ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿಯ ನಾಳೆಗಿರಲಿ ಇಂದೇ ಬದಲಾವಣೆ

Last Updated 8 ಜನವರಿ 2021, 19:30 IST
ಅಕ್ಷರ ಗಾತ್ರ

ಕಳೆದ ದಿನಗಳನ್ನು ನೆನೆಸುತ್ತ, ಈಗಿನ ಪರಿಸ್ಥಿತಿಗೆ ಮರುಗುತ್ತ ಕೂತರೆ ಬದುಕು ನಿಂತ ನೀರಿನಂತಾಗಬಹುದು. ಅದರ ಬದಲು ನಿತ್ಯದ ಬದುಕಿನಲ್ಲಿ, ಚಟುವಟಿಕೆಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡರೆ ಒಂದಿಷ್ಟು ನೆಮ್ಮದಿಯಿಂದ ಮುಂದಿನ ದಿನಗಳನ್ನು ಎದುರಿಸಬಹುದು.

2020. ಬಹುತೇಕ ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಮಾನಸಿಕವಾಗಿ ಕುಸಿದು ಹೋದ ವರ್ಷ. 2021ರಲ್ಲಾದರೂ ಒಳ್ಳೆಯ ದಿನಗಳನ್ನು ಕಾಣಬೇಕಾದರೆ ನಮ್ಮಷ್ಟಕ್ಕೆ ನಾವೇ ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು; ನಮ್ಮ ಮನಸ್ಸಿನ ಮೇಲೆ ನಿಯಂತ್ರಣ ಹೇರಿಕೊಳ್ಳುವುದನ್ನು ಕಲಿಯಬೇಕು. ನಿತ್ಯದ ಬದುಕಿನಲ್ಲಿ, ಚಟುವಟಿಕೆಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡರೆ ಒಂದಿಷ್ಟು ನೆಮ್ಮದಿಯಿಂದ ಈ ವರ್ಷವನ್ನು ಎದುರಿಸಬಹುದು.

ಇದಕ್ಕಾಗಿ ಕೆಲವು ಸರಳ ಆದರೆ ಪರಿಣಾಮಕಾರಿ ಮಾರ್ಗಗಳನ್ನು ನೀವೇ ಹುಡುಕಿಕೊಳ್ಳಬಹುದು. ಜೀವನದಲ್ಲಿ ಸುಧಾರಣೆ ಕಾಣಬೇಕಾದರೆ ನೀವೇ ಒಳ್ಳೆಯ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬಹುದು. ಸಣ್ಣಪುಟ್ಟ ಬದಲಾವಣೆಗಳು ದಿನ ಕಳೆದಂತೆ ನಮ್ಮ ನಡವಳಿಕೆಯಲ್ಲಿ ಸಕಾರಾತ್ಮಕ ಅಂಶಗಳು ಗೋಚರಿಸುವಂತೆ ಮಾಡುತ್ತವೆ. ಒಂದೆರಡು ತಿಂಗಳಲ್ಲೇ ಬದಲಾದ ನಡವಳಿಕೆ ಸಾಮಾನ್ಯ ಎಂಬಂತಾಗಿಬಿಡುತ್ತದೆ. ಹೊಸ ಹವ್ಯಾಸ ಅಥವಾ ಚಟುವಟಿಕೆ ಎನ್ನುವುದು ದೊಡ್ಡ ಬದಲಾವಣೆಯ ಪುಟ್ಟ ಮೆಟ್ಟಿಲು ಇದ್ದಂತೆ.

2020ನೇ ವರ್ಷವನ್ನು ಮರೆಯಲು ಸಾಧ್ಯವಾಗದಿದ್ದರೂ ಆದಷ್ಟು ಯತ್ನಿಸಿ. ಪರಿಸ್ಥಿತಿ ಹೊಸ ವರ್ಷದಲ್ಲಿ ಇನ್ನಷ್ಟು ಹದಗೆಡಬಹುದು ಎಂಬ ಯೋಚನೆಯನ್ನು ಮನಸ್ಸಿನಿಂದ ತೆಗೆದು ಹಾಕಿ. ಆ ರೀತಿಯ ಯೋಚನೆ ಆತಂಕವನ್ನು ಹೆಚ್ಚಿಸುತ್ತದೆ. ಬದುಕಿನ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳಿ. ಎಲ್ಲ ರೀತಿಯ ಪರಿಸ್ಥಿತಿಗಳಿಗೆ ಸುಲಭವಾಗಿ ಹೊಂದಿಕೊಳ್ಳುವ ಮನೋಭಾವದಿಂದ ಬದುಕು ಸರಳ, ಸುಂದರ ಎನಿಸಲು ಶುರುವಾಗುತ್ತದೆ. ಕ್ಷಿಪ್ರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಮ್ಮ ಮನಸ್ಥಿತಿಯನ್ನೂ ಪರಿಸ್ಥಿತಿಗೆ ತಕ್ಕಂತೆ ಹೊಂದಿಸಿಕೊಳ್ಳುವುದು ಒಂದು ಕೌಶಲ ಎನ್ನಬಹುದು. ಮಾನಸಿಕ ಸ್ಥಿತಿಯನ್ನು ಬದಲಾಯಿಸಿಕೊಳ್ಳದಿದ್ದರೆ ಬದುಕಿನಲ್ಲಿ ಯಾವ ಬದಲಾವಣೆಯೂ ಸಾಧ್ಯವಿಲ್ಲ.

ವಾರಾಂತ್ಯದಲ್ಲಿ ಒಂದೈದು ನಿಮಿಷ ವಿರಾಮವಾಗಿ ಕುಳಿತುಕೊಂಡು ನಿಮ್ಮ ಮನಸ್ಸಿಗೆ ಕಷ್ಟ ಕೊಟ್ಟ ಸಂದರ್ಭ ಯಾವುದು, ಯಾವ ಅಂಶ ಕಂಗೆಡಿಸಿತು, ಅದರಿಂದ ಹೊರಬರಬಹುದಾದ ಮಾರ್ಗ ಇತ್ತೇ ಎಂದು ಪರಾಮರ್ಶೆ ಮಾಡಿಕೊಳ್ಳಿ. ಅದು ನಿಮಗೆ ಮುಂದೆ ದಾರಿದೀಪವಾಗಬಹುದು.

ಪ್ರತಿ ದಿನವನ್ನೂ ಹೊಸತೆಂಬಂತೆ ಕಾಣಿ, ಹೆಚ್ಚು ಅರ್ಥಪೂರ್ಣವಾಗಿ ಕಳೆಯುವುದು ಹೇಗೆಂದು ಮನಸ್ಸಿನಲ್ಲೇ ರೂಪುರೇಷೆ ಹಾಕಿಕೊಳ್ಳಿ. ಇದರಿಂದ ಸರಿಯಾದ ಮಾರ್ಗ ಖಂಡಿತ ನಿಮಗೆ ಕಾಣಿಸುತ್ತದೆ.

ನಿರೀಕ್ಷೆಗಳು ನಿಮ್ಮ ಬದುಕನ್ನು ನಡೆಸಲು ಬಿಡಬೇಡಿ. ನಿಮ್ಮ ನಿಯಂತ್ರಣದಲ್ಲಿರುವ ಕೆಲಸವನ್ನು ಯೋಜಿಸಿ, ನಿರ್ವಹಿಸಿ. ಅಂದರೆ ಅದು ನಿಮಗೆ ಖುಷಿ ಕೊಡಬೇಕು. ಅದು ಬಿಟ್ಟು ಸಂಬಂಧಪಡದ ವಿಷಯಕ್ಕೆ ತಲೆ ಕೆಡಿಸಿಕೊಂಡು ಆ ದಿನವನ್ನು ಹಾಳು ಮಾಡಿಕೊಳ್ಳಬೇಡಿ.

ಸಣ್ಣ ಪುಟ್ಟ ಗೆಲುವಿನಲ್ಲೂ ಖುಷಿ ಅನುಭವಿಸಿ. ಯಶಸ್ಸು ಎನ್ನುವುದು ಒಂದೇ ಜಿಗಿತದಲ್ಲಿ ಸಿಗುವುದಿಲ್ಲ; ಅದೊಂದು ಸುದೀರ್ಘ ಓಟ. ಯಾವುದನ್ನು ನೀವು ಮುಂದುವರಿಸಿಕೊಂಡು ಹೋಗಬೇಕೆಂದು ಬಯಸುತ್ತೀರೋ ಅದಕ್ಕೆ ಹೆಚ್ಚು ಸಮಯ ಬೇಕು. ಆದರೆ ಅದರಲ್ಲಿರುವ ಪ್ರಗತಿಯನ್ನು ನೋಡುತ್ತ ಖುಷಿ ಪಡಿ. ಸೋಲಿನಿಂದ ಕುಗ್ಗದೆ ಸರಿಯಾದ ದಾರಿಯಲ್ಲಿ ಸಾಗಲು ಇದೊಂದು ಎಚ್ಚರಿಕೆ ಗಂಟೆ ಎಂದು ಪರಿಗಣಿಸಿ.

ದಿನದ ಕೊನೆಗೆ ಅಂದರೆ ಮಲಗುವ ಮುನ್ನ ಕೆಲಸದಿಂದ ಮಾತ್ರವಲ್ಲ, ಫೋನ್‌, ಟಿವಿಯಿಂದ ಕೂಡ ಬಿಡುವು ತೆಗೆದುಕೊಂಡು ಮನಸ್ಸನ್ನು ಪ್ರಫುಲ್ಲವಾಗಿರಿಸುವ ಮಾರ್ಗ ಕಂಡುಕೊಳ್ಳಿ. ಮರುದಿನ ಇನ್ನೂ ಹೆಚ್ಚು ಹುರುಪಿನಿಂದ ಕೆಲಸ ಮಾಡಲು ಇದು ಉತ್ತೇಜನ ನೀಡುತ್ತದೆ.

ಸಂಜೆ ಒಂದಿಷ್ಟು ಗುಣಮಟ್ಟದ ಸಮಯ ಕಳೆಯುವ ಅಭ್ಯಾಸ ಮಾಡಿಕೊಳ್ಳಿ. ಒಳ್ಳೆಯ ಪುಸ್ತಕ ಓದಿ, ಇದು ನಿಮ್ಮ ಮನಸ್ಸು, ಮೆದುಳಿಗೆ ಒಂದಿಷ್ಟು ಹೊಸತನ, ಉತ್ತೇಜನ ನೀಡುವುದು ಖಚಿತ. ಕುಟುಂಬದ ಸದಸ್ಯರ ಅಥವಾ ಸ್ನೇಹಿತರ ಜೊತೆ ಸಮಯ ಕಳೆಯಿರಿ.

ನಿದ್ರೆ ಸರಿಯಾಗಿ ಬರದಿದ್ದರೆ ಹವ್ಯಾಸಗಳಲ್ಲಿ ಬದಲಾವಣೆ ಮಾಡಿಕೊಳ್ಳಿ. ಕೆಫಿನ್‌ ಸೇವನೆ ಕಡಿಮೆ ಮಾಡಿ. ರಾತ್ರಿಯೂಟ ಬೇಗ ಮಾಡಿ.

ಕೆಲಸದ ಮಧ್ಯೆ ಸಣ್ಣ ವಿರಾಮ ತೆಗೆದುಕೊಳ್ಳುವುದನ್ನು ರೂಢಿ ಮಾಡಿಕೊಳ್ಳಿ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ.

ಯಾವುದೇ ಬದಲಾವಣೆಯನ್ನು ಹಂತ ಹಂತವಾಗಿ ಮಾಡಿ. ತೂಕ ಕಡಿಮೆ ಮಾಡುವುದಾದರೆ ಕೊಂಚ ವ್ಯಾಯಾಮ, ಆಹಾರ ಸೇವನೆಯಲ್ಲಿ ಸ್ವಲ್ಪ ಕಡಿತ, ಮೊದಲು 10 ನಿಮಿಷದ ನಡಿಗೆ, ನಂತರ ಅರ್ಧ ತಾಸು.. ಹೀಗೆ ಹಂತ ಹಂತವಾಗಿ ಗುರಿಯನ್ನು ನಿಭಾಯಿಸಿ. ಬದಲಾವಣೆ ತಕ್ಷಣಕ್ಕೆ ಆಗಲಾರದು, ಸುಲಭವೂ ಅಲ್ಲ.

ಹೊಸ ಹೊಸ ಕೌಶಲ ಕಲಿಯಿರಿ. ಇದು ಉದ್ಯೋಗ ಬದಲಿಸಲೂ ಅನುಕೂಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT