ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂತ್ರಪಿಂಡ ಕಾಯಿಲೆ ಸ್ವಯಂ ಚಿಕಿತ್ಸೆಯಿಂದ ದೂರವಿರುವುದೇ ಮದ್ದು!

Last Updated 16 ಮಾರ್ಚ್ 2020, 5:33 IST
ಅಕ್ಷರ ಗಾತ್ರ

ಮೂತ್ರಪಿಂಡ (ಕಿಡ್ನಿ)ದ ಸಮಸ್ಯೆ ಅದರಲ್ಲೂ ಕ್ರೋನಿಕ್‌ ಕಿಡ್ನಿ ಕಾಯಿಲೆ (ಸಿಕೆಡಿ)ಗೆ ಒಳಗಾಗುವವರ ಸಂಖ್ಯೆ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ.ಭಾರತದಲ್ಲಂತೂ ಡಯಾಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳ ಸಂಖ್ಯೆ ಪ್ರತಿ ವರ್ಷ ಶೇ 10– 15ರಷ್ಟು ಹೆಚ್ಚುತ್ತಿದೆ ಎಂದರೆ ಇದರ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬಹುದು. ಮನುಷ್ಯನ ಸಾವಿನ ಕಾರಣಗಳನ್ನು ಪಟ್ಟಿ ಮಾಡುತ್ತ ಹೋದರೆ ಇದು 6ನೇ ಸ್ಥಾನದಲ್ಲಿ ನಿಲ್ಲುತ್ತದೆ.

ರಕ್ತವನ್ನು ಶುದ್ಧೀಕರಿಸಿ, ತ್ಯಾಜ್ಯ ಉತ್ಪನ್ನಗಳನ್ನು ಮೂತ್ರದ ಮೂಲಕ ಹೊರಹಾಕುವಂತಹ ಪ್ರಾಥಮಿಕ ಕಾರ್ಯವನ್ನು ಮೂತ್ರಪಿಂಡವು ನಿರ್ವಹಿಸುತ್ತದೆ. ದೇಹದ ಉಪ್ಪು ಮತ್ತು ನೀರಿನ ಮಟ್ಟವನ್ನು ನಿಯಂತ್ರಿಸುವ ಮೂಲಕ ರಕ್ತದ ಒತ್ತಡವನ್ನು ಕೂಡಾ ನಿರ್ವಹಿಸುತ್ತದೆ. ಈ ಕಾರ್ಯ ಸ್ಥಗಿತಗೊಂಡಾಗ ಅಥವಾ ಕ್ಷೀಣಿಸಿದಾಗ ದೇಹದ ಇತರ ಅಂಗಾಂಗಗಳ ಮೇಲೂ ಪರಿಣಾಮ ಉಂಟಾಗುತ್ತದೆ. ಮೂತ್ರಪಿಂಡ ಅಸ್ವಸ್ಥತೆಗಳಲ್ಲಿ ಪ್ರಮುಖವಾಗಿ ಅಕ್ಯೂಟ್ ಇಂಟರ್‌ಸ್ಟಿಯಲ್ ನೆಫ್ರಿಟೀಸ್ (ಎಐಎನ್), ಮೂತ್ರಪಿಂಡಕ್ಕೆ ತೀವ್ರ ಗಾಯ (ಎಕೆಐ), ಕ್ರೋನಿಕ್ ಕಿಡ್ನಿ ಡಿಸೀಸ್ (ಸಿಕೆಡಿ) ಮತ್ತು ಅಂತಿಮ ಘಟ್ಟ ಮೂತ್ರನಾಳ ರೋಗ (ಇಎಸ್‌ಆರ್‌ಡಿ), ಮೂತ್ರಪಿಂಡ ವೈಫಲ್ಯ ಸೇರುತ್ತವೆ.

ನಿಃಶಬ್ದ ಹಂತಕ
ಮೂತ್ರಪಿಂಡದ ಕಾರ್ಯ ಕುಂಠಿತವಾಗಿದೆ ಎಂಬುದನ್ನು ಅರಿತುಕೊಳ್ಳಲು ಕೆಲವು ಆರಂಭಿಕ ರೋಗಲಕ್ಷಣಗಳನ್ನು ಗುರುತಿಸುವುದು ಅಗತ್ಯ. ನಿಃಶಕ್ತಿ, ಮೂತ್ರ ವಿಸರ್ಜನೆಯ ವೇಳೆ ನೋವು, ಹಳದಿ ಬಣ್ಣದ ಮೂತ್ರ, ಮೂತ್ರದಲ್ಲಿ ರಕ್ತ, ಅಧಿಕ ಬಾಯಾರಿಕೆ, ಮೂತ್ರದ ಹರಿವು ಕಡಿಮೆಯಾಗುವುದು, ಕಣ್ಣು, ಮುಖ, ಕೈ, ಮತ್ತು ಪಾದಗಳಲ್ಲಿ ಊತ, ದೇಹವಿಡೀ ತುರಿಕೆ ಮುಖ್ಯವಾದ ಲಕ್ಷಣಗಳು.

ಮುಂಜಾಗ್ರತೆ
ಮಧುಮೇಹ, ಮೂತ್ರನಾಳದ ಸೋಂಕು, ರಕ್ತದ ಅಧಿಕ ಒತ್ತಡ, ಹೃದ್ರೋಗ, ಕುಟುಂಬದಲ್ಲಿ ಯಾರಿಗಾದರೂ ಕಿಡ್ನಿ ಕಾಯಿಲೆಯಿದ್ದರೆ ಅಂತಹ ವ್ಯಕ್ತಿಗಳು ತಮ್ಮ ಮೂತ್ರಪಿಂಡದ ಆರೋಗ್ಯದ ಬಗ್ಗೆ ಅಧಿಕ ಕಾಳಜಿ ವಹಿಸುವುದು ಒಳಿತು. ಸಕಾಲಿಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು, ನಿಯಮಿತವಾಗಿ ವೈದ್ಯರ ಸಲಹೆ ಪಡೆಯುವ ಮೂಲಕ ತೀವ್ರತರ ಕಿಡ್ನಿ ಕಾಯಿಲೆಗೆ ತುತ್ತಾಗುವುದನ್ನು ತಡೆಯಬಹುದು.

ಸ್ವಯಂ ಚಿಕಿತ್ಸೆ ಬೇಡ
ಸ್ವಯಂ ಚಿಕಿತ್ಸೆಗೆ ಕೈ ಹಾಕದಿರುವುದು ಈ ಮುನ್ನೆಚ್ಚರಿಕೆಯಲ್ಲಿ ಪ್ರಮುಖ ಅಂಶ. ಅಂದರೆ ಇತರ ಯಾವುದೇ ಕಾಯಿಲೆ ಬಂದರೂ ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳಬೇಕೇ ಹೊರತು ‘ಓವರ್‌ ದಿ ಕೌಂಟರ್‌’ ಔಷಧಿ ತೆಗೆದುಕೊಳ್ಳುವುದು, ಇತರರ ಮಾತು ಕೇಳಿ ಅವರು ಸೇವಿಸುವ ಮಾತ್ರೆಯನ್ನು ತಾವೂ ಸೇವಿಸುವುದು ಖಂಡಿತ ಬೇಡ.

ಅಂಟಾಸಿಡ್‌, ನೋವು ನಿವಾರಕದ ದೀರ್ಘ ಸೇವನೆಗೆ ನಿಯಂತ್ರಣ
ನೋವು ನಿವಾರಕ, ಆ್ಯಂಟಿ ಬಯಾಟಿಕ್ಸ್, ಪ್ರೊಟೋನ್ ಪಂಪ್ ಇನ್‌ಹಿಬಿಟರ್ (ಪಿಪಿಐ)ನಂಥ ಅಂಟಾಸಿಡ್‌ಗಳನ್ನು ವೈದ್ಯರ ಸೂಕ್ತ ಸಲಹೆ ಇಲ್ಲದೇ ಬಳಸುವುದು ಇತ್ತೀಚಿಗೆ ಸಾಮಾನ್ಯವಾಗಿಬಿಟ್ಟಿದೆ. ಇದು ಮೂತ್ರಪಿಂಡದ ಮೇಲೆ ತೀವ್ರ ಪರಿಣಾಮ ಬೀರಬಲ್ಲದು. ಐಬುಪ್ರೊಫೇನ್, ಆ್ಯಸ್ಪರಿನ್‌ನಂಥ ನೋವು ನಿವಾರಕ ಔಷಧಿಗಳು ಮೂತ್ರನಾಳಕ್ಕೆ ಹರಿಯುವ ರಕ್ತ ಪ್ರಮಾಣವನ್ನು ಕಡಿಮೆ ಮಾಡುವ ಕಾರಣದಿಂದ ತೀವ್ರತರ ಕಿಡ್ನಿ ರೋಗಕ್ಕೆ ಕಾರಣವಾಗುತ್ತವೆ.

ಪೆನ್ಸಿಲಿನ್, ಟೆಟ್ರಾಸೈಕ್ಲಿನ್‌ನಂಥ ಆ್ಯಂಟಿ ಬಯಾಟಿಕ್ ಔಷಧಿಗಳು ಕೂಡಾ ಕಿಡ್ನಿಗೆ ಮಾರಕ. ಏಕೆಂದರೆ ಇವು ಹರಳುಗಳನ್ನು ಒಡೆಯದೇ ಶೇಖರವಾಗುವಂತೆ ಮಾಡುತ್ತವೆ ಹಾಗೂ ಮೂತ್ರದ ಹರಿವಿಗೆ ತಡೆಯೊಡ್ಡುತ್ತವೆ. ಇದರ ಜತೆಗೆ ಅಂಟಾಸಿಡ್‌ಗಳನ್ನು ವೈದ್ಯರ ಸಲಹೆ ಇಲ್ಲದೇ ಧೀರ್ಘಕಾಲ ಬಳಸುವುದು ಕೂಡಾ ಕಿಡ್ನಿ ಆರೋಗ್ಯಕ್ಕೆ ಮಾರಕ. ಇದನ್ನು ಮೂರು ತಿಂಗಳಿಗಿಂತ ಅಧಿಕ ಕಾಲ ಅಂದರೆ ಧೀರ್ಘಾವಧಿಯಲ್ಲಿ ಬಳಸಿದರೆ ರಕ್ತದ ಮ್ಯಾಗ್ನಿಶಿಯಂ ಪ್ರಮಾಣ ಕಡಿಮೆಯಾಗಿ ತೀವ್ರತರ ಮೂತ್ರಪಿಂಡ ಅಸ್ವಸ್ಥತೆಗೆ ಕಾರಣವಾಗುತ್ತದೆ.

ಮೂತ್ರಪಿಂಡ ಆರೋಗ್ಯವಾಗಿರುವಂತೆ ನೋಡಿಕೊಳ್ಳಲು ಈ ಸೂಚನೆಗಳನ್ನು ಪಾಲಿಸಬಹುದು.

*ಸಾಕಷ್ಟು ದ್ರವಾಹಾರ ಸೇವಿಸುವ ಮೂಲಕ ತ್ಯಾಜ್ಯ ಅಂಶಗಳು ವಿಸರ್ಜನೆಯಾಗುವಂತೆ ನೋಡಿಕೊಳ್ಳಿ. ದೇಹದ ದ್ರವಾಂಶ ಕಡಿಮೆಯಾಗುವುದು ಕಿಡ್ನಿ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ.

*ಅಂಟಾಸಿಡ್‌ನಂತಹ ಕೆಲವು ಔಷಧಗಳನ್ನು ಧೀರ್ಘಕಾಲದವರೆಗೆ ಬಳಸಬೇಡಿ. ಧೀರ್ಘಕಾಲದವರೆಗೆ ಯಾವುದೇ ಔಷಧಿಗಳನ್ನು ಬಳಸುವ ಮುನ್ನ ನಿಮ್ಮ ವೈದ್ಯರ ಮಾರ್ಗದರ್ಶನ ಪಡೆಯಿರಿ.

*ಈ ಔಷಧಿಗಳನ್ನು ಸೇವಿಸುವ ಅವಧಿಯಲ್ಲಿ ಮದ್ಯ ಸೇವನೆಯನ್ನು ಕಡ್ಡಾಯವಾಗಿ ತ್ಯಜಿಸಿ. ಮದ್ಯವು ದೇಹದಲ್ಲಿ ದ್ರವಾಂಶವನ್ನು ಕಡಿಮೆ ಮಾಡುತ್ತದೆ ಹಾಗೂ ರಕ್ತದ ಒತ್ತಡವನ್ನೂ ಹೆಚ್ಚಿಸುತ್ತದೆ. ಇದರಿಂದ ಮೂತ್ರಪಿಂಡ ನಿಷ್ಕ್ರಿಯತೆಗೆ ಕಾರಣವಾಗುವ ಎಲ್ಲ ಅಪಾಯವೂ ಇದೆ.

*ಜೀವನಶೈಲಿಯಲ್ಲಿ ಬದಲಾವಣೆ ಕೂಡಾ ಅಗತ್ಯ. ಪ್ರಮುಖವಾಗಿ ನಿಯಮಿತವಾದ ವ್ಯಾಯಾಮ, ಉಪ್ಪು ಸೇವನೆ ಕಡಿಮೆ ಮಾಡುವುದು, ಧೂಮಪಾನ ಮಾಡದಿರುವುದು, ರಕ್ತದ ಒತ್ತಡ ಮತ್ತು ಸಕ್ಕರೆ ಅಂಶ ನಿಯಂತ್ರಿಸುವುದು ಅಗತ್ಯ.

(ಲೇಖಕರು ಮೆಡಿಕಲ್‌ ಸುಪರಿಂಟೆಂಡೆಂಟ್‌,ಇನ್‌ಸ್ಟಿಟ್ಯೂಟ್‌ ಆಫ್‌ ನೆಫ್ರೊ ಯೂರೋಲಜಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT