ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಂದ ಮೊಬೈಲ್‌ಗೂ ರಜೆ ಸಿಗಲಿ

Published 24 ಏಪ್ರಿಲ್ 2023, 18:39 IST
Last Updated 24 ಏಪ್ರಿಲ್ 2023, 18:39 IST
ಅಕ್ಷರ ಗಾತ್ರ

ಡಾ. ಕಿರಣ್ ವಿ. ಎಸ್.

ಆರು ವರ್ಷದ ಮಗು. ಇನ್ನೂ ಪದಗಳನ್ನು ಗುರುತಿಸಲೂ ಸರಿಯಾಗಿ ಬಾರದು. ‘ಮೊಬೈಲ್ ಕೈಲಿಟ್ಟರೆ ಮಗು ದಿನವೆಲ್ಲಾ ಗಪ್-ಚುಪ್ ಆಗಿರುತ್ತದೆ. ತನಗೆ ಬೇಕಾದ್ದನ್ನು ತಾನೇ ಡೌನ್’ಲೋಡ್ ಮಾಡಿಕೊಂಡು ಆಡುತ್ತದೆ. ಫೋನಿನಲ್ಲಿ ನಮಗೆ ಕೂಡ ಸರಿಯಾಗಿ ಮಾಡಲಾಗದ ಕೆಲಸಗಳನ್ನು ಸರಾಗವಾಗಿ ಮಾಡುತ್ತದೆ. ನಮಗಂತೂ ದಿನನಿತ್ಯದ ಕೆಲಸಗಳನ್ನು ಆರಾಮವಾಗಿ ಮಾಡಿಕೊಳ್ಳಲು ಅನುಕೂಲ. ತುಂಬಾ ಒಳ್ಳೆಯ ಮಗು’ ಎನ್ನುವವರನ್ನು ನೋಡಿರುತ್ತೇವೆ. ಇದು ನಿಜಕ್ಕೂ ಆತಂಕದ ವಿಷಯ.

ಬೇಸಿಗೆ ರಜೆಯ ವೇಳೆ ಮಕ್ಕಳು ದಿನವೊಂದಕ್ಕೆ ಸುಮಾರು ಒಂಬತ್ತು ಗಂಟೆಗಳಷ್ಟು ಕಾಲ ಸ್ಮಾರ್ಟ್ ಫೋನ್ ಬಳಕೆಯಲ್ಲಿ ಕಳೆಯುತ್ತಾರೆ ಎನ್ನುವ ಆಘಾತಕಾರಿ ಸುದ್ದಿಯೊಂದು ಬಂದಿದೆ. ಪೋಷಕರಿಗೆ ಇದರ ದೂರಗಾಮಿ ಪರಿಣಾಮಗಳ ಅರಿವು ಮೂಡುತ್ತಿಲ್ಲ. ಇಂತಹ ಮಕ್ಕಳು ಹಲವಾರು ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಮಕ್ಕಳ ಸಾಮಾಜಿಕ ವರ್ತನೆ ಗಾಸಿಗೊಳ್ಳುತ್ತದೆ. ಮೊಬೈಲ್ ವ್ಯಸನ ಮನೆಮಾಡುತ್ತದೆ. ಮೊಬೈಲ್ ಕೈಲಿ ಇಲ್ಲದಿದ್ದರೆ ಅಥವಾ ಅಂತರ್ಜಾಲ ಸಂಪರ್ಕ ತಪ್ಪಿಹೋದರೆ ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ. ಅವರ ನಿದ್ರೆಯ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ದೈಹಿಕ ಚಟುವಟಿಕೆಯಿಲ್ಲದ ಇಂತಹ ಮಕ್ಕಳಲ್ಲಿ ಬೊಜ್ಜು ಕಾಣುತ್ತದೆ. ಸಾಂಘಿಕ ಆಟಪಾಠಗಳ ಕ್ರಮ ತಪ್ಪಿ ಅವರ ಸಾಮಾಜಿಕ ವರ್ತನೆ ಹದಗೆಡುತ್ತದೆ. ಇತರ ವಿಷಯಗಳ ಬಗ್ಗೆ ಆಸಕ್ತಿ, ಅವಧಾನ ಕಡಿಮೆಯಾಗುತ್ತದೆ. ಕೆಲವು ಮಕ್ಕಳಲ್ಲಿ ನರವ್ಯೂಹ ಮತ್ತು ಬೆನ್ನುಮೂಳೆಯ ಸಮಸ್ಯೆಗಳೂ ಕಂಡಿವೆ.

ಒಮ್ಮೆ ಚಟದ ಮಟ್ಟಕ್ಕೆ ಇಳಿದರೆ, ಮೊಬೈಲ್ ಪಾಶವನ್ನು ಮಕ್ಕಳಿಂದ ಬಗೆಹರಿಸುವುದು ಸುಲಭವಲ್ಲ. ಆದರೂ, ಕೆಲವು ಸರಳ ಪದ್ಧತಿಗಳನ್ನು ಪಾಲಿಸುವುದರಿಂದ ಪರಿಹಾರ ಕಂಡುಕೊಳ್ಳಬಹುದು. ಇದನ್ನು ಶಿಸ್ತಾಗಿ ಪಾಲಿಸುವುದು ಪೋಷಕರ ದೃಷ್ಟಿಯಿಂದ ಬಹಳ ಮುಖ್ಯ. ಮೊಬೈಲ್ ಫೋನಿನಿಂದ ದೂರಾಗುವುದನ್ನು ಯಾವ ಮಗುವೂ ಸುಲಭವಾಗಿ ಸಹಿಸುವುದಿಲ್ಲ. ಇಂತಹ ಹಲವಾರು ಪ್ರಯತ್ನಗಳು ಮಗುವಿನ ಹಠದ ಕಾರಣದಿಂದ ಅಸಫಲವಾಗುತ್ತವೆ. ಕೆಲವೊಮ್ಮೆ ಮಕ್ಕಳು ರಚ್ಚೆ ಹಿಡಿದು ಊಟ ಬಿಡುವಂತಹ ಅಸಹಕಾರ ಕ್ರಿಯೆಗಳಿಗೆ ಇಳಿಯುತ್ತಾರೆ. ಯಾವುದೇ ಶಿಸ್ತಿನ ಅನುಷ್ಠಾನವೂ ಹಲವಾರು ಹಂತಗಳ ಪ್ರಯತ್ನವನ್ನು ಬಯಸುತ್ತದೆ. ಪೋಷಕರಿಗೆ ತಾಳ್ಮೆ ಬಹಳ ಮುಖ್ಯ.

1. ಮಕ್ಕಳು ಸಹಜ ಚೈತನ್ಯದ ಚಿಲುಮೆಗಳು. ಅವರು ಒಂದೆಡೆ ಚಲನೆಯಿಲ್ಲದೆ ಕುಳಿತಿದ್ದಾರೆ ಎಂದರೆ, ಯಾವುದಕ್ಕೋ ಕಟ್ಟುಬಿದ್ದಿದ್ದಾರೆ ಎಂದೇ ಅರ್ಥ. ಈ ಬಂಧವನ್ನು ಮುರಿಯಬೇಕು. ಕನಿಷ್ಠ ಅರ್ಧಗಂಟೆಗೊಮ್ಮೆ ಎದ್ದು ಒಂದಷ್ಟು ದೂರ ಓಡಾಡುವುದು, ಮೈಮುರಿಯುವುದು ಮೊದಲಾದುವು ಅವರ ದೇಹಕ್ಕೆ ಒಳ್ಳೆಯದು. ಇದರಿಂದ ಅವರು ಫೋನ್ ಪರದೆಯಿಂದ ತಾತ್ಕಾಲಿಕವಾಗಿ ದೂರಾಗುವಂತಾಗುತ್ತದೆ. ಮೊದಲನೆಯ ಹಂತದಲ್ಲಿ ಪೋಷಕರು ಆಗಾಗ ಮಕ್ಕಳನ್ನು ಯಾವುದೋ ಒಂದು ನೆಪದಲ್ಲಿ ಅರ್ಧ ಗಂಟೆಗೊಮ್ಮೆಯಾದರೂ ಇಂತಹ ಚರ್ಯೆಗಳಿಗೆ ತೊಡಗಿಸಬೇಕು.

2. ಮಕ್ಕಳಿಗೆ ನಿತ್ಯವೂ ಕೆಲಸದ ಪಟ್ಟಿ ಒದಗಿಸಬೇಕು. ರಜೆಯ ವೇಳೆ ಒಂತಿಷ್ಟು ಓದು, ಸ್ವಲ್ಪ ವ್ಯಾಯಾಮ, ಕೊಂಚ ಮನೆಗೆಲಸ, ಗಿಡಗಳ/ಮನೆತೋಟದ ಆರೈಕೆ ಮೊದಲಾದ ಸಣ್ಣಪುಟ್ಟ ಕೆಲಸಗಳನ್ನು ನೀಡಬೇಕು. ಇದನೆಲ್ಲ ಮಾಡಿದರೆ ನಂತರ ನಿರಾತಂಕವಾಗಿ ಫೋನ್ ನೋಡಬಹುದು ಎನ್ನುವ ಭಾವನೆ ಮಕ್ಕಳಲ್ಲಿ ಮೂಡುವಂತಾಗಬೇಕು. ಆದರೆ, ಪ್ರತಿಯೊಂದು ಕೆಲಸದ ನಡುವೆ ಮಕ್ಕಳು ಫೋನಿನಿಂದ ದೂರಾಗುತ್ತಾರೆ ಎನ್ನುವುದು ಪೋಷಕರಿಗೆ ಮುಖ್ಯವಾಗುತ್ತದೆ.

3. ಮಕ್ಕಳಿಗೆ ತಮ್ಮ ಪಾಲಿಗೆ ಅನಿಯಮಿತ ಫೋನ್ ಲಭ್ಯತೆಯಿದೆ ಎನ್ನುವ ಭಾವನೆ ಬರಬಾರದು. ಫೋನ್ ಬಳಸುವ ಮುನ್ನ ಆಯಾ ದಿನದ ಕೆಲಸಗಳನ್ನು ಮೊದಲು ಮಾಡಬೇಕು ಎನ್ನುವ ನಿಯಮ ಮೂಡುವುದು ಮುಖ್ಯ. ಇಂತಹ ಆದ್ಯತೆಯ ಭಾವವನ್ನು ಸಾಧ್ಯವಾದಷ್ಟೂ ಬೇಗ ಜಾರಿಗೊಳಿಸಬೇಕು. ನಮ್ಮ ಫೋನ್ ಸೌಲಭ್ಯವನ್ನು ನಾವು ಸಂಪಾದಿಸುತ್ತಿದ್ದೇವೆ ಎನ್ನುವ ಭಾವನೆ ಬಂದಾಗ ಮಕ್ಕಳು ಹೆಚ್ಚು ಜಾಗರೂಕರಾಗಿ ಅದನ್ನು ಬಳಸುತ್ತಾರೆ. ಆ ಸೌಲಭ್ಯ ಪುಗಸಟ್ಟೆಯಾಗಿ ದೊರೆಯುತ್ತಿದೆ ಎನ್ನುವ ಮನಃಸ್ಥಿತಿ ಇದ್ದರೆ, ಅದು ತಮ್ಮ ಅಲಿಖಿತ ಹಕ್ಕು ಎಂದೇ ಅವರು ಭಾವಿಸಬಹುದು.

4. ಅಂತರ್ಜಾಲ ಮತ್ತು ಮೊಬೈಲ್ ಫೋನುಗಳು ಎರಡಲುಗಿನ ಕತ್ತಿ. ಅವನ್ನು ಮಕ್ಕಳ ಜ್ಞಾನ ಮತ್ತು ತಾರ್ಕಿಕ ಶಕ್ತಿಯನ್ನು ಉದ್ದೀಪಿಸುವುದಕ್ಕೆ ಬಳಸಬಹುದು. ಕೆಲವು ವಿಡಿಯೋ ಆಟಗಳು ಮಕ್ಕಳ ಬುದ್ಧಿಶಕ್ತಿಗೆ ಸವಾಲು ನೀಡುತ್ತವೆ. ಇಂತಹ ಆಟಗಳು ಮಕ್ಕಳ ಮತ್ತು ಪೋಷಕರ ಅಗತ್ಯಗಳನ್ನು ಪೂರೈಸಬಲ್ಲವು. ತಮ್ಮ ಮಕ್ಕಳ ಮನಃಸ್ಥಿತಿಗೆ ಸೂಕ್ತವಾಗಬಲ್ಲ ಇಂತಹ ಆಟಗಳನ್ನು ಪತ್ತೆ ಮಾಡುವುದು ಪೋಷಕರ ಜವಾಬ್ದಾರಿ.

5. ಫೋನ್ ಬಳಕೆಯಲ್ಲಿ ಸಮಯದ ಶಿಸ್ತನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಮನೆಯ ಹಿರಿಯರ ಜೊತೆ ಮಕ್ಕಳು ನಿಯಮಿತ ಸಮಯವನ್ನು ಕಳೆಯುವುದು, ಊಟದ ವೇಳೆ ಫೋನ್ ಬಳಕೆಯನ್ನು ನಿಷಿದ್ಧಗೊಳಿಸುವುದು, ನಿದ್ರೆಗೆ ಎರಡು ಗಂಟೆಗಳ ಮುನ್ನ ಫೋನ್ ಬಳಸದಿರುವುದು, ಇಂತಹ ವಿಷಯದಲ್ಲಿ ಮಕ್ಕಳ ಹಠಕ್ಕೆ ಮಣಿಯದಿರುವುದು, ಮೊದಲಾದ ನಿಯಮಗಳ ಪಾಲನೆದಲ್ಲಿ ಪೋಷಕರ ಮುತ್ಸದ್ದಿತನ ನೆರವಾಗುತ್ತದೆ.

6. ಪೋಷಕರು ಎಷ್ಟೇ ಸಮಯದ ಒತ್ತಡದಲ್ಲಿದ್ದರೂ ಮಕ್ಕಳಿಗಾಗಿ ತಮ್ಮ ಬಿಡುವನ್ನು ಹೊಂದಾಣಿಸಿಕೊಳ್ಳುವುದು ಮುಖ್ಯ. ಮಕ್ಕಳ ಜೊತೆಗೆ ನಿತ್ಯ ಮಾತುಕತೆ, ಅವರ ಭಾವನೆಗಳಿಗೆ ಕಿವಿಯಾಗುವುದು, ಅವರೊಡನೆ ಕೇರಂ, ಚೆಸ್, ಸ್ಕ್ರಾಬಲ್ ಮೊದಲಾದ ಆಟಗಳನ್ನು ಆಡುವುದು, ಮಕ್ಕಳ ಆಸಕ್ತಿಗಳ ಕುರಿತಾದ ಚರ್ಚೆ ಮಾಡುವುದು, ಮೊದಲಾದುವು ಮಕ್ಕಳ ಫೋನ್ ಅವಲಂಬನೆಯನ್ನು ದೂರ ಮಾಡುತ್ತವೆ.

ರಜೆಯ ವೇಳೆಯಲ್ಲಷ್ಟೆ ಅಲ್ಲದೆ, ಮಕ್ಕಳನ್ನು ಫೋನ್ ಚಟದಿಂದ ದೂರಾಗಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದು. ಇದನ್ನು ಮಾಡದೇ ಕೇವಲ ಮಕ್ಕಳನ್ನು ದೂಷಿಸುವುದರಿಂದ ಸಮಸ್ಯೆ ಪರಿಹರಿಯುವುದಿಲ್ಲ ಎಂಬ ಮಹತ್ವದ ಒಳನೋಟ ಪೋಷಕರಿಗೆ ಬಹಳ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT