ಗುರುವಾರ , ಮೇ 26, 2022
28 °C

ನಿದ್ರಾಹೀನತೆ: ನಿದ್ದೆಗೆಟ್ಟ್ಯೋ ಬುದ್ಧಿಗೆಟ್ಟ್ಯೋ

ಡಾ. ಅನಿತಾ ರವಿ Updated:

ಅಕ್ಷರ ಗಾತ್ರ : | |

Prajavani

ಚರಕಾಚಾರ್ಯರ ಪ್ರಕಾರ, ನಿದ್ರೆ ಮನುಷ್ಯನ ಸಂತೋಷ, ನೆಮ್ಮದಿ, ದುಃಖ, ದೇಹದ ಪೌಷ್ಟಿಕತೆ, ಕೃಶತೆ, ಬಲ, ಧೃಢತೆ, ಜ್ಞಾನ, ಮೂಢತ್ವ, ಜೀವ, ಮರಣಗಳಿಗೆ ಕಾರಣ.

ಇಂ ದು ನಾವು ನಿದ್ರೆಗೆ ಸಾಕಷ್ಟು ಸಮಯವನ್ನು ಕೊಡುತ್ತಿಲ್ಲ. ಆಯುರ್ವೇದದ ರೀತ್ಯಾ, ಆರೋಗ್ಯಯುತ ಜೀವನದ ಮೂರು ತಳಹದಿಗಳು: ಆಹಾರ, ಸಾತ್ವಿಕ ಜೀವನ ಮತ್ತು ನಿದ್ರೆ.

ನಿದ್ರೆಯ ಆವಶ್ಯಕತೆ
ನಿದ್ರೆ ಮನುಷ್ಯನ ದೈಹಿಕ–ಮಾನಸಿಕ ವಿಶ್ರಾಂತಿಯ ಸಮಯ. ಈ ಸಮಯದಲ್ಲೇ ದೇಹದಲ್ಲಿನ ಪ್ರತಿಯೊಂದು ಜೀವಕೋಶಗಳು ಪುನರ್ಜೀವೀತಗೊಳ್ಳುತ್ತಿರುತ್ತವೆ. ಸಹಜವಾಗಿ ಒಬ್ಬ ಮನುಷ್ಯನಿಗೆ 7–8 ಗಂಟೆಗಳ ಸುಖನಿದ್ರೆ ಅತ್ಯವಶ್ಯಕ. ಮಕ್ಕಳಿಗೆ ಸುಮಾರು 10–15 ಗಂಟೆಗಳ ನಿದ್ರೆ ಬೇಕಾಗುತ್ತದೆ. ಈ ಸಮಯದಲ್ಲಿ ಅವರಲ್ಲಿ ಅಗ್ರೋತ್ ಹಾರ್ಮೋನ್ ಎಂಬ ರಾಸಾಯನಿಕ ಅಧಿಕ ಪ್ರಮಾಣದಲ್ಲಿ ಬಿಡುಗಡೆಯಾಗಿ ಅವರ ಸಂಪೂರ್ಣ ಬೆಳವಣಿಗೆಗೆ ಕಾರಣವಾಗುತ್ತದೆ. ಹಾಗೆಯೇ ಒತ್ತಡ ಉಂಟಾದಾಗ ಬಿಡುಗಡೆಯಾಗುವ ಹಾರ್ಮೋನ್ ಅತಿ ಕಡಿಮೆ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಹಸಿವನ್ನು ಹತೋಟಿಯಲ್ಲಿಡುವ ಹಾರ್ಮೋನ್‌ಗಳು, ದೇಹ, ಮನಸ್ಸನ್ನು ಸುಸ್ಥಿತಿಯಲ್ಲಿಡುವ ವಿಷಯಗಳೆಲ್ಲವೂ ಸುಖನಿದ್ರೆಯನ್ನು ಸಂಪೂರ್ಣವಾಗಿ ಅವಲಂಬಿಸಿವೆ.

ಹೇಗೆ ಮಾಡಬೇಕು?
* ರಾತ್ರಿ ಮಲಗುವ ಎರಡು ಗಂಟೆಗಳ ಮೊದಲೇ ಲಘು ಆಹಾರವನ್ನು ಸೇವಿಸಿರಬೇಕು.
* ಊಟವಾದ ನಂತರ ಗಾಳಿಗೆ ಮೈಯೊಡ್ಡಿ ನೂರು ಹೆಜ್ಜೆ ನಡೆಯಬೇಕು.
* ಸದಭಿರುಚಿಯ ಪುಸ್ತಕಗಳನ್ನು ಓದಿಯೋ, ಆಹ್ಲಾದವಿಯುವ ಸಂಗೀತವನ್ನು ಆಲಿಸಿಯೋ ನಿದ್ರೆಗೆ ತಯಾರಾಗಬೇಕು.
* ಮಲಗುವ ಕೋಣೆಯಲ್ಲಿ ಆದಷ್ಟು ನೈಸರ್ಗಿಕವಾಗಿ ಗಾಳಿ ಬೀಸುವ ಹಾಗೆ ಕಿಟಕಿಗಳನ್ನು ತೆರೆದಿಡಬೇಕು.
* ನಿಗದಿತ ಸಮಯದಲ್ಲೇ ಪ್ರತಿರಾತ್ರಿಯೂ ಮಲಗಿ ಬೆಳಗ್ಗೆ ಬೇಗ ನಿಗದಿತ ಸಮಯದಲ್ಲೇ ಏಳಬೇಕು.
* ರಾತ್ರಿ ಮಲಗುವಾಗ ನಮ್ಮ ಎಡಬದಿಗೆ ಮಲಗುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.
* ಮೊಬೈಲ್, ಟಿ.ವಿ. ನೋಡುತ್ತಾ ಎಲ್ಲೆಂದರಲ್ಲಿ ಮಲಗಬಾರದು.
* ಹಗಲು ನಿದ್ರೆ ಮಾಡಿದಲ್ಲಿ ರಾತ್ರಿ ಮಲಗಿದ ಕೂಡಲೇ ನಿದ್ರೆ ಬರುವುದಿಲ್ಲ. ಮುಸ್ಸಂಜೆಯ ನಿದ್ರೆ, ಹಗಲುನಿದ್ರೆಗಳು ಅನಾರೋಗ್ಯಕರ ಅಭ್ಯಾಸ.
* ಎಳೆಯ ಮಕ್ಕಳಿಗೆ, ವೃದ್ಧರಿಗೆ, ಅಶಕ್ತರಿಗೆ, ಹಗಲು ನಿದ್ರೆಗೆ ಅವಕಾಶವಿದೆ. ದೈಹಿಕವಾಗಿ ಅತ್ಯಂತ ಶ್ರಮವುಂಟಾದಾಗ, ರಾತ್ರಿನಿದ್ರೆ ಮಾಡಲು ಆಗದೇ ಇರುವ ಸಂದರ್ಭಗಳಲ್ಲಿ, ಗ್ರೀಷ್ಮಋತುವಿನಲ್ಲಿ ಮಾರನೇ ದಿವಸ ಊಟ ತಿಂಡಿ ಮಾಡುವ ಮೊದಲು ಒಂದು ಚಿಕ್ಕ ಹಗಲುನಿದ್ರೆಗೆ ಅವಕಾಶವಿದೆ.
* ಕೆಲವರಿಗೆ ಐದು ಗಂಟೆಗಳ ನಿದ್ರೆ ಸಾಕಾಗುತ್ತದೆ. ವೃದ್ಧರಿಗೂ ರಾತ್ರಿ ನಿದ್ರೆ ಸ್ವಲ್ಪ ಕಡಿಮೆಯೇ. ಆದರೆ ಅದರಿಂದ ಯಾವುದೇ ಮಾನಸಿಕ ದೈಹಿಕ ತೊಂದರೆಗಳಾಗದಿದ್ದಲ್ಲಿ ಅದು ವಯೋಸಹಜ ಕ್ರಿಯೆ.
* ಪ್ರತಿಯೊಬ್ಬರು 7–8 ಗಂಟೆಗಳ ಸುಖನಿದ್ರೆಯನ್ನು ಅನುಭವಿಸಲೇಬೇಕು.

ನಿದ್ರಾಹೀನತೆಯಿಂದ ಆಗುವ ತೊಂದರೆಗಳು
* ಮಾನಸಿಕ ಒತ್ತಡ, ಭಯ, ಕೋಪ, ಆತಂಕ, ಅತಿಯಾದ ವ್ಯಾಯಮ, ದೈಹಿಕ ಶ್ರಮ, ಉಪವಾಸ, ಕಡಿಮೆ ಆಹಾರ ಸೇವಿಸುವುದು – ಇವೆಲ್ಲವೂ ನಿದ್ರಾಹೀನತೆಗೆ ಪ್ರಮುಖ ಕಾರಣಗಳು.
* ಸರಿಯಾದ ಪ್ರಮಾಣದ ನಿದ್ರೆ ಆಗದೇ ಇದ್ದಾಗ ಮಾನಸಿಕವಾಗಿ ಕಿರಿಕಿರಿ, ಒತ್ತಡ, ಉತ್ಸಾಹಹೀನತೆ, ತಲೆನೋವು, ತಲೆಭಾರ, ಅತಿಯಾದ ಆಕಳಿಕೆ, ಬಳಲಿಕೆ, ಶೀಘ್ರ ಕೋಪ, ಅಜೀರ್ಣಗಳು ಉಂಟಾಗುತ್ತವೆ.
* ದೇಹದ ರೋಗನಿರೋಧಕ ಶಕ್ತಿ ಮತ್ತು ನಿದ್ರೆಗಳೆರಡೂ ಒಂದಕ್ಕೊಂದು ಪೂರಕವಾಗಿದೆ. ಆವಶ್ಯಕತೆಗಿಂತ ಕಡಿಮೆ ನಿದ್ರೆ ದೇಹದಲ್ಲಿ ಅನೇಕ ಸೊಂಕು ರೋಗಗಳ ಉಲ್ಬಣಕ್ಕೆ ಕಾರಣವಾಗುತ್ತದೆ.
* ರಾತ್ರಿಯ ಸಹಜ ನಿದ್ರೆಯ ಸಮಯ ಮುಖ್ಯವಾಗಿ ಮೆದುಳು ಮತ್ತು ಹೃದಯದ ವಿಶ್ರಾಂತಿಯ ಕಾಲ. ನಾಡಿಮಿಡಿತ, ಉಸಿರಾಟಗಳು ನಿಧಾನವಾಗಿ ತಮ್ಮ ಕೆಲಸಗಳನ್ನು ಒತ್ತಡವಿಲ್ಲದೆ ಮಾಡುವ ಸಮಯ, ಈ ಸಮಯದಲ್ಲಿ ಕೆಲಸದ ಒತ್ತಡದಿಂದಲೂ ಮತ್ತಾವುದೋ ಕಾರಣಗಳಿಂದ ಎಚ್ಚರವಾಗಿದ್ದರೆ ಅದು ರಕ್ತದೊತ್ತಡ, ಭ್ರಮೆ, ಪಾರ್ಶ್ವವಾಯು, ಹೃದಯಸಂಬಂಧಿ ರೋಗಗಳನ್ನು ಆಹ್ವಾನಿಸುತ್ತದೆ; ಹಾರ್ಮೋನುಗಳ ವೈಪರೀತ್ಯ ಉಂಟಾಗಿ ಪಿಸಿಒಎಸ್, ಹೈಪೊಥೈರಾಡಿಸಮ್, ಡಯಾಬಿಟಿಸ್, ಮಾನಸಿಕ ರೋಗಗಳು, ಬೊಜ್ಜುಗಳಿಗೆ ಅವಕಾಶವನ್ನು ಒದಗಿಸುತ್ತದೆ. ಚರಕಾಚಾರ್ಯರು ಸ್ಥೌಲ್ಯಕ್ಕೆ (ಬೊಜ್ಜು – obesity) ಮುಖ್ಯ ಕಾರಣವೇ ನಿದ್ರಾಹೀನತೆ ಎಂದಿದ್ದಾರೆ.
* ನಿದ್ರೆಯನ್ನು ಆವಶ್ಯಕತೆಗಿಂತ ಹೆಚ್ಚು ಮಾಡುವುದು, ಹಗಲುನಿದ್ರೆ, ಊಟದ ನಂತರ ಮಲಗುವುದು – ಇವು ಕೂಡ ಅನಾರೋಗ್ಯಕ್ಕೆ ಕಾರಣಗಳು.

ನಿದ್ರಾಹೀನತೆಗೆ ಪರಿಹಾರಗಳು
* ಶಿಸ್ತಿನ ಜೀವನವನ್ನು ರೂಢಿಸಿಕೊಳ್ಳುವುದು.
* ಮಾನಸಿಕ ಒತ್ತಡವನ್ನು, ಧ್ಯಾನ, ಪ್ರಾಣಾಯಾಮಾದಿಗಳ ಸಹಾಯದಿಂದ ಕಡಿಮೆ ಮಾಡಿಕೊಳ್ಳುವುದು.
* ಪಾದಾಭ್ಯಂಗ, ಅಭ್ಯಂಗ - ದೇಹಕ್ಕೆ ಎಣ್ಣೆಯಲ್ಲಿ ಮಸಾಜ್ ಮಾಡುವುದು.
* ತಲೆಗೆ ಪ್ರತಿ ದಿವಸ ಎಣ್ಣೆ ಹಚ್ಚುವುದು.
* ದೇಹದ ಶಕ್ತಿಗನುಸಾರವಾಗಿ ವ್ಯಾಯಾಮಾದಿಗಳನ್ನು ಮಾಡುವುದು.
* ರಾತ್ರಿಯ ಊಟದಲ್ಲಿ ಹಾಲನ್ನ, ಮೊಸರು ಬಳಸುವುದು.
* ಆಕಳ/ ಎಮ್ಮೆಯ ಹಾಲನ್ನು ಬೆಲ್ಲ ಹಾಕಿ ಸೇವಿಸುವುದು.
* ತರಕಾರಿಗಳ ಬಿಸಿಯಾದ ಸೂಪ, ಮಾಂಸರಸ ಸೇವನೆ.
* ರಾತ್ರಿ ಮಲಗುವ ಒಂದು ಗಂಟೆ ಮೊದಲು ಮೊಬೈಲನ್ನು  ಬಳಸದಿರುವುದು.
* ರಾತ್ರಿಯಲ್ಲಿ ಚಹಾ, ಕಾಫಿ, ಅಲ್ಕೋಹಾಲ್‌ಗಳನ್ನು ಸೇವಿಸದಿರುವುದು.
* ನಿಗದಿತ ಸಮಯದಲ್ಲಿ ಮಲಗುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು