ಶನಿವಾರ, ಮಾರ್ಚ್ 25, 2023
22 °C

ಕ್ಷೇಮ ಕುಶಲ: ಆರೋಗ್ಯದ ಕಾಳಜಿ– ಅತಿಯಾದರೆ ಅಪಾಯ!

ಡಿ. ಎಂ. ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಎಲ್ಲರಿಗೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. ಅದು ಸರಿ. ಕೆಲವರಿಗೆ ಅತಿಯಾದ ಕಾಳಜಿ ಇರುತ್ತದೆ. ಇದು ತಪ್ಪು. ಯಾವುದಾದರೂ ಅಷ್ಟೆ. ಅತಿಯಾದರೆ ಅಪಾಯ. ಇತಿಮಿತಿಯಲ್ಲಿರುವುದೇ ಸುಖ ಜೀವನದ ಉಪಾಯ. ಆರೋಗ್ಯವಾಗಿರಲಿಕ್ಕೆ ನಿದ್ದೆ ಬೇಕೇ ಬೇಕು. ಅತಿಯಾದ ನಿದ್ರೆಯೂ ಅಪಾಯ. ನಿದ್ರಾಹೀನತೆಯಂತೆ ಅತಿಯಾದ ನಿದ್ರೆಯೂ ಒಂದು ರೋಗ.

ಕೆಲವರು ಹೆಚ್ಚು ತಿನ್ನುತ್ತಾರೆ. ತಿಂದದ್ದು ಪಚನವಾಗದಿದ್ದರೆ ಅದೊಂದು ಸಮಸ್ಯೆ. ಇನ್ನು ಕೆಲವರು ತೀರಾ ಕಡಿಮೆ ತಿನ್ನುತ್ತಾರೆ. ಅಗತ್ಯವಿರುವ ಪೋಷಕಾಂಶಗಳು ಸಿಗದೇ ಅವರು ಕೃಷರಾಗುತ್ತಾರೆ. ಹೆಚ್ಚು ತಿಂದರೆ ಅಜೀರ್ಣವಾಗುತ್ತದೆ. ಕಡಿಮೆ ತಿಂದರೆ ಸಾಕಾಗುವುದಿಲ್ಲ. ಹೀಗಾಗಿಯೇ ಸಮತೋಲನ ಆಹಾರ ಪದ್ಧತಿಯನ್ನು ಅನುಸರಿಸುವುದು ಒಳ್ಳೆಯದು. ತೆಳ್ಳಗಾಗಲಿಕ್ಕೆ ಅಂತ ಕೆಲವರು, ದಪ್ಪವಾಗಲಿಕ್ಕೆ ಅಂತ ಕೆಲವರು ಏನೇನೋ ಮಾಡುತ್ತಾರೆ. ಹಾಗೆಲ್ಲ ಮಾಡುವ ಮೊದಲು ಅನಿವಂಶಿಕವಾಗಿ ಬಂದಿರುವುದರನ್ನು ಗಮನಿಸಿಕೊಳ್ಳಬೇಕು. ಅದನ್ನು ಒಪ್ಪಿಕೊಂಡು ಸಾಧ್ಯವಾದಷ್ಟೂ ಸಮಚಿತ್ತ, ಸಮಭಾವದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು.

ವಯಸ್ಸು ಇಪ್ಪತ್ತೈದಾಗುವವರೆಗೆ ಏನನ್ನಾದರೂ ತಿನ್ನಬಹುದು. ದೇಹ ಬೆಳೆಯುತ್ತ ಇರುತ್ದೆ. ತಿಂದಿದ್ದು ಪಚನವಾಗುತ್ತದೆ. ಕಲ್ಲನ್ನು ತಿಂದರೂ ಕರಗುವ ವಯಸ್ಸು ಅಂತಾರಲ್ಲ ಅದು ಅಂಥ ವಯಸ್ಸು. ಮೂವತ್ತರ ನಂತರ ತಿನ್ನುವ ಪ್ರಮಾಣಕ್ಕೂ ದೈಹಿಕವಾಗಿ ಕೆಲಸವನ್ನು ಮಾಡುವ ಪ್ರಮಾಣಕ್ಕೂ ತಾಳೆ ಹಾಕಿಕೊಳ್ಳುವುದು ಒಳಿತು. ನಲವತ್ತೈದರ ನಂತರ ಆಹಾರದ ವಿಷಯದಲ್ಲಿ ಚ್ಯೂಸಿಯಾಗುವುದು. ಶುಚಿ-ರುಚಿಯಾದ ಆಹಾರವನ್ನು ಹಿತ ಮಿತವಾಗಿ ಸೇವಿಸುವುದು ಅಗತ್ಯ. ಬದುಕಿ ಉಳಿದರೆ ಅರವತ್ತರ ನಂತರ ಯೋಗಿಯಂತೆ ಬದುಕುವುದನ್ನು ರೂಢಿಸಿಕೊಳ್ಳವುದು ಚೆನ್ನು.

ಕೆಲವರಿಗೆ ಸ್ವದೇಹಮೋಹ ಜಾಸ್ತಿ. ವಯಸ್ಸಲ್ಲದ ವಯಸ್ಸಿನಲ್ಲಿ ಶಕ್ತಿಮೀರಿ ವ್ಯಾಯಾಮ ಮಾಡುತ್ತಾರೆ. ಯಾವ್ಯಾವುದೋ ಪ್ರೋಟೀನು ಪೌಡರ್ ಗಳನ್ನು ಸೇವಿಸುತ್ತಾರೆ. ಅದರಿಂದಾಗುವ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ. ಆಗಿರುವ ಅಪಾಯದ ಅರಿವಾಗುವಷ್ಟರಲ್ಲಿ ಸಮಯ ಮಿಂಚಿರುತ್ತದೆ. ಇನ್ನು ಕೆಲವರಿರುತ್ತಾರೆ ದೂರ್ವಾಸರ ಪಡಿಯಚ್ಚನವರಂತೆ ವರ್ತಿಸುತ್ತಾರೆ. ಕೋಪ ಅಂದರೆ ಕೋಪ. ಎಲ್ಲದಕ್ಕೂ ಕೋಪ ಮಾಡಿಕೊಳ್ಳುತ್ತಾರೆ. ಇವರಿಗೆ ನೆಮ್ಮದಿ ಇರುವುದಿಲ್ಲ. ಇವರ ಜೊತೆಗಿರುವವರಿಗೂ ನೆಮ್ಮದಿ ಇಲ್ಲ.  ಹಿಂದೆಂದೋ ನಡೆದ ಒಂದೆರಡು ಘಟನೆಗಳಿಂದುಂಟಾದ ದ್ವೇಷವನ್ನು ಕರಗಲು ಬಿಡದೇ ಹೊಗೆಯಾಡುತ್ತ ಇರುವಂತೆ ಕಾಪಿಟ್ಟುಕೊಳ್ಳುತ್ತಾರೆ. ಇಂಥ ದ್ವೇಷ, ಕೋಪ, ತಾಪಗಳೆಲ್ಲವೂ ರೋಗಕಾರಕಗಳೇ ಆಗಿವೆ.

ಬೇಗ ಮಲಗಬೇಕು. ಕಿರುಣೋದಯಕ್ಕಿಂತ ಮೊದಲು ಏಳಬೇಕು. ಎದ್ದು ನೀರು ಕುಡಿಯಬೇಕು. ವಾಕಿಂಗ್ ಮಾಡಬೇಕು. ವಯಸ್ಸಿಗನುಗುಣವಾಗಿ ವ್ಯಾಯಾಮವನ್ನು ಮಾಡಬೇಕು. ಮನಸ್ಸಿಗೆ ಮತ್ತು ದೇಹಕ್ಕೆ ಇಷ್ಟವಾಗುವ ಆಹಾರವನ್ನು ಮಾತ್ರ ಸೇವಿಸಬೇಕು.  ದಿನಕ್ಕೆರಡು ಸಲವಾದರೂ ಹತ್ತರಿಂದ ಹದಿನೈದು ನಿಮಿಷಗಳಷ್ಟಾದರೂ ಮೌನವಾಗಿರಬೇಕು. ಕಣ್ಣನ್ನು ಮುಚ್ಚಿಕೊಂಡು ಮನಸ್ಸು ಮತ್ತು ದೇಹವನ್ನು ಗಮನಿಸಬೇಕು. ಧ್ಯಾನವನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಗೆಳೆಯರೊಂದಿಗೆ ಒಂದಿಷ್ಟು ಹರಟೆ, ನಗು ಇದ್ದಷ್ಟೂ ಒಳ್ಳೆಯದು. ದಿನದಲ್ಲಿ ಒಂದಿಷ್ಟು ಹೊತ್ತಾದರೂ ಮನೆಯವರೆಲ್ಲರೂ ಪರಸ್ಪರರ ಭಿನ್ನಾಭಿಪ್ರಾಯಗಳನ್ನು ಮರೆಯಬೇಕು. ಪರಸ್ಪರ ನಗುನಗುತ್ತ ಮಾತನಾಡಬೇಕು. ಮನೆಮಂದಿಯ ಮನಸ್ಸಿನಲ್ಲಿ ನೆಮ್ಮದಿ, ಮುಖದಲ್ಲಿ ನಗು ಇರಬೇಕು. ಅದಕ್ಕಾಗಿ ಮನೆಯವರೆಲ್ಲರೂ ಆಸಕ್ತಿ ವಹಿಸಬೇಕು.

ನಮ್ಮ ಸುತ್ತಲೂ ನಮಗೆ ಧನಾತ್ಮಕ ಅಂಶಗಳೇ ಕಾಣುವಂತಾದರೆ ಸಾಕು. ನಮ್ಮ ಸುತ್ತಲೂ ಇರುವುದನ್ನು ನಮಗೆ ಬೇಕಾದಂತೆ ಬದಲಾಯಿಸಿಕೊಳ್ಳಲಿಕ್ಕೆ ನಮ್ಮಿಂದ ಸಾಧ್ಯವಾಗುವುದಿಲ್ಲ. ಅದರಲ್ಲಿಯ ಒಳ್ಳೆಯ ಅಂಶಗಳನ್ನು ಮಾತ್ರ ನಮಗೆ ನೋಡಲಿಕ್ಕೆ ಸಾಧ್ಯವಾದರೆ ಸಾಕು. ನಮ್ಮ ಮನಸ್ಸಿಗೆ ಸಂತೋಷವಾಗುತ್ತದೆ. ಸುತ್ತಲಿನವುಗಳಲ್ಲಿ ಕೆಟ್ಟದ್ದು ಕಾಣಿಸಿದರೆ ನಮಗೆ ಬೇಜಾರಾಗುತ್ತದೆ. ದುಃಖವಾಗುತ್ತದೆ. ಕೋಪವೂ ಬರುತ್ತದೆ. ಕೊನೆಗೆ ಫ್ರಸ್ಟೇಶನ್ ಆಗುತ್ತದೆ. ಇವೆಲ್ಲವುಗಳೂ ನಮ್ಮೊಳಗೆ ಉಂಟಾಗುವ ಪ್ರತಿಕ್ರಿಯೆಗಳು. ಇವು ನಮ್ಮ ಆಲೋಚನೆಗಳು. ಹಾಗಾಗಿ, ನಾವು ನಮ್ಮ ಮನಸ್ಸಿಗೆ, ನಮ್ಮ ಕಣ್ಣುಗಳಿಗೆ ಸುತ್ತಲೂ ಒಳ್ಳೆಯದನ್ನು, ಸೌಂದರ್ಯವನ್ನು, ಜೀವಂತಿಕೆಯನ್ನು, ಧನಾಥ್ಮಕತೆಯನ್ನು ಕಾಣುವಂತೆ ರೂಢಿಸಿಕೊಳ್ಳಬೇಕು. ಆವಾಗ ಎಲ್ಲವೂ ಸರಿಯಾಗಿಯೂ, ಸುಂದರವಾಗಿಯೂ, ಶಾಂತವಾಗಿಯೂ ಕಾಣುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು