ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಿಗೊಂಡ ಡಿಎನ್‌ಎ ಮದ್ಯಪಾನ ತ್ಯಜಿಸಿದರೂ ಸರಿಹೋಗದು

ನಿಮ್ಹಾನ್ಸ್ ಪ್ರಾಧ್ಯಾಪಕರು ನಡೆಸಿದ ಅಧ್ಯಯನದಿಂದ ದೃಢ
Last Updated 13 ಫೆಬ್ರುವರಿ 2021, 19:07 IST
ಅಕ್ಷರ ಗಾತ್ರ

ಬೆಂಗಳೂರು: ಅತಿಯಾಗಿ ಮದ್ಯಪಾನ ಮಾಡುವವರ ಡಿಎನ್‌ಎ ತೀವ್ರವಾಗಿ ಹಾನಿಗೊಳ್ಳುತ್ತದೆ. ಅವರು ಮದ್ಯಪಾನ ತ್ಯಜಿಸಿದರೂ ಡಿಎನ್‌ಎಗಳಿಗೆ ಆಗಿರುವ ಹಾನಿ ಸರಿಪಡಿಸಲು ಸಾಧ್ಯವಿಲ್ಲ. ನಿಮ್ಹಾನ್ಸ್‌ ಪ್ರಾಧ್ಯಾಪಕರು ನಡೆಸಿದ ಅಧ್ಯಯನದಿಂದ ಈ ಅಂಶ ದೃಢಪಟ್ಟಿದೆ.

ನಿರಂತರ ಮದ್ಯ ಸೇವನೆಯಿಂದ ವ್ಯಕ್ತಿಯ ಯಕೃತ್ತು, ಹೃದಯ, ಡಿಎನ್‌ಎ ಸೇರಿದಂತೆ ವಿವಿಧ ಅಂಗಾಂಗಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎನ್ನುವುದು ವೈದ್ಯಕೀಯ ಸಂಶೋಧನೆಗಳಿಂದ ದೃಢಪಟ್ಟಿದೆ. ಅತಿಯಾಗಿ ಮದ್ಯಪಾನ ಮಾಡಿದ ವ್ಯಕ್ತಿಯ ಡಿಎನ್‌ಎ ಮೇಲೆ ಆಗುವ ಹಾನಿಯ ತೀವ್ರತೆಯ ಬಗ್ಗೆ ನಿಮ್ಹಾನ್ಸ್‌ನ ದುಶ್ಚಟ ನಿವಾರಣಾ ಕೇಂದ್ರದ ಸಲಹೆಗಾರ್ತಿ ಹಾಗೂ ಸಂಶೋಧಕಿ ಡಾ. ಪ್ರತಿಮಾ ಮೂರ್ತಿ, ಮಾಲೆಕ್ಯುಲರ್ ಜೆನೆಟಿಕ್ಸ್ ಪ್ರಯೋಗಾಲಯದ ಮುಖ್ಯಸ್ಥ ಡಾ. ಸಂಜೀವ್ ಜೈನ್ ಮತ್ತು ಹಿರಿಯ ಸಂಶೋಧಕಿ ಡಾ. ಮೀರಾ ಪುರುಷೋತ್ತಮ್ ಅವರ ಮಾರ್ಗದರ್ಶನದಲ್ಲಿ ಡಾ. ಸೌಂದರ್ಯ ಸೌಂದರರಾಜನ್ ಅವರು ಪಿಎಚ್‌.ಡಿಗಾಗಿ ಅಧ್ಯಯನ ನಡೆಸಿದ್ದರು.

‘ಮದ್ಯಸೇವನೆಯಿಂದ ಉಂಟಾದ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು 2015ರ ಮಾರ್ಚ್‌ನಿಂದ 2016ರ ಏಪ್ರಿಲ್ ವರೆಗೆ ಸಂಸ್ಥೆಯ ಸೆಂಟರ್ ಫಾರ್ ಅಡಿಕ್ಷನ್ ಮೆಡಿಸಿನ್‌ನ ಹೊರರೋಗಿ ವಿಭಾಗಕ್ಕೆ ಬಂದ 50 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಚಿಕಿತ್ಸೆ ಪಡೆಯಲು ಬಂದ ವೇಳೆ ಹಾಗೂ ಮದ್ಯಸೇವನೆ ತ್ಯಜಿಸಿದ ಮೂರು ತಿಂಗಳ ಬಳಿಕ ಪರೀಕ್ಷೆಗೆ ಒಳಪಡಿಸಿ, ಡಿಎನ್‌ಎ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲಾಯಿತು. ಮದ್ಯವ್ಯಸನಿಗಳ ಡಿಎನ್‌ಎಯಲ್ಲಿ ಆಗುವ ರಾಸಾಯನಿಕ ಬದಲಾವಣೆಗಳು ಅದನ್ನು ತ್ಯಜಿಸಿದ ಕೂಡಲೇ ಹಿಮ್ಮುಖವಾಗುವುದಿಲ್ಲ ಎನ್ನುವುದನ್ನು ಈ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ’ ಎಂದು ಡಾ. ಪ್ರತಿಮಾ ಮೂರ್ತಿ ತಿಳಿಸಿದರು.

ಈ ಅಧ್ಯಯನವು ‘ಅಮೆರಿಕನ್ ಜರ್ನಲ್ ಆಫ್ ಮೆಡಿಕಲ್ ಜೆನೆಟಿಕ್ಸ್‌’ನ ಆನ್‌ಲೈನ್‌ ಆವೃತ್ತಿಯಲ್ಲಿಯೂ ಪ್ರಕಟವಾಗಿದೆ.

ಕಿರಿಯ ವಯಸ್ಸಿಗೆ ವ್ಯಸನ ಅಪಾಯ: ‘ಮದ್ಯವು (ಎಥೆನಾಲ್) ದೇಹದ ಕಣಗಳಲ್ಲಿ ವೇಗವಾಗಿ ಸೇರಿಕೊಳ್ಳುತ್ತದೆ. ಸಿಎಚ್‌3ಸಿ2 ಅಥವಾ ಈಥೈಲ್ ಅನ್ನು ಸಿಎಚ್ 3 ಅಥವಾ ಮೀಥೈಲ್ ಆಗಿ ಪರಿವರ್ತಿಸುತ್ತದೆ. ಇದು ಡಿಎನ್‌ಎಯೊಂದಿಗೆ ಪ್ರತಿಕ್ರಿಯಿಸುತ್ತದೆ. ಈ ಬದಲಾವಣೆಯು ಅನೇಕ ಜೀನ್‌ಗಳ ಅಭಿವ್ಯಕ್ತಿಯನ್ನು ಮಾರ್ಪಡಿಸುವ ಸಾಧ್ಯತೆ ಇರುತ್ತದೆ. ದೇಹದಲ್ಲಿ ವಿಷಕಾರಿ ಅಂಶಗಳ ಉಗಮಕ್ಕೂ ಕಾರಣವಾಗಬಹುದು. ಕಳೆದ 10 ವರ್ಷಗಳಿಂದ ಅತಿಯಾಗಿ ಮದ್ಯ ಸೇವಿಸುತ್ತಿದ್ದವರನ್ನು (ದಿನಕ್ಕೆ ಸರಾಸರಿ 10 ಯೂನಿಟ್ ಅಥವಾ ಅದಕ್ಕಿಂತ ಹೆಚ್ಚು) ಈ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು’ ಎಂದು ವಿವರಿಸಿದರು.

‘ಮದ್ಯ ಸೇವನೆ ತ್ಯಜಿಸಿ, ಚಿಕಿತ್ಸೆ ಪಡೆದ ಮೂರು ತಿಂಗಳ ಬಳಿಕ ಪರೀಕ್ಷೆಗೆ ಒಳಪಡಿಸಿದಾಗಲೂ ಅವರ ಡಿಎನ್‌ಎಗೆ ಆಗಿರುವ ಹಾನಿ ಸರಿಪಡಿಸಲು ಸಾಧ್ಯವಿಲ್ಲ. ಕಿರಿಯ ವಯಸ್ಸಿನಲ್ಲಿ ಮದ್ಯಸೇವನೆ ಪ್ರಾರಂಭಿಸಿದವರಲ್ಲಿ ಅದರ ದುಷ್ಪರಿಣಾಮಗಳು ಹೆಚ್ಚಾಗಿರುವುದು ಸ್ಪಷ್ಟವಾಗಿ ಗೋಚರಿಸಿವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT