನ್ನೊಂದಿಗಿಲ್ಲ, ಹೊತ್ತು ಗಳಿಸಲು ನೀನು ಅವನನ್ನು ಅರಸು. ಅವನು ನಿನ್ನ ಕೊರತೆಗಳನ್ನು ತುಂಬಲು ಇದ್ದಾನೆಯೇ ಹೊರತು ನಿನ್ನ ಶೂನ್ಯತೆಯನ್ನು ಹೆಚ್ಚಿಸಲು ಅಲ್ಲ.’

ಸ್ನೇಹಿತನೆಂದರೆ ಭರವಸೆ, ಬುನಾದಿ ಎಂದೆ. ಅಂದರೆ ಬದುಕು ಕಟ್ಟಿಕೊಳ್ಳಲು ನಮ್ಮೊಂದಿಗಿರುವಾತನೇ ನಿಜವಾದ ಗೆಳೆಯ. ರೂಮಿ ಅದನ್ನು ಸೊಗಸಾಗಿ ಹೇಳಿದ್ದಾನೆ: ’ಗೆಳೆಯ ನಮ್ಮ ಸಾಮೀಪ್ಯ ಹೀಗೆ: ನೀನು ಪಾದವಿಟ್ಟೆಡೆಯ ಅಡಿಯಲ್ಲಿಯ ಆಧಾರ, ಬಿಗಿ ನಾನೆಂದು ಭಾವಿಸು.’ ಮತ್ತೂ ಮುಂದುವರೆದು ಗೆಳೆತನದ ಉತ್ಸಾಹ, ಒತ್ತಾಸೆ ಎಂತಿರಬೇಕೆಂದು ಎತ್ತರದ ನೆಲೆಯಲ್ಲಿ ನಿಂತು ಹೇಳುತ್ತಾನ: ’ನಿನ್ನ ಬಾಳಿಗೆ ಕಿಚ್ಚು ಹಚ್ಚಿಕೊಂಡುಬಿಡು, ಕಿಚ್ಚ ಹೆಚ್ಚಿಸಲು ಗಾಳಿ ಹಾಕುವವರನ್ನು ಹುಡುಕು.’

ಇಂತಹ ಗೆಳೆಯ ಗೆಳತಿಯರು ನಮಗೆ ದೊರೆಯಲಿ.

(ಲೇಖಕ ಶಿಕ್ಷಣತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT