ಶನಿವಾರ, ಮೇ 28, 2022
31 °C

ಆರೋಗ್ಯ: ಮಗುವಿನ ಮಾನಸಿಕ ಫಲವತ್ತತೆಗೆ ಇರಲಿ ಸಂಪೂರ್ಣ ಸುರಕ್ಷತೆ

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

Prajavani

ಪುಟಾಣಿ ನಂದಿನಿ ಕಳೆದ ವಾರ ಖುಷಿಯಿಂದಲೇ ಶಾಲೆಗೆ ಹೋದರೂ ಬರುವಾಗ ಮಾತ್ರ ಮುಖ ಸಪ್ಪೆಯಾಗಿತ್ತು. ಒಂದೂವರೆ ವರ್ಷದ ನಂತರ ಶಾಲೆಗೆ ಕಾಲಿಟ್ಟಿರುವುದು, ಸುಸ್ತಾಗಿರಬಹುದು ಎಂದುಕೊಂಡರು ನಂದಿನಿಯ ಅಮ್ಮ. ಆದರೆ ಮರುದಿನ ಶಾಲೆಗೆ ಹೊರಡಲು ಹಟ ಮಾಡಿದ ನಂದಿನಿ, ‘ಅಲ್ಲಿ ಭಯ ಆಗುತ್ತಮ್ಮ, ಟೀಚರ್‌ ಹೇಳಿದ್ದು ಏನೂ ತಲೆಗೇ ಹೋಗಲ್ಲ..’ ಎಂದು ಭಯ ತೋಡಿಕೊಂಡಾಗ ಆಕೆಯ ಪೋಷಕರು ದಿಗಿಲು ಬಿದ್ದರು.

ಇದು ಕೇವಲ ನಂದಿನಿಯ ಪೋಷಕರ ಹೆದರಿಕೆ ಮಾತ್ರವಲ್ಲ, ಬಹುತೇಕ ಪುಟಾಣಿಗಳ ತಂದೆ– ತಾಯಂದಿರು ಮಕ್ಕಳ ಈ ರೀತಿಯ ಮನಸ್ಥಿತಿ ಬಗ್ಗೆ ಆತಂಕಗೊಂಡಿರಬಹುದು. ಇದಕ್ಕೆ ಕಾರಣಗಳೂ ಸಾಕಷ್ಟಿವೆ.

ಸುಮಾರು ಒಂದೂವರೆ ವರ್ಷದ ನಂತರ ಹಂತಹಂತವಾಗಿ ಶಾಲೆಗಳು ತೆರೆಯುತ್ತಿವೆ. ಯಾಂತ್ರಿಕ ಕಲಿಕೆಯಿಂದ ನೇರ ಕಲಿಕೆಗೆ ಬದಲಾಯಿಸಿಕೊಳ್ಳುವುದಕ್ಕೆ 10-12 ವರ್ಷದ ಮಕ್ಕಳಿಗೂ ಸಮಯದ ಅಗತ್ಯವಿದೆ. ಪ್ರಾಥಮಿಕ ಶಾಲಾ ಮಕ್ಕಳಿಗೆ ಇವೆಲ್ಲದರ ಕುರಿತಾಗಿ ಬಹಳ ಗೊಂದಲವಿರುತ್ತದೆ. ಪ್ರಥಮ ಬಾರಿಗೆ ಶಾಲೆಗಳಿಗೆ ಹೋಗುತ್ತಿರುವ ಮಕ್ಕಳಿಗಂತೂ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವ ಸಮಯ ಸಿಗುವ ಮೊದಲೇ ಪರೀಕ್ಷೆಗಳು ಶುರುವಾಗಬಹುದು. ಕಳೆದು ಹೋದ ಸಮಯ ಮತ್ತು ಹಿನ್ನಡೆಯಾಗಿರುವ ಕಲಿಕೆಯ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳು ಎಲ್ಲವನ್ನೂ ಆದಷ್ಟೂ ಕಡಿಮೆ ಸಮಯದಲ್ಲಿ ಕಲಿಸಿಬಿಡುವ ಗಡಿಬಿಡಿಯಲ್ಲಿರುತ್ತಾರೆ. ಕಲಿಕೆಯಲ್ಲಿ ಹಿಂದೆಬೀಳುವ ಆತಂಕದಲ್ಲಿರುವ ಪೋಷಕರು ಮಕ್ಕಳು ಹೆಚ್ಚಿನ ಸಮಯ ಓದಿಗೆ ಮೀಸಲಿಡುವಂತೆ ನಿರೀಕ್ಷಿಸುವುದು ಸಹಜ. ಈ ಎಲ್ಲಾ ಧಾವಂತದಲ್ಲಿ ಮಕ್ಕಳ ಮನಸ್ಥಿತಿಯನ್ನು ಗಮನಿಸುವುದು ಹೇಗೆ?

ಸಹಜ ಕಲಿಕೆ-ಸುರಕ್ಷಿತ ವಾತಾವರಣ
ಕಲಿಕೆಗೆ ಉತ್ತಮ ಶಿಕ್ಷಕರು, ಸೂಕ್ತ ವಾತಾವರಣ, ಆಧುನಿಕ ಪರಿಕರಗಳು ಇತ್ಯಾದಿಗಳೆಲ್ಲಾ ಇರಬೇಕು ಎನ್ನುವುದು ಮೇಲುನೋಟಕ್ಕೆ ಸತ್ಯ ಎನ್ನಿಸಬಹುದು. ಬೀಜ, ಗೊಬ್ಬರ, ನೀರು ಮುಂತಾದ ಕೃಷಿ ಸಲಕರಣೆಗಳಿಂದ ಮಾತ್ರ ಉತ್ತಮ ಫಸಲು ಪಡೆಯಲು ಸಾಧ್ಯವೇ? ಬಿತ್ತುವ ನೆಲದ ಫಲವತ್ತತೆಯ ಕುರಿತಾಗಿಯೂ ಯೋಚಿಸಬೇಕಲ್ಲವೇ? ಮಕ್ಕಳ ಮನಸ್ಸಿನ ಫಲವತ್ತತೆಯನ್ನು ಗುರುತಿಸುವುದು, ಉಳಿಸುವುದು ಮತ್ತು ಬೆಳೆಸುವುದು ಸಾಧ್ಯವಾದರೆ ಮಾತ್ರ ಕಲಿಕೆ ಸಹಜವಾಗಿರುತ್ತದೆ ಮತ್ತು ಮಕ್ಕಳು ತಮ್ಮ ಶಕ್ತಿಯನ್ನು ಪೂರ್ಣವಾಗಿ ಅದರಲ್ಲಿ ತೊಡಗಿಸಬಲ್ಲರು.

ಮಕ್ಕಳು ಮಾತ್ರವಲ್ಲ, ವಯಸ್ಕರೂ ಕೂಡ ತಮ್ಮ ನೆನಪಿನ ಶಕ್ತಿ ಮತ್ತು ವಿವೇಚನಾ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗುವುದು ಒತ್ತಡ ಮತ್ತು ಭಯಗಳಿಲ್ಲದ ಮಾನಸಿಕ ಸಮತೋಲನ ಕಾಯ್ದುಕೊಂಡಾಗ ಮಾತ್ರ. ಒತ್ತಡ ಮೆದುಳಿನಲ್ಲಿ ನೆನಪಿನ ಸ್ಥಾನವಾದ ಹಿಪ್ಪೋಕ್ಯಾಂಪಸ್‌ನ ಗಾತ್ರವನ್ನು ಕುಗ್ಗಿಸುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಭಯ ನಮ್ಮ ದೇಹದ ರಕ್ಷಣಾವ್ಯವಸ್ಥೆಯನ್ನು ಪ್ರಚೋದಿಸುತ್ತದೆಯೇ ಹೊರತು ಯೋಚಿಸುವ ಮೆದುಳನ್ನಲ್ಲ. ಹಾಗಾಗಿಯೇ ಪರೀಕ್ಷೆಯಲ್ಲಿ ಎದೆ ಹೊಡೆದುಕೊಂಡು, ಮೈ ಬೆವರುತ್ತಿರುವಾಗ ಎಲ್ಲವೂ ಮರೆತು ಹೋಗುವುದು ಅನಿವಾರ್ಯವಾದ ಪರಿಣಾಮ.

ಭಯ ಒತ್ತಡಗಳಿಲ್ಲದ ಸ್ಥಿತಿ ಯಾವಾಗ ಸಾಧ್ಯ? ಮಗುವಿಗೆ ಕಲಿಕೆಯ ವಾತಾವರಣ ಸಂಪೂರ್ಣ ಸುರಕ್ಷಿತ ಎನ್ನಿಸಿದಾಗ ಮಾತ್ರ.  ಇದು ಕೇವಲ ಭೌತಿಕ ಸುರಕ್ಷತೆಯಲ್ಲ, ಮಗುವಿನ ಅಂತರಂಗಕ್ಕೆ ಅದರ ಅನುಭವವಾಗಬೇಕು. ಸುರಕ್ಷಿತ ವಾತಾವರಣವನ್ನು ಶಾಲೆಯವರು ಕೊಡಬೇಕು ಎನ್ನುವುದು ನಿಜವಾದರೂ ಪೋಷಕರು ಸುಮ್ಮನಿರುವಂತಿಲ್ಲ. ಶಾಲೆಯ ವಾತಾವರಣ, ಶಿಕ್ಷಣ ಪದ್ಧತಿ ಮುಂತಾದವುಗಳ ಚರ್ಚೆಯನ್ನು ಸದ್ಯಕ್ಕೆ ಬದಿಗಿಟ್ಟು ಪೋಷಕರು ಮನೆಯಲ್ಲಿಯೇ ಮಾಡಬಹುದಾದ ವಿಷಯಗಳತ್ತ ಗಮನಹರಿಸೋಣ.    

ಮಾನಸಿಕ ಸುರಕ್ಷತೆ
ಭಯ ಮತ್ತು ಒತ್ತಡಗಳು ಕೇವಲ ಮೆದುಳಿನಲ್ಲಿ ದಾಖಲಾಗುತ್ತವೆ ಎನ್ನುವುದು ಸಾಮಾನ್ಯವಾದ ತಿಳಿವಳಿಕೆ. ನಮ್ಮ ನರಮಂಡಲದ ಸಂಚಾರ ವ್ಯವಸ್ಥೆ ಇವುಗಳ ಸೂಚನೆಗಳನ್ನು ಗ್ರಹಿಸಿದ ಕೂಡಲೇ ಆತಂಕದ ಪ್ರಭಾವ ಇಡೀ ದೇಹವ ಮೇಲೆ ಉಂಟಾಗುತ್ತದೆ. ವಾಹನ ಚಲಾಯಿಸುವಾಗ ಒಮ್ಮೆ ಅಪಘಾತವಾದರೆ ಅದರ ನೆನಪಿನಿಂದ ಹೊರಬರಲು ಬಹಳ ಸಮಯ ಬೇಕಾಗುವಂತೆ ಮಗು ಒಮ್ಮೆ ಅನುಭವಿಸುವ ಭಯದಿಂದ ಮುಕ್ತವಾಗುವುದು ಅಷ್ಟು ಸರಳವಲ್ಲ. ಕೇವಲ ಪೋಷಕರ ಉತ್ತೇಜನ ಆಶ್ವಾಸನೆಗಳಿಂದ ಸುರಕ್ಷತೆ ಮೂಡಲಾರದು. ಭಯದ ಸೂಚನೆಗಳು ಸಾಮಾನ್ಯವಾಗಿ ದೈಹಿಕವಾಗಿಯೂ ಕಾಣಿಸಿಕೊಳ್ಳುತ್ತವೆ. ಪದೇಪದೇ ಜ್ವರ ಬರುವುದು, ಬಾಯಾರಿಕೆ, ಮೂತ್ರದ ಒತ್ತಡ ಉಂಟಾಗುವುದು, ಊಟ, ನಿದ್ದೆ, ಆಟಗಳಲ್ಲಿ ಆಸಕ್ತಿ ಕುಂದುವುದು, ಅತಿಯಾಗಿ ತಿನ್ನುವುದು, ಮೊಬೈಲ್‌ಗೆ ಅಂಟಿಕೊಳ್ಳುವುದು- ಮುಂತಾದವು ಭಯದ ಸೂಚನೆಗಳಾಗಿರಬಹುದು. ಎಲ್ಲವನ್ನೂ ಸ್ಪಷ್ಟವಾಗಿ ಹೇಳುವುದಕ್ಕೆ ಅನುವಾಗುವ ಮೆದುಳಿನ ಅಂಗಗಳು ಮಕ್ಕಳಲ್ಲಿ ಬೆಳವಣಿಗೆಯಾಗಿರುವುದಿಲ್ಲ. ಹಾಗಾಗಿ ತಮ್ಮ ಒಡನಾಟದಲ್ಲಿ ಪೋಷಕರು ಮಕ್ಕಳ ಮನಸ್ಥಿತಿಯನ್ನು ಗಮನಿಸಬೇಕಾಗುತ್ತದೆ.

ಪರೀಕ್ಷೆಯ ಗುಮ್ಮ
ಗಾರ್ಡನ್‌ ನ್ಯೂಫೀಲ್ಡ್‌ ಎನ್ನುವ ಕೆನಡಾದ ಸುಪ್ರಸಿದ್ಧ ಮನಶಾಸ್ತ್ರಜ್ಞ ಮತ್ತು ಮನೋಚಿಕಿತ್ಸಕ ಹೇಳುವಂತೆ ಮೌಲ್ಯಮಾಪನ ಮತ್ತು ಪರೀಕ್ಷೆಗಳು ಮಕ್ಕಳಲ್ಲಿ ಭಯವನ್ನು ಹುಟ್ಟಿಸುವುದರಿಂದ ಕಲಿಕೆಗೆ ಮಾರಕವಾಗುತ್ತದೆ. ಆದರೆ ಇದು ಇವತ್ತಿನ ಶಿಕ್ಷಣ ವ್ಯವಸ್ಥೆಯ ಅನಿವಾರ್ಯತೆಗಳು. ಕೊರೊನಾದ ದೀರ್ಘ ರಜೆಯ ನಂತರ ಇನ್ನೂ ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿರುವ ಮಕ್ಕಳ ಮೇಲೆ ಪೋಷಕರು ಪರೀಕ್ಷೆಯ ಗುಮ್ಮನನ್ನು ಈಗಲೇ ಹೇರಬಾರದು. ಪ್ರಾಥಮಿಕ ಶಾಲಾ ಮಕ್ಕಳ ಜೊತೆಗಂತೂ ಈ ವರ್ಷ ಪರೀಕ್ಷೆ ಅಂಕಗಳ ವಿಷಯದ ಚರ್ಚೆಯನ್ನು ಮಾಡಲೇಬಾರದು.

1  ಶಾಲೆಯಿಂದ ಬಂದ ಕೂಡಲೇ ಹೋಂವರ್ಕ್‌, ಪರೀಕ್ಷೆ, ಅಂಕಗಳನ್ನು ಕುರಿತು ಮಾತನಾಡದಿದ್ದರೆ ಒಳ್ಳೆಯದು. ಮಗುವಿನ ದೇಹ ಅದರ ಶಾಲೆಯ ಅನುಭವಗಳನ್ನು ಹೇಳುತ್ತಿರುತ್ತದೆ. ಪೋಷಕರು ನಿಧಾನವಾಗಿ ಮಗುವಿನ ಅನುಭವದ ಪ್ರಪಂಚದಲ್ಲಿ ಇಣುಕಬೇಕಾಗುತ್ತದೆ. ಇದಕ್ಕಾಗಿ ಕೆಲವು ಸರಳ ಪ್ರಶ್ನೆಗಳನ್ನು ಕೇಳಬಹುದು. ಶಾಲೆಯಲ್ಲಿ ಮನೆಯವರು ಯಾರೂ ಇರಲಿಲ್ಲ ಅನಿಸುತ್ತಿತ್ತಾ? ಹಸಿವಾದರೆ, ಬಾಯಾರಿಕೆಯಾದರೆ, ನಿದ್ದೆ ಬಂದರೆ, ಸೂಸೂ ಬಂದರೆ ಯಾರನ್ನು ಕೇಳೋದು ಅಂತ ಅನಿಸಿತ್ತಾ? ಶಾಲೆ ಬಿಡೋದು ತಡ ಆದ್ರೆ, ಅಮ್ಮ ಕರಕೊಂಡು ಹೋಗಕ್ಕೆ ಬರದೆ ಹೋದ್ರೆ ಅಂತ ಭಯವಾಗಿತ್ತಾ? ಯಾರ ಜೊತೆಗಾದ್ರೂ ಮಾತಾಡ್ಬೇಕೂ ಆಟ ಆಡ್ಬೇಕು ಅಂತ ಅನಿಸಿತ್ತಾ? ಆಗ ಏನು ಮಾಡ್ಡೆ? ಅಳು ಬಂತಾ?- ಮುಂತಾಗಿ. “ಅನಿಸುವಿಕೆ”ಯ ಕುರಿತು ಮಾತನಾಡುವುದು ಅತ್ಯಗತ್ಯ. ಏಕೆಂದರೆ ಇದು ಭಾವನಾತ್ಮಕ ಲೋಕದ ಅನುಭವಗಳನ್ನು ಹೊರತರುತ್ತದೆ.

2  ಮಕ್ಕಳ ಅನುಭವವನ್ನು ದೊಡ್ಡವರ ಪ್ರಪಂಚದಿಂದ ಅಳೆಯಬಾರದು. ಕಡಿಮೆ ಮಾತನಾಡುತ್ತಾ, ಹೆಚ್ಚುಹೆಚ್ಚು ಪ್ರಶ್ನೆ ಕೇಳುತ್ತಾ ಹೋದರೆ ಮಕ್ಕಳ ಮನೋಪ್ರಪಂಚವನ್ನು ತಲುಪುವುದು ಸುಲಭ. ಆಸಕ್ತಿಯಿಂದ ಕೇಳಿದಷ್ಟೂ ಮಗುವಿನ ನರಮಂಡಲ ಶಾಂತವಾಗಿ ಭಯ ಹಿಂದೆ ಸರಿಯುತ್ತದೆ.

3  ದುಃಖವಾಗುವುದು, ಭಯವಾಗುವುದು ದೌರ್ಬಲ್ಯ ಎನ್ನಿಸುವಂತೆ ಬೇರೆಯವರ ಉದಾಹರಣೆ ಕೊಡುವುದು ಹಾನಿಕಾರಕ. ಆತಂಕ ನಮ್ಮೆಲ್ಲರ ಸಹಜ ಅನುಭವ. ಧೈರ್ಯದ ಮಾತುಗಳ ಬುದ್ಧಿವಾದವನ್ನು ಭಯ ಮತ್ತು ಒತ್ತಡಗಳಲ್ಲಿರುವ ಮನಸ್ಸು ಸ್ವೀಕರಿಸುವುದಿಲ್ಲ. ಶಾಲೆಗೆ ಹೋಗುವುದು ಅನಿವಾರ್ಯ, ನಾವೆಲ್ಲಾ ನಿನ್ನ ಬೆಂಬಲಕ್ಕೆ ಯಾವಾಗಲೂ ಇದ್ದೇವೆ ಎನ್ನುವ ಮಾತನಾಡಬಹುದು.

4 ಶಾಲಾ ವಾತವಾರಣ ಸುರಕ್ಷಿತ ಎಂದು ಮಗುವಿಗೆ ಅನ್ನಿಸದಿದ್ದರೆ ಅದರಲ್ಲಿ ಮಗುವಿನದೋ ಅಥವಾ ಶಿಕ್ಷಕರದ್ದೋ ತಪ್ಪಿರಬೇಕು ಎಂದೇನಿಲ್ಲ. ಹೊಸ ವಾತಾವರಣಕ್ಕೆ ತೆರೆದುಕೊಳ್ಳುವುದಕ್ಕೆ ಮಗುವಿಗೆ ಸಹಾಯದ ಅಗತ್ಯವಿದೆ ಎಂದಷ್ಟೇ ತಿಳಿಯಬೇಕು. ಶಿಸ್ತು ಮತ್ತು ಶಿಕ್ಷೆ ಭಯವನ್ನು ಹೆಚ್ಚುಮಾಡುತ್ತವೆ ಎಂದು ಮರೆಯುವಂತಿಲ್ಲ.   

5  ದೈಹಿಕ ಆರೋಗ್ಯ ಮತ್ತೆಮತ್ತೆ ಏರುಪೇರಾಗುತ್ತಿದ್ದರೆ ತಜ್ಞ ಮನೋಚಿಕಿತ್ಸಕರ ಸಹಾಯ ಪಡೆಯಬಹುದು. ಮಕ್ಕಳು ಅಪರಿಚಿತರೊಡನೆ ಸುಲಭವಾಗಿ ತೆರೆದುಕೊಳ್ಳುವುದಿಲ್ಲ. ಹಾಗಾಗಿ ಪೋಷಕರಿಗೇ ಆಪ್ತಸಮಲೋಚಕರ ಸಹಾಯ ಹೆಚ್ಚಾಗಿ ಅಗತ್ಯವಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು