ಶುಕ್ರವಾರ, ಡಿಸೆಂಬರ್ 4, 2020
23 °C

ಕಾಡುವ ಹರೆಯದ ತಪ್ಪು ತಿಳಿವಳಿಕೆ

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

28ರ ಯುವಕ. ಹದಿನೈದು ವರ್ಷದವನಾಗಿದ್ದಾಗಿನಿಂದ ಪ್ರತಿದಿನ ಹಸ್ತಮೈಥುನ ಮಾಡುತಿದ್ದೇನೆ. ಮದುವೆಯಾದ ಮೇಲೆ ಮಕ್ಕಳಾಗುವುದೋ ಇಲ್ಲವೋ ಎನ್ನುವ ಚಿಂತೆ. ಪರಿಹಾರ ತಿಳಿಸಿ.

ರವಿ, ಊರಿನ ಹೆಸರಿಲ್ಲ.

ನೂರು ವರ್ಷಗಳ ಹಿಂದೆ ಯುವಕರು 18 ವರ್ಷಕ್ಕೆ ಮದುವೆಯಾಗಿ 50-60 ವರ್ಷವಾಗುವವರೆಗೂ ಸಂಸಾರ ನಡೆಸಿ ಹತ್ತಾರು ಮಕ್ಕಳಿಗೆ


ಮನೋಚಿಕಿತ್ಸಕ ನಡಹಳ್ಳಿ ವಸಂತ್‌

ತಂದೆಯಾಗುತ್ತಿದ್ದರು. ಇದು ಹೇಗೆ ಸಾಧ್ಯವಾಗುತ್ತಿತ್ತು? ಮಗುವಿನ ಸೃಷ್ಟಿಗೆ ಬೇಕಾದ ಸ್ತ್ರೀಯರ ಅಂಡಾಣುವೂ ತಿಂಗಳ ಕೊನೆಯಲ್ಲಿ ನಾಶವಾಗಿ ಮತ್ತೆ ಹೊಸದು ಸೃಷ್ಟಿಯಾಗುವುದಿಲ್ಲವೇ? ಹಾಗೆಯೇ ಪುರುಷರ ವೀರ್ಯಾಣುಗಳು ಸ್ಖಲನದ ಮೂಲಕ ಹೊರಹೋಗದಿದ್ದರೂ ಸೀಮಿತ ಅವಧಿಯ ನಂತರ ನಿರುಪಯುಕ್ತವಾಗಿ ಮತ್ತೆಮತ್ತೆ ಉತ್ಪತ್ತಿಯಾಗುತ್ತಲೇ ಇರುತ್ತವೆ. ನೀವು ಇಷ್ಟಪಡುವವಳನ್ನು ಉತ್ಸಾಹದಿಂದ ಮದುವೆಯಾಗಿ ಲೈಂಗಿಕ ಜೀವನ ಆರಂಭಿಸಿ. 

***

24ರ ಅವಿವಾಹಿತ. ಬಹಳ ವರ್ಷಗಳಿಂದ ಹಸ್ತಮೈಥುನ ಮಾಡುತ್ತಿದ್ದೇನೆ. ಇದರಿಂದ ದಾಂಪತ್ಯಜೀವನ ಸುಖಕರವಾಗಿರುವುದಿಲ್ಲ ಎನ್ನುವ ಭಯ. ಕೆಲವೇ ಹನಿ ವೀರ್ಯ ಹೊರಬರುತ್ತದೆ ಮತ್ತು ಬೇಗನೆ ಸ್ಖಲನವಾಗುತ್ತದೆ. ಶಿಶ್ನದ ಗಾತ್ರ ಚಿಕ್ಕದಿದೆ ಮತ್ತು ಮುಂದೊಗಲು ಹಿಂದೆ ಸರಿಯುವುದಿಲ್ಲ. ಹಸ್ತಮೈಥುನದಿಂದ ಮುಖದ ಮೇಲೆ ಕೂದಲು ಬೆಳೆದಿಲ್ಲ. ಪರಿಹಾರವೇನು.

ಕಿರಣ್‌, ಊರಿನ ಹೆಸರಿಲ್ಲ.

ನೀವು ಹೇಳಿರುವ ಅಂಶಗಳಿಗೂ ಹಸ್ತಮೈಥನಕ್ಕೂ ಯಾವುದೇ ಸಂಬಂಧವಿಲ್ಲ. ನಿಮ್ಮನ್ನು ಕಾಡುತ್ತಿರುವುದು ತಪ್ಪು ತಿಳಿವಳಿಕೆಗಳಿಂದ ಮೂಡಿರುವ ಆತಂಕ ಮಾತ್ರ. ಶಿಶ್ನದ ಗಾತ್ರ ನಿಮ್ಮ ದೇಹದ ಎತ್ತರದಂತೆ ಅನುವಂಶಿಕ. ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಲೈಂಗಿಕ ತೃಪ್ತಿಗೂ ಅಂಗಾಂಗಗಳ ಅಳತೆಗೂ ಯಾವುದೇ ಸಂಬಂಧವಿಲ್ಲ. ಮುಂದೊಗಲಿನ ಸಮಸ್ಯೆಗೆ ವೈದ್ಯರನ್ನು ಸಂಪರ್ಕಿಸಿ. ಶೀಘ್ರಸ್ಖಲನ ನಿಮ್ಮ ಆತಂಕದ ಪರಿಣಾಮ. ವಿವಾಹದ ನಂತರ ಸಮಸ್ಯೆ ಎನ್ನಿಸಿದರೆ ತಜ್ಞ ಲೈಂಗಿಕ ಚಿಕಿತ್ಸಕರನ್ನು ಭೇಟಿಯಾಗಿ. ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳನ್ನು ಬಳಸಿ ಮೋಸಹೋಗಬೇಡಿ. ಮುಖದ ಮೇಲೆ ಕೂದಲು ಮೂಡುವುದು ಗಂಡುಹಣ್ಣುಗಳನ್ನು ಗುರುತಿಸಲು ಪ್ರಕೃತಿ ಕೊಟ್ಟಿರುವ ಗುರುತಿನ ಚೀಟಿ. ಹಾರ್ಮೋನ್‌ಗಳಿಂದಾಗಿ ಮೂಡುವ ಇದನ್ನು “ಸೆಕೆಂಡರಿ ಸೆಕ್ಷುಯಲ್‌ ಕ್ಯಾರೆಕ್ಟರ್‌” ಎನ್ನುತ್ತಾರೆ. ಕೆಲವು ಮಹಿಳೆಯರ ಮುಖದಲ್ಲಿಯೂ ತೆಳುವಾಗಿ ಕೂದಲುಗಳಿರುವ ಸಾಧ್ಯತೆಗಳಿವೆ. ಇದು   ಹಸ್ತಮೈಥನ ಪರಿಣಾಮವಲ್ಲ. ಹೊರಹೋದಷ್ಟೂ ವೀರ್ಯಾಣುಗಳನ್ನು ಉತ್ಪತ್ತಿ ಮಾಡುವ ಶಕ್ತಿಯನ್ನು ಪ್ರಕೃತಿ ಪುರುಷರ ದೇಹಕ್ಕೆ ನೀಡಿದೆ. ದೇಹ ಮುಪ್ಪಾದಂತೆ ಅದು ಕಡಿಮೆಯಾಗುತ್ತಾ ಬರುತ್ತದೆ.

ಉದ್ಯೋಗ ಆರ್ಥಿಕ ಸ್ವಾವಲಂಬನೆಗಳ ಕಡೆ ಗಮನಹರಿಸಿ. ಸೂಕ್ತ ಸಮಯದಲ್ಲಿ ಹಿಂಜರಿಕೆಯಿಲ್ಲದೆ ಮದುವೆಯಾಗಿ ಲೈಂಗಿಕ ಜೀವನ ಆರಂಭಿಸಿ.

***

19 ವರ್ಷದ ವಿದ್ಯಾರ್ಥಿ. ಬಹಳ ವರ್ಷಗಳಿಂದ ಹಸ್ತಮೈಥುನ ಮಾಡುತ್ತಿದ್ದೇನೆ. ಇದು ಸರಿಯೇ ತಪ್ಪೇ? ಓದುವ ಆಸಕ್ತಿ ಬರುತ್ತಿಲ್ಲ. ಪರಿಹಾರವೇನು?

ಪ್ರೀತಂ, ಊರಿನ ಹೆಸರಿಲ್ಲ.   

ಇದರಲ್ಲಿ ತಪ್ಪು– ಸರಿಗಳ ಪ್ರಶ್ನೆ ಎಲ್ಲಿದೆ? ಮದುವೆಯಾಗುವವರೆಗೆ ಲೈಂಗಿಕ ಆಸಕ್ತಿ ಕೆರಳಿದಾಗ ತೃಪ್ತಿ ಪಡೆಯಲು ಹಸ್ತಮೈಥುನ ಯಾವುದೇ ಅಪಾಯವಿಲ್ಲದ ಆರೋಗ್ಯಕರ ಮಾರ್ಗ. ಪ್ರಪಂಚದ ಎಲ್ಲಾಕಡೆ ನಡೆದ ನೂರಾರು ಸಂಶೋಧನೆಗಳಿಂದ ಇದು ಸಿದ್ಧವಾಗಿದೆ.

ಓದುವ ಆಸಕ್ತಿಗೆ ನೀವು ಇಷ್ಟಪಡುವ ಕ್ಷೇತ್ರವನ್ನು ಆಯ್ದುಕೊಳ್ಳಬೇಕು. ಪರೀಕ್ಷೆ ಅಂಕಗಳ ಬಗೆಗೆ ಯೋಚಿಸದೆ ವಿಷಯಗಳ ಆಳಕ್ಕೆ ಹೋಗಿ ಆನಂದಿಸಬೇಕು. ಇದಕ್ಕಾಗಿ ನಿಧಾನವಾಗಿ ಪ್ರಯತ್ನಿಸಿ. ಮುಂದಿನ ಪರೀಕ್ಷೆಯೊಂದೇ ಮನಸ್ಸಿನಲ್ಲಿದ್ದರೆ ಆಸಕ್ತಿ ಹೇಗೆ ಮೂಡುತ್ತದೆ? 

***

40 ವರ್ಷದ ಅವಿವಾಹಿತ. ವಿಕಲಚೇತನ. ಖಿನ್ನತೆಗಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ಹತ್ತು ವರ್ಷಗಳಿಂದ ಹಸ್ತಮೈಥುನ ಮಾಡುತ್ತಿದ್ದೇನೆ. ಇದರಿಂದ ಹೆಚ್ಚಿನ ತೊಂದರೆಯಾಗುತ್ತಿದೆ. ಸಲಹೆನೀಡಿ.

ಹೆಸರು, ಊರು ತಿಳಿಸಿಲ್ಲ.

ಅಂಗವಿಕಲತೆಯಿಂದ ಬಂದಿರಬಹುದಾದ ಪರಾವಲಂಬನೆ ನಿಮ್ಮ ಬೇಸರಕ್ಕೆ ಕಾರಣವಾಗಿರುವುದು ಸಹಜ. ಇದಕ್ಕೆ ಮಾತ್ರೆಗಳು ಪರಿಹಾರವಲ್ಲ. ಅವಕಾಶಗಳಿದ್ದರೆ ತಜ್ಞರಿಂದ ಮನೋಚಿಕಿತ್ಸೆ ಪಡೆದು ಮಾತ್ರೆಗಳನ್ನು ಹಂತಹಂತವಾಗಿ ಕಡಿಮೆಮಾಡಬಹುದು.

ಹಸ್ತಮೈಥುನದಿಂದ ಆಗುತ್ತಿರುವ ಸಮಸ್ಯೆಗಳನ್ನು ತಿಳಿಸಿಲ್ಲ. ಇದರಿಂದ ದೈಹಿಕ ತೊಂದರೆಗಳಾಗುವುದಿಲ್ಲ. ಪರಾವಲಂಬನೆಯಿಂದ ಹಸ್ತಮೈಥುನದ ಸುಖವನ್ನು ಪಡೆಯಲು ನಿಮಗೆ ಖಾಸಗೀತನದ ಕೊರತೆಯಾಗಬಹುದು. ಇದನ್ನು ಕುಟುಂಬದವರೊಡನೆ ಮುಕ್ತವಾಗಿ ಚರ್ಚಿಸಿ ಪರಿಹಾರ ಹುಡುಕಿಕೊಳ್ಳಿ. ಅಥವಾ ಶೌಚ, ಸ್ನಾನದ ಸಮಯವನ್ನು ಇದಕ್ಕಾಗಿ ಆಯ್ಕೆಮಾಡಿಕೊಳ್ಳಬಹುದು.

***

ವಿದ್ಯಾರ್ಥಿ. ಮನೆಯಲ್ಲಿ ಬಡತನವಿದೆ. ಪೋಷಕರು ಏನಾದರೂ ಸಾಧನೆ ಮಾಡತ್ತೇನೆಂದು ನಂಬಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಓದಬೇಕೆಂದಿದೆ. ಲೈಂಗಿಕ ಆಕರ್ಷಣೆಯಿಂದ ಓದುವುದಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಮುಕ್ತಿ ಪಡೆಯುವುದು ಹೇಗೆ?

ಹೆಸರು, ಊರು ತಿಳಿಸಿಲ್ಲ.

ಪತ್ರದಲ್ಲಿ ಬಹಳ ಆತಂಕದ ಧ್ವನಿಯಿದೆ. ಇದು ಸಂಪೂರ್ಣ ತಪ್ಪು ತಿಳಿವಳಿಕೆಯಿಂದ ಬಂದಿರುವುದು. ಲೈಂಗಿಕ ಆಕರ್ಷಣೆ ಪ್ರಕೃತಿ ಸಹಜ. ಇದರಿಂದ ಮುಕ್ತಿ ಪಡೆದರೆ ವಿವಾಹವಾದ ಮೇಲೆಯೂ ಅದು ಹಿಂತಿರುಗಿ ಬರದಿದ್ದರೆ..? ಆಕರ್ಷಣೆಯನ್ನು ತಿರಸ್ಕರಿಸುತ್ತಾ ಹಿಡಿತಕ್ಕೆ ತರಲು ಪ್ರಯತ್ನಿಸಿದಷ್ಟೂ ಅದು ಹೆಚ್ಚಾಗಿ ಕಾಡುತ್ತದೆ. ಆಕರ್ಷಣೆಯನ್ನು ಸಹಜವೆಂದು ಒಪ್ಪಿಕೊಳ್ಳಿ. ತಾತ್ಕಾಲಿಕವಾಗಿ ನಿಮ್ಮನ್ನೇ ನೀವು ತೃಪ್ತಿಪಡಿಸಿಕೊಳ್ಳಿ. ಇದಕ್ಕಾಗಿ ಸಮಯವನ್ನು ನಿಗದಿಪಡಿಸಿಕೊಂಡು ಉಳಿದಂತೆ ಓದುವ ಅಭ್ಯಾಸ ಮಾಡಿ.

***

ಏನಾದ್ರೂ ಕೇಳ್ಬೋದು

ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಉತ್ತರಿಸಲಿದ್ದಾರೆ. bhoomika@prajavani.co.in

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು