ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರೆಯನಿಳಿಸಿ ಮುನ್ನಡೆಯುತ...

ಸುಷ್ಮ ಸಿಂಧು 
Published 1 ಜನವರಿ 2024, 23:32 IST
Last Updated 1 ಜನವರಿ 2024, 23:32 IST
ಅಕ್ಷರ ಗಾತ್ರ

ನಿನ್ನೆಗಳ ನೋವಿನ ಹೊರೆ ಬಲು ಬಾರದ್ದು. ಕಳೆದ ವರ್ಷವನ್ನು ಅವಲೋಕಿಸಿಕೊಂಡಾಗ ಖುಷಿಯ ಸರತಿ ಪಟಪಟನೆ ಸಾಗಿದರೆ ನೋವುಗಳದ್ದು ಮುಗಿಯದ ಮೆರವಣಿಗೆ. ಮನವನ್ನು ಕುಗ್ಗಿಸಿ ಕಾಡುವ ಕಹಿ ನೆನಹುಗಳ ಸಹವಾಸ ಬೇಡವೇ ಬೇಡ ಎಂದರೂ ಅದನ್ನು ಹಾಗೇ ಸರಾಗವಾಗಿ ಎತ್ತಿಟ್ಟು ಹಗುರಾಗಿಬಿಡಲೂ ಆಗದು. ದೇಹಕ್ಕಾದ ಗಾಯದಂತೆಯೇ ಈ ಮಾನಸಿಕ ವ್ಯಾಧಿಗಳೂ ಮಾಯಲು ಸಮಯ ಬೇಕು. ದೈಹಿಕ ಗಾಯ ಕೆರೆದಷ್ಟೂ ಉಲ್ಬಣವಾಗುವಂತೆ ಘಟನೆ ಯಾವುದೇ ಕಾಲದ್ದಾದರೂ ಸ್ಮೃತಿಯನ್ನು ಕೆದುಕಿದಷ್ಟೂ ಮನದಂಗಳದಲ್ಲಾದ ಗಾಯವೂ ನೋಯುತ್ತಾ ಗಾಸಿಯುಂಟು ಮಾಡುತ್ತಲೇ ಇರುವವು. 

ಒಬ್ಬೊಬ್ಬರ ವೇದನೆ ಒಂದೊಂದು ರೀತಿಯದ್ದಾದರೂ, ಅದು ಮನವನ್ನು ಹಿಂಡುವುದನ್ನು ಬಿಟ್ಟು ಹಿಂದೆ ಸರಿಯಲು ಸಾಕಷ್ಟು ಕಾಲವನ್ನೇ ತೆಗೆದುಕೊಂಡರೂ ಭಾವನಾತ್ಮಕವಾಗಿ ಬಲಗೊಂಡು ಪುನಃ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂಬ ಭರವಸೆಯೊಂದಿಗೆ ನಾಳೆಗಳೆಡೆಗೆ ನಡೆಯಬೇಕಿದೆ. ಮತ್ತೆ ನವಚೈತನ್ಯದೊಂದಿಗೆ ಹೊಸತನ್ನು, ಹೊಸವರುಷವನ್ನು ಸ್ವಾಗತಿಸಲು ಸಾಧ್ಯವಿದೆ.

ಮನೋಸ್ಥೈರ್ಯ ಕಸಿಯುವ ನಿನ್ನೆಗಳು

ನಿನ್ನೆಯ ನೋವುಗಳು ಇವತ್ತನ್ನು ಆವರಿಸಿಕೊಳ್ಳಲು ಬಿಟ್ಟಷ್ಟೂ ಮನೋಸ್ಥೈರ್ಯದ ಮಟ್ಟ ಕೆಳಗಿಳಿಯುತ್ತಲೇ ಬರುವುದು. ಅತಿಯಾಗಿ ಯೋಚಿಸುವ ಮೂಲಕ ನಾವು ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಇನ್ನೂ ಹೆಚ್ಚು ಮಾಡಿಕೊಳ್ಳುತ್ತೇವೆ. ಪರಿಹಾರಕ್ಕೆ ಬೇಕಿರುವುದು ಯೋಚಿಸಿ ಚಿಂತೆ ಹಚ್ಚಿಸಿಕೊಳ್ಳುವುದಲ್ಲ, ಯೋಜಿಸಿ ಕಾರ್ಯಪ್ರವೃತ್ತರಾಗುವುದು. ಹಾಗಾಗಲು ಮನೋಬಲ ಉತ್ತಮ ಮಟ್ಟದಲ್ಲಿರುವುದು ಅಗತ್ಯ. ಮುಂದಿನ ಜೀವನದ ಸಾಧ್ಯತೆಗಳನ್ನು ಅಪ್ಪಿಕೊಳ್ಳಲು ಹಳೆಯ ಬೇನೆಗಳನ್ನು ಅಲ್ಲಿಯೇ ಬಿಟ್ಟು ಹೊಸದನ್ನು ಸ್ವಾಗತಿಸಲು ಸಜ್ಜಾಗಬೇಕು. ನವವರುಷವೊಂದು ಅವಕಾಶ. ಹೊಸತನವೆನ್ನುವುದು ಮನಸ್ಸನ್ನು ಪ್ರಫುಲ್ಲಗೊಳಿಸಿ ಮನೋಲ್ಲಾಸ ತುಂಬಿಕೊಳ್ಳಲು ಒದಗಿರುವ ಸುಯೋಗ. ಅದರ ಸದುಪಯೋಗ ಪಡೆದುಕೊಂಡಾಗ ಸಮಸ್ಯೆಗಳಿಂದ ಬೆಂದ ಚಿತ್ತ ತಾನಾಗೇ ತಹಬದಿಗೆ ಬರುವುದು. ನಿನ್ನೆಯ ಹಿಂಸೆಗಳು ಧೈರ್ಯ-ನೆಮ್ಮದಿಗಳನ್ನು ದೋಚಲು ಬಿಡದಿದ್ದಲ್ಲಿ ಶಾಂತಿ-ಸಮಾಧಾನ-ಸ್ಥೈರ್ಯದ ವಿಚಾರದಲ್ಲಿ ನಾವು ಬಹಳವೇ ಶ್ರೀಮಂತರಾಗಿರುವೆವು.

ಈ ಕ್ಷಣದಲ್ಲಿ ಬದುಕಿದರೆ ಪರಿತಾಪವಿರದು

ಹಿಂದಿನದ್ದರಲ್ಲೇ ಕಳೆದು ಹೋಗಿ ಕಾಲ ಹರಣ ಮಾಡಿಕೊಂಡರೆ ನಾವು ಕಳೆದು ಕೊಳ್ಳುವುದು ಏನನ್ನು? ಈ ದಿನದ ಈ ಕ್ಷಣವನ್ನು. ʼಅಯ್ಯೋ ಹಾಗೆ ಮಾಡಬಹುದಿತ್ತುʼ ʼಛೇ ಅದು ಹೊಳೆಯಲೇ ಇಲ್ಲʼ ಎಂಬ ಪರಿತಾಪ ಜಾಸ್ತಿ ಇರುವುದೇ ವರ್ತಮಾನದಲ್ಲಿ ಮನಸ್ಸು ನಿಂತಿಲ್ಲದಿರುವುದರಿಂದ. ಅನ್ಯಮನಸ್ಕರಾಗಿ, ನಿರಾಸಕ್ತರಾಗಿ ದಿನದೂಡಿಬಿಟ್ಟಾಗ ಕಳೆದುಹೋದುದರ ಬಗ್ಗೆ ಬೇಸರ, ಪಶ್ಚಾತ್ತಾಪಗಳೇ ಉಳಿಯುವವು ಹಾಗೂ ಹೊಸ ವರುಷವೂ ಅದರಲ್ಲೇ ಕಳೆಯುವುದು. ವೇದನೆಯಲ್ಲೇ ಮನಸ್ಸಿಟ್ಟರೆ ನಾವು ಮತ್ತಷ್ಟು ವೇದನೆಯನ್ನೇ ಕಲೆಹಾಕುತ್ತಲಿರುತ್ತೇವೆ. ನಮ್ಮ ವರ್ತಮಾನ, ಭವಿಷ್ಯಗಳೂ ಅರಿವಿಲ್ಲದಂತೆ ನಿನ್ನೆಗಳಾಗುತ್ತಲೇ ಇವೆ. ಈ ಭೂತದ ಬುತ್ತಿಗೆ ಏನನ್ನು ಸೇರಿಸಬೇಕು ಎಂಬ ಆಯ್ಕೆಯನ್ನು ಪ್ರಜ್ಞಾಪೂರ್ವಕವಾಗಿ ಮಾಡಿಕೊಳ್ಳದಿದ್ದರೆ ಅಗಿದು, ಜಗಿದು ದುಃಖಿಸಲು ನಿರಂತರವಾಗಿ ಆಹಾರ ಸಿಗುತ್ತಲೇ ಹೋಗುವುದು.

ನಿನ್ನೆಯ ನೋವಿಗೆ ಅಂಟದೇ ಉತ್ತಮ ನಾಳೆಗಳತ್ತ ನಿರಾಳವಾಗಿ ತೆರಳಲು ಒಂದಷ್ಟು ಮಾನಸಿಕ ದೃಢತೆ, ಸಿದ್ಧತೆ ಬೇಕು. ಅದನ್ನು ಹೊಂದುವುದು ಹೇಗಿದೆ ಇಲ್ಲಿದೆ ಮಾರ್ಗ: 

ಹೊಸತನದತ್ತ ಹೆಜ್ಜೆ ಹಾಕುತ್ತಾ ಹೊಸ ವರ್ಷವನ್ನು ಸ್ವಾಗತಿಸುತ್ತಾ:

ಹೊಸದಕ್ಕೆ ಜಾಗ ಮಾಡಿಕೊಡಿ. ಹಳೆಯದರಲ್ಲೇ ಉಳಿದುಬಿಟ್ಟರೆ ಜಾಡ್ಯತನ ಆವರಿಸಿಬಿಡುವುದು. ಹೊಸ ಕಲಿಕೆ, ಹವ್ಯಾಸಗಳು, ಹೊಸ ಜನರ ಪರಿಚಯ-ಸ್ನೇಹ… ಹೊಸತನಕ್ಕೆ ತೆರೆದುಕೊಂಡಷ್ಟೂ ನವೋಲ್ಲಾಸ ಮನ ತುಂಬುವುದು.

  • ʼನಾನು ನಿನ್ನೆಗಳ ನೋವುಗಳನ್ನೇ ಆನಂದಿಸುತ್ತಿದ್ದೀನಾ?ʼ ಪ್ರಶ್ನಿಸಿಕೊಳ್ಳಿ. ಹಿಂಸೆಗಳೊಡನೆ ದೀರ್ಘಕಾಲ ಬದುಕಿದ್ದಾಗ ಕೆಲವೊಮ್ಮೆ ನಮಗೇ ಗೊತ್ತಿಲ್ಲದೇ ಅದೇ ಪರಿಪಾಠವಾಗಿಬಿಟ್ಟಿರುವುದು. ಉದಾ: ʼನಾನು ಅಯೋಗ್ಯʼ ಎಂದು ನಿರ್ಧರಿಸಿಕೊಂಡು ಬಿಟ್ಟರೆ ತಿದ್ದಿಕೊಂಡು ನಡೆಯುವ, ನೂತನ ಪ್ರಯತ್ನಗಳನ್ನು ಮಾಡುವ ಸಂಕಟಗಳ ಅಗತ್ಯವಿರದು.

  • ಇವತ್ತು ಒಂದು ಹೆಜ್ಜೆ ಎತ್ತಿಡಲೂ ಕಷ್ಟವೆನಿಸುತ್ತಿರಬಹುದು. ಆದರೆ ʼಈ ಹಂತವೇ ಅಂತಿಮವಲ್ಲ. ಈ ಸ್ಥಿತಿಯಿಂದಲೂ ನಾನು ಹೊರಬರಬಲ್ಲೆʼ ಎನ್ನುವುದನ್ನು ನೆನಪಿಸಿಕೊಳ್ಳುತ್ತಿರಿ.

  • ಹಿಡಿತದಲ್ಲಿಲ್ಲದನ್ನು ಹಾಗೇ ಇರಲು ಬಿಡುವ, ಇರುವಂತೆಯೇ ಸ್ವೀಕರಿಸುವ ಮನಸ್ಸು ಮಾಡಿ. Letting go... ಎನ್ನುವುದು ಒಂದು ಅಭ್ಯಾಸ. ಅಭ್ಯಸಿಸಿದಷ್ಟೂ ಬದುಕು ಹಗುರಾಗುವುದು.

  • ದೈಹಿಕ-ಮಾನಸಿಕವಾಗಿ ಕ್ರಿಯಾಶೀಲವಾಗಿಡುವ ಚಟುವಟಿಕೆಗಳು, ಸ್ವ-ಆರೈಕೆ ರೂಡಿಯಾಗಲಿ. ಹಳೆಯ ನೋವುಗಳು ಮಾಯಲು ಅದರಿಂದ ವಿಚಲಿತರಾಗಿ ಬೇರೆ ಕೆಲಸಗಳಲ್ಲಿ ನಿರತರಾಗುವುದು ಒಳ್ಳೆಯ ಔಷಧವಾಗಬಲ್ಲದು.

  • ಆನಂದಕ್ಕೆ ಆದ್ಯತೆ ನೀಡಿ. ಕೆಲಸವನ್ನು ಪರ್ಫೆಕ್ಟ್‌ ಆಗಿ ಮಾಡಬೇಕು, ದೊಡ್ಡ ಸಾಧನೆ ಮಾಡಿದರಷ್ಟೇ ಸಂತೋಷ ಎಂಬೆಲ್ಲಾ ನಿಯಮಗಳಿಂದ ಹೊರ ಬಂದು ಈ ವರ್ಷ ಪುಟ್ಟಪುಟ್ಟ ಖುಷಿಗಳನ್ನು ಕಲೆ ಹಾಕಿ ಹರ್ಷಿಸುವ ನಿರ್ಧಾರ ಮಾಡಿ. ಕ್ರಮೇಣ ನಲುಗುವ ಮನ ನಲಿವಿನ ಗೂಡಾಗಿ ಮಾರ್ಪಾಡಾಗುವುದು.

  • ಜೀವನ ಪಾಠಕ್ಕೆ ಗಮನ ನೀಡಿ. ನಿರಾಶಾದಾಯಕ ಅನುಭವಗಳಿಂದ ಸಂಬಂಧಗಳು, ಬದುಕು ಹಾಗೂ ನಿಮ್ಮ ಬಗ್ಗೆ ಏನನ್ನು ಕಲಿತಿರಿ ಅವಲೋಕಿಸಿಕೊಳ್ಳಿ. ಕಳೆದ ವರ್ಷದ ಕಲಿಕೆ ನವ ವರ್ಷದ ನೂತನ ಪ್ರಾರಂಭಗಳಿಗೆ ದಾರಿದೀಪವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT