ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗಬೇಕಾದಾಗ ನಗಬೇಕು, ಅಳಬೇಕಾದಾಗ ಅಳಬೇಕು...

Published 21 ನವೆಂಬರ್ 2023, 0:21 IST
Last Updated 21 ನವೆಂಬರ್ 2023, 0:21 IST
ಅಕ್ಷರ ಗಾತ್ರ

ಸರಿಯಾಗಿ ಯೋಚಿಸಿ ನೋಡಿದರೆ ಹಲವು ಬಾರಿ ನಮ್ಮ ನೆಮ್ಮದಿ, ಸಮಾಧಾನಕ್ಕೆ ದೊಡ್ಡ ಅಡಚಣೆ ಒಡ್ಡುವವರು ನಾವಲ್ಲದೇ ಬೇರೆ ಯಾರೂ ಆಗಿರುವುದಿಲ್ಲ ಎನ್ನುವುದು ತಿಳಿಯುತ್ತದೆ. ‘ನಿಶ್ಚಿಂತೆಯಿಂದ ಸಂತೋಷವಾಗಿರುವುದೇ ತಪ್ಪೇನೋ’ ಎಂಬಂತೆ ಸದಾ ಚಿಂತೆ ಮಾಡುವುದಕ್ಕೆ ನಾವೇ ಕಾರಣಗಳನ್ನು ಹುಡುಕಿಕೊಳ್ಳುತ್ತೇವೆ, ಯಾಕೆ? ನಮಗೆ ಸಂತೋಷವಾಗಿರುವುದಕ್ಕೆ ಕಾರಣಗಳು ಬೇಕಾಗುತ್ತವೆಯಾ? ಎಲ್ಲವೂ ನಮಗೆ ಬೇಕಾದಂತೆ ಇದ್ದಾಗ ಮಾತ್ರ ನಾವು ಸಂತಸಪಡಬೇಕೆಂದು ನಮಗೆ ಹೇಳಿಕೊಟ್ಟವರಾರು? ವಾಸ್ತವಕ್ಕೆ ಸಂಬಂಧವೇ ಇಲ್ಲದಂತಹ ಚಿಂತೆಯಲ್ಲಿ ಕಳೆದುಹೋಗಿ, ಬೇಡದನ್ನೆಲ್ಲಾ ನೆನಪಿಸಿಕೊಂಡು, ಕಲ್ಪಿಸಿಕೊಂಡು, ಬದುಕು ಕೊಡುವ ಸಣ್ಣ ಸಣ್ಣ ಖುಷಿಗಳನ್ನೆಲ್ಲ ತಿರಸ್ಕರಿಸಿ, ಯಾವುದೋ ಹಿಂಜರಿಕೆಯಲ್ಲಿ ಬದುಕನ್ನು ಸಂಪೂರ್ಣವಾಗಿ ಆಸ್ವಾದಿಸದೇ, ನಮ್ಮನ್ನು ನಾವೇ ಬಂಧನದಲ್ಲಿರಿಸಿಕೊಂಡವರಂತೆ, ಸಂಭ್ರಮವಿಲ್ಲದೇ ಜೀವನವನ್ನು ಕಳೆಯುವ ಶಿಕ್ಷೆಯನ್ನು ಯಾಕೆ ನಮಗೆ ನಾವೇ ಕೊಟ್ಟುಕೊಳ್ಳಬೇಕು?

ಇದಕ್ಕೆ ಕಾರಣ ಬದುಕಿನ ಬಗೆಗೆ ನಮಗಿರುವ ನಿರೀಕ್ಷೆಗಳು. ಏರಿಳಿತಗಳಿಲ್ಲದ, ಅಡ್ಡಿ–ಆತಂಕಗಳಿಲ್ಲದ ಸುಗಮವಾದ ಹಾದಿಯಲ್ಲಿ ಜೀವನ ಸಾಗಬೇಕು. ಹಾಗೆಯೇ ನಮ್ಮ ಮನಸ್ಸು ಕೂಡ ಯಾವಾಗಲೂ ಒಂದೇ ಹದದಲ್ಲಿರಬೇಕು ಎನ್ನುವ ನಿರೀಕ್ಷೆ ಆಳದಲ್ಲೆಲ್ಲೋ ಇದ್ದೇ ಇರುತ್ತದೆ. ಹಾಗಾಗಿಯೇ ನಮ್ಮ ಎಣಿಕೆಯನ್ನು ಮೀರಿ ಏನಾದರೂ ನಡೆದಾಗ, ನಡೆದ ಘಟನೆ ಮತ್ತು ಅದರ ಪರಿಣಾಮ ಎಷ್ಟು ಮುಖ್ಯವೋ ಅಮುಖ್ಯವೋ ಎನ್ನುವುದನ್ನೆಲ್ಲಾ ಯೋಚಿಸದೆ, ಕೇವಲ ‘ನಮ್ಮ ಹಿಡಿತ ತಪ್ಪಿಹೋಯಿತಲ್ಲ’ ಎನ್ನುವುದನ್ನೇ ದೊಡ್ಡ ಅನಾಹುತ ನಡೆದುಹೋಯಿತೆಂಬಂತೆ ಕ್ಷೋಭೆಗೊಳಗಾಗುವುದನ್ನು ಎಲ್ಲರೂ ಒಂದಲ್ಲ ಒಂದು ಬಾರಿ ಅನುಭವಿಸಿಯೇ ಇರುತ್ತೇವೆ.

ಸಂತೋಷವಾಗಿರುವುದೆಂದರೆ ಸಮಸ್ಯೆಗಳಿಲ್ಲದೆ ತುಂಬಾ ಉತ್ಸಾಹದಿಂದ, ನಕ್ಕು ನಲಿಯುತ್ತಾ ಇರುವುದೆಂದು ಅರ್ಥಮಾಡಿಕೊಂಡರೆ ಸಂತೋಷವಾಗಿರುವ ಅವಕಾಶಗಳು ಸೀಮಿತವಾಗಿರುತ್ತವೆ. ಬದಲಾಗಿ ಸಂತೋಷವಾಗಿರುವುದೆಂದರೆ ಬಂದದ್ದನ್ನು ಎದೆಗುಂದದೆ ಸ್ವೀಕರಿಸಿ, ಕಷ್ಟಗಳನ್ನು ನೀಗಿಸಿಕೊಳ್ಳುವ ಹಾದಿಯಲ್ಲಿ ಪರಿಪಕ್ವಗೊಳ್ಳುತ್ತಹೋಗುವುದು ಎಂಬಂತೆ ಅರ್ಥೈಸಿಕೊಂಡರೆ ಅನೇಕ ರೀತಿಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವುದು ಸಾಧ್ಯ. ಉದಾಹರಣೆಗೆ, ಸದಾ ಆರೋಗ್ಯವಾಗಿರಬೇಕು ನಿಜ. ಆದರೆ ಅನಾರೋಗ್ಯವಾದಾಗ ನಮ್ಮ ಸಹಜ ಸಂತೋಷವನ್ನು ಕಳೆದುಕೊಂಡು ದುಃಖಿತರಾಗಿಯೇ ಇರಬೇಕಾಗಿಲ್ಲ. ಅನಾರೋಗ್ಯವನ್ನೂ ಸಹಿಸುವ ಶಕ್ತಿ, ಆ ಕಷ್ಟದಲ್ಲೂ ಧೈರ್ಯಗೆಡದ ಮನೋಭಾವ, ಆತ್ಮೀಯರ ಆರೈಕೆ ಎಲ್ಲವೂ ಇರುವುದನ್ನು ಮನಗಂಡು ಮತ್ತೆ ಆರೋಗ್ಯದೆಡೆಗೆ ಪ್ರಜ್ಞಾಪೂರ್ವಕ ಪಯಣವನ್ನು ಕೈಗೊಳ್ಳುವುದು ಕೂಡ ಸಂತಸ ತರುವ ವಿಷಯವೇ ಹೌದು.

ಕಷ್ಟಗಳೇ ಇಲ್ಲದಿರುವುದು ಸಂತೋಷವಲ್ಲ; ಕಷ್ಟಗಳೇನೇ ಇದ್ದರೂ ಅವುಗಳನ್ನೆಲ್ಲಾ ಎದುರಿಸುವ ಸ್ಥೈರ್ಯ; ಅದರಿಂದ ಹೊರಗೆ ಬರುವ ಬಗೆಗೆ ಭರವಸೆ; ಮತ್ತು ಕಷ್ಟಗಳು ನೀಡುವ ತಿಳಿವಳಿಕೆ ಬದುಕು ನಮಗೆ ಕೊಡುವ ಅಮೂಲ್ಯ ಉಡುಗೊರೆ ಎನ್ನುವ ಸಕಾರಾತ್ಮಕ ಚಿಂತನೆ ಮನಸ್ಸಿನ ಉಲ್ಲಾಸಕ್ಕೆ ಕಾರಣವಾದೀತು. ಆಗಸದಲ್ಲಿ ಮೋಡಗಳು ಸೇರುತ್ತವೆ, ಚದುರುತ್ತವೆ. ಅದರಿಂದ ಆಗಸಕ್ಕೇನೂ ಗಾಸಿಯಾಗುವುದಿಲ್ಲ. ನಮ್ಮ ಮನಸ್ಸನ್ನು, ನೆಮ್ಮದಿಯನ್ನು ಹಾಗೆ ಆಕಾಶದಂತೆ ಇಟ್ಟುಕೊಳ್ಳುವ ಕಡೆಗೆ ನಮ್ಮ ಪ್ರಯತ್ನವಿರಬೇಕು.

ಬಂದುಹೋಗುವ ಎಲ್ಲ ಏರಿಳಿತಗಳೂ ಆ ಕ್ಷಣಕ್ಕೆ ಮಾತ್ರ, ಅದೇ ನಮ್ಮನ್ನು ಡಿಫೈನ್ ಮಾಡಬೇಕಾಗಿಲ್ಲ. ಖುಷಿಯಾಗಿರುವಾಗ ನಕ್ಕು ಆನಂದವನ್ನು ಪಡಬಹುದು, ದುಃಖವಾದಾಗ ಅತ್ತು ಸಮಾಧಾನ ಹೊಂದಬಹುದು, ಚಿಂತೆ ಆವರಿಸಿದಾಗ ಕೆಲಕಾಲ ಚಿಂತಿಸುತ್ತಾ ಕುಳಿತಿರಬಹುದು. ಸಿಟ್ಟು, ಕೋಪ, ಒಂಟಿತನ, ಆಲಸ್ಯ, ಬೇಸರ, ಭಯ, ಮೋಹ – ಎಲ್ಲವನ್ನೂ ಅದು ಒದಗಿದಾಗ ಅನುಭವಿಸಿಯೇ ತೀರಬೇಕು. ನಾವೇನನ್ನು ಅನುಭವಿಸುವುದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೋ ಅದು ನಮ್ಮನ್ನು ಇನ್ನೂ ಬಿಗಿಯಾಗಿ ಹಿಡಿದುಕೊಳ್ಳತೊಡಗುತ್ತದೆ. ಅದೇ ನಮಗೆ ಎಲ್ಲೆಡೆಯೂ ಅನೇಕ ರೂಪಗಳಲ್ಲಿ ಎದುರಾಗುತ್ತದೆ. ಹಾಗೆ ಯಾವುದರಿಂದಲೂ ತಪ್ಪಿಸಿಕೊಂಡು ಓಡಿಹೋಗುವುದು ಸಾಧ್ಯವಿಲ್ಲ; ಅನುಭವಿಸುತ್ತಲೇ ಅದರ ನಿಜವನ್ನು ಅರಿಯಬೇಕು.

ಆದರೆ ‘ನಾನು ಕೋಪಿಷ್ಠ’, ‘ನಾನು ಭಯಗ್ರಸ್ತೆ’, ‘ನನಗೆ ಸ್ವತಂತ್ರವಾಗಿ ಏನೂ ಮಾಡಲಾಗುವುದಿಲ್ಲ’ – ಹೀಗೆ ನಮ್ಮ ಬಗ್ಗೆ ನಾವೇ ತೀರ್ಪುಗಳನ್ನು ಕೊಟ್ಟುಕೊಳ್ಳುತ್ತಾ, ನಾವೇನನ್ನು ಅನುಭವಿಸುತ್ತಿರುತ್ತೇವೋ ಆ ಭಾವವೇ ನನ್ನ ನಿಜ ಸ್ವರೂಪ ಎಂದುಕೊಳ್ಳುತ್ತಾ ಅದಕ್ಕೇ ಅಂಟಿಕೊಂಡು ಅದರಾಚೆಗೆ ಬರುವ ಪ್ರಯತ್ನವನ್ನೇ ಮಾಡದಿರುವುದು, ತೆರೆದ ಮನಸ್ಸಿನಿಂದ ಬದುಕನ್ನು ಸ್ವೀಕರಿಸದಿರುವುದು ನಮ್ಮನ್ನು ಎಲ್ಲ ರೀತಿಯಲ್ಲೂ ಕುಗ್ಗಿಸುತ್ತದೆ.

ಯಾವ ಸ್ವಭಾವಕ್ಕೂ ಅಂಟಿಕೊಂಡಿರುವುದು ಅನಿವಾರ್ಯವೇನಲ್ಲ; ನಮಗೆ ಹಾಗನಿಸುತ್ತಿರುತ್ತದೆ ಅಷ್ಟೇ. ಕೋಪಿಷ್ಠರೂ ಶಾಂತವಾಗಿರಬಹುದು, ಭಯಗ್ರಸ್ತರೂ ಧೈರ್ಯವನ್ನು ತಾಳಬಹುದು. ಒಂಟಿತನದಿಂದ ನರಳುವವರೂ ಸದಾ ‘ನನ್ನನ್ನು ಅರ್ಥಮಾಡಿಕೊಳ್ಳುವವರಿಲ್ಲ’ ಎನ್ನುವ ಕೊರಗಿನಲ್ಲೇ ಇರಬೇಕಾಗಿಲ್ಲ; ತಾತ್ಕಾಲಿಕವಾಗಿಯಾದರೂ ಅದರಿಂದ ಹೊರಬಂದು ಮುಕ್ತವಾಗಿ ಮಾತಾಡಿ ಹಗುರಾಗಬಹುದು. ಹೀಗೆ ನಮ್ಮನ್ನು ಯಾವುದು ಕಾಡಿಸುತ್ತಿದೆಯೋ ಅದನ್ನು ಮನಸಾರೆ ಸ್ವೀಕರಿಸುವುದು ಒಂದು ರೀತಿಯಾದರೆ, ಅದರಿಂದ ಹೊರಬರುವುದೂ ಸಾಧ್ಯ ಎನ್ನುವ ನಂಬಿಕೆ ಹೊಂದುವುದು ಇನ್ನೊಂದು ರೀತಿ. ಎರಡೂ ನಾವು ಸಮಚಿತ್ತವಾಗಿರುವುದಕ್ಕೆ ಪೂರಕ.

ಇಷ್ಟೆಲ್ಲಾ ಪರಿಶ್ರಮ ಪಟ್ಟು ಬಹಳ ಕಾಲ ಏನನ್ನಾದರೂ ಅನುಭವಿಸಿ ಅದರಿಂದ ಹೊರಬಂದಿದ್ದೇವೆ ಎಂದುಕೊಳ್ಳುತ್ತಿರುವಾಗಲೇ ನಮ್ಮ ನಂಬಿಕೆಯನ್ನು ಸುಳ್ಳು ಮಾಡುವ ಅನುಭವಗಳಾಗಬಹುದು. ಉದಾಹರಣೆಗೆ, ಆತಂಕವನ್ನು ನಿರ್ವಹಿಸುವ ಉಪಾಯಗಳನ್ನು ಕಂಡುಕೊಂಡು ಯಶಸ್ವಿಯಾಗಿದ್ದೇನೆ ಎಂದುಕೊಳ್ಳುತ್ತಿರುವಾಗಲೇ ಸಣ್ಣ ವಿಷಯಕ್ಕೆ ಅತಿಯಾಗಿ ಆತಂಕಪಟ್ಟುಕೊಂಡು ಅತಿರೇಕವಾಗಿ ವರ್ತಿಸಿರಬಹುದು. ಆಗ, ಮಾಡಿದ ಪ್ರಯತ್ನವೆಲ್ಲಾ ನಿಷ್ಫಲವಾಯಿತಲ್ಲಾ ಎನ್ನುವ ದುಃಖದಿಂದ ಕುಸಿದುಹೋಗಿ ನಮ್ಮ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳುವ ಬದಲು ‘ಮನಸ್ಸು, ದೇಹ, ಭಾವನೆ, ಸಂಬಂಧಗಳು ಎಲ್ಲವೂ ಏರಿಳಿತಕ್ಕೊಳಗಾಗುವುದು ಸಹಜ. ಅವು ಒಮ್ಮೆ ಪರ್ವತಾರೋಹಣ ಮಾಡಿ ಶಿಖರವನ್ನು ತಲುಪಿ ಅಲ್ಲಿಗೆ ನಮ್ಮ ಸಾಧನೆ ಮುಗಿಯಿತು ಎಂದುಕೊಳ್ಳುವಂಥದ್ದಲ್ಲ; ಬದಲಾಗಿ ಪರ್ವತದ ತುತ್ತತುದಿ ತಲುಪಿದ್ದರೂ ಕ್ಷಣಾರ್ಧದಲ್ಲಿ ಎಲ್ಲಿಂದ ಶುರುಮಾಡಿದ್ದೆವೋ ಅಲ್ಲಿಗೇ ಬಂದುಬೀಳಬಹುದು. ‘ಇದು ಸೋಲಲ್ಲ, ಇದು ಸಹಜ, ಇದು ಎಲ್ಲೆಲ್ಲೂ ಎಲ್ಲರಿಗೂ ಆಗುವಂಥದ್ದು’ ಎಂದು ತಿಳಿಯುವುದು ವಿವೇಕ.

‘ಕೆಳಗೆ ಬಿದ್ದ ಅನುಭವವು ನೀಡಿದ ತಿಳಿವಳಿಕೆಯಿಂದ ಮತ್ತೆ ಮೇಲೇರುತ್ತಿರುವೆ. ಇದು ಪುನರಾವರ್ತನೆಯಲ್ಲ ಹೊಸ ಅನುಭವ’ ಎನ್ನುವುದನ್ನು ಬಿದ್ದಮೇಲೆ ಎದ್ದು ಮತ್ತೆ ಪರ್ವತವನ್ನು ಏರಲು ಹೊರಟಾಗ ನೆನಪಿಟ್ಟುಕೊಳ್ಳಬೇಕು. ಒಟ್ಟಿನಲ್ಲಿ ಯಾವುದರಿಂದಲೂ ನಂಬಿಕೆ, ಆತ್ಮವಿಶ್ವಾಸ, ಭರವಸೆ, ಕಷ್ಟವನ್ನು ಸಹಿಸುವ ತಾಳ್ಮೆಯನ್ನು ಕಳೆದುಕೊಳ್ಳಬೇಕಾಗಿಲ್ಲ, ಏನೇ ಬಂದರೂ ಏನನ್ನು ಅನುಭವಿಸುತ್ತಿದ್ದರೂ ಅದ್ಯಾವುದೂ ನಮ್ಮ ನಿತ್ಯನಿರಂತರ ನೆಮ್ಮದಿಗೆ ಭಂಗ ತರಬೇಕಾಗಿಲ್ಲ ಎನ್ನುವ ನಂಬಿಕೆಯುಂಟಾದಾಗ ನಾವು ಏಳುಬೀಳುಗಳಿಗೆ ಭಯಪಡುವುದಿಲ್ಲ. ಸಮಚಿತ್ತವನ್ನು ಕಂಡುಕೊಂಡಾಗ ಬೀಳುವ ಭಯವಿಲ್ಲದೆ ಹಾರಾಡುವ ಹಕ್ಕಿಯಾಗಬಹುದು, ಪ್ರತಿಕ್ಷಣವನ್ನೂ ಹೊಸತೆಂಬಂತೆ ಆಸ್ವಾದಿಸಬಹುದು, ಸುಖ-ದುಃಖ, ಅಳು-ನಗು ಎಲ್ಲವನ್ನೂ ಅನುಭವಿಸುತ್ತಾ ಜೀವನವನ್ನು ಸಮೃದ್ಧಿಯಾಗಿಸಿಕೊಳ್ಳುತ್ತ ಸಂಭ್ರಮಪಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT