ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತಾನಹೀನತೆ: ದಂಪತಿಗೆ ಆಪ್ತಸಮಾಲೋಚನೆ ಅಗತ್ಯವೇ?

Last Updated 16 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಸಂತಾನಹೀನತೆ ವೈದ್ಯಕೀಯ ಸಮಸ್ಯೆ ಆಗಿದ್ದರೂ ಅದರ ಬಗ್ಗೆ ಮಾತನಾಡಲು ಬಹುತೇಕ ದಂಪತಿ ಹಿಂಜರಿಯುತ್ತಾರೆ. ಮದುವೆಯಾದ ಬಹಳ ವರ್ಷಗಳ ನಂತರವೂ ದಂಪತಿಗೆ ಮಕ್ಕಳಾಗದಿರುವ ಸಮಸ್ಯೆಗೆ ಕೆಲವು ಪ್ರಕರಣಗಳಲ್ಲಿ ವೈದ್ಯಕೀಯ ಪರಿಹಾರವಿದೆ. ಆದರೆ ಸಂಬಂಧಿಸಿದ ಸೂಕ್ತ ಚಿಕಿತ್ಸೆಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೂ ಕೆಲವೊಮ್ಮೆ ಪತಿ ಮತ್ತು ಪತ್ನಿ ಹತಾಶೆ ಅಥವಾ ಆತಂಕಕ್ಕೆ ಒಳಗಾಗುತ್ತಾರೆ. ಈ ಸಮಸ್ಯೆಗೆ ಯಾವ ಚಿಕಿತ್ಸೆ ಪಡೆದುಕೊಳ್ಳಬೇಕು ಎನ್ನುವುದರ ಬಗ್ಗೆಯೇ ಗೊಂದಲಕ್ಕೆ ಒಳಗಾಗಿರುತ್ತಾರೆ. ಇದರಿಂದಾಗಿ ದಂಪತಿಗೆ ಮಕ್ಕಳಾಗದಿರುವುದು ಅವರ ಮಾನಸಿಕ ಆರೋಗ್ಯ ಮತ್ತು ಪತಿ -ಪತ್ನಿ ನಡುವಣ ಬಾಂಧವ್ಯದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತದೆ.

ಇಂತಹ ಪರಿಸ್ಥಿತಿಯಲ್ಲಿ, ಮಕ್ಕಳಿಲ್ಲದ್ದರಿಂದ ಖಿನ್ನತೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಮತ್ತು ಅದರ ದೀರ್ಘಾವಧಿ ಪರಿಣಾಮಗಳನ್ನು ನಿವಾರಿಸಿಕೊಳ್ಳಲು, ಸಂತಾನಹೀನತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಪ್ತ ಸಮಾಲೋಚನೆಗೆ ದಂಪತಿ ಒಳಗಾಗುವುದು ಒಳಿತು.

ಏನಿದು ಆಪ್ತ ಸಮಾಲೋಚನೆ?

ಗರ್ಭ ಧರಿಸುವುದಕ್ಕೆ ಮುನ್ನ ನಡೆಸುವ ಆಪ್ತ ಸಮಾಲೋಚನೆಯು ಮಕ್ಕಳಿಲ್ಲದ ದಂಪತಿ ಯಾವ ಚಿಕಿತ್ಸೆ ಪಡೆಯಬಹುದು ಎಂಬುದರ ಬಗ್ಗೆ ಮಾಹಿತಿ ನೀಡುತ್ತದೆ. ಸೂಕ್ತವಾದ ಚಿಕಿತ್ಸೆ ಆಯ್ಕೆ ಮಾಡಿಕೊಳ್ಳಲು ನೆರವಾಗುವ ವಿಶೇಷ ಪರಿಣತ ಕ್ಷೇತ್ರವಿದು. ಸಮಾಲೋಚನೆಯ ಸಂದರ್ಭದಲ್ಲಿ ಸಮಾಲೋಚಕರು ವೈದ್ಯಕೀಯ ಸಲಹೆಗಳನ್ನಷ್ಟೇ ಅಲ್ಲ, ಜೊತೆಗೆ ಮಾನಸಿಕ ಸಮತೋಲನ ಕಾಪಾಡಿಕೊಳ್ಳುವ ಸಲಹೆಗಳನ್ನೂ ನೀಡುತ್ತಾರೆ.

ಈ ಆಪ್ತ ಸಮಾಲೋಚನೆ ಏಕೆ ಅಗತ್ಯ?

ಸಂತಾನಹೀನತೆ ಎಂಬುದು ಎಲ್ಲಾ ದೇಶಗಳಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಹೀಗಾಗಿ ಅದರ ಬಗ್ಗೆ ಸಂಕೋಚಪಡುವುದು, ಮಾನಸಿಕವಾಗಿ ನೊಂದುಕೊಳ್ಳುವುದು ಸರಿಯಲ್ಲ ಎನ್ನುವುದನ್ನು ದಂಪತಿ ಮೊದಲಿಗೆ ಅರ್ಥೈಸಿಕೊಳ್ಳಬೇಕು. ಕೇಂದ್ರದ ಆರೋಗ್ಯ ಸಚಿವಾಲಯದ ವರದಿ ಪ್ರಕಾರ, ಭಾರತದ ಜನಸಂಖ್ಯೆಯ ಶೇ 10 ರಿಂದ ಶೇ 14ರಷ್ಟು ಜನರಲ್ಲಿ ಸಂತಾನಹೀನತೆ ಸಮಸ್ಯೆ ಕಂಡು ಬರುತ್ತದೆ.

ಸಂತಾನವಿಲ್ಲದ ದಂಪತಿ ಮಕ್ಕಳನ್ನು ಪಡೆಯುವುದರ ಸಂಬಂಧ ಯಾಕೆ ಸಮಾಲೋಚನೆಗೆ ಒಳಗಾಗಬೇಕು ಎನ್ನುವುದಕ್ಕೆ ಹಲವಾರು ಕಾರಣಗಳಿವೆ. ಕೆಲವರು ಮಕ್ಕಳನ್ನು ಪಡೆಯುವ ಸಲುವಾಗಿ ಸಮಾಲೋಚನೆ ಪಡೆಯುವುದು ಎಂದರೆ, ತಮಗೆ ಮಕ್ಕಳಾಗದಿರುವ ನೋವು ನಿಭಾಯಿಸುವ ಮತ್ತು ಭಾವನಾತ್ಮಕ ತಲ್ಲಣಗಳನ್ನು ನಿಯಂತ್ರಿಸಲು ಬಾಹ್ಯ ಬೆಂಬಲ ಪಡೆಯುವ ವಿಧಾನ ಎಂದು ತಿಳಿದುಕೊಂಡಿದ್ದಾರೆ. ಇದು ನಿಜ. ಆದರೆ ಇದರ ಜತೆಗೆ, ಮುಂದಿನ ಹಂತದ ಚಿಕಿತ್ಸೆ ಬಗ್ಗೆ ತಮಗೆ ಅನಿಶ್ಚಿತತೆ ಎದುರಾದಾಗಾಲೂ ದಂಪತಿ ಆಪ್ತ ಸಮಾಲೋಚನೆಗೆ ಮುಂದಾಗಬಹುದು. ಸಂತಾನಹೀನತೆ ಬಗ್ಗೆ ದುಗುಡ, ತಪ್ಪಿತಸ್ಥ ಮನೋಭಾವ ತಳೆಯುವುದು, ವೈವಾಹಿಕ ಸಂಬಂಧಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಖಿನ್ನತೆಗೆ ಒಳಗಾಗುವುದು ಮತ್ತು ಸದಾ ಕಾಲ ಸಂತಾನಹೀನತೆ ಕುರಿತು ಚಿಂತೆಯಲ್ಲಿ ಮುಳುಗಿರುವವರಿಗೂ ಈ ಸಮಾಲೋಚನೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುವುದು.

ಮಕ್ಕಳಾಗದಿರುವುದಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ದಂಪತಿ ನಿರ್ಧರಿಸಿದಾಗ, ಆಪ್ತ ಸಮಾಲೋಚನೆಯ ಸಂದರ್ಭದಲ್ಲಿ ಸಂಪೂರ್ಣ ಮಾರ್ಗದರ್ಶನ ಒದಗಿಸಲಾಗುವುದು. ಪರಿಣತರು ಚಿಕಿತ್ಸಾ ವಿಧಾನಗಳ ಬಗ್ಗೆಯೂ ವಿವರವಾದ ಮಾಹಿತಿ ಒದಗಿಸುತ್ತಾರೆ. ಚಿಕಿತ್ಸೆ ಬಗ್ಗೆ ದಂಪತಿಯಲ್ಲಿರುವ ಅನುಮಾನ ಹಾಗೂ ಅಪನಂಬಿಕೆಗಳನ್ನು ನಿವಾರಿಸಿ ಸ್ಪಷ್ಟನೆ ನೀಡಲಾಗುವುದು. ಇವುಗಳ ನೆರವಿನಿಂದ ತಾವು ಯಾವ ಬಗೆಯ ಚಿಕಿತ್ಸೆ ಪಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ದಂಪತಿ ಸೂಕ್ತ ನಿರ್ಧಾರಕ್ಕೆ ಬರಬಹುದು.

(ಲೇಖಕಿ: ವೈದ್ಯಕೀಯ ನಿರ್ದೇಶಕಿ, ಜಿನಿಯಾ ಫರ್ಟಿಲಿಟಿ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT