ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ: ಹವ್ಯಾಸಗಳಿಗೆ ಹತ್ತಿರ, ಒತ್ತಡಗಳಿಂದ ದೂರ

Last Updated 25 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಅನುದಿನವೂ ಅನುರಣಿಸುವ ಏಕತಾನತೆಯನ್ನು, ಉತ್ತರವೇ ಇರದ ಪ್ರಶ್ನೆಗಳ ಸುಳಿಯನ್ನು ಬಿಡಿಸಿಕೊಂಡು ಮುಂದಡಿಯಿಡುವ ಚೈತನ್ಯವನ್ನು ಹವ್ಯಾಸಗಳು ನಮಗೆ ಒದಗಿಸುತ್ತವೆ.

*

ಬದುಕನ್ನು ಆಗಾಗ ಹೊಸ ಬೆಳಕಿನ ಪ್ರಭೆಯಲ್ಲಿ ಅವಲೋಕಿಸಿ, ಹಳೆಯದನ್ನು ತ್ಯಜಿಸಿ, ಹೊಸತನವನ್ನು ರೂಢಿಸಿಕೊಳ್ಳದಿದ್ದರೆ ಜೀವನದ ಉತ್ಸಾಹವೂ ಸೌಂದರ್ಯವೂ ಸವಿಯೂ ಕಳೆದುಹೋಗಿ ಪ್ರತಿದಿನವೂ ಹೊರಲಾರದ ಭಾರ ಹೊತ್ತುಕೊಂಡು ಆಯಾಸಪಡಬೇಕಾದೀತು. ನಿಂತ ನೀರು ಒತ್ತಡವನ್ನು ಸೃಷ್ಟಿಸಿ, ಹರಿದು ಹಗುರಾಗುವ ಮಾರ್ಗವಿಲ್ಲದೆ ಮಲಿನವಾಗುವುದರ ಜೊತೆಗೆ ಹಿಡಿದಿಟ್ಟ ಕಟ್ಟಡದ ಬುನಾದಿಯನ್ನೇ ಅಭದ್ರಗೊಳಿಸುತ್ತದೆ.

ಜೀವನದ ಅನೇಕ ಸವಾಲುಗಳಿಗೆ, ಬೇಸರ, ಒತ್ತಡ, ಅಶಾಂತಿ, ಅತೃಪ್ತಿಗಳಿಗೆ ಚಲನಶೀಲತೆಯೊಂದೇ ಪರಿಹಾರ. ಕಹಿ ಘಟನೆಗಳನ್ನು, ಕಹಿ ಸಂಬಂಧಗಳನ್ನು, ಸೋಲು, ನೋವು, ನಿರಾಸೆ, ಅವಮಾನಗಳನ್ನು ಎಷ್ಟೆಂದು ಒಳಗಿಟ್ಟುಕೊಳ್ಳುವುದು? ಪದೇ ಪದೇ ಅವುಗಳನ್ನೇ ನೆನೆಸಿಕೊಂಡು ಕೊರಗುವುದರಲ್ಲಿ ಯಾವ ಪುರುಷಾರ್ಥ ಸಾಧನೆಯಿದೆ? ಅವುಗಳನ್ನು ಹಿಂದೆ ಬಿಟ್ಟು ಒಂದೇ ಒಂದು ಹೆಜ್ಜೆ ಮುಂದಿಟ್ಟರೂ ಸಾಕು ಕಣ್ಣ ಮುಂದೆಯೇ ಇರುವ ಅನಂತ ಅವಕಾಶಗಳೂ, ಬಿಡುಗಡೆಯ ದಾರಿಗಳೂ ಕಾಣುವುವು. ಅನುದಿನವೂ ಅನುರಣಿಸುವ ಏಕತಾನತೆಯನ್ನು, ಉತ್ತರವೇ ಇರದ ಪ್ರಶ್ನೆಗಳ ಸುಳಿಯನ್ನು ಬಿಡಿಸಿಕೊಂಡು ಮುಂದಡಿಯಿಡುವ ಚೈತನ್ಯವನ್ನು ಹವ್ಯಾಸಗಳು ನಮಗೆ ಒದಗಿಸುತ್ತವೆ.

ಎಲ್ಲ ಸಮಸ್ಯೆಗಳನ್ನು ಭೂತಗನ್ನಡಿಯಲ್ಲಿ ನೋಡುವ ಮನಸ್ಸಿನ ತ್ರಾಸದಾಯಕ ಕೆಲಸಕ್ಕೆ ವಿರಾಮ ನೀಡಿ, ಸಮಸ್ಯೆಗಳು ಎಂದರೆ ವಿಶಾಲ ನೀಲಾಗಸದಲ್ಲಿ ತೇಲಿಹೋಗುತ್ತಿರುವ ಸಣ್ಣ ಮೋಡವಷ್ಟೇ ಎನಿಸುವ ನಿರಾತಂಕ, ಹಗುರ ಭಾವವನ್ನು ಹವ್ಯಾಸಗಳಿಂದ ಮೈಗೂಡಿಸಿಕೊಳ್ಳುವುದು ಸಾಧ್ಯವಿದೆ. ನಾವು ದಿನನಿತ್ಯದ ಏಳು ಬೀಳುಗಳನ್ನು ಎಷ್ಟು ಸುಲಲಿತವಾಗಿ, ಸರಾಗವಾಗಿ ನಿರ್ವಹಿಸುತ್ತೇವೆ ಎನ್ನುವುದರ ಆಧಾರದ ಮೇಲೆ ನಾವೆಷ್ಟು ಪ್ರಬುದ್ಧರಾಗುತ್ತಿದ್ದೇವೆ ಎನ್ನುವುದನ್ನು ಅಳೆಯಬಹುದು. ಎಲ್ಲವನ್ನೂ ಬಹಳ ಕಷ್ಟಪಟ್ಟು ಪ್ರಯಾಸದಿಂದ ಮಾಡಬೇಕು ಎನ್ನುವುದು ನಮ್ಮ ಭ್ರಮೆಯಷ್ಟೇ. ನಮ್ಮ ಬದುಕಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಬೇಕೆನ್ನುವ ಒತ್ತಡದಿಂದ ಉಂಟಾದ ಈ ಸ್ವಭಾವವನ್ನು ಕೈಬಿಟ್ಟು ಹರಿಯುವ, ಹಾರುವ, ಕುಣಿದು ಕುಪ್ಪಳಿಸಿವ, ನಲಿಯುವ ಪ್ರಾಕೃತಿಕ ಚಲನಶೀಲತೆಯನ್ನು, ಬಾಲ್ಯದ ವಿನೋದವನ್ನು, ನಿರಾಳತೆಯ ಸೌಖ್ಯವನ್ನು ಕಂಡುಕೊಳ್ಳುವ ವಿಧಾನವೇ ಹವ್ಯಾಸಗಳು. ವಿರಾಮದ ವೇಳೆಯಲ್ಲಿ ನಾವೇನು ಮಾಡುತ್ತೇವೆ ಎನ್ನುವುದು ನಮ್ಮ ಅಭಿರುಚಿ, ವ್ಯಕ್ತಿತ್ವ, ಜೀವನದೃಷ್ಟಿಯನ್ನು ತಿಳಿಸಿಕೊಡುತ್ತದೆಯಾದ್ದರಿಂದ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಳ್ಳುವಾಗ ಪರಸ್ಪರರ ಹವ್ಯಾಸಗಳೇನು ಎಂದು ತಿಳಿದುಕೊಳ್ಳಲು ಇಚ್ಛಿಸುತ್ತೇವೆ.

ಹವ್ಯಾಸಗಳು ಸರಳವಾಗಿರಬೇಕು; ಹೆಚ್ಚು ಖರ್ಚಿಲ್ಲದ, ಸಮಯವನ್ನು, ಮನೆಯ ಸ್ಥಳಾವಕಾಶವನ್ನು ಅತಿಯಾಗಿ ಬೇಡದ, ಆದಷ್ಟೂ ಮತ್ತೊಬ್ಬರ ಸಹಾಯವಿಲ್ಲದೆ ಒಂಟಿಯಾಗಿಯೇ ಮಾಡಬಹುದಾದ ಕ್ರಿಯೆಗಳಾಗಿರಬೇಕು. ಓದುವುದು ಹಲವರ ಹವ್ಯಾಸವಾದರೂ ತೀರ ಒತ್ತಡಕ್ಕೆ ಒಳಗಾದಾಗ ಹೊಸ ವಿಚಾರಗಳನ್ನು, ಸಂಕೀರ್ಣ ವಿಷಯಗಳನ್ನು ಗ್ರಹಿಸುವುದು ಕಷ್ಟ. ಹಾಗಾಗಿ ಒತ್ತಡ ನಿವಾರಿಸಬಲ್ಲ, ಸುಲಭ ಓದಿಗೆ ಸಿಗಬಲ್ಲ ನಮ್ಮ ನೆಚ್ಚಿನ ವಸ್ತು–ವಿಷಯ, ಲೇಖಕರ, ಪುಸ್ತಕಗಳ ಪಟ್ಟಿ ಮಾಡಿಕೊಳ್ಳುವುದು ಒಳ್ಳೆಯದು; ಅಂತಹ ಪುಸ್ತಕಗಳ ಸಂಗ್ರಹಣೆಯೂ ಒಂದು ಉತ್ತಮ ಹವ್ಯಾಸ. ಪ್ರತಿಯೊಂದು ಸಾರಿ ಓದಿದಾಗಲೂ ಹೊಸ ಹೊಳಹು ಮೂಡಿಸಬಲ್ಲ ಕಾವ್ಯದ ಪುಸ್ತಕಗಳು, ಸಾಧಾರಣ ವಿಷಯಗಳ ಅಸಾಧಾರಣ ರಸಮಯ ನಿರೂಪಣೆಯಿಂದ ಮನಮುಟ್ಟುವ ಕೃತಿಗಳನ್ನು ಒತ್ತಡ ನಿವಾರಣೆಯ ಸಲಕರಣೆಗಳನ್ನಾಗಿ ಉಪಯೋಗಿಸಬಹುದು.

ಕಲಿಕೆಯು ನೆಮ್ಮದಿಯನ್ನು ನೀಡುತ್ತದಾದರೂ ಒತ್ತಡದಲ್ಲಿ ಸಿಲುಕಿದ್ದಾಗ ಹೆಚ್ಚು ಕಲಿಯುವುದು ಸಾಧ್ಯವಿಲ್ಲ. ಹಾಗಾಗಿ ಹವ್ಯಾಸ ತೀರ ಕಲಿಕಾ ಕೇಂದ್ರಿತವಾಗಿಯೂ, ಯಾವುದೋ ಗುರಿ ಮುಟ್ಟುವ ಕ್ರಿಯೆಯಾಗಿಯೂ ಇರದಿದ್ದರೆ ಒಳಿತು. ಪರಿಪೂರ್ಣತೆ ಎನ್ನುವ ಗೀಳಿಗೆ ಹವ್ಯಾಸಗಳನ್ನು ಮಂಕಾಗಿಸುವ, ಅವನ್ನು ನಾವು ಬೇರೆಯವರೊಡನೆ ಹಂಚಿಕೊಳ್ಳಲು ನಾಚುವಂತೆ ಮಾಡುವ ವಿಕೃತಿಯಿದೆ. ಹಾಗಾಗಿ ಪರಿಪೂರ್ಣತೆಯ ಗೀಳಿನಿಂದ ತಪ್ಪಿಸಿಕೊಂಡು ಆತ್ಮವಿಶ್ವಾಸ ಹೊಂದುವುದು ಅನಿವಾರ್ಯ. ಹವ್ಯಾಸಗಳು ಕ್ರಿಯಾಶೀಲತೆಯನ್ನು ಪ್ರಚೋದಿಸುವಂತಿರಬೇಕು.

ಕಲೆಯಷ್ಟು ಒತ್ತಡ ನಿವಾರಕ ಮತ್ತೊಂದಿಲ್ಲ. ಬಣ್ಣಗಳ ಸಹವಾಸ ಮನಸ್ಸಿನ ಕೊಳೆಯನ್ನು ತೊಳೆಯಬಲ್ಲದು. ಒಂದು ಕ್ಯಾನ್ವಾಸಿನ ಮೇಲೆ ಸುಮ್ಮನೆ ಎರಡು ಅಕ್ರಿಲಿಕ್ ಬಣ್ಣಗಳನ್ನು (ತಿಳಿನೀಲಿ, ಗುಲಾಬಿ, ಹಳದಿ-ಹಸಿರು) ಕಲೆಸುತ್ತಾ, ಬಿಳಿ ಬಣ್ಣವನ್ನು ಬೆರೆಸಿ ತಿಳಿಯಾಗಿಸುತ್ತಾ, ಇನ್ನೆರಡು ಹೊಂದಿಕೊಳ್ಳುವ ಬಣ್ಣಗಳನ್ನು ಪಕ್ಕದಲ್ಲಿ ಸೇರಿಸುತ್ತಾ, ಬಣ್ಣಗಳು ಹರಡುವ, ಸೇರುವ, ಸೇರಿ ಬೇರೆ ಬಣ್ಣವಾಗುವ ಆಟ ನೋಡುತ್ತಾ, ಕ್ಯಾನ್ವಾಸ್ ಎಲ್ಲ ಬಣ್ಣದಿಂದ ತುಂಬಿದ ಮೇಲೆ, ಒಂದು ಸುಲಭವಾದ ಮರ, ಮೀನು, ಮುಖ ಏನನ್ನಾದರೂ ಕಪ್ಪುಬಣ್ಣದಲ್ಲಿ ಬರೆದು ನಂತರ ಅದನ್ನು ಸುಂದರ ಚಿತ್ರವಾಗಿಯೂ, ಮನದ ದುಗುಡಕಳೆದ ಸಂಕೇತವಾಗಿಯೂ ಗೋಡೆಗೆ ತೂಗುಹಾಕಬಹುದು. ಒಳಾಂಗಣ ಅಲಂಕಾರ ಮತ್ತು ಅದರ ಅವಿಭಾಜ್ಯ ಅಂಗಗಳಾದ ಬೇಡದ ವಸ್ತುಗಳನ್ನು ಹೊರಗೆಸೆಯುವ ಡಿ-ಕ್ಲಟರಿಂಗ್, ಪೀಠೋಪಕರಣಗಳ ಮರುಜೋಡಣೆ, ಒಳಾವರಣಕ್ಕೆ ಹೊಂದಿಕೆಯಾಗುವ ಸುಂದರವಾದ ವಸ್ತುಗಳ ಆಯ್ಕೆ, ನಮ್ಮ ಸ್ಪೇಸನ್ನು ಬದಲಾಯಿಸುವುದರ ಮೂಲಕ ನಮ್ಮ ಮೂಡನ್ನೂ ಬದಲಾಯಿಸುತ್ತದೆ.

ಮನವನ್ನು ಅರಳಿಸಲು ಕಾಗದದಂತಹ ಮಾಂತ್ರಿಕ ಮಾಧ್ಯಮ ಮತ್ತೊಂದಿಲ್ಲ. ಅದರ ನಯವಾದ ಮೈಯನ್ನು ಮಡಿಸಿ ಬೇಕಾದ ಆಕಾರಕ್ಕೆ ಸುಲಭವಾಗಿ ಬಾಗಿಸಿ ಬಳುಕಿಸುವ ಓರಿಗಮಿ, ಪೇಪರ್ ಕ್ವಿಲ್ಲಿಂಗ್ ಮುಂತಾದವು; ಹಾಗೆಯೇ ಕಸೂತಿ, ರಂಗೋಲಿ ಮುಂತಾದ ಪಾರಂಪರಿಕ ಕಲೆಗಳು ಒತ್ತಡವನ್ನು ನಿವಾರಿಸುವಲ್ಲಿ ಯಾವ ಧ್ಯಾನಕ್ಕೂ ಕಡಿಮೆಯಿಲ್ಲ.

ಹವ್ಯಾಸ ಅಂದ ತಕ್ಷಣ ಮನಸ್ಸಿಗೆ ಬರುವ ಬಾಲ್ಯದಲ್ಲಿ ಆಪ್ಯಾಯಮಾನವಾಗಿದ್ದ ಅಂಚೆಚೀಟಿ, ನಾಣ್ಯ, ಪ್ರವಾಸಿತಾಣಗಳ ಫೋಟೊ ಸಂಗ್ರಹಣೆಯಂತೆ ಅನೇಕ ನಮ್ಮಿಷ್ಟದ ವಸ್ತುಗಳನ್ನು ಸಂಗ್ರಹಿಸಬಹುದು. ಕಲಾತ್ಮಕ ಕಿವಿಯೋಲೆ, ಕೀಚೈನುಗಳು, ಸಣ್ಣ ಸಣ್ಣ ಆಟಿಕೆ, ಬೊಂಬೆಗಳು, ಕರಕುಶಲ ವಸ್ತುಗಳು, ಗ್ರೀಟಿಂಗ್ ಕಾರ್ಡುಗಳು, ದೃಶ್ಯಕಲಾ ಪ್ರದರ್ಶನಗಳಲ್ಲಿ ಸಿಗುವ ಆರ್ಟ್ ಕ್ಯಾಟಲಾಗ್‌ಗಳು, ನಾವು ವೀಕ್ಷಿಸಿದ ಕಾರ್ಯಕ್ರಮಗಳ, ಭೇಟಿಕೊಟ್ಟ ವಿಶಿಷ್ಟ ತಾಣಗಳ ಮಾಹಿತಿ-ಪತ್ರಿಕೆಗಳು ಇನ್ನೂ ಅನೇಕ ಇಂತಹ ವಸ್ತುಗಳನ್ನು ಸಂಗ್ರಹಿಸಿ ನೆನಪಿನ ಪುಟಗಳನ್ನು ತಿರುವಿಹಾಕುವಂತೆ ಆಗಾಗ ನೋಡುತ್ತಿದ್ದರೆ ನಮ್ಮ ಲೋಕ ನಾವು ಬಾಳಿದ ಬದುಕಿನ ನೆನಪಿನಲ್ಲಿ ಸುಭದ್ರವಾಗಿದೆ ಎನ್ನುವ ಸಮಾಧಾನ ದೊರೆತು ಒತ್ತಡ ನಿವಾರಣೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT