ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷರಲ್ಲಿ ಹೆಚ್ಚುತ್ತಿರುವ ಬಂಜೆತನ: ಜೀವನ ಶೈಲಿಯೂ ಕಾರಣ

ಡಾ. ವಿನೋದ್ ಕುಮಾರ್ ಎನ್
Published 22 ಏಪ್ರಿಲ್ 2024, 9:32 IST
Last Updated 22 ಏಪ್ರಿಲ್ 2024, 9:32 IST
ಅಕ್ಷರ ಗಾತ್ರ
ಇತ್ತೀಚಿನ ದಿನಮಾನಗಳಲ್ಲಿ ಬಂಜೆತನ ಕೇವಲ ಮಹಿಳೆಯರನ್ನಷ್ಟೇ ಅಲ್ಲ, ಪುರುಷರಲ್ಲೂ ಹೆಚ್ಚುತ್ತಿರುವುದು ಆತಂಕದ ಸಂಗತಿ. ಪುರುಷರಲ್ಲಿ ವೀರ್ಯಾಣು ಪ್ರಮಾಣ ಕುಸಿಯುವುದು ಅಥವಾ ಗುಣಮಟ್ಟದ ವೀರ್ಯ ಇಲ್ಲದೇ ಇರುವುದರಿಂದ ಮಕ್ಕಳಾಗದೇ ಇರುವ ಸಮಸ್ಯೆಗಳನ್ನು ಅವರು ಅನುಭವಿಸುತ್ತಿದ್ದಾರೆ. ಕೆಲ ಅಧ್ಯಯನಗಳ ಪ್ರಕಾರ ಶೇ 30ರಿಂದ 40ರಷ್ಟು ಪುರುಷರಲ್ಲಿ ಬಂಜೆತನ ಕಾಡುತ್ತಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣವೇನು ಹಾಗೂ ಪರಿಹಾರಗಳ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.

ಪುರುಷರಲ್ಲಿ ಬಂಜೆತನಕ್ಕೆ ಕಾರಣವೇನು?:

ಪುರುಷರಲ್ಲಿ ಬಂಜೆತನ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದರೆ ಬದಲಾಗುತ್ತಿರುವ ಜೀವನ ಶೈಲಿ. ಹೌದು, ಇಂದಿನ ಯುಗದಲ್ಲಿ ಕಳಪೆ ಆಹಾರ ಸೇವನೆ, ಜಂಕ್‌ಫುಡ್‌, ಧೂಮಪಾನ, ಮದ್ಯಪಾನ ಸೇವನೆ, ವ್ಯಾಯಾಮ ಮಾಡದೇ ಇರುವುದು, ಮಧುಮೇಹ, ಒಬೆಸಿಟಿ, ಒತ್ತಡ ಹಾಗೂ ಹಾರ್ಮೋನ್‌ಗಳಲ್ಲಿ ಆಗುತ್ತಿರುವ ಅಸಮತೋಲನದಿಂದ ಬಂಜೆತನ ಹೆಚ್ಚುತ್ತಿದೆ.

ಮತ್ತೊಂದು ಪ್ರಮುಖ ಅಂಶವೆಂದರೆ, ಗಂಡಸರು ತೊಡುವ ಒಳಉಡುಪು ಕೂಡ ವೃಷಣವನ್ನು ಅತಿಯಾಗಿ ಬೆಚ್ಚಗಿಡುವುದರಿಂದಲೂ ವೀರ್ಯ ಉತ್ಪಾದನೆಗೆ ಸಮಸ್ಯೆ ಉಂಟು ಮಾಡುತ್ತದೆ. ಕೆಲವು ಪ್ರಕರಣಗಳಲ್ಲಿ ಕಡಿಮೆ ಟೆಸ್ಟೋಸ್ಟೆರಾನ್ ಮಟ್ಟ ಅಥವಾ ಥೈರಾಯ್ಡ್ ಅಸ್ವಸ್ಥತೆಯಿಂದಲೂ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗಿ ಗುಣಮಟ್ಟದ ವೀರ್ಯ ಉತ್ಪಾದನೆ ಅಸಾಧ್ಯವಾಗಬಹುದು.

ಕೆಲವರು ಅಸುಕ್ಷಿತ ಲೈಂಗಿಕ ಕ್ರಿಯೆ ಅಥವಾ ಮೂತ್ರದ ಸೋಂಕಿಗೆ ಒಳಗಾಗಿಯೂ ತಮ್ಮ ಲೈಂಗಿಕ ಆಸಕ್ತಿಯನ್ನು ಕಳೆದುಕೊಳ್ಳಬಹುದು. ಈಗಾಗಲೇ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಅಥವಾ ಕ್ಯಾನ್ಸರ್‌ನಂತಹ ರೋಗಕ್ಕೆ ಕೀಮೋಥೆರಪಿ, ವಿಕಿರಣ ಚಿಕಿತ್ಸೆ ಪಡೆಯುತ್ತಿರುವವರಲ್ಲಿಯೂ ಸಹ ವೀರ್ಯಾಣು ಕುಸಿಯಲಿದೆ.

ಹೆಚ್ಚಾದ ಪ್ಲಾಸ್ಟಿಕ್‌ ಬಳಕೆ ಸಹ ವೀರ್ಯಾಣು ಉತ್ಪತ್ತಿ ಮೇಲೆ ಪರಿಣಾಮ ಬೀರುತ್ತಿರುವುದು ಕಂಡು ಬಂದಿದೆ. ಈ ಎಲ್ಲಾ ಕಾರಣ ಒಂದೆಡೆಯಾದರೆ, ವಯಸ್ಸಾದಂತೆಯೂ ಸಹ ಪುರುಷರಲ್ಲಿ ಗುಣಮಟ್ಟದ ವೀರ್ಯ ಬಿಡುಗಡೆ ಕುಂಟಿತವಾಗುವುದು ಸಹಜ. ಹೀಗಾಗಿ ಸೂಕ್ತ ವಯಸ್ಸಿನಲ್ಲಿ ಮಕ್ಕಳು ಪಡೆದುಕೊಳ್ಳುವುದು ಅತಿ ಅವಶ್ಯಕ.

ಪುರುಷರ ಬಂಜೆತನ ನಿವಾರಣೆ ಹೇಗೆ?:

ಪುರುಷರಲ್ಲಿ ‌ ಬಂಜೆತನ ಉಂಟಾಗುವ ಮೊದಲೇ ಒಂದಷ್ಟು ಗುಣಮಟ್ಟದ ಜೀವನ ಶೈಲಿ ಅಳವಡಿಸಿಕೊಳ್ಳುವುದು ಉತ್ತಮ. ಪ್ರಮುಖವಾಗಿ ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯನ್ನು ತ್ಯಜಿಸುವುದು ಕಡ್ಡಾಯ. ಸೂಕ್ತ ರೀತಿಯ ಆಹಾರ ಸೇವನೆ ಉತ್ತಮ. ನಮ್ಮ ದಿನಬಳಕೆಯ ತರಕಾರಿ, ಸೊಪ್ಪಿನಲ್ಲಿಯೇ ವೀರ್ಯವನ್ನು ಹೆಚ್ಚಿಸುವ ಗುಣಗಳಿರುವುದರಿಂದ ಆಹಾರ ಕ್ರಮದ ಬಗ್ಗೆ ವೈದ್ಯರ ಸಲಹೆ ಪಡೆದು ಸೇವನೆ ಒಳ್ಳೆಯದು. ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಪುರುಷರು ಹೆಚ್ಚಾಗಿ ಬಿಗಿ ಉಡುಪು ಧರಿಸುವುದನ್ನು ನಿಲ್ಲಿಸುವುದು ಉತ್ತಮ. ಸಾಮಾನ್ಯವಾಗಿ ವೃಷಣವನ್ನು ಬಿಗಿಯಾಗಿ ಅಥವಾ ಬಿಸಿಯಾಗಿ ಇಡುವುದರಿಂದ ಹಾರ್ಮೋನ್‌ಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಹೀಗಾಗಿ ಕನಿಷ್ಠ ರಾತ್ರಿ ಸಂದರ್ಭದಲ್ಲಾದರೂ ಸಡಿಲವಾದ ಬಟ್ಟೆ ಧರಿಸಿ ಮಲಗುವುದು ಉತ್ತಮ. ಪ್ರತಿನಿತ್ಯ ಒಂದಷ್ಟು ವ್ಯಾಯಾಮ ದೇಹಕ್ಕಷ್ಟೇ ಅಲ್ಲದೆ, ನಿಮ್ಮ ಲೈಂಗಿಕ ಆಸಕ್ತಿ ಮೇಲೂ ಉತ್ತಮ ಪರಿಣಾಮ ಬೀರಲಿದೆ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಆಪ್ತತೆ ಕೂಡ ನಿಮ್ಮ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಲಿದೆ.

ಚಿಕಿತ್ಸೆಗಳೇನು?:

ಕೆಲವರಲ್ಲಿ ಈಗಾಗಲೇ ಪುರುಷ ಬಂಜೆತನ ಉಂಟಾಗಿದ್ದರೆ ಅವರು ಚಿಕಿತ್ಸೆ ಪಡೆದುಕೊಳ್ಳುವುದರ ಮೂಲಕ ಪರಿಹಾರ ಪಡೆಯಬಹುದು. ಇನ್ ವಿಟ್ರೊ ಫರ್ಟಿಲೈಸೇಶನ್ (IVF) ಮತ್ತು ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ICSI) ನಂತಹ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನಗಳು (ART) ಪುರುಷರ ಬಂಜೆತನ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇದಷ್ಟೇ ಅಲ್ಲದೆ, ವೃಷಣ ವೀರ್ಯ ಆಸ್ಪಿರೇಷನ್ (TESA) ಮತ್ತು ಪೆರ್ಕ್ಯುಟೇನಿಯಸ್ ಎಪಿಡಿಡೈಮಲ್ ಸ್ಪರ್ಮ್ ಆಸ್ಪಿರೇಶನ್ (PESA) ಸಹ ಪ್ರಮುಖ ತಂತ್ರಗಳಾಗಿವೆ. ಈ ಎಲ್ಲಾ ಚಿಕಿತ್ಸೆಗಳಿಂದ ಪುರುಷರು ತಮ್ಮ ಬಂಜೆತನವನ್ನು ಹೋಗಲಾಡಿಸಿ ಮಗುವನ್ನು ಪಡೆದುಕೊಳ್ಳಬಹುದು.

(ಲೇಖಕರು: ಬಂಜೆತನ ಮತ್ತು ಲ್ಯಾಪರೊಸ್ಕೋಪಿ, ಅಪೊಲೊ ಫರ್ಟಿಲಿಟಿ, ಆರ್‌ಆರ್ ನಗರ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT