ಮಂಗಳವಾರ, ಜನವರಿ 25, 2022
25 °C

ಕ್ಷೇಮ ಕುಶಲ: ಮನಸ್ಸಿಗೂ ಆರೋಗ್ಯ ಬೇಕು

ಡಾ. ವಿನಯ ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

Prajavani

ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯವನ್ನು ‘ಅದು ವ್ಯಕ್ತಿಯು ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಇರುವ ಸುಸ್ಥಿತಿ, ಕೇವಲ ಕಾಯಿಲೆ ಅಥವಾ ಊನವಿಲ್ಲದ ಸ್ಥಿತಿ ಅಲ್ಲ’ ಎಂದು ವ್ಯಾಖ್ಯಾನಿಸಿದೆ.

ಆರೋಗ್ಯವಂತರಾಗಿರಲು ನಾವು ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕಾಗಿದೆ. ಸತ್ವಯುತ ಆಹಾರ ಮತ್ತು ನಿಯಮಿತ ವ್ಯಾಯಾಮದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇಂದಿನ ಒತ್ತಡದ ದಿನಗಳಲ್ಲಿ ಮನಸ್ಸಿನ ಆರೋಗ್ಯಕ್ಕಾಗೆಂದೇ ಒಂದಿಷ್ಟು ಪ್ರತ್ಯೇಕ ಕಾಳಜಿಯನ್ನೂ ಮಾಡಬೇಕಿದೆ. ಏಕೆಂದರೆ ಮನಸ್ಸಿಗೂ ಮತ್ತು ದೇಹಕ್ಕೂ ಅವಿನಾಭಾವ ಸಂಬಂಧ. ಮನಸ್ಸಿನ ಕಾಯಿಲೆಗಳು ದೈಹಿಕ ಆರೋಗ್ಯದ ಮೇಲೆಯೂ, ದೇಹದ ಕಾಯಿಲೆಗಳು ಮನಸ್ಸಿನ ಆರೋಗ್ಯದ ಮೇಲೆಯೂ ಪ್ರಭಾವ ಬೀರುತ್ತವೆ.

ದೈನಂದಿನ ಬದುಕಿನಲ್ಲಿ ಮನಸ್ಸು ಭಾವನೆಗಳ ವೈಪರೀತ್ಯಕ್ಕೆ ಒಳಗಾಗುವುದು ಸಹಜ. ನಿತ್ಯಜೀವನದಲ್ಲಿ ಮನಸ್ಸಿಗೆ ದುಗುಡ, ಬೇಸರ, ಆತಂಕ, ಒತ್ತಡ, ಕಿರಿಕಿರಿ, ಗೊಂದಲ ಮೊದಲಾದ ಭಾವನೆಗಳು ಸಾಮಾನ್ಯ. ಇಂತಹ ಏರಿಳಿತಗಳನ್ನು ನಿಭಾಯಿಸಿ ಮನಸ್ಸನ್ನು ಪ್ರಶಾಂತವಾಗಿರಿಸಿಕೊಳ್ಳುವುದು ಒಂದು ಕೌಶಲ. ಸದಾ ಚಟುವಟಿಕೆಯಿಂದಿರುವುದು ಮತ್ತು ಒಂದಿಷ್ಟು ಸೃಜನಾತ್ಮಕ ಕ್ರಿಯೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ಮನಸ್ಸನ್ನು ಸ್ಥಿರವಾಗಿಡಲು ಸಹಕಾರಿಯಾಗಬಲ್ಲದು ಎನ್ನುತ್ತವೆ ಅಧ್ಯಯನಗಳು.

ವೃತ್ತಿಜೀವನದ ಜೊತೆಯಲ್ಲಿ ನಮ್ಮ ಆಸಕ್ತಿಯ ಹವ್ಯಾಸಗಳನ್ನು ಪೋಷಿಸಿಕೊಂಡು ಮುಂದೆ ಸಾಗುವುದು ಈ ನಿಟ್ಟಿನಲ್ಲಿ ಬಹಳವೇ ಮುಖ್ಯ ಸಂಗೀತ, ಓದು-ಬರಹ, ಚಿತ್ರಕಲೆ, ನೃತ್ಯ, ವಾದ್ಯಗಳನ್ನು ನುಡಿಸುವಿಕೆ, ಹೂದೋಟದ ಆರೈಕೆ ಮೊದಲಾದ ಚಟುವಟಿಕೆಗಳು ಮೆದುಳಿನ ಕ್ಷಮತೆಯನ್ನು ಹೆಚ್ಚಿಸಬಲ್ಲವು. ಸಂಗೀತ, ನೃತ್ಯ ಮೊದಲಾದ ಲಲಿತಕಲೆಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ಮೆದುಳಿನ ರಕ್ತಪೂರೈಕೆ ಕೂಡ ಉತ್ತಮಗೊಳ್ಳುತ್ತದೆ. ಮುಖ್ಯವಾಗಿ ಮೆದುಳಿನ ಅಲೆಗಳನ್ನು ನಿಧಾನಗೊಳಿಸುವ ಈ ಕ್ರಿಯೆಗಳು ವ್ಯಕ್ತಿಯ ಏಕಾಗ್ರತೆಯನ್ನು ಹೆಚ್ಚಿಸುವುದರ ಮೂಲಕ ಆತನ ಕಾರ್ಯಕ್ಷಮತೆಯನ್ನು ಸುಧಾರಿಸಬಲ್ಲವು. ಈ ಸೃಜನಾತ್ಮಕ ಚಟುವಟಿಕೆಗಳು ಒತ್ತಡ ನಿರ್ವಹಣೆಗೂ ನೆರವಾಗಬಲ್ಲವು. ವ್ಯಕ್ತಿಯಲ್ಲಿ ಸಕಾರಾತ್ಮಕ ಭಾವನೆಗಳನ್ನು ತುಂಬಿ ಆತನ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಹ ಶಕ್ತಿ ಕೂಡ ಕಲೆಗೆ ಇದೆ. ಅಷ್ಟೇ ಅಲ್ಲದೆ ಈ ರೀತಿಯ ಸೃಜನಶೀಲ ಕ್ರಿಯೆಗಳಲ್ಲಿ ತೊಡಗಿಕೊಂಡಾಗ ಮೆದುಳು ಕೆಲವು ಮುಖ್ಯ ನರವಾಹಕಗಳನ್ನು ಉತ್ಪತ್ತಿ ಮಾಡುತ್ತದೆ. ಡೋಪಮಿನ್, ಸೆರೊಟೊನಿನ್, ಆಕ್ಸಿಟೋಸಿನ್ ಮತ್ತು ಎಂಡೋರ್ಫಿನ್ ಎಂಬುವು ಮುಖ್ಯವಾದುವು. ಈ ರಾಸಾಯನಿಕಗಳನ್ನು ಮನಸ್ಸಿಗೆ ಖುಷಿ ಮತ್ತು ಸಂತೃಪ್ತಿಯನ್ನು ಕೊಡುವ ರಾಸಾಯನಿಕಗಳು. ಈ ನರವಾಹಕಗಳು ಮೆದುಳಿನಲ್ಲಿ ಸ್ರವಿಸಿದಾಗ ಮನಸ್ಸು ಪ್ರಫುಲ್ಲವಾಗುತ್ತದೆ. ದುಗುಡ, ಬೇಸರ, ಒತ್ತಡವು ಕಳೆದು ಆಹ್ಲಾದಕರ ಅನುಭವವನ್ನು ಪಡೆಯುತ್ತದೆ.

ದೈನಂದಿನ ಜೀವನದ ನಮ್ಮ ಅನೇಕ ಚಟುವಟಿಕೆಗಳು ಮೆದುಳಿನಲ್ಲಿ ಇಂತಹ ರಾಸಾಯನಿಕಗಳು ಉತ್ಪತ್ತಿಯಾಗಲು ಕಾರಣವಾಗಬಹುದು.

ನಮ್ಮ ಒಡನಾಟದಲ್ಲಿರುವವರ ಕೆಲಸಗಳನ್ನು ಮತ್ತು ಸಣ್ಣ ಪುಟ್ಟ ಸಾಧನೆಗಳನ್ನೂ ಮನಸಾರೆ ಪ್ರಶಂಸಿಸಿದಾಗ, ನಮ್ಮ ಪ್ರೀತಿಪಾತ್ರರ ಕೈಗಳನ್ನು ಸ್ಪರ್ಶಿಸಿದಾಗ ಅಥವಾ ಆತ್ಮೀಯರನ್ನು ಆಲಿಂಗಿಸಿಕೊಂಡಾಗ, ಮಗುವಿನ ಲಾಲನೆಯಲ್ಲಿ ಸಮಯವನ್ನು ಕಳೆದಾಗ ಹಾಗೂ ಮುದ್ದು ಪ್ರಾಣಿಗಳ ಆರೈಕೆ ಮಾಡುವುದರಲ್ಲಿ ತನ್ಮಯರಾದಾಗ ಮೆದುಳಿನಲ್ಲಿ ಆಕ್ಸಿಟೋಸಿನ್ ಎಂಬ ರಸದೂತದ ಸ್ರವಿಕೆ ಶುರುವಾಗುತ್ತದೆ. ಪ್ರೀತಿಯ ಅಂತಃಸ್ರವ ಎಂದೇ ಕರೆಯಲ್ಪಡುವ ಈ ರಾಸಾಯನಿಕವು ಮನಸ್ಸನ್ನು ಪ್ರಪುಲ್ಲಗೊಳಿಸುತ್ತದೆ.

ನಾವು ಮಾಡಬೇಕೆಂದುಕೊಂಡ ಕೆಲಸಗಳನ್ನು ಸರಿಯಾದ ಕಾಲಾವಧಿಯಲ್ಲಿಯೇ ಪೂರೈಸುವುದು ಕೂಡ ಡೊಪಮಿನ್ ಎಂಬ ನರವಾಹಕದ ಸ್ರವಿಕೆಗೆ ಕಾರಣವಾಗಬಲ್ಲದು. ಅಷ್ಟೇ ಅಲ್ಲ, ನಮ್ಮಿಷ್ಟದ ಕೆಲಸಗಳಿಗಾಗಿ ಒಂದಿಷ್ಟು ಸಮಯವನ್ನು ತೆಗೆದಿಡುವುದು, ನಮ್ಮ ವೈಯಕ್ತಿಕ ಆರೈಕೆಯತ್ತಲೂ ಗಮನವಹಿಸುವುದು, ಬದುಕಿನ ಸಣ್ಣ ಪುಟ್ಟ ಖುಷಿಗಳನ್ನೂ ಪ್ರೀತಿಪಾತ್ರರೊಡನೆ ಹಂಚಿಕೊಂಡು ಸಂಭ್ರಮಿಸುವುದೂ ಈ ರಾಸಾಯನಿಕದ ಸ್ರವಿಕೆಗೆ ಕಾರಣವಾಗುತ್ತದೆ.

ನಾವು ಸಂಕಲ್ಪ ಮಾಡಿದ ವಿಚಾರಗಳನ್ನು ಕಾರ್ಯಗತಗೊಳಿಸಲು ವಿಫಲವಾದಾಗ ಮನಸ್ಸು ಕುಗ್ಗುವುದೂ ಈ ರಾಸಾಯನಿಕವು ಇಳಿಮುಖವಾಗುವುದರಿಂದಲೇ.

ಮನಸ್ಸನ್ನು ಸಮಸ್ಥಿತಿಯಲ್ಲಿಡುವ ಮತ್ತೊಂದು ನರವಾಹಕ ಸೆರಟೊನಿನ್. ಮನಸ್ಸಿನ ಭಾವನೆಗಳ ಸಮತೋಲನ ಸಾಧಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ದೈಹಿಕ ಚಟುವಟಿಕೆಗಳಾದ ಓಟ, ನಡಿಗೆ, ಯೋಗ, ಈಜು, ಸೈಕಲ್ ಸವಾರಿ ಮೊದಲಾದುವು ಸೆರಟೊನಿನ್ ಉತ್ಪಾದನೆಗೆ ಪ್ರಚೋದಿಸುತ್ತವೆ. ಧ್ಯಾನವೂ ಈ ದಿಸೆಯಲ್ಲಿಯೇ ನೆರವಾಗುವುದು. ಪ್ರಕೃತಿಯ ಮಡಿಲಲ್ಲಿದ್ದಾಗ ಹಾಗೂ ಗಿಡಮರಗಳ ಆರೈಕೆಯಲ್ಲಿ ತಲ್ಲೀನರಾದಾಗ ಮನಸ್ಸು ಆಹ್ಲಾದಗೊಳ್ಳುವುದೂ ಈ ಕಾರಣದಿಂದಾಗಿಯೇ.

ನಾವು ಮನಸ್ಸು ಬಿಚ್ಚಿ ನಕ್ಕಾಗ, ತಮಾಷೆಯ ಸಂಗತಿಗಳನ್ನು ವೀಕ್ಷಿಸಿದಾಗ ನಮ್ಮ ಮನಸ್ಸು ಚೇತೋಹಾರಿಯಾಗಿರುತ್ತದೆ. ನಮ್ಮ ಬಾಲ್ಯದ ಸ್ನೇಹಿತರನ್ನು ಅಥವಾ ಆತ್ಮೀಯರಾದ ಬಂಧು–ಬಾಂಧವರನ್ನು ಭೇಟಿಯಾದಾಗ ಮನಸ್ಸು ಪುಟಿದೆದ್ದು ಕುಣಿಯುತ್ತದೆ. ಒಂದಿಷ್ಟು ಸಮಯ ನಿತ್ಯದ ಒತ್ತಡ, ಜಂಜಾಟ ಎಲ್ಲವೂ ಮರೆತೇ ಹೋದಂತಾಗುತ್ತದೆ. ಇವೆಲ್ಲವೂ ಎಂಡಾರ್ಫಿನ್ ಎಂಬ ರಾಸಾಯನಿಕದ ಪರಿಣಾಮ. ನಮ್ಮ ದೈಹಿಕ ಹಾಗೂ ಮಾನಸಿಕ ನೋವುಗಳನ್ನು ಕಡಿಮೆ ಮಾಡುವ ಇದನ್ನು ನೋವು ನಿವಾರಕ ಎಂದೇ ಕರೆಯಲಾಗುತ್ತದೆ.

ಇಂತಹ ಸೂಕ್ಷ್ಮ ಸಂಗತಿಗಳನ್ನು ನಮ್ಮ ನಿತ್ಯದ ದಿನಚರಿಯಲ್ಲಿ ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಂಡಾಗ ಮನಸ್ಸು ಕೂಡ ಆರೋಗ್ಯವಾಗಿರಬಲ್ಲದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು