ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ–ಕುಶಲ | ಮಕ್ಕಳೊಂದಿಗೆ ಬೆರೆಯಿರಿ ಬೆಳೆಯಿರಿ

Published 23 ಏಪ್ರಿಲ್ 2024, 0:27 IST
Last Updated 23 ಏಪ್ರಿಲ್ 2024, 0:27 IST
ಅಕ್ಷರ ಗಾತ್ರ

ನಾವು ಸಾಮಾನ್ಯವಾಗಿ ಮಕ್ಕಳಿಗೆ ಶಾಲೆಯಿಂದ ಸಿಗುವ ಬೇಸಿಗೆ ರಜೆಯ ಸಮಯವನ್ನು ಮಕ್ಕಳು ಶಾಲೆಯಲ್ಲಿ ಕಲಿಯಲಾಗದ್ದನ್ನು ಕಲಿಸಲೆಂದೋ ಅಥವಾ ಅವರ ಹವ್ಯಾಸಗಳನ್ನು ಬೆಳೆಸಲೆಂದೋ ಉಪಯೋಗಿಸಬೇಕೆಂದು ಯೋಚಿಸುತ್ತೇವೆ. ಮಕ್ಕಳು ಕಲಿಯುವುದು, ಪೋಷಕರು ಕಲಿಸುವುದು ಎಂಬ ಸಿದ್ಧಸೂತ್ರವನ್ನು ಅನುಸರಿಸಲು ಮುಂದಾಗುತ್ತೇವೆ. ಆದರೆ ಪೋಷಕರೂ ಪೋಷಕತ್ವ ಎನ್ನುವ ಕಲೆಯನ್ನು / ವಿಜ್ಞಾನವನ್ನು ಪ್ರಾಯೋಗಿಕವಾಗಿ ಕಲಿಯುತ್ತಿರುವ ವಿದ್ಯಾರ್ಥಿಗಳೇ ಹೌದು ಎನ್ನುವುದನ್ನು ಮರೆತೇಬಿಡುತ್ತೇವೆ. ಈ ಬೇಸಿಗೆ ರಜೆಯನ್ನು, ಎಂದಿನ ಬೇಸಿಗೆ ರಜೆಯ ಕಾರ್ಯಕ್ರಮಗಳಾದ ಪ್ರವಾಸ, ಬೇಸಿಗೆ ಶಿಬಿರಗಳು ಮುಂತಾದವನ್ನು ಬದಿಗಿಟ್ಟು ಸ್ವಲ್ಪ ವಿನೂತನವಾಗಿ ಪೋಷಕರಾಗಿ ನಾವೇನು ಕಲಿತಿದ್ದೇವೆ ಅದು ನಮ್ಮ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಉಂಟುಮಾಡುತ್ತಿದೆ ಎನ್ನುವುದನ್ನು ಪರಾಮರ್ಶಿಸಲು ಉಪಯೋಗಿಸಬಹುದು.

ಇಂದು ಹಿಂದೆಂದಿಗಿಂತಲೂ ಪೋಷಕತ್ವದ ಬಗೆಗಿನ ಅರಿವು ಹೆಚ್ಚಾಗುತ್ತಿದೆ. ಈಗ ಪೋಷಕರಾಗಿರುವವರು ತಮ್ಮ ಬಾಲ್ಯದಲ್ಲಿ ತಮ್ಮೊಟ್ಟಿಗೆ ನಡೆದ್ದದ್ದೇನು ಎನ್ನುವ ವಿಮರ್ಶೆಗೆ ಹೆಚ್ಚು ಹೆಚ್ಚು ತೆರೆದುಕೊಳ್ಳುತ್ತಾ, ತಮ್ಮ ಮತ್ತು ತಮ್ಮ ಪೋಷಕರ ನಡುವಿನ ಸಂಘರ್ಷಗಳನ್ನು ಹೊಸ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಆರ್ಥಿಕ, ಸಾಮಾಜಿಕ, ತಾಂತ್ರಿಕ ಬದಲಾವಣೆಗಳೊಟ್ಟಿಗೆ ಪೋಷಕತ್ವದ ಪರಿಕಲ್ಪನೆಯೂ, ಕುಟುಂಬದ ರಚನೆ ಮತ್ತು ಸ್ವರೂಪವೂ ಬದಲಾಗುತ್ತಿದೆ. ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧವನ್ನು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಕಂಡುಕೊಳ್ಳುವುದೂ ಮುಖ್ಯವಾಗುತ್ತದೆ.

ಮಕ್ಕಳನ್ನು ಬೆಳೆಸುವ ರೀತಿ, ಮಕ್ಕಳ ಆಂತರಿಕ ಬೆಳವಣಿಗೆ ಇವುಗಳನ್ನು ಗಮನದಲ್ಲಿಟ್ಟುಕೊಂಡು ಸ್ವಲ್ಪ ಪ್ರಯೋಗಗಳನ್ನು ಮಾಡಿ ಕೆಲವು ಮಾರ್ಪಾಟುಗಳನ್ನು ಮಾಡಿಕೊಳ್ಳಲು ಈ ಬೇಸಿಗೆ ರಜೆ ಸಕಾಲ. ಅದಕ್ಕೆ ಪೂರಕವಾಗಬಹುದಾದ ಕೆಲವು ವಿಷಯಗಳನ್ನು ಚರ್ಚಿಸೋಣ.

  • ಎಲ್ಲಕ್ಕಿಂತಲೂ ಮೊದಲು ಮಕ್ಕಳೊಂದಿಗೆ ನಕ್ಕು ನಲಿಯುತ್ತಾ, ಮಕ್ಕಳ ಮನಸ್ಸನ್ನು ಅರಳಿಸುತ್ತಾ ಅವರೊಂದಿಗೆ ಆತ್ಮೀಯತೆ ಸಾಧಿಸುವುದು ಮುಖ್ಯ. ಮಕ್ಕಳಿಗೆ ಇಷ್ಟವಿಲ್ಲದ ಚಟುವಟಿಕೆಗಳನ್ನು ಮಾಡುವಂತೆ ಅವರನ್ನು ಒತ್ತಾಯಿಸುವುದನ್ನು ಬಿಟ್ಟು, ಅವರ ಇಷ್ಟದ ಕೆಲಸದಲ್ಲಿ ನಾವು ತೊಡಗಬಹುದೇ ಎಂದು ಅವರನ್ನು ಕೇಳಬಾರದೇಕೆ? ಮಕ್ಕಳ ಜೊತೆ ಕೂಡಿ ಮಾಡುವ ಚಟುವಟಿಕೆಯಲ್ಲಿ ಅವರನ್ನು ಗದರಿಸುವುದು, ತಮ್ಮ ಆದೇಶದಂತೆಯೇ ನಡೆಯಬೇಕು ಎನ್ನುವುದು -ವಇಂಥವನ್ನೆಲ್ಲಾ ಮಾಡದೇ, ಮಕ್ಕಳ ಅಭಿಪ್ರಾಯಕ್ಕೆ ಬೆಲೆಕೊಡುವುದನ್ನು ಅಭ್ಯಾಸಮಾಡಿಕೊಳ್ಳಬಹುದು. ತನ್ನ ಮಾತಿಗೆ, ಆಲೋಚನೆಗೆ ಅವಕಾಶವಿದೆ, ಮೌಲ್ಯವೂ ಇದೆ ಎಂದು ನಂಬುವ ಮಕ್ಕಳಲ್ಲಿ ಆತ್ಮಗೌರವವೂ ಹೆಚ್ಚಿರುತ್ತದೆ.

  • ಮಕ್ಕಳು ಮತ್ತು ಪೋಷಕರು ಸ್ನೇಹಿತರಂತೆ ಇರಬೇಕೆನ್ನುವುದು ನಿಜ. ಆದರೆ ಸ್ನೇಹಿತರ ನಡುವೆಯೂ ಗಡಿಗಳು (boundaries) ಇರಲೇಬೇಕಲ್ಲವೇ? ಪೋಷಕರು ವಯಸ್ಕರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಮಕ್ಕಳಿಗೆ ಪೋಷಕರ ಜವಾಬ್ದಾರಿಯಿರುವುದಿಲ್ಲ. ಮಕ್ಕಳನ್ನು ತಕ್ಕಮಟ್ಟಿಗೆ ಪೋಷಕರು ನಿರ್ದೇಶಿಸಬೇಕು, ಮಕ್ಕಳು ಹೇಳಿದಂತೆಲ್ಲಾ ಕುಣಿಯಲಾಗುವುದಿಲ್ಲ. ಹಾಗೆಯೇ ಮಕ್ಕಳಿಗೂ ಸ್ವಾತಂತ್ರ್ಯ ಬೇಕು. ಮಕ್ಕಳು ಮತ್ತು ಪೋಷಕರ ನಡುವಿನ ಗಡಿಗಳು ಹೀಗೆ ದಿನದಿನವೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಬದುಕಿನಲ್ಲಿ ಪ್ರಾಧಾನ್ಯವನ್ನು ಪಡೆದುಕೊಳ್ಳುತ್ತಿರುತ್ತದೆ. ಈ ಗಡಿಗಳನ್ನು ಸೃಜಿಸುವ, ಮೀರುವ, ಮೀರದೇ ಇರುವ ಎಲ್ಲ ಪ್ರಯತ್ನಗಳ ಬಗೆಗೂ ಪೋಷಕರು ಆಲೋಚಿಸಬೇಕು.

  • ಪೋಷಕರು ತಮ್ಮ ಜೀವನದ ಎಲ್ಲಾ ವಿವರಗಳನ್ನು ಮಕ್ಕಳ ಮುಂದೆ ತೆರೆದಿಡಲಾಗುವುದಿಲ್ಲ. ಆದರೆ ತಮ್ಮ ನೋವು, ಸಂಕಟ, ಸಂತೋಷ, ನೆನಪು ಯಾವುದನ್ನೂ ತೆರೆದಿಡದೇ ಇದ್ದರೆ ಮಕ್ಕಳ ಹೃದಯಕ್ಕೆ ಪೋಷಕರು ಹತ್ತಿರವಾಗುವುದು ಹೇಗೆ? ಹಾಗೆಯೇ ಮಕ್ಕಳು ತಂದೆ–ತಾಯಿಯ ಲೋಕದಲ್ಲೇ ಕಳೆದುಹೋಗದೆ ತಮ್ಮ ಪ್ರತ್ಯೇಕತೆಯನ್ನು ಕಂಡುಕೊಳ್ಳಬೇಕೆಂಬ ಎಚ್ಚರವೂ ಅಗತ್ಯ. ಪೋಷಕರು ತಮ್ಮ ಮಿತಿಗಳನ್ನರಿತು, ಮಕ್ಕಳ ವಯಸ್ಸು, ತಿಳಿವಳಿಕೆ ಇವುಗಳನ್ನು ಆಧರಿಸಿ ತಕ್ಕಮಟ್ಟಿಗಿನ ‘ತಮ್ಮನ್ನು ತಾವು ತೆರೆದಿಟ್ಟುಕೊಳ್ಳುವ ಪ್ರಯತ್ನವನ್ನು’ (self disclosure)) ಮಾಡುತ್ತಾ ಮಕ್ಕಳೂ ಅವರ ಅಂತರಾಳದ ಮಾತುಗಳನ್ನಾಡಲು ಪ್ರೋತ್ಸಾಹಿಸಬಹುದು. ಇಷ್ಟವಿದ್ದರೆ ಈ ಮಾತುಕತೆಗಳನ್ನೆಲ್ಲ ಒಂದು ‘ಜರ್ನಲ್‌’ನಲ್ಲಿಯೂ ಬರೆದಿಡಬಹುದು. ಮಕ್ಕಳ ಆಸೆ, ಕನಸುಗಳು, ಸಣ್ಣ ಪುಟ್ಟ ರಹಸ್ಯಗಳು ಎಲ್ಲವನ್ನೂ ಪ್ರೀತಿಯಿಂದ ಅರಿಯುತ್ತಾ ಸಾಗುವ ಪ್ರಯತ್ನವು ಪೋಷಕರಿಗೂ ಚೇತೋಹಾರಿಯಾಗಿರುತ್ತದೆ.

  • ನಾವೇನೇ ಕೆಲಸ ಮಾಡಿದರೂ ಅದಕ್ಕೊಂದು ‘feedback’  ಎನ್ನುವುದು ಇರುತ್ತದೆ. ಹಾಗಿದ್ದ ಮೇಲೆ ಪೋಷಕತ್ವದ ಬಗೆಗೆ ಒಂದು‘feedback’  ಬೇಡವೇ? ಮಕ್ಕಳೇ ನಾವು ಪೋಷಕರಾಗಿ ಹೇಗಿದ್ದೇವೆ ಎನ್ನುವುದನ್ನು ನಮಗೆ ತಿಳಿಸುತ್ತಲೇ ಇರುತ್ತಾರೆ, ಅವರ ಭಾಷೆಯನ್ನು ತಿಳಿಯುವ ಚಾತುರ್ಯ ನಮಗಿರಬೇಕಷ್ಟೇ. ಮಕ್ಕಳ ಜೊತೆ ಎಲ್ಲವನ್ನೂ ಚರ್ಚಿಸಿ ತಿಳಿಯುವುದು ಕಷ್ಟ, ಏಕೆಂದರೆ ಇನ್ನೂ ಬೆಳವಣಿಗೆಯ ಹಂತಗಳನ್ನು ದಾಟುತ್ತಿರುವ ಮಕ್ಕಳು ತಮ್ಮ ಭಾವನೆಗಳನ್ನು, ಅನಿಸಿಕೆಗಳನ್ನು ಸ್ಪಷ್ಟವಾದ ಮಾತುಗಳಲ್ಲಿ ತಿಳಿಸುವುದು ಅಸಾಧ್ಯ. ಅಷ್ಟೇ ಅಲ್ಲದೆ, ಮಕ್ಕಳಿಗೆ ಭದ್ರತೆಯ ಭಾವವಿಲ್ಲದಾಗ ತಮಗೇನು ಬೇಕು ಎನ್ನುವುದೇ ಗೊತ್ತಾಗುವುದಿಲ್ಲ. ಮಕ್ಕಳ ಭಾವನಾತ್ಮಕ ಅವಶ್ಯಕತೆಗಳನ್ನು ಪೋಷಕರೇ ಗುರುತಿಸಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಪೋಷಕರು ತಮ್ಮ ದುಃಖ, ನೋವು, ಕೀಳರಿಮೆ, ಅವಮಾನಗಳನ್ನು ನೀಗಿಸಿಕೊಳ್ಳುವ ಪ್ರಯತ್ನ ಮಾಡದಿದ್ದಾಗ, ಮಕ್ಕಳು ಏನು ಕೇಳುತ್ತಿದ್ದಾರೆ, ಅವರ ನಿರೀಕ್ಷೆಗಳು ಏನು ಎನ್ನುವುದೇ ಪೋಷಕರಿಗೆ ಅರ್ಥವಾಗುವುದಿಲ್ಲ. ನಾವೇ ನಮ್ಮ ಆಲೋಚನೆಗಳಿಂದ ಕಟ್ಟಿಕೊಂಡ ಕಾರಾಗೃಹದಿಂದ ಹೊರಬಂದು ನನ್ನ ಮಗು ನಿಜವಾಗಿಯೂ ಯಾರು? ಅದಕ್ಕೆ ಅನಿಸುತ್ತಿರುವುದೇನು, ಬೇಕಾದ್ದೇನು, ಬೇಡದ್ದೇನು? ಎಂದು ತಿಳಿಯಲು ಹಲವು ವರ್ಷಗಳೇ ಬೇಕು. ಈ ಪ್ರಕ್ರಿಯೆಯಲ್ಲಿ ವಿಶ್ವಾಸವನ್ನು, ತಾಳ್ಮೆಯನ್ನು ಇರಿಸಿಕೊಂಡಾಗ ಮಾತ್ರ ಮಕ್ಕಳ ಭಾಷೆ ಮತ್ತು ಮನಸ್ಸು ಅರ್ಥವಾಗುತ್ತದೆ. ಬೇಸಿಗೆ ರಜೆಯ ಈ ಸಮಯದಲ್ಲಿ ಇಡೀ ದಿನ ಮನೆಯಲ್ಲೇ ಇರುವ ಮಗುವನ್ನು ನಿಧಾನವಾಗಿ, ಸಮಾಧಾನವಾಗಿ ಮಾತನಾಡಿಸುತ್ತಾ, ಅದರ ಕಣ್ಣಿನಲ್ಲಿ ಪ್ರಪಂಚ ಹೇಗೆ ಕಾಣುತ್ತಿದೆ ಎನ್ನುವುದನ್ನು ಕುತೂಹಲದಿಂದ ಗಮನಿಸುವುದನ್ನು ಅಭ್ಯಾಸಮಾಡಿಕೊಳ್ಳಬಹುದು.

  • ಮಕ್ಕಳೊಂದಿಗೆ ಮಾತನಾಡುವಾಗ ನನ್ನ ದೇಹಭಾಷೆ, ಹಾವಭಾವ, ದನಿ, ಧಾಟಿ ಎಲ್ಲವೂ ಮಕ್ಕಳ ಮೇಲಿನ ಪ್ರೀತಿ, ಅಭಿಮಾನ, ಗೌರವಗಳನ್ನು ಪ್ರತಿಬಿಂಬಿಸುವಂತೆಯೇ ನೋಡಿಕೊಳ್ಳುವೆ ಎನ್ನುವ ‘ಛಾಲೆಂಜ್’ ಅನ್ನು ಪೋಷಕರು ತಮಗೆ ತಾವೇ ಕೊಟ್ಟುಕೊಳ್ಳಬಹುದು.

  • ಮಾನಸಿಕ ಆರೋಗ್ಯದ ಬಗೆಗೆ ಇತ್ತೀಚೆಗೆ ಜಾಗೃತಿ ಹೆಚ್ಚುತ್ತಿದೆ. ಜಾಗೃತಿಯ ಈ ಅಲೆಯಲ್ಲಿ ಮಕ್ಕಳನ್ನೂ (ಅವರ ತಿಳಿವಳಿಕೆಯ ಮಿತಿಯಲ್ಲಿ) ತೊಡಗಿಸುವುದು ಕ್ಷೇಮ. ಮಾನಸಿಕ ಆರೋಗ್ಯದ ಬಗೆಗೆ ಮಕ್ಕಳಿಗೆ ಬೇಕಾದ ಪ್ರಾಥಮಿಕಗಳನ್ನು ತಿಳಿಸಿಕೊಡುವ ಕಾರ್ಯಕ್ರಮಗಳಾದ ಭಾವನೆಗಳಿಗೆ ಭಾಷೆ ನೀಡುವ, ಅಭಿನಯಿಸಿ ತೋರಿಸುವ ಚಟುವಟಿಕೆಗಳು; ಕಲೆಯ ಮೂಲಕ, ಕಥೆಯ ಮೂಲಕ ಜೀವನದ ವಿವಿಧ ಸಂದರ್ಭಗಳನ್ನು ಗ್ರಹಿಸಿ ಅದರ ಬಗೆಗೆ ಮಾತನಾಡುವುದು; ಮಗುವಿಗೆ ಕ್ಲಿಷ್ಟ ಎನಿಸಿದ ಅಥವಾ ನೋವು ತಂದ ಘಟನೆಗಳ ಬಗೆಗೆ ತನ್ನ ಅನಿಸಿಕೆಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡುವುದು - ಇಂತಹ ಮಕ್ಕಳನ್ನು ಒಳಗಿನಿಂದ ಗಟ್ಟಿಗೊಳಿಸುವ ಕೆಲಸ ಮಾಡಲು ಶಾಲೆಯ ಅವಸರವಿರದ ಬೇಸಿಗೆ ರಜೆಯ ಆರಾಮದಾಯಕ ಸಮಯವನ್ನು ಉಪಯೋಗಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT