ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕಿನ ಭೀತಿ, ಇದ್ದಲ್ಲೇ ಯೋಗಾಭ್ಯಾಸ

ಹೆಚ್ಚುತ್ತಿದೆ ಆನ್‌ಲೈನ್‌ ಯೋಗ ತರಗತಿ
Last Updated 27 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಕೊರೊನಾ ಸೋಂಕಿನ ಭೀತಿಯಿಂದ ಸರ್ಕಾರ ದೇಶದಾದ್ಯಂತ 21 ದಿನ ದಿಗ್ಬಂಧನ ಹಾಕಿದೆ. ಹೀಗಾಗಿ ಮನೆಯಿಂದ ಯಾರೂ ಹೊರಗೆ ಬರುವಂತಿಲ್ಲ. ಆದರೆ, ಮನೆಯಲ್ಲೇ ಕುಳಿತು ಕುಳಿತು ದೇಹ ಜಡ್ಡು ಹಿಡಿದಿದೆ, ರೋಗದ ಭೀತಿ ಮನಸ್ಸಿನಲ್ಲಿ ಆತಂಕ ಸೃಷ್ಟಿಸುತ್ತಿದೆ..

ಇದರಿಂದ ಪಾರಾಗಲು ಯೋಗ–ಧ್ಯಾನದ ತರಗತಿಗಳಿಗೆ ಹೋಗೋಣ ಎಂದರೆ, ಹೊರಗೆ ಹೋಗುವ ಹಾಗಿಲ್ಲ. ತರಗತಿಗೆ ಹೋಗಿ ಯೋಗ, ಧ್ಯಾನ ಮಾಡುತ್ತಿದ್ದವರಿಗೂ, ಶಿಕ್ಷಕರಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ಏನು ಮಾಡೋದು ಈಗ ?

ಈ ಸಮಸ್ಯೆಗೆ ಪರಿಹಾರವಾಗಿನಗರದ ಹಲವು ಯೋಗ ಕೇಂದ್ರಗಳು, ಯೋಗ ಶಿಕ್ಷಕರು ಆನ್‌ಲೈನ್‌ ಮೂಲಕ ಯೋಗ ತರಗತಿಗಳನ್ನು ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಆನ್‌ಲೈನ್‌ ಮೂಲಕವೇ ಯೋಗ ಕಲಿಯುವವರ ಸಂಖ್ಯೆಯೂ ನಿಧಾನಕ್ಕೆ ಹೆಚ್ಚುತ್ತಿದೆ.

ವಿವೇಕಾನಂದ ಸ್ಕೂಲ್

ಹೆಬ್ಬಾಳದ ಕೆಂಪಾಪುರದ ‘ವಿವೇಕಾನಂದ ಸ್ಕೂಲ್‌ ಆಫ್‌ ಯೋಗ ಕೇಂದ್ರ‘ದ ಪ್ರಸಾದ್‌ ಎ.ಪಿ ಹಾಗೂ ಅವರ ಪತ್ನಿ ರಾಜಶ್ರೀ ಪ್ರಸಾದ್‌ ಅವರು ಆನ್‌ಲೈನ್‌ ಯೋಗ ತರಗತಿಗಳನ್ನು ಆರಂಭಿಸಿದ್ದಾರೆ. ಅವರು ಈಗ 85 ಜನರಿಗೆ ಆನ್‌ಲೈನ್‌ ಮೂಲಕವೇ ಯೋಗವನ್ನು ಮನೆಯಿಂದಲೇ ಹೇಳಿಕೊಡುತ್ತಿದ್ದಾರೆ.

ಆನ್‌ಲೈನ್ ಯೋಗ ಶಿಕ್ಷಣ ಕುರಿತು ‘ಪ್ರಜಾವಾಣಿ‘ಯೊಂದಿಗೆ ಮಾತನಾಡಿದ ಎ.ಪಿ.ಪ್ರಸಾದ್,‘ಈಗ ಲಾಕ್‌ಡೌನ್‌ ಆಗಿರುವುದರಿಂದ ನಾನು ಆನ್‌ಲೈನ್‌ ಮೂಲಕ ಯೋಗ ತರಗತಿ ಆರಂಭಿಸಿದೆ. ಝೋಮ್‌ ಆ್ಯಪ್‌ ಬಳಸುತ್ತಿದ್ದೇನೆ’ ಎಂದು ಹೇಳಿಕೊಂಡರು.

‘ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಯೋಗ, ಧ್ಯಾನ ಕಲಿಯುವವರ ಸಂಖ್ಯೆ ಹೆಚ್ಚಾಗಿದೆ. ಉಸಿರಾಟಕ್ಕೆ ಸಂಬಂಧಿಸಿದ ಯೋಗಗಳನ್ನು ಹೇಳಿಕೊಡಿ ಎಂದು ಜನರು ಕೇಳುತ್ತಿದ್ದಾರೆ‘ ಎಂದು ವಿವರಿಸಿದ ಅವರು, ಆನ್‌ಲೈನ್‌ ಮುಖಾಂತರವೇ ಪ್ರಾಣಾಯಾಮ, ಮುದ್ರೆಗಳು, ಆಕ್ಯುಪ್ರೆಶರ್‌, ಬೇರೆ ಬೇರೆ ರೀತಿಯ ಯೋಗಾಸನಗಳನ್ನು ಹೇಳಿಕೊಡುತ್ತೇವೆ’ ಎಂದರು.

ಪ್ರಸಾದ್, ಇದೇ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಹೇಳಿಕೊಡುತ್ತಿದ್ದಾರೆ. ಆದರೂ, ಕಲಿಕೆಯಲ್ಲಿ ಯಾವುದೇ ತರಹದ ವ್ಯತ್ಯಾಸವಾಗುತ್ತಿಲ್ಲವಂತೆ. ‘ಮುಂದೆ ಬೇರೆ ಬೇರೆ ತಂಡಗಳಲ್ಲಿ ತರಗತಿಗಳನ್ನು ನಡೆಸುವ ಯೋಜನೆ ಹಾಕಿದ್ದೇನೆ. ಹಾಗೇ ನನ್ನ ವಿದ್ಯಾರ್ಥಿಗಳನ್ನು ಬಿಟ್ಟು ಬೇರೆ ಜನರಿಗೂ ಸರಳ ಯೋಗ, ಉಸಿರಾಟಕ್ಕೆ ಸಂಬಂಧಿಸಿದ ಯೋಗಗಳನ್ನು ಹೇಳಿಕೊಡಲು ಫೇಸ್‌ಬುಕ್‌ ಲೈವ್‌ನಲ್ಲಿ ಯೋಗತರಗತಿ ಆರಂಭಿಸಲಿದ್ದೇನೆ’ ಎಂದು ಹೇಳಿದರು.

ಯೋಗ ವಿಜ್ಞಾನ ಕೇಂದ್ರ

ಚಂದ್ರಾ ಲೇಔಟ್‌ನ ‘ಯೋಗ ವಿಜ್ಞಾನ’ ಕೇಂದ್ರದ ಯೋಗ ಶಿಕ್ಷಕ ವಿನಯ್‌ ಸಿದ್ಧಯ್ಯ ಕೂಡ ಆನ್‌ಲೈನ್‌ ಮೂಲಕವೇ ಯೋಗ ತರಗತಿಗಳನ್ನು ನಡೆಸುತ್ತಿದ್ದಾರೆ. ‘ನನಗೆ ಆನ್‌ಲೈನ್‌ ಯೋಗ ತರಗತಿ ಹೊಸದಲ್ಲ, ಆದರೆ ಈಗ ಒಂದು ತಿಂಗಳಿನಿಂದ ಹೀಗೆ ಆನ್‌ಲೈನ್‌ ಯೋಗ ಕಲಿಯುವವರ ಸಂಖ್ಯೆ ಹೆಚ್ಚಾಗಿದೆ’ ಎನ್ನುತ್ತಾರೆ ಅವರು.

ವಿನಯ್‌ ಅವರೂ ಜೋಮ್‌ ಆ್ಯಪ್‌ ಅನ್ನೇ ಬಳಸುತ್ತಿದ್ದಾರೆ. ‘ 30–35 ಜನರಿಗೆ ಒಂದೇ ಬಾರಿಗೆ ಕ್ಲಾಸ್‌ ತೆಗೆದುಕೊಳ್ಳುತ್ತೇನೆ. ಟಿವಿ, ಲ್ಯಾಪ್‌ಟಾಪ್‌ ಮೂಲಕ ಅವರು ನೋಡಿಕೊಂಡು, ನಾನು ಹೇಳಿದಂತೆ ಆಸನಗಳನ್ನು ಮಾಡುತ್ತಾರೆ. ಜತೆಗೆ ನಾನು ಅವರೊಂದಿಗೆ ಸಂವಾದವನ್ನೂ ನಡೆಸುತ್ತೇನೆ. ಏನೇ ಸಂದೇಹಗಳಿದ್ದರೂ ಅಲ್ಲೇ ಪರಿಹರಿಸುತ್ತೇನೆ’ ಎನ್ನುತ್ತಾರೆ ಅವರು.

‘ಆನ್‌ಲೈನ್‌ ಕ್ಲಾಸ್‌ ತೆಗೆದುಕೊಳ್ಳುವಾಗ ಕೆಲ ಸವಾಲು ಎದುರಾಗುತ್ತವೆ. ಆಸನಗಳನ್ನು ಮುಂದಿರುವ ವ್ಯಕ್ತಿಗೆ ಕಾಣುವಂತೆ ಸ್ಪಷ್ಟವಾಗಿ ಮಾಡಬೇಕು. ಬೇರೆ ಬೇರೆ ಆಸನಗಳನ್ನು ಮಾಡುವಾಗ ಬೇರೆ ಬೇರೆ ಕೋನದಲ್ಲಿ ಮಾಡಬೇಕಾಗುತ್ತದೆ. ಹಾಗೇ ಅವರು ಆಸನಗಳನ್ನು ತಪ್ಪಾಗಿ ಮಾಡುವ ಸಂದರ್ಭವಿರುತ್ತದೆ. ಹಾಗಾಗದಂತೆ ಯಾವ ಯಾವ ರೀತಿಯಲ್ಲಿ ತಪ್ಪು ಆಸನಗಳನ್ನು ಮಾಡಬಹುದು ಎಂದು ವಿವರಿಸಿ ಹೇಳುತ್ತೇನೆ’ ಎಂದು ಮಾಹಿತಿ ಹಂಚಿಕೊಂಡರು.

ಯೂಟ್ಯೂಬ್‌ನಲ್ಲಿ ಯೋಗ

ಬಸವೇಶ್ವರನಗರದ ಆದ್ಯ ಪವರ್‌ ಯೋಗ ಕೇಂದ್ರದ ಶಿಕ್ಷಕಿ ಸ್ವಾತಿ ನಟರಾಜನ್‌ ಯೂಟ್ಯೂಬ್‌ ಮೂಲಕ ಯೋಗ ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇವರು ಬೇಸಿಕ್‌, ಸರಳವಾಗಿ ಮನೆಯಲ್ಲೇ ಮಾಡಬಹುದಾದ ಅಡ್ವಾನ್ಸ್ಡ್‌ ಯೋಗಾಸನಗಳ ವಿಡಿಯೊ ಮಾಡಿ ತಮ್ಮ ಸ್ನೇಹಿತರಿಗೆ, ವಿದ್ಯಾರ್ಥಿಗಳಿಗೆ ಕಳುಹಿಸುತ್ತಿದ್ದಾರೆ.

‘ಕ್ವಾರಂಟೈನ್‌ ಆಗಿ ಮನೆಯಲ್ಲೇ ಇರುವ ಜನರು ಯೋಗ ಮಾಡಿದರೆ ದೇಹ, ಮನಸ್ಸು ಪ್ರಪುಲ್ಲವಾಗಿರುತ್ತದೆ. ಉಸಿರಾಟದ ಮತ್ತು ಇತರ ಆಸನಗಳಿಂದ ದೇಹದ ರಕ್ತ ಪರಿಚಲನೆ ಸರಾಗವಾಗುತ್ತದೆ. ಮನಸ್ಸು ಮತ್ತು ಭಾವನೆಗಳನ್ನು ಸಮತೋಲನದಲ್ಲಿಡುತ್ತದೆ. ಹೀಗಾಗಿ ಈಗಿನ ಪರಿಸ್ಥಿತಿಯಲ್ಲಿ ದೇಹ, ಮನಸ್ಸು, ಭಾವನೆ ಆರೋಗ್ಯವಾಗಿರಲು ಯೋಗ ಒಳ್ಳೆಯ ಮದ್ದು’ ಎನ್ನುತ್ತಾರೆ ಸ್ವಾತಿ ನಟರಾಜನ್‌. ಸ್ವಾತಿ ಅವರ ಯೋಗ ವಿಡಿಯೋ ನೋಡಲು–shorturl.at/ACH08 ಕ್ಲಿಕ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT