ಗುರುವಾರ , ಜೂನ್ 24, 2021
22 °C

ಕೊರೊನಾ ತಿಳಿಯೋಣ: ‘ಮನೋಬಲ ಕಾಪಾಡಿಕೊಂಡರೆ ಗೆದ್ದು ಬಂದಂತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೋವಿಡ್‌ ದೇಹವನ್ನು ಕಾಡುವುದರ ಜತೆಯಲ್ಲೇ ತೀವ್ರವಾದ ಮಾನಸಿಕ ತಳಮಳ ಸೃಷ್ಟಿಸುತ್ತದೆ. ಕೋವಿಡ್‌ನ ಪರಿಣಾಮಗಳನ್ನು ತಗ್ಗಿಸುವ ಚಿಕಿತ್ಸೆಯ ಭಾಗವಾಗಿ ಮನೋಸ್ಥೈರ್ಯ ಹೆಚ್ಚಿಸುವ ಕಡೆಗೂ ಗಮನ ನೀಡಿದರೆ ಆಮ್ಲಜನಕದ ಪ್ರಮಾಣದಲ್ಲಿ ಕುಸಿತ ಆಗದಂತೆ ತಡೆಯಲು ಸಾಧ್ಯ’

‘ಕಾರ್ಯನಿಮಿತ್ತ ಹೊರಗೆ ಓಡಾಡುತ್ತಿದ್ದೆ. ಏಪ್ರಿಲ್‌ ಮೂರನೇ ವಾರದಲ್ಲಿ ಒಂದು ದಿನ ಮೈ ಕೈ ನೋವು ಕಾಣಿಸಿಕೊಂಡಿತು. ತಕ್ಷಣವೇ ಮನೆಯಲ್ಲೇ ಪ್ರತ್ಯೇಕವಾಸ ಆರಂಭಿಸಿದೆ. ಅದೇ ದಿನ ಸಂಜೆ ಕೋವಿಡ್‌ ಪರೀಕ್ಷೆಗಾಗಿ ಗಂಟಲು ಮತ್ತು ಮೂಗಿನ ದ್ರವದ ಮಾದರಿ ನೀಡಿ ಬಂದಿದ್ದೆ. ಒಂದು ದಿನದ ಬಳಿಕ ವರದಿ ಬಂದಾಗ ಸೋಂಕು ದೃಢಪಟ್ಟಿತ್ತು. ಅಷ್ಟರಲ್ಲಾಗಲೇ ಅತಿಯಾದ ಜ್ವರ ಆವರಿಸಿಕೊಂಡಿತ್ತು’

‘ಕೋವಿಡ್‌ ಖಚಿತವಾಗುತ್ತಿದ್ದಂತೆಯೇ ಖಾಸಗಿ ಆಸ್ಪತ್ರೆಯೊಂದರ ‘ಹೋಂ ಐಸೋಲೇಷನ್‌ ಪ್ಯಾಕೇಜ್‌’ ತೆಗೆದುಕೊಂಡೆ. ಮಾತ್ರೆ, ಪಲ್ಸ್‌ ಆಕ್ಸಿಮೀಟರ್‌, ಉಷ್ಣಮಾಪಕ ಎಲ್ಲವನ್ನೂ ಮನೆಗೆ ತಲುಪಿಸಿದರು. ನಿಯಮಿತವಾಗಿ ನರ್ಸ್‌ಗಳು ಕರೆಮಾಡಿ ಮಾಹಿತಿ ಪಡೆಯುತ್ತಿದ್ದರು. ವೈದ್ಯರು ನಿತ್ಯವೂ ವಿಡಿಯೊ ಕಾಲ್‌ ಮೂಲಕ ನನ್ನನ್ನು ನೋಡಿ, ಮಾತನಾಡುತ್ತಿದ್ದರು. ಮೂರನೇ ದಿನದ ವೇಳೆಗೆ ಎಲ್ಲವೂ ಗುಣವಾದಂತೆ ಭಾಸವಾಯಿತು. ಐದನೇ ದಿನಕ್ಕೆ ಮತ್ತೆ ಜೋರು ಜ್ವರ, ಕೆಮ್ಮು, ಕಫ ಎಲ್ಲವೂ ಹೆಚ್ಚಾಯಿತು’

‘ಎಂಟರಿಂದ ಹತ್ತನೇ ದಿನ ಸೋಂಕು ಗರಿಷ್ಠ ಪ್ರಮಾಣಕ್ಕೆ ತಲುಪಬಹುದು ಎಂಬ ಮಾಹಿತಿ ಮೊದಲೇ ಇತ್ತು. ಪ್ರತಿ ಗಂಟೆಗೊಮ್ಮೆ ಆಮ್ಲಜನಕದ ಪ್ರಮಾಣ ಪರೀಕ್ಷಿಸಿಕೊಂಡು ಬರೆದಿಡುತ್ತಿದೆ. ವೈದ್ಯರು ಉಸಿರಾಟದ ಒಂದಷ್ಟು ವ್ಯಾಯಾಮಗಳನ್ನು ಹೇಳಿದ್ದರು. ಅದನ್ನು ಪಾಲಿಸುತ್ತಿದ್ದೆ. ಮಧ್ಯದಲ್ಲೇ ಎರಡು ಬಾರಿ ಮನೋರೋಗ ತಜ್ಞರು ಆಪ್ತ ಸಮಾಲೋಚನೆ ನಡೆಸಿದರು. ರಾತ್ರಿ ನಿದ್ದೆ ಮಾಡುವಾಗ ನಿರ್ದಿಷ್ಟ ಸಂಗೀತವೊಂದನ್ನು ಕೇಳುವಂತೆ ಸೂಚಿಸಿದರು. ಮನೋವೈದ್ಯರ ಆಪ್ತ ಸಮಾಲೋಚನೆ ನನಗೆ ಹೆಚ್ಚು ನೆರವಿಗೆ ಬಂತು’

‘ಪ್ರಾಥಮಿಕ ಹಂತದ ರೋಗ ಲಕ್ಷಣಗಳು ಕಾಣಿಸುತ್ತಿದ್ದಂತೆ ಪ್ರತ್ಯೇಕ ವಾಸಕ್ಕೆ ತೆರಳಿದರೆ ಮನೆಯಲ್ಲಿರುವ ಬೇರೆಯವರಿಗೂ ಸೋಂಕು ಹರಡದಂತೆ ತಡೆಯಬಹುದು. ನಮ್ಮ ಮನೆಯಲ್ಲಿ ನನ್ನ ಹೊರತಾಗಿ ಯಾರಿಗೂ ಸೋಂಕು ತಗುಲಿಲ್ಲ. ಸೋಂಕಿತರು ವೈದ್ಯರೊಂದಿಗೆ ಯಾವುದೇ ಮಾಹಿತಿಯನ್ನೂ ಮುಚ್ಚಿಡಬಾರದು. ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿ ಇರುವವರು ವೈದ್ಯರ ಸಲಹೆ ಆಧರಿಸಿ ನಿಯಮಿತವಾಗಿ ರಕ್ತ ತಪಾಸಣೆ ಮಾಡಿಸಿಕೊಳ್ಳುತ್ತಾ ಇರಬೇಕು. ರಕ್ತದಲ್ಲಿನ ಸಕ್ಕರೆಯ ಪ್ರಮಾಣದಲ್ಲಿ ಹೆಚ್ಚಳ ಆಗಿ ಸೋಂಕಿನಿಂದ ಗುಣಮುಖವಾಗುವುದು ವಿಳಂಬವಾಗುವುದನ್ನು ತಡೆಯಲು ಇದು ಅನುಕೂಲಕ್ಕೆ ಬರುತ್ತದೆ’

‘ಧೈರ್ಯವೇ ಎಲ್ಲಕ್ಕಿಂತಲೂ ಮುಖ್ಯ. ಯಾವ ಹಂತದಲ್ಲೂ ಎದೆಗುಂದಬಾರದು. ಕುಟುಂಬದವರ ಜತೆ ಅಂತರ ಕಾಯ್ದುಕೊಳ್ಳುವುದು, ಆಹಾರ ಪಡೆಯುವಾಗ, ಬಳಸಿದ ತಟ್ಟೆ ಮತ್ತು ಲೋಟಗಳನ್ನು ತೊಳೆದು ಇಡುವಾಗ ಎಚ್ಚರಿಕೆ ವಹಿಸಿದರೆ ಕುಟುಂಬವನ್ನೂ ಸೋಂಕಿನಿಂದ ರಕ್ಷಿಸಬಹುದು’

– ಸುರೇಶ್‌ ರಾಥೋಡ್‌, ಆಮ್‌ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಉಪಾಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು