ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ: ಜೀವನದ ಸಮಗ್ರ ಸೂತ್ರ

Last Updated 20 ಜೂನ್ 2022, 19:45 IST
ಅಕ್ಷರ ಗಾತ್ರ

‘ಯೋಗ’ ಎಂಬ ಪದವನ್ನು ನಮ್ಮ ನಿತ್ಯಜೀವನದಲ್ಲಿ ಆಗಾಗ ಕೇಳುತ್ತಿರುತ್ತೇವೆ. ‘ಅವನಿಗೆ ಯೋಗ ಬಂತು’, ‘ಯಾವುದಕ್ಕೂ ಯೋಗ ಇರಬೇಕು’ – ಹೀಗೆ ಆಡುಮಾತಿನಲ್ಲೂ ಸ್ಥಾನ ಪಡೆದಿರುವ ಪದ ಇದು. ಅದೃಷ್ಟ, ಸಂತೋಷ, ವಿಧಿ – ಹೀಗೆ ನಾನಾರ್ಥಗಳಲ್ಲಿ ಅದನ್ನು ಬಳಸುತ್ತಿರುತ್ತೇವೆ. ಆದರೆ ನಮ್ಮ ಶಾಸ್ತ್ರಪರಂಪರೆಯಲ್ಲಿ ಅದಕ್ಕೊಂದು ವಿಶಿಷ್ಟ ಸ್ಥಾನ ಇದೆ. ನಮ್ಮ ಸಂಸ್ಕೃತಿಯಲ್ಲಿ ಯೋಗವನ್ನು ‘ದರ್ಶನ’ ಎಂಬುದಾಗಿಯೇ ಆದರಿಸಿದ್ದಾರೆ. ದರ್ಶನ ಎಂದರೆ ‘ನೋಡಿದ್ದು’, ‘ಕಾಣ್ಕೆ’, ‘ಸಾಕ್ಷಾತ್ಕಾರ’ ಎಂದು ಹೇಳಬಹುದು. ಈ ನೆಲೆಯಲ್ಲಿ ‘ಯೋಗ’ದಲ್ಲಿ ಹಲವು ಅರ್ಥಗಳನ್ನು ಕಾಣಲು ಸಾಧ್ಯ. ಪ್ರಧಾನವಾಗಿ ಎರಡು ಅರ್ಥಗಳನ್ನು ಇಲ್ಲಿ ಗಮನಿಸಬಹುದು: ‘ಕೂಡುವಿಕೆ’ ಎಂದರೆ ‘ಮಿಲನ’ ಎಂಬ ಒಂದು ಅರ್ಥ; ಮತ್ತೊಂದು ‘ಸಮಾಧಿ’ ಎಂಬುದು. ಜೀವಾತ್ಮ ಮತ್ತು ಪರಮಾತ್ಮರ ಕೂಡುವಿಕೆಯೇ ಯೋಗ ಎಂದೂ, ಚಿತ್ತವೃತ್ತಿಗಳ ನಿರೋಧದಿಂದ ಒದಗುವ ನೆಮ್ಮದಿಯ ಸ್ಥಿತಿಯಾದ ಸಮಾಧಿಯೇ ಯೋಗ ಎಂದೂ – ಈ ಎರಡು ಅರ್ಥಗಳು ಮೇಲಿನ ಪದನಿಷ್ಪತ್ತಿಗಳಿಂದ ಸಿದ್ಧವಾಗುತ್ತದೆ. ಆದರೆ ಇಂದು ‘ಯೋಗ’ ಎಂದರೆ ವ್ಯಾಯಾಮ ಎಂಬ ಅರ್ಥವೇ ಪ್ರಧಾನವಾಗಿರುವಂತೆ ತೋರುತ್ತಿದೆ. ಇದೇನೂ ಅಪಾರ್ಥವಲ್ಲ; ಆದರೆ ಇದು ಯೋಗಕ್ಕಿರುವ ವಿಶಾಲವ್ಯಾಪ್ತಿಯಲ್ಲಿ ಮಿತಿಯಾದ ಅರ್ಥವಷ್ಟೆ ಎಂಬುದನ್ನು ಗಮನಿಸಬೇಕಾಗುತ್ತದೆ. ಶಾಶ್ವತವೂ ಸುಖಕರವೂ ಅದ ನೆಮ್ಮದಿಯ ಸ್ಥಿತಿಯನ್ನು ಒದಗಿಸುವುದು ಯೋಗದ ಗುರಿ; ಅದಕ್ಕೆ ಬೇಕಾದ ದೇಹ–ಮನಸ್ಸುಗಳನ್ನು ಹೊಂದಿಸಲು, ಸಿದ್ಧಿಗೊಳಿಸಲು ಒದಗುವ ದೈಹಿಕ–ಮಾನಸಿಕ ಉಪಾಯಗಳೆಲ್ಲವೂ ಯೋಗವೇ.

ಆಸನಗಳ ರೂಪದ ಯೋಗ ಇಂದು ವಿಶ್ವಮಾನ್ಯತೆಯನ್ನು ಪಡೆದಿದೆ. ಯೋಗದ ತವರುಮನೆಯವರಾದ ಭಾರತೀಯರಿಗೆ ಇದು ಸಂತೋಷದಾಯಕವೇ ಹೌದು. ಆದರೆ ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದಲೇ ಇದು ನಮ್ಮ ಆಧ್ಯಾತ್ಮಿಕ–ಧಾರ್ಮಿಕ ಸಾಧನೆಯ ಭಾಗವಾಗಿದ್ದಿತು; ಜೀವನದ ಸಮಗ್ರ ಏಳಿಗೆಯನ್ನು ಅದು ಪ್ರತಿನಿಧಿಸಿದೆ. ಆದರೆ ಯೋಗಕ್ಕೆ ಒಂದು ಸ್ವತಂತ್ರವಾದ ದರ್ಶನದ ಭಿತ್ತಿ ಒದಗಿದ್ದು ಪತಂಜಲಿಮುನಿಗಳ ‘ಯೋಗದರ್ಶನ’ದ ಮೂಲಕ ಎನ್ನಬಹುದು. ಇಂದು ಯೋಗ ಎಂದರೆ ಯೋಗಾಸನಗಳು ಮಾತ್ರವೇ ಎಂಬ ವ್ಯಾಖ್ಯಾನ ಹೊರಟಂತಿದೆ; ದಿಟ, ಇದರ ಜೊತೆಗೆ ಸ್ವಲ್ಪಮಟ್ಟಿಗೆ ಪ್ರಾಣಾಯಾಮವನ್ನೂ ಕೆಲವರು ಸೇರಿಸುತ್ತಾರೆ; ಆದರೆ ಇದಷ್ಟೇ ಯೋಗದರ್ಶನವಲ್ಲ. ಯೋಗಕ್ಕೆ ಎಂಟು →ಅಂಗಗಳು →ಉಂಟು; ಅವುಗಳಲ್ಲಿ ಆಸನ ಮತ್ತು ಪ್ರಾಣಾಯಾಮಗಳೂ ಸೇರಿಕೊಂಡಿವೆ. ಯಮ, ನಿಯಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ – ಇವು ಉಳಿದ ಅಂಗಗಳು. ಕೇವಲ ವೈದಿಕ ದರ್ಶನದಲ್ಲಿ ಮಾತ್ರವಲ್ಲದೆ ಜೈನ, ಬೌದ್ಧದರ್ಶನಗಳಲ್ಲೂ ಯೋಗಕ್ಕೆ ಮನ್ನಣೆಯಿದೆ.

ಯೋಗಸೂತ್ರಗಳನ್ನು ಬರೆದ ಪತಂಜಲಿ ಮತ್ತು ವ್ಯಾಕರಣಮಹಾಭಾಷ್ಯವನ್ನು ಬರೆದ ಪತಂಜಲಿ – ಇಬ್ಬರೂ ಒಂದೇ ಎಂಬ ಎಣಿಕೆ ಪರಂಪರೆಯಲ್ಲಿಯುಂಟು. ಇದು ಐತಿಹಾಸಿಕವಾಗಿ ಹೌದೋ ಅಲ್ಲವೋ, ಹೇಳುವುದು ಕಷ್ಟ; ಆದರೆ ಈ ನಂಬಿಕೆಯಲ್ಲಿ ಒಂದು ಸ್ವಾರಸ್ಯವುಂಟು. ಪತಂಜಲಿ
ಮಹರ್ಷಿಯು ನಮ್ಮ ಚಿತ್ತದಲ್ಲಿರುವ ಮಲಗಳನ್ನು ಯೋಗದ ಮೂಲಕವಾಗಿಯೂ, ಮಾತಿನಲ್ಲಿರುವ ಮಲಗಳನ್ನೂ ವ್ಯಾಕರಣದ ಮೂಲಕವಾಗಿಯೂ ಸ್ವಚ್ಛಗೊಳಿಸುವ ಉಪಾಯಗಳನ್ನು ತಿಳಿಸಿಕೊಟ್ಟ ಎಂಬುದು ಇಲ್ಲಿರುವ ಧ್ವನಿ. ನಮ್ಮ ನಡೆ–ನುಡಿಗಳ ಶುದ್ಧಿಯಲ್ಲಿಯೇ ನಮ್ಮ ಉನ್ನತಿಯೂ ನೆಮ್ಮದಿಯೂ ಅಡಗಿದೆ ಎಂಬುದು ಇಲ್ಲಿರುವ ನಿಲುವು. ಹೀಗಾಗಿಯೇ ನಮ್ಮ ದೇಶದ ಬಹುಪಾಲು ದಾರ್ಶನಿಕರು ಯೋಗವನ್ನು ಸಾಧನೆಯ ಭಾಗವಾಗಿ ಸ್ವೀಕರಿಸಿದ್ದಾರೆ ಎಂಬುದು ಗಮನಾರ್ಹ. ಉದಾಹರಣೆಗೆ, ಬುದ್ಧ ಭಗವಂತನು ಆರ್ಯಸತ್ಯಗಳ ಭಾಗವಾಗಿಯೇ ಎಂಟು ಯೋಗಗಳನ್ನೂ ಉಪದೇಶಿಸಿದ; ಸಮ್ಯಕ್‌ ದೃಷ್ಟಿ, ಸಮ್ಯಕ್‌ ಸಂಕಲ್ಪ, ಸಮ್ಯಕ್‌ ವಾಕ್‌, ಸಮ್ಯಕ್‌ ಕರ್ಮ, ಸಮ್ಯಕ್‌ ಆಜೀವ, ಸಮ್ಯಕ್‌ ವ್ಯಾಯಾಮ, ಸಮ್ಯಕ್‌ ಸ್ಮೃತಿ ಮತ್ತು ಸಮ್ಯಕ್‌ ಸಮಾಧಿ – ಇವೇ ಆ ಅಂಗಗಳು. ನಮ್ಮ ಅಂತರಂಗ–ಬಹಿರಂಗದ ಶುದ್ಧಿಗಾಗಿ ಬೇಕಾದ ಸಾಧನೆಗಳೆಲ್ಲವೂ ಇದರಲ್ಲಿ ಸೇರಿದೆ ಎಂಬುದು ಸ್ಪಷ್ಟ. ಪತಂಜಲಿಯು ‘ಯೋಗಃ ಚಿತ್ತವೃತ್ತಿನಿರೋಧಃ’ ಎಂದೇ ಯೋಗದ ಲಕ್ಷಣವನ್ನು ಹೇಳಿರುವುದನ್ನು ಮರೆಯುವಂತಿಲ್ಲ. ಚಿತ್ತವೆಂದರೆ ಮನಸ್ಸು, ಬುದ್ಧಿ ಮತ್ತು ಅಹಂಕಾರ. ನಮ್ಮ ವ್ಯಕ್ತಿತ್ವನ್ನು ಆಳುವಂಥ ಗುಣಗಳೇ ಈ ಮೂರು ವಿವರಗಳು. ಆತ್ಮಸಾಕ್ಷಾತ್ಕಾರಕ್ಕಾಗಿ ನಮ್ಮ ದೈಹಿಕ–ಮಾನಸಿಕವಾದ ಏಳು–ಬೀಳುಗಳನ್ನು ಸಂಯಮದಲ್ಲಿರಿಸಿಕೊಳ್ಳಬೇಕೆಂಬುದೇ ಯೋಗದರ್ಶನದ ಕಾಣ್ಕೆ ಎಂಬುದು ಇದರಿಂದ ಸಿದ್ಧವಾಗುತ್ತದೆ.

ನಮ್ಮ ಚಿತ್ತವು ನಮ್ಮದೇ ಇಂದ್ರಿಯಗಳ ಮೂಲಕ ಹೊರಜಗತ್ತಿನೊಂದಿಗೆ ಸಂಪರ್ಕ ಹೊಂದಲು ತವಕಿಸುತ್ತಿರುತ್ತದೆ; ಬಾಹ್ಯಪ್ರಪಂಚದ ಸೆಳೆತಕ್ಕೆ ತುತ್ತಾಗಿರುತ್ತದೆ. ಯಾವ ವಸ್ತು ಅಥವಾ ವಿವರದೊಂದಿಗೆ ಅದು ಸಂಪರ್ಕ ಬರುತ್ತದೋ ಅದರ ಆಕಾರವನ್ನೇ ನಮ್ಮ ಚಿತ್ತವೂ ಹೊಂದುತ್ತದೆ. ಈ ಪ್ರಕ್ರಿಯೆಯಲ್ಲಿ ನಾವು ನಮ್ಮ ದಿಟವಾದ ಸ್ವರೂಪವನ್ನು ಮರೆತು, ನಮ್ಮದಲ್ಲದ ವಸ್ತುರೂಪದಲ್ಲಿ ನೆಲೆನಿಲ್ಲುತ್ತೇವೆ. ಈ ಚಿತ್ತಪ್ರಯಾಣವೇ ನಮ್ಮ ಸುಖ–ದುಃಖಗಳ ಅನುಭವಕ್ಕೂ ಕಾರಣವಾಗುತ್ತಿರುತ್ತದೆ. ನಾವು ಬಯಸಿದ ಅಥವಾ ಹೊಂದಿದ ವಸ್ತು ನಮ್ಮ ಜೊತೆಯಲ್ಲಿರುವವರೆಗೂ ಸುಖ ನಮ್ಮದಾಗಿರುತ್ತದೆ; ಅದು ನಮ್ಮಿಂದ ದೂರವಾದಾಗ ದುಃಖ ನಮ್ಮ ಹೆಗಲೇರುತ್ತದೆ. ಹೀಗೆ ನಮ್ಮ ಸುಖದುಃಖಗಳಿಗೆ ಕಾರಣವಾದ →ಚಿತ್ತವೃತ್ತಿಗಳ ಮೇಲೆ ಹಿಡಿತವನ್ನು →ಸಾಧಿಸುವ ಸಾಧನೆಯೇ ಯೋಗ →ಎಂದು ಸರಳವಾಗಿ→ ಹೇಳಬಹುದು. ಆಧುನಿಕ ಕಾಲದಲ್ಲಂತೂ ಹೆಚ್ಚು ತೀವ್ರವಾಗಿ ಹೊರಕ್ಕೆ ಚಾಚಿಕೊಂಡೇ ಇರುವ ನಮ್ಮ ಚಿತ್ತದಿಂದ ಉಂಟಾಗುತ್ತಿರುವ ಉದ್ವೇಗಗಳ ತೊಂದರೆಯನ್ನು ನಾವು ಯಥೇಷ್ಟವಾಗಿಯೇ ಅನುಭವಿಸುತ್ತಿದ್ದೇವೆ. ನಮ್ಮ ದಿಟವಾದ ನೆಲೆಯಾದ ನೆಮ್ಮದಿ, ಎಂದರೆ ಆನಂದದಲ್ಲಿ ಒಂದಾಗಲು ಯೋಗ ಖಂಡಿತವಾಗಿಯೂ ನಮಗೆ ಒದಗುತ್ತದೆ. ಆದರೆ ಇದು ಅಷ್ಟಾಂಗಯೋಗವಾಗಬೇಕು. ಬುದ್ಧನು ಪ್ರತಿಪದಾದಿಸಿದ ಎಂಟು ದಾರಿಗಳನ್ನೂ ಅನುಷ್ಠಾನಕ್ಕೆ ತರಬೇಕು.

ಭಗವದ್ಗೀತೆಯನ್ನು ಕೂಡ ‘ಯೋಗಶಾಸ್ತ್ರ’ ಎಂದು ಆದರಿಸಿರುವುದು ಕೂಡ ಮನನೀಯ; ಗೀತಾಚಾರ್ಯ ಶ್ರೀಕೃಷ್ಣನು ಯೋಗಾಚಾರ್ಯನೂ ಹೌದು. ಗೀತೆಯು ಯೋಗವನ್ನು ‘ಕರ್ಮಸು ಕೌಶಲಮ್‌’ ಎಂದಿದೆ; ನಾವು ಮಾಡುವ ಕೆಲಸಗಳಲ್ಲಿ ಇರಬೇಕಾದ ಜಾಣ್ಮೆ ಎಂದು ಇದರ ಸರಳಾರ್ಥ. ಇಲ್ಲಿ ಹೇಳಿರುವ →ಜಾಣತನ ಎನ್ನುವುದು ಆತ್ಮಘಾತಕವೂ ಲೋಕವಂಚಕವೂ ಆದ ಬುದ್ಧಿಯ ಕಸರತ್ತು ಅಲ್ಲ; ಇದು ನಮ್ಮನ್ನು ನಾವು ಆತ್ಮಾನಂದಕ್ಕೆ ‘ಸಿದ್ಧ’ಗೊಳಿಸಿಕೊಳ್ಳುವ ಪ್ರ–ಕ್ರಿಯೆ. ಎಂದರೆ ನಾವು ಎಂಥ ಸಂದರ್ಭವನ್ನೂ ಸ್ಥಿರವಾಗಿಯೂ ಸಹಜವಾಗಿಯೂ ಶುದ್ಧವಾಗಿಯೂ ಸ್ವೀಕರಿಸಬಲ್ಲಂಥ ವ್ಯಕ್ತಿತ್ವವನ್ನು ನಮ್ಮಲ್ಲಿ ತುಂಬಿಸಿಕೊಳ್ಳುವ ಹೂರಣದ ಕೆಲಸವೇ ಹೊರತು, ಮುಂದಿರುವವರನ್ನು ಮೆಚ್ಚಿಸುವ–ತಬ್ಬಿಬ್ಬುಗೊಳಿಸುವ ತೋರಣದ ಸಿಂಗಾರವಲ್ಲ; ಇದು ಹಿಗ್ಗಿಗೆ ಉಬ್ಬವ, ಕುಗ್ಗಿಗೆ ತಗ್ಗುವ ಚಂಚಲತೆಯೂ ಅಲ್ಲ; ಅಥವಾ ದುಃಖಕ್ಕೆ ಹೆದರಿ ಓಡಿಹೋಗುವ ಪಲಾಯನವಾದವೋ, ಸುಖಕ್ಕೆ ಹಂಬಲಿಸಿ ತೇಲಾಡುವ ಲಂಪಟತನವೋ ಅಲ್ಲ; ಪ್ರತಿಯೊಂದು ಕ್ಷಣದ ಪೂರ್ಣದರ್ಶನಕ್ಕೆ ನಮ್ಮನ್ನು ನಾವು ಅಣಿಗೊಳಿಸಿಕೊಳ್ಳುವ ಪ್ರಜ್ಞೆಯೇ ಈ ಕುಶಲತೆ. ಹೊರಗಿನ ಮತ್ತು ಒಳಗಿನ ಇಂಥ ಎಚ್ಚರವೇ ಅಲ್ಲವೆ ನಮಗೆ ಇಂದು ಬೇಕಾಗಿರುವ ಅರಿವು?

ಸಂಸ್ಕೃತ ಸುಭಾಷಿತವೊಂದು ಹೀಗಿದೆ:

ಮಾತ್ರಾ ಸಮಂ ನಾಸ್ತಿ ಶರೀರಪೋಷಣಂ

ವಿದ್ಯಾಸಮಂ ನಾಸ್ತಿ ಶರೀರಭೂಷಣಮ್‌ |

ಭಾರ್ಯಾಸಮಂ ನಾಸ್ತಿ ಶರೀರತೋಷಣಂ

ಚಿಂತಾಸಮಂ ನಾಸ್ತಿ ಶರೀರಶೋಷಣಮ್‌ ||

ಎಂದರೆ, ‘ತಾಯಿಗೆ ಸಮವಾದ ಶರೀರದ ಪೋಷಣವಿಲ್ಲ. ವಿದ್ಯೆಗೆ ಸಮವಾದ ಶರೀರದ ಭೂಷಣವಿಲ್ಲ. ಹೆಂಡತಿಗೆ ಸಮವಾದ ಶರೀರದ ತೋಷಣವಿಲ್ಲ. ಚಿಂತೆಗೆ ಸಮವಾದ ಶರೀರದ ಶೋಷಣವಿಲ್ಲ.’

ನಮ್ಮ ಜೀವನವೆಲ್ಲ ನಮ್ಮ ಶರೀರವನ್ನು ಆಶ್ರಯಿಸಿರುವುದು ಸುಳ್ಳಲ್ಲವಷ್ಟೆ. ಮೊದಲು ನಮ್ಮ ಶರೀರದ ಪೋಷಣೆಯಾಗಬೇಕು; ಅದರ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು; ಅದನ್ನು ಸಂತೋಷವಾಗಿರಿಸಿಕೊಳ್ಳಬೇಕು. ಮಾತ್ರವಲ್ಲ, ಅದನ್ನು ಎಂದಿಗೂ ಚಿಂತೆಗೆ ಒಳಪಡಿಸಬಾರದು. ನಮ್ಮ ಜೀವನದ ಸಮಗ್ರ ಆರೋಗ್ಯದ ಯೋಗಸೂತ್ರವನ್ನು ಈ ಸುಭಾಷಿತ ಹೇಳುತ್ತಿದೆ.

ನಮಗೆ ಜನ್ಮ ನೀಡುವವಳು ನಮ್ಮ ತಾಯಿ. ಅವಳಿಂದಲೇ ನಮ್ಮ ಈ ಶರೀರ. ಮಾತ್ರವಲ್ಲ, ಈ ಶರೀರವನ್ನು ಪೋಷಿಸುವವಳೂ ಅವಳೇ. ಸುಮ್ಮನೇ ನಮ್ಮ ಶರೀರ ಬೆಳೆದರೂ ಪ್ರಯೋಜನವಿಲ್ಲ. ಅದಕ್ಕೊಂದು ಆಕಾರ ಬರಬೇಕು; ಚೆನ್ನಾಗಿಯೂ ಕಾಣಬೇಕು; ಕೀರ್ತಿಯನ್ನೂ ಸಂಪಾದಿಸಬೇಕು. ನಾವು ನಾಲ್ಕು ಜನರಿಗೆ ಚೆನ್ನಾಗಿ ಕಾಣುವುದು, ನಮ್ಮ ಶರೀರಕ್ಕೆ ವ್ಯಕ್ತಿತ್ವ ಒದಗುವುದು ನಾವು ಕಲಿತಿರುವ ವಿದ್ಯೆಯಿಂದಲೇ ಹೌದು. ನಮ್ಮ ಶರೀರಕ್ಕೆ ಸಂತೋಷ, ಸುಖವೂ ಬೇಕಾಗುತ್ತದೆ. ನಮ್ಮ ಮಡದಿಯಿಂದ ನಮಗೆ ಇವು ದೊರೆಯುತ್ತವೆ. ಇವುಗಳ ನಡುವೆ ನಮ್ಮ ಶರೀರಕ್ಕೆ ತೊಂದರೆಯೂ ಎದುರಾಗಬಹುದು; ಅದು ಹಿಂಸೆಗೆ ತುತ್ತಾಗಬಹುದು. ಚಿಂತೆಯೇ ನಮ್ಮ ಶೋಷಣೆಗೆ ಕಾರಣವಾಗುವಂಥದ್ದು.

ನಮ್ಮ ಶರೀರಕ್ಕೆ ಏನು ಬೇಕೋ, ಏನು ಬೇಡವೋ ಎಂದು ತಿಳಿದುಕೊಂಡು ಅದರಂತೆ ಜೀವನವನ್ನು ರೂಪಿಸಿಕೊಳ್ಳಬೇಕೆಂಬುದು ಯೋಗದರ್ಶನದ ಕಾಣ್ಕೆ. ಹೀಗೆ ಒದಗುವ ದೈಹಿಕ, ಮಾನಸಿಕ, ಸಾಮಾಜಿಕ, ಬೌದ್ಧಿಕ ಸಾಮರಸ್ಯವೇ ದಿಟವಾದ ಯೋಗಾಸನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT