ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ: ರೋಗಗಳು ಎಷ್ಟೇ ಬರಲಿ ಮನಸ್ಸು ಗಟ್ಟಿ ಇರಲಿ..

ಅನೇಕ ಅಂಗಾಂಗಗಳಿರುವ ನಮ್ಮ ದೇಹ ಒಂದು ಸಮಷ್ಟಿ ರಚನೆ. ಹೀಗಾಗಿ, ದೇಹದ ಯಾವುದೇ ಒಂದು ಅಂಗಕ್ಕೆ ಸಮಸ್ಯೆ ಬಂದರೂ ಇಡೀ ದೇಹಕ್ಕೆ ಅಹಿತವಾಗುತ್ತದೆ.
Published 6 ಮೇ 2024, 20:51 IST
Last Updated 6 ಮೇ 2024, 20:51 IST
ಅಕ್ಷರ ಗಾತ್ರ

ಅನೇಕ ಅಂಗಾಂಗಗಳಿರುವ ನಮ್ಮ ದೇಹ ಒಂದು ಸಮಷ್ಟಿ ರಚನೆ. ಹೀಗಾಗಿ, ದೇಹದ ಯಾವುದೇ ಒಂದು ಅಂಗಕ್ಕೆ ಸಮಸ್ಯೆ ಬಂದರೂ ಇಡೀ ದೇಹಕ್ಕೆ ಅಹಿತವಾಗುತ್ತದೆ. ಆ ಸಮಸ್ಯೆಯ ನಿವಾರಣೆಗೆ ಅನೇಕ ಅಂಗಗಳು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡಿ ಸಹಾಯ ನೀಡುತ್ತವೆ. ಈ ಎಲ್ಲ ಹೊಂದಾಣಿಕೆಯ ಪ್ರಕ್ರಿಯೆಗಳನ್ನೂ ಮಿದುಳು ನಿರ್ವಹಿಸುತ್ತದೆ. ಉದಾಹರಣೆಗೆ, ಕಾಲಿಗೆ ಪೆಟ್ಟಾದಾಗ ಹೃದಯದ ಬಡಿತ ವೇಗವಾಗಿ, ಪೆಟ್ಟಾದ ಜಾಗಕ್ಕೆ ಹೆಚ್ಚು ರಕ್ತಸಂಚಾರ ಆಗುವಂತೆ ಮಾಡಿ, ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ; ರಿಪೇರಿ ಮಾಡಬಲ್ಲ ರಕ್ತಕೋಶಗಳನ್ನು ತಲುಪಿಸುತ್ತದೆ. ಉಸಿರಾಟದ ಗತಿ ಮತ್ತು ಆಳ ಹೆಚ್ಚಾಗಿ, ಶ್ವಾಸಕೋಶಗಳು ಹೆಚ್ಚಿನ ಆಕ್ಸಿಜನ್ ಒದಗಿಸುತ್ತವೆ. ಸುತ್ತಮುತ್ತಲ ಸ್ನಾಯುಗಳು ತಮ್ಮ ಕೆಲಸವನ್ನು ಕಡಿಮೆ ಮಾಡಿ ಪೆಟ್ಟಾದ ಜಾಗ ಹೆಚ್ಚು ಅಲುಗಾಡದಂತೆ ನೋಡಿಕೊಳ್ಳುತ್ತವೆ. ಒಟ್ಟಾರೆ, ಇಡೀ ದೇಹ ಸಮಸ್ಯೆಗೆ ಸ್ಪಂದಿಸುತ್ತದೆ.

ಆದರೆ ದೇಹಕ್ಕೆ ಹಲವಾರು ದೀರ್ಘಕಾಲಿಕ ಕಾಯಿಲೆಗಳು ಅಡರಿಕೊಂಡಾಗ ಪರಿಣಾಮ ಏನಾಗಬಹುದು? ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ, ಸ್ನಾಯುಗಳ ಕಂಪನ, ಬೊಜ್ಜು, ಹೃದಯದೌರ್ಬಲ್ಯ, ಕಿಡ್ನಿಗಳ ವೈಫಲ್ಯ ಮೊದಲಾದುವು ದೀರ್ಘಕಾಲಿಕ ಕಾಯಿಲೆಗಳು. ಇವುಗಳಲ್ಲಿ ಬಹುತೇಕ ಕಾಯಿಲೆಗಳಿಗೆ ಶಾಶ್ವತ ಪರಿಹಾರ ಎನ್ನುವುದು ಇಲ್ಲ. ಔಷಧಗಳು, ಜೀವನಶೈಲಿಯ ಸೂಕ್ತ ಬದಲಾವಣೆಗಳ ಮೂಲಕ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು, ಅವುಗಳೊಡನೆ ಸಹಬಾಳ್ವೆ ಮಾಡಬೇಕಾಗುತ್ತದೆ. ಎಷ್ಟೇ ಶಿಸ್ತಾಗಿ ಬದುಕಿದರೂ ಒಮ್ಮೆಮ್ಮೆ ಅವುಗಳ ನಿಯಂತ್ರಣ ಏರುಪೇರಾಗಿ ಸಮಸ್ಯೆ ಮೂಡುವುದುಂಟು. ಒಂದಕ್ಕಿಂತ ಹೆಚ್ಚಿನ ಇಂತಹ ಸಮಸ್ಯೆಗಳು ಇದ್ದರೆ, ಅವುಗಳ ಪರಸ್ಪರ ಪೂರಕ ನಿಯಂತ್ರಣ ಬಹಳ ತ್ರಾಸದಾಯಕ. ಒಂದು ಕಾಯಿಲೆಯ ನಿಯಂತ್ರಣ ಮತ್ತೊಂದನ್ನು ಉಲ್ಬಣಿಸುವ ಸಮಸ್ಯೆ ಇದ್ದೇ ಇರುತ್ತದೆ. ಉದಾಹರಣೆಗೆ, ಮಧುಮೇಹ ಮತ್ತು ಸಂಧಿವಾತ. ಮಧುಮೇಹದ ನಿಯಂತ್ರಣದಲ್ಲಿ ವ್ಯಾಯಾಮದ ಅಗತ್ಯವನ್ನು ಹೆಚ್ಚಾಗಿ ಹೇಳಬೇಕಿಲ್ಲ. ಬಿರುಸುನಡಿಗೆ, ಯೋಗಾಸನಗಳು, ಸರಳ ಏರೋಬಿಕ್ ವ್ಯಾಯಾಮಗಳು ಮಧುಮೇಹ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಸಂಧಿವಾತದ ರೋಗಿಗಳಿಗೆ ಇಷ್ಟು ವ್ಯಾಯಾಮ ಸಾಧ್ಯವಾಗುವುದಿಲ್ಲ; ಅವರ ಅಶಕ್ತ ಕೀಲುಗಳು ಆ ಚಲನೆಯನ್ನು ಸಹಿಸಲಾರವು. ಜೊತೆಗೆ, ಸಂಧಿವಾತಕ್ಕೆ ಬಳಸುವ ಹಲವು ಔಷಧಗಳು ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಏರಿಸಬಲ್ಲವು. ಇದು ನಿಧಾನವಾಗಿ ಬೊಜ್ಜಿನ ಬೆಳವಣಿಗೆಗೂ ಕಾರಣವಾಗಬಹುದು. ಹೀಗೆ, ಒಂದು ಸಮಸ್ಯೆ ಮತ್ತೊಂದಕ್ಕೆ ದಾರಿ ಮಾಡಿಕೊಡುವುದು ಬಹಳ ಸಾಮಾನ್ಯ.  

ಇಂತಹ ಸಂದರ್ಭಗಳಲ್ಲಿ ಬಹಳ ಮಂದಿ ರೋಗಿಗಳ ಮಾನಸಿಕ ಸಾಮರ್ಥ್ಯ ಕುಸಿಯುತ್ತದೆ. ತಮ್ಮ ದೇಹ ತಮ್ಮ ನಿಯಂತ್ರಣದಲ್ಲಿ ಇಲ್ಲ ಎಂಬುದು ಆಘಾತ ನೀಡುವ ವಿಷಯ. ದಿನ ಬೆಳಗಾದರೆ ಯಾವ ಹೊಸ ಆರೋಗ್ಯ ಸಮಸ್ಯೆ ಕಾಡುತ್ತದೋ ಎಂಬ ಆತಂಕ. ಯಾವ ಹೊಸ ಔಷಧ ಸೇವಿಸಿದರೆ ಯಾವ ಅಡ್ಡಪರಿಣಾಮವಾಗಿ ಮತ್ಯಾವ ತೊಂದರೆ ಉಲ್ಬಣವಾಗುತ್ತದೋ ಎಂಬ ಭೀತಿ. ಇಷ್ಟು ಉದ್ವೇಗಗಳ ನಡುವೆ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳುವುದು ಸುಲಭದ ಮಾತಲ್ಲ. ಮಾನಸಿಕ ಉದ್ವೇಗ ಭೌತಿಕ ದೇಹದ ಹಲವಾರು ಕೆಲಸಗಳನ್ನು, ಅಂಗಗಳ ನಡುವಿನ ಸಮನ್ವಯವನ್ನು ಕೆಡಿಸಬಲ್ಲದು. ಇದೊಂದು ರೀತಿಯ ವಿಷಮ ಆವರ್ತನ ಚಕ್ರ. ಮನಸ್ಸಿನ ಭೀತಿ ದೈಹಿಕ ಆರೋಗ್ಯದ ಮೇಲೆ ಅಸಹಜ ಪರಿಣಾಮವನ್ನು ಬೀರಿ ಚಿತ್ತಶಾಂತಿಯನ್ನು ಮತ್ತಷ್ಟು ಕಂಗೆಡಿಸುತ್ತದೆ. ಒಮ್ಮೆ ಇದರ ಚಕ್ರವ್ಯೂಹಕ್ಕೆ ಸಿಲುಕಿದರೆ ಹೊರಬರುವುದು ಬಹಳ ಕಠಿಣ. ಮಾನಸಿಕ ಧೃಢತೆಯನ್ನು ಕಳೆದುಕೊಂಡರೆ ಆರೋಗ್ಯದ ಒಟ್ಟಾರೆ ಸುಧಾರಣೆ ಸುಲಭವಲ್ಲ. ಹೀಗಾಗಿ ಮನಸ್ಸನ್ನು ಶಾಂತವಾಗಿ, ಧೃಢವಾಗಿ ಇಟ್ಟುಕೊಳ್ಳುವತ್ತ ಪ್ರಯತ್ನಗಳು ಸದಾ ನಡೆಯುತ್ತಿರಬೇಕು. ಇದಕ್ಕೆ ಕೆಲವು ಸಲಹೆಗಳಿವೆ:

1.      ಆರೋಗ್ಯ ಸಮಸ್ಯೆಗಳು ಎಷ್ಟೇ ಇರಲಿ; ಅವೆಲ್ಲವನ್ನೂ ನಿಮ್ಮ ವಿಶ್ವಾಸಕ್ಕೆ ಪಾತ್ರವಾಗಿರುವ ಒಬ್ಬರು ವೈದ್ಯರ ಸುಪರ್ದಿಯಲ್ಲಿ ಇರಿಸಬೇಕು. ಸಣ್ಣ-ಪುಟ್ಟ ಏರುಪೇರುಗಳನ್ನು ಇಂತಹ ಅನುಭವಿ ವೈದ್ಯರು ಸುಲಭವಾಗಿ ಪರಿಹರಿಸುತ್ತಾರೆ. ಪ್ರತಿಬಾರಿಯೂ ಆಯಾ ಸಮಸ್ಯೆಯ ತಜ್ಞವೈದ್ಯರನ್ನೇ ಕಾಣಬೇಕು ಎಂಬುದಿಲ್ಲ. ಅನೇಕ ಬಾರಿ ಒಂದು ಸಮಸ್ಯೆಯ ತಜ್ಞವೈದ್ಯರಿಗೆ ನಿಮಗೆ ಇರುವ ಮತ್ತೊಂದು ಸಮಸ್ಯೆಯ ಬಗ್ಗೆ ಹೆಚ್ಚಿನ ಅರಿವು ಇಲ್ಲದಿರಬಹುದು. ಹೀಗಾಗಿ, ಅವರು ಔಷಧಗಳನ್ನು ಬದಲಾಯಿಸುವ ಮುನ್ನ ಈ ಸಂಗತಿಯನ್ನು ಗಮನಿಸದೆ ಇರಬಹುದು. ಆದರೆ ನೀವು ಸದಾ ಕಾಣುವ ಕುಟುಂಬ ವೈದ್ಯರಿಗೆ ಇವೆಲ್ಲವೂ ತಿಳಿದಿರುತ್ತವೆ. ಅಗತ್ಯ ಬಂದಾಗ ಅವರೇ ಕ್ಲುಪ್ತ ಮಾಹಿತಿಯನ್ನು ಬರೆದು ತಜ್ಞವೈದ್ಯರ ಸಲಹೆಗೆ ನಿಮ್ಮನ್ನು ಕಳಿಸುತ್ತಾರೆ. ಇದರಿಂದ ‘ಏನಾಗಿಹೋಗುವುದೋ’ ಎನ್ನುವ ಆತಂಕ ಇರುವುದಿಲ್ಲ.

2.     ದೀರ್ಘಕಾಲಿಕ ಕಾಯಿಲೆಗಳನ್ನು ಒಪ್ಪಿಕೊಳ್ಳಬೇಕು. ಶಾಶ್ವತ ಚಿಕಿತ್ಸೆ ಇಲ್ಲದಿರುವ ಕಾಯಿಲೆಗಳನ್ನು ಯಾವ್ಯಾವುದೋ ಜಾದೂ ಮಾದರಿಯ ಚಿಕಿತ್ಸೆಯಿಂದ ಗುಣಪಡಿಸುವ ಮಾತುಗಳನ್ನು ನಂಬಬಾರದು. ಈ ವಿಷಯದಲ್ಲಿ ತಜ್ಞವೈದ್ಯರ ಮಾತೇ ಅಂತಿಮ. ಕಾಯಿಲೆಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಅವನ್ನು ನಿಯಂತ್ರಿಸಬೇಕೇ ಹೊರತು, ಎಂತಹದೋ ಅಪಾಯಕಾರಿ ಪ್ರಯೋಗಗಳಿಗೆ ದೇಹವನ್ನು ಒಡ್ಡಬಾರದು.

3.     ಪ್ರಾಣಾಯಾಮ, ಧ್ಯಾನ, ಅಧ್ಯಾತ್ಮಚಿಂತನೆ, ಸಮಾಜಕ್ಕೆ ಅಭಿಮುಖವಾದ ಹವ್ಯಾಸಗಳು, ಆರೋಗ್ಯಕರ ಜೀವನಶೈಲಿ, ಕುಟುಂಬ ಸಭ್ಯರೊಡನೆ ಒಳ್ಳೆಯ ಸಂಬಂಧ, ಸಮಾನಮನಸ್ಕ ಮಿತ್ರಬಳಗ, ಮಾನಸೋಲ್ಲಸವಾದ ಹವ್ಯಾಸಗಳು ಮೊದಲಾದುವು ಮನಸ್ಸಿನ ಶಾಂತಿಗೆ, ದೃಢತೆಗೆ ಕಾರಣವಾಗಿ, ಜೀವನದ ಕಠಿಣ ಆರೋಗ್ಯ ಸಮಸ್ಯೆಗಳನ್ನೂ ಸಹ್ಯವಾಗಿಸಬಲ್ಲವು.

ಜೀವನಪಯಣದಲ್ಲಿ ಅನಾರೋಗ್ಯಗಳು ಅಹಿತಕರ ಸಹ-ಪ್ರಯಾಣಿಕರು! ದೇಹದ ಆರೋಗ್ಯವನ್ನು ಸಾಧ್ಯವಾದಷ್ಟೂ ಸ್ಥಿರವಾಗಿ ಇರಿಸಿಕೊಳ್ಳುವಲ್ಲಿ ನಮ್ಮ ಮನಸ್ಸಿನ ದೃಢತೆಯ ಪಾತ್ರ ದೊಡ್ಡದು. ಯಾವುದೇ ಕಾಯಿಲೆಯ ನಿರ್ವಹಣೆಯಲ್ಲೂ ಈ ಅಂಶವನ್ನು ಮರೆಯಬಾರದು.

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT