ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮತೋಲಿತ ಆಹಾರವೇ ಆರೋಗ್ಯದ ಗುಟ್ಟು

Last Updated 5 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

1. ಆಹಾರಕ್ಕೂ ಆರೋಗ್ಯಕ್ಕೂ ನಂಟಿದೆಯೇ?
ಖಂಡಿತ ನಂಟಿದೆ. ನಾವು ಸಮತೋಲಿತ ಆಹಾರ ಸೇವಿಸಿದರೆ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆತು ದೇಹಾರೋಗ್ಯ ಚೆನ್ನಾಗಿರುತ್ತದೆ. ಕಡಿಮೆ ಪೋಷಕಾಂಶಗಳ ಆಹಾರ ಸೇವಿಸಿದರೆ ಆರೋಗ್ಯ ಕೆಡುತ್ತದೆ, ಕಾಯಿಲೆ ಬರುವ ಸಂಭವವೂ ಇರುತ್ತದೆ. ಹಾಗಾಗಿ, ಸರಿಯಾದ ಸಮಯದಲ್ಲಿ ಸರಿಯಾದ ಪೋಷಕಾಂಶಗಳುಳ್ಳ ಆಹಾರ ಸೇವಿಸಬೇಕು.

2. ಸಮತೋಲಿತ ಸಂಪೂರ್ಣ ಆಹಾರ ಎಂದರೇನು?
ದಿನದಲ್ಲಿ ನಾವು ಸೇವಿಸುವ ಆಹಾರದಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳಿರಬೇಕು. ಅದನ್ನು ನಾವು ಸಮತೋಲಿತ ಸಂಪೂರ್ಣ ಆಹಾರ ಅನ್ನುತ್ತೇವೆ. ನಿತ್ಯವೂ ನಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್ಸ್‌, ಕೊಬ್ಬು, ನಾರಿನಾಂಶ, ಖನಿಜ, ಪ್ರೊಟೀನ್‌, ವಿಟಮಿನ್ ಎಲ್ಲವೂ ಬೇಕು. ಕೊಬ್ಬಿನಂಶವೂ ದೇಹಕ್ಕೆ ಅಗತ್ಯ. ಉದಾಹರಣೆಗೆ ಮೊಟ್ಟೆ ಅಥವಾ ಬಾದಾಮಿಯಲ್ಲಿ ಸಹಜವಾಗಿ ಕೊಬ್ಬಿನಂಶ ಇರುತ್ತದೆ. ಇದರಿಂದ ಆರೋಗ್ಯಕ್ಕೆ ತೊಂದರೆಯಲ್ಲ. ಆದರೆ, ಹೆಚ್ಚುವರಿಯಾಗಿ ಎಣ್ಣೆ, ಬೆಣ್ಣೆ ಬಳಸುವುದರಿಂದ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ತರಕಾರಿ, ಹಣ್ಣುಗಳು, ಒಣ ಹಣ್ಣುಗಳು, ಹೈನು ಪದಾರ್ಥಗಳು, ಮಾಂಸ–ಮೊಟ್ಟೆ ಇವುಗಳಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತವೆ.

3. ಸಾಮಾನ್ಯ ವ್ಯಕ್ತಿಯ ಮಾದರಿ ಆಹಾರದ ದಿನಚರಿ (model food chart) ಹೇಗಿರಬೇಕು? (ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ)
ಎಲ್ಲರಿಗೂ ಒಂದೇ ಆಹಾರದ ದಿನಚರಿ ಹೊಂದಿಕೆಯಾಗುವುದಿಲ್ಲ. ದೇಹದ ತೂಕ, ಬಾಡಿ ಮಾಸ್ ಇಂಡೆಕ್ಸ್, ದೈಹಿಕ ಚಟುವಟಿಕೆ, ವಯಸ್ಸು, ಕೆಲಸದ ಪರಿಸರ, ಆಹಾರ ಪದ್ಧತಿ ಇವುಗಳೆಲ್ಲ ಗಣನೆಗೆ ಬರುತ್ತವೆ.

ಸಾಮಾನ್ಯವಾಗಿ ಬೆಳಿಗಿನ ತಿಂಡಿಗೆ ಇಡ್ಲಿ, ದೋಸೆ, ಅವಲಕ್ಕಿ, ಉಪ್ಪಿಟ್ಟು ತಿನ್ನುತ್ತೇವೆ. ಇದು ಆರೋಗ್ಯಕರ ಹಾಗೂ ಹಿತಕರ. ಕಾರ್ಬೋಹೈಡ್ರೇಟ್ಸ್‌ ಮತ್ತು ಪ್ರೊಟೀನ್‌ ಇರಬೇಕು. ಆದರೆ, ಇಡ್ಲಿ ಜತೆಗೆ ವಡೆ ತಿನ್ನಬೇಡಿ. ಅದರಲ್ಲಿ ಎಣ್ಣೆಯಂಶ ಜಾಸ್ತಿ ಇರುತ್ತದೆ. ಬೆಳಗಿನ ತಿಂಡಿ ತಿನ್ನಲಾಗದವರು ಒಂದು ಲೋಟ ಹಾಲು ಮತ್ತು ಒಂದು ಹಣ್ಣು ಸೇವಿಸಬೇಕು. ಮಧ್ಯಾಹ್ನದ ಊಟಕ್ಕೆ ಅನ್ನ ಅಥವಾ ರಾಗಿ ಬಳಸುವುದು ರೂಢಿ. ಇದರ ಜತೆಗೆ ತರಕಾರಿ ಸಾಂಬಾರ್ ಓಕೆ. ಮುದ್ದೆ, ಚಪಾತಿ, ಅನ್ನ ಕಡಿಮೆ ಮಾಡಿ ತರಕಾರಿ ಹೆಚ್ಚು ತಿನ್ನಿ. ಮೊಸರು–ಮಜ್ಜಿಗೆ ಸೇವನೆಯೂ ಒಳಿತು. ಸಂಜೆ ಹಸಿವಿಗೆ ಮುಷ್ಟಿಯಷ್ಟು ಮೊಳಕೆಯೊಡೆದ ಕಾಳುಗಳು ಇಲ್ಲವೇ ಬಾದಾಮಿ, ಯಾವುದಾದರೊಂದು ಹಣ್ಣು ಉತ್ತಮ ಆಯ್ಕೆ. ಅಪ್ಪಿತಪ್ಪಿಯೂ ಚಾಟ್ಸ್‌ ಅಥವಾ ಫಾಸ್ಟ್ ಫುಡ್ ಮೊರೆ ಹೋಗದಿರಿ. ರಾತ್ರಿಯೂಟಕ್ಕೆ ಪಾಲಿಷ್ ಮಾಡದ ಅಕ್ಕಿ ಬಳಸಬಹುದು. ಮಧ್ಯಾಹ್ನದ ಪ್ರಮಾಣಕ್ಕಿಂತ ರಾತ್ರಿಯೂಟದ ಪ್ರಮಾಣ ಕಡಿಮೆಯಿರಲಿ. ತರಕಾರಿ ಸೇವನೆ ತಪ್ಪಿಸದಿರಿ. ಹೊಟ್ಟೆ ತುಂಬಿ ಬಿರಿಯುವಷ್ಟು ಊಟ ಮಾಡಬೇಡಿ.

4. ಊಟದ ಮಧ್ಯೆ ಎಷ್ಟು ಸಮಯದ ಬಿಡುವಿರಬೇಕು?
ಒಂದು ಊಟಕ್ಕೂ ಮತ್ತೊಂದು ಊಟಕ್ಕೂ ಮಧ್ಯೆ ಸಾಮಾನ್ಯವಾಗಿ 4– 5 ಗಂಟೆಯ ಅವಧಿಯ ಬಿಡುವಿರಬೇಕು. ಬೆಳಿಗ್ಗೆ ಬೇಗ ತಿಂಡಿ ತಿನ್ನುವವರು ಮಧ್ಯಾಹ್ನ ಒಂದು ಗಂಟೆಯೊಳಗೆ ಆಹಾರ ಸೇವಿಸುವುದೊಳಿತು.

5. ಚಿಕನ್, ಫಿಶ್, ಮಟನ್, ತರಕಾರಿ, ಹಣ್ಣುಗಳು ಯಾವುದು ಎಷ್ಟು ಸೇವಿಸಬೇಕು?
ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕನಿಷ್ಠ ಒಂದು ಹಣ್ಣಾದರೂ ಸೇವಿಸಬೇಕು. ದಿನಕ್ಕೆ ಕನಿಷ್ಠ 300– 400 ಗ್ರಾಂ ತರಕಾರಿ ಸೇವಿಸಬೇಕು. ಉದಾಹರಣೆಗೆ ಒಂದು ಕುಟುಂಬದಲ್ಲಿ ಮೂವರಿದ್ದರೆ, ಮೂವರಿಗೂ ಸೇರಿ ಒಂದು ಕೆಜಿ ತರಕಾರಿ ಸಾಕಾಗುತ್ತದೆ. ಎರಡು ರೀತಿಯ ತರಕಾರಿಗಳಿದ್ದರೆ ಅರ್ಧರ್ಧ ಕೆಜಿ ಸಾಕಾಗುತ್ತದೆ.

ಕೆಲವರಿಗೆ ನಿತ್ಯವೂ ಮಾಂಸಾಹಾರ ಸೇವಿಸುವ ಅಭ್ಯಾಸವಿರುತ್ತದೆ. ಆದರೆ, ವಾರಕ್ಕೆ ಎರಡು ಬಾರಿ ಮಾಂಸಾಹಾರ ಸೇವಿಸಿದರೆ ಸಾಕು. ಅಂತೆಯೇ ನಿತ್ಯವೂ ಮೀನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಭಾವನೆ ಕೆಲವರಿಗಿದೆ. ಮೀನು ಕೂಡಾ ಅಷ್ಟೇ ವಾರಕ್ಕೆರಡು ಬಾರಿ ಸೇವಿಸಬಹುದು. ವಾರಕ್ಕೆರಡು ಬಾರಿ ಸೇವಿಸಿದರೂ ಸಾಕು ದೇಹಕ್ಕೆ ಬೇಕಾದ ಪ್ರೊಟೀನ್‌ ಅಂಶ ಸಿಗುತ್ತದೆ. ಸಸ್ಯಾಹಾರಿಗಳು ಒಣ ಹಣ್ಣುಗಳು, ಬೇಳೆಕಾಳುಗಳಿಂದ ಪ್ರೊಟೀನ್‌ ಅಂಶ ಪಡೆಯಬಹುದು.

6. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು (ಕ್ಯಾಲ್ಸಿಯಂ, ಕಬ್ಬಿಣಾಂಶ, ವಿಟಮಿನ್ಸ್) ಸಪ್ಲಿಮೆಂಟ್ ಮೂಲಕ ಪೂರೈಸಿಕೊಳ್ಳಬೇಕೆ?
ದೇಹಕ್ಕೆ ಪೋಷಕಾಂಶಗಳ ಕೊರತೆ ಇದ್ದಾಗ ಸಾಮಾನ್ಯವಾಗಿ ವೈದ್ಯರು ಇಲ್ಲವೇ ಡಯಟಿಷಿಯನ್ ಸಪ್ಲಿಮೆಂಟ್ ಸೇವಿಸಲು ಸಲಹೆ ನೀಡುತ್ತಾರೆ. ಸಾಮಾನ್ಯ ಆರೋಗ್ಯಕ್ಕಿಂತ ತುಸು ಕಡಿಮೆ ಇರುವವರು ಅಂದರೆ ಬಾರ್ಡರ್ ಲೈನ್‌ನಲ್ಲಿ ಇರುವವರು ಸಪ್ಲಿಮೆಂಟ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಕೆಲವರು ಮೆಡಿಕಲ್ ಶಾಪ್‌ಗೆ ಹೋಗಿ ವಿಟಮಿನ್ಸ್, ಪ್ರೊಟೀನ್‌ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಾರೆ. ವೈದ್ಯರ ಸಲಹೆ ಇಲ್ಲದೇ ಈ ರೀತಿ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಖಂಡಿತ ಹಾನಿಕರ.

ವ್ಯಾಯಾಮವೂ ಅಗತ್ಯ
ಸಮತೋಲಿತ ಸಂಪೂರ್ಣ ಆಹಾರ ಸೇವಿಸಿದಾಕ್ಷಣ ಉತ್ತಮ ಆರೋಗ್ಯ ಪಡೆಯುತ್ತೇವೆ ಅನ್ನುವ ನಂಬಿಕೆ ಬೇಡ. ಪೌಷ್ಟಿಕಾಂಶಯುಕ್ತ ಆಹಾರದ ಜತೆಗೆ ದೈಹಿಕ ಚಟುವಟಿಕೆ ಬೇಡುವ ಯೋಗ, ವ್ಯಾಯಾಮ, ನಡಿಗೆಯೂ ಆರೋಗ್ಯ ಕಾಪಾಡುಕೊಳ್ಳುವಲ್ಲಿ ಮಹತ್ವದ ಪಾತ್ರ ಬೀರುತ್ತವೆ. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಬೇಡದ ವಿಷಯಗಳ ಬಗ್ಗೆ ವಿನಾಕಾರಣ ಮನಸು ಕೆಡಿಸಿಕೊಳ್ಳದೇ, ಅನಗತ್ಯ ಒತ್ತಡ ಮಾಡಿಕೊಳ್ಳದೇ ಮನಸಿನ ಆರೋಗ್ಯದ ಕಡೆಯೂ ಚಿತ್ತ ಹರಿಸಬೇಕು. ಅದಕ್ಕಾಗಿ ಧ್ಯಾನ, ಮೌನ ಮತ್ತು ಮನಸಿಗೆ ಮುದ ನೀಡುವ ಹವ್ಯಾಸಗಳ ಮೊರೆ ಹೋಗುವುದು ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT