ಬುಧವಾರ, ಮಾರ್ಚ್ 22, 2023
28 °C

ಅರಿವು ಅರಳಲಿ ವಿಸ್ತಾರದಲಿ

ಡಾ. ಕಿರಣ್ ವಿ. ಎಸ್. Updated:

ಅಕ್ಷರ ಗಾತ್ರ : | |

‘ಜಗತ್ತು ಎಷ್ಟು ವೇಗವಾಗಿ ಮುಂದುವರೆಯುತ್ತೆಂದರೆ, ಇದ್ದ ಜಾಗದಲ್ಲೇ ಉಳಿಯಬೇಕೆಂದರೂ ಒಂದೇ ಸಮನೆ ಓಡುತ್ತಲೇ ಇರಬೇಕು’ ಎನ್ನುವ ಮಾತಿದೆ. ಬಹುತೇಕ ಕ್ಷೇತ್ರಗಳಲ್ಲಿ ಪರಮ ಸತ್ಯ ಎನ್ನುವುದು ಇರುವುದೇ ಇಲ್ಲ. ಇಂದಿನ ಗ್ರಹಿಕೆ ನಾಳೆ ಬದಲಾಗಬಹುದು. ಉನ್ನತ ವಿಜ್ಞಾನದಂತಹ ವಿಷಯದಲ್ಲಂತೂ ಹತ್ತು ವರ್ಷಗಳ ಹಿಂದಿನ ಪಠ್ಯಪುಸ್ತಕ ಇಂದಿಗೆ ಹೆಚ್ಚು ಕೆಲಸಕ್ಕೆ ಬಾರದು. ಅವಕಾಶಗಳಿದ್ದರೂ ಕೆಲವೊಮ್ಮೆ ಪೂರ್ವಗ್ರಹಗಳ ಹಿಡಿತದಲ್ಲಿ ಬಂಧಿಯಾಗಿ, ಚಿಂತನೆಯನ್ನು ಬೆಳೆಸಲು ಹಿಂಜರಿಯುತ್ತೇವೆ. ಆಧುನಿಕ ಯುಗದಲ್ಲಿ ಅರಿವಿನ ವಿಸ್ತಾರಕ್ಕೆ ನಮ್ಮ ಮನಸ್ಸನ್ನು ತೆರೆದಿಟ್ಟುಕೊಳ್ಳದ ಹೊರತು ವ್ಯವಹಾರದಲ್ಲಾಗಲೀ ವೃತ್ತಿಯಲ್ಲಾಗಲೀ ಪ್ರಗತಿ ಕಷ್ಟಸಾಧ್ಯ.

ಓದು-ಬರಹದ ಹವ್ಯಾಸಗಳು ಮನಸ್ಸನ್ನು, ಮನೋಭಾವಗಳನ್ನು ಹಿಗ್ಗಿಸುತ್ತವೆ. ಓದುವುದಕ್ಕೆ ವಸ್ತು, ಪಂಥಗಳ ಮಿತಿಗಳನ್ನು ಹೇರಿಕೊಳ್ಳಬಾರದು. ಕತೆ, ಕವನ, ಕಾದಂಬರಿ, ಆತ್ಮಕಥನ, ವೈಚಾರಿಕ ಸಾಹಿತ್ಯ, ವಿಜ್ಞಾನ ಲೇಖನ, ರಾಜಕೀಯ ಕಥಾನಕ, ಪ್ರವಾಸ ಕಥನ – ಹೀಗೆ ಪ್ರತಿಯೊಂದು ಪ್ರಕಾರಕ್ಕೂ ಅದರದ್ದೇ ಆದ ಸೊಗಸು, ಸೊಗಡುಗಳಿವೆ. ಓದುವಿಕೆ ಚಿಂತನೆಯ ಹರವನ್ನು ಬೆಳೆಸುತ್ತದೆ. ‘ದೇಶ ಸುತ್ತು; ಕೋಶ ಓದು’ ಎನ್ನುವ ಸಲಹೆ ಅರಿವಿನ ವಿಸ್ತಾರದಲ್ಲಿ ಸಾರ್ವಕಾಲಿಕ.

ಬರವಣಿಗೆ ನಮ್ಮ ಅರಿವಿನ ಸಾಂದ್ರತೆಯನ್ನು ವೃದ್ಧಿಸುತ್ತದೆ. ಬರವಣಿಗೆ ಯಾವುದೇ ಹಂತದ್ದಾಗಿರಬಹುದು – ದಿನನಿತ್ಯದ ಕೆಲಸಗಳ ಪಟ್ಟಿ, ಆಯಾ ದಿನದ ಅನುಭವಗಳ ಡೈರಿ, ಕಾಡುವ ಸಮಸ್ಯೆಗಳಿಗೆ ಅಕ್ಷರರೂಪವನ್ನು ನೀಡುವುದು, ಮೂಡುತ್ತಿರುವ ಆಲೋಚನೆ, ಅಕಸ್ಮಾತ್ತಾಗಿ ಮಿಂಚಿದ ಹೊಳಹು, ಅಮೂರ್ತವಾಗಿ ಎಂದೋ ನೆಲೆ ನಿಂತಿದ್ದ ಚಿಂತನೆ, ಮನದೊಳಗೆ ಹಿಂದೆಂದೋ ಸುಳಿದಿದ್ದ ಕತೆಯ ಕಲ್ಪನೆ – ಹೀಗೆ ಯಾವುದನ್ನಾದರೂ ಬರಹದ ನೆಲೆಗಟ್ಟಿಗೆ ಇಳಿಸುವುದು ತಿಳಿವಿಗೆ ಸ್ಪಷ್ಟತೆಯನ್ನು ನೀಡುವುದರ ಜೊತೆಗೆ ಆಲೋಚನೆಯ ತುಣುಕುಗಳ ನಡುವೆ ಇರಬಹುದಾದ ಖಾಲಿ ಜಾಗಗಳನ್ನು ತಗ್ಗಿಸುತ್ತದೆ; ಚಿಂತನೆಯ ವ್ಯಾಪ್ತಿಯನ್ನು ಹಿಗ್ಗಿಸಲು ನೆರವಾಗುತ್ತದೆ. ಪ್ರಶ್ನಿಸುವ ಪ್ರಕ್ರಿಯೆ ಅರಿವಿನ ವಿಸ್ತಾರಕ್ಕೆ ಒಳ್ಳೆಯ ವಿಧಾನ. ಕಂಡದ್ದನ್ನೆಲ್ಲಾ ಪ್ರಶ್ನಿಸುವುದು ಅನುಮಾನದ ಲಕ್ಷಣ; ಬೇರೆಯವರನ್ನು ಹೀಗೆಳೆಯಲು ಪ್ರಶ್ನಿಸುವುದು ಕೀಳರಿಮೆಯ ಸಂಕೇತ. ಯಾವುದೇ ವಿಷಯದ ಬಗ್ಗೆ ಆಸಕ್ತಿ ಮೂಡಿದಾಗ ಅದನ್ನು ಮತ್ತಷ್ಟು ಅರಿಯುವ ಸಲುವಾಗಿ ಪ್ರಶ್ನಿಸುವುದು ಸಮಂಜಸ ಮಾರ್ಗ. ನಮ್ಮ ಪ್ರಶ್ನೆಗೆ ಇತರರು ಮಾತ್ರ ಉತ್ತರಿಸಬೇಕೆಂದೇನೂ ಇಲ್ಲ. ಉತ್ತರ ಕೊಡುವವರು ಸೂಟಿಯಾಗಿ, ಆ ಅಂಶಕ್ಕೆ ಮಾತ್ರ ಸಮಾಧಾನ ಹೇಳಬಲ್ಲರು. ಪ್ರಶ್ನೆಯ ಸೆಲೆಯನ್ನು ಹಿಡಿದು, ಅದಕ್ಕೆ ನಾವೇ ಉತ್ತರ ಕಂಡುಕೊಳ್ಳುವುದು ಮಾಹಿತಿಯ ಮಹಾಪೂರವಾದ ಆಧುನಿಕ ಯುಗದಲ್ಲಿ ಕಷ್ಟವಲ್ಲ. ಹೀಗೆ ಮಾಡುವಾಗ ಅನೇಕ ಹೊಸ ವಿಷಯಗಳು, ಹೊಳಹುಗಳು ಗೋಚರಿಸುತ್ತವೆ. ಯಾವುದೇ ವಿಷಯವನ್ನು ಪ್ರಮಾಣಬದ್ಧವಾಗಿ ಅರಿಯುವುದು ನಮ್ಮ ಆಲೋಚನೆಗಳನ್ನು, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹಿಗ್ಗಿಸುತ್ತದೆ.

ಮೆದುಳು ಅಗಾಧ ಸಾಮರ್ಥ್ಯದ ಗಣಿ. ಅದನ್ನು ಸಂಕುಚಿತವಾಗಿಟ್ಟರೆ ನಷ್ಟ ನಮಗೇ. ಮೆದುಳಿನ ತರ್ಕದ ಭಾಗವನ್ನು ಚೂಟಿಯಾಗಿ ಇರಿಸಿಕೊಂಡರೆ ಕಲಿಕೆಯ ಸಾಮರ್ಥ್ಯ ಹೆಚ್ಚುತ್ತದೆ ಎನ್ನಲಾಗಿದೆ. ಹೀಗಾಗಿ, ಮೆದುಳಿಗೆ ತರ್ಕದ ಕಸರತ್ತನ್ನು ನೀಡುವ ಆಟಗಳು ವಿಶ್ವದಾದ್ಯಂತ ಜನಪ್ರಿಯ. ಪದಬಂಧ, ಸುಡೊಕು, ಗಣಿತೀಯ ಸಮಸ್ಯೆಗಳು, ತಾರ್ಕಿಕ ಒಗಟುಗಳು ಆಲೋಚನಾ ಶಕ್ತಿಯನ್ನು ಹರಿತಗೊಳಿಸುತ್ತವೆ. ಇದೇ ಕಾರಣಕ್ಕಾಗಿ ಬಹುತೇಕ ದಿನಪತ್ರಿಕೆಗಳು ಇಂತಹ ಆಟಗಳಿಗೆಂದು ಪತ್ರಿಕೆಯ ಅರ್ಧ ಪುಟವನ್ನಾದರೂ ಮೀಸಲಿಡುತ್ತವೆ. ಅಂತರ್ಜಾಲದಲ್ಲಿ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಇಂತಹ ಲಕ್ಷಾಂತರ ತಾಣಗಳಿವೆ; ಮೊಬೈಲ್ ಆ್ಯಪ್‌ಗಳಿವೆ. ಚುರುಕುಗೊಂಡ ತಾರ್ಕಿಕ ಮೆದುಳು ಯಾವುದೇ ಸಂದರ್ಭವನ್ನೂ ಶೀಘ್ರವಾಗಿ ಗ್ರಹಿಸಬಲ್ಲದು. ಮಕ್ಕಳ ಜೊತೆಯಲ್ಲಿ ಕೂಡಿ ಸರಳ ವೈಜ್ಞಾನಿಕ ಪ್ರಯೋಗಗಳನ್ನು ಮಾಡಿ, ಅವುಗಳ ಹಿನ್ನೆಲೆಯನ್ನು ವಿವರಿಸುವುದು ಕೂಡ ಇಂತಹುದೇ ಪರಿಣಾಮವನ್ನು ಉಂಟುಮಾಡುತ್ತದೆ.

ನಮ್ಮ ಪೂರ್ವಗ್ರಹಗಳು ಮಾನಸಿಕ ಬೆಳವಣಿಗೆಯನ್ನು ಮೊಟಕುಗೊಳಿಸುತ್ತವೆ. ಅವನ್ನು ಮೀರುವುದು ಸುಲಭವಲ್ಲ. ಗೆದ್ದಾಗ ನಮ್ಮನ್ನು ಹೊಗಳಿಕೊಳ್ಳುವುದು, ಸೋತಾಗ ಇತರರನ್ನು ಜರಿಯುವುದು ನಮ್ಮನ್ನು ಒಳಗಿನಿಂದ ದುರ್ಬಲರನ್ನಾಗಿಸುತ್ತದೆ. ಸೋಲಿನ ಬಗ್ಗೆ ಪ್ರಾಮಾಣಿಕ ವಿಶ್ಲೇಷಣೆ ಮಾಡಿದಾಗ ದೌರ್ಬಲ್ಯಗಳು ಗೋಚರವಾಗುತ್ತವೆ. ಆಗ ಮಾತ್ರ ಸುಧಾರಣೆ ಸಾಧ್ಯ. ಇದನ್ನು ಮಾಡಿದ ಹೊರತು ಗೆಲುವಿನ ಸಾಧ್ಯತೆಗಳು ಹೆಚ್ಚುವುದಿಲ್ಲ. ಯಾವುದೇ ಕ್ಷೇತ್ರದಲ್ಲೂ ಎದುರಾಳಿಗಳ ಬಗ್ಗೆ ಆರೋಗ್ಯಕರ ಗೌರವ ಇರುವುದು ಒಳ್ಳೆಯದು. ನಮ್ಮ ಬಲ-ದೌರ್ಬಲ್ಯಗಳ ಪರಿಚಯ ಎಷ್ಟು ಮುಖ್ಯವೋ, ಎದುರಾಳಿಯ ಬಗ್ಗೆ ಅರಿವು ಇರುವುದೂ ಅಷ್ಟೇ ಮುಖ್ಯ. ಗೆಲುವೆಂಬುದು ಅದೃಷ್ಟದ ಆಟವಾಗಬಾರದು. ಅಂತೆಯೇ, ಅಂತಿಮ ಪರಿಣಾಮ ‘ನಾವು ಮಾಡಿದ್ದೆಲ್ಲವೂ ಸರಿ’ ಎನ್ನುವಂತೆಯೂ ಇರಬಾರದು. ಯಾವಾಗಲೋ ಒಮ್ಮೆ ಲಾಟರಿಯಲ್ಲಿ ಗೆಲ್ಲುವುದು ನಾವು ಹುಟ್ಟಾ ಅದೃಷ್ಟವಂತರು ಎನ್ನುವ ಭಾವ ಮೂಡಿಸಬಾರದು. ಈ ರೀತಿಯ ಸೀಮಿತ ಆಲೋಚನೆಗಳು ನಮ್ಮ ಚಿಂತನೆಯನ್ನು ಬಂಧಿಯಾಗಿಸುತ್ತವೆ.

ಜೀವನದಲ್ಲಿ ಬದಲಾವಣೆ ಬಹಳ ಮುಖ್ಯ. ಅದರಲ್ಲೂ ಪ್ರಸ್ತುತ ಪ್ರಪಂಚದಲ್ಲಿ ಸರಾಸರಿ ಹತ್ತು ವರ್ಷಗಳಿಗೊಮ್ಮೆ ವ್ಯಾವಹಾರಿಕ ಪ್ರಪಂಚದ ವಾಸ್ತವ ಬದಲಾಗುತ್ತಿದೆ. ದಶಕದ ಹಿಂದೆ ಊಹೆಗೂ ಸಿಗದಿದ್ದ ನೌಕರಿಗಳು ಇಂದು ಮಾರುಕಟ್ಟೆಯನ್ನು ಆಕ್ರಮಿಸಿವೆ. ಹೀಗಾಗಿ, ನಮ್ಮ ಅರಿವನ್ನು ಬೆಳೆಯಲು ಬಿಡದಿದ್ದರೆ ಅವಕಾಶವಂಚಿತರಾಗುತ್ತೇವೆ. ಬಹಳ ಬಾರಿ ‘ನನಗಿಷ್ಟು ಸಾಕು; ನಾನು ಬದಲಾಗುವುದು ಬೇಕಿಲ್ಲ’ ಎನಿಸಬಹುದು. ಆದರೆ, ನಾವು ಯಾವುದನ್ನು ಇಂದು ಸಂಪೂರ್ಣವಾಗಿ ಅವಲಂಬಿಸಿದ್ದೇವೋ ಅದು ನಾಳೆ ಇಲ್ಲವಾದರೆ ನಮ ಅಸ್ತಿತ್ವಕ್ಕೇ ಸಂಚಕಾರ ಮೂಡಿದಂತಾಯಿತು. ಒಂದು ಕಾಲದಲ್ಲಿ ರಾರಾಜಿಸುತ್ತಿದ್ದ ಟೈಪ್ ರೈಟರ್ ಯಂತ್ರಗಳು ಇಂದು ಸಂಗ್ರಹಾಲಯದ ವಸ್ತುಗಳಾಗಿವೆ. ಮೊಬೈಲ್ ಫೋನುಗಳು ಬಂದ ಮೇಲೆ ಪೇಜರ್ ಅಗತ್ಯ ಇಲ್ಲದೇ ಹೋಗಿದೆ. ಆದ್ದರಿಂದ ನಮ್ಮ ವೃತ್ತಿ ಇಂದು ಎಷ್ಟೇ ಸುರಕ್ಷಿತ ಎನಿಸಿದರೂ ಪರಿಸ್ಥಿತಿ ದಿಢೀರನೆ ಬದಲಾಗಬಹುದು. ಅರಿವನ್ನು ವಿಸ್ತರಿಸದೆ ಹೋದರೆ ನಮ್ಮ ಅಸ್ತಿತ್ವವೇ ಉಳಿಯದಿರಬಹುದು.

ವ್ಯಾಯಾಮ, ಧ್ಯಾನ, ಧನಾತ್ಮಕ ಚಿಂತನೆಗಳು, ಹೊಸಬರೊಡನೆ ಬೆರೆಯುವ ಮನಃಸ್ಥಿತಿ, ಹೊಸದನ್ನು ಕಲಿಯುವ ಬಯಕೆ, ಪ್ರವಾಸ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿಕೆ, ಸೋಮಾರಿತನ ಬಿಟ್ಟು ಯಾವುದೋ ಉತ್ಪಾದಕ ಕೆಲಸದಲ್ಲಿ ತೊಡಗಿಕೊಳ್ಳುವಿಕೆ, ಆರೋಗ್ಯಕರ ಆಹಾರ, ಒಳ್ಳೆಯ ನಿದ್ರೆ, ಸಾಮಾಜಿಕ ಸಂಬಂಧಗಳು, ಮೊದಲಾದವು ನಮ್ಮ ಅರಿವನ್ನು ಬೆಳೆಸುತ್ತವೆ. ನಮ್ಮ ನಿಯಮಿತ ಜೀವನಾವಧಿಯನ್ನು ಉತ್ತಮ ರೀತಿಯಿಂದ ಕಳೆಯಲು ಮನಸ್ಸನ್ನು ಚಿಂತನೆಗಳ ವಿಸ್ತರಣೆಗೆ ಸಜ್ಜುಗೊಳಿಸುವುದು ಒಳ್ಳೆಯ ವಿಧಾನ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು