ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಸಿಯೋಥೆರಪಿ: ಮರು ಜೀವ ಕೊಡುವ ಚಿಕಿತ್ಸೆ

Published 22 ಜನವರಿ 2024, 23:16 IST
Last Updated 22 ಜನವರಿ 2024, 23:16 IST
ಅಕ್ಷರ ಗಾತ್ರ

ಅನೇಕ ದಿನಗಳಿಂದ ಕುತ್ತಿಗೆ ನೋವಿನಿಂದ ಬಳಲುತ್ತಿದ್ದ ಲೀಲಾ ಕಾರಣವನ್ನು ಪತ್ತೆ ಮಾಡಲು ಎಕ್ಸ್-ರೆ, ಎಂ ಆರ್ ಐ ಪರೀಕ್ಷೆಗಳಿಗೂ ಒಳಗಾಗಿದ್ದಳು. ಗೆಳತಿಯ ಸಲಹೆಯ ಮೇರೆಗೆ ಫಿಸಿಯೋಥೆರಪಿ ತಜ್ಞರ ಬಳಿ ಹೋದಾಗಲೇ ಗೊತ್ತಾದದ್ದು ಆಕೆ ಕಚೇರಿಯಲ್ಲಿ ಕುಳಿತುಕೊಂಡು ಕಂಪ್ಯೂಟರ್ ಕೆಲಸ ಮಾಡುತ್ತಿದ್ದ ಭಂಗಿಯೇ ಆಕೆಯ ನೋವಿಗೆ ಕಾರಣ ಎಂದು. ದಿನವೂ ಕುಳಿತುಕೊಳ್ಳುವ ಭಂಗಿಯಲ್ಲಿ ಸ್ವಲ್ಪ ಬದಲಾವಣೆ ಮತ್ತು ಒಂದಿಷ್ಟು ಸರಳ ವ್ಯಾಯಾಮಗಳು ಲೀಲಾಳ ಕುತ್ತಿಗೆ ನೋವನ್ನು ಸಂಪೂರ್ಣ ಶಮನಗೊಳಿಸಿದ್ದವು.
ಹೌದು, ಫಿಸಿಯೋಥೆರಪಿ ಚಿಕಿತ್ಸಾ ಕ್ರಮವು ಅಪಘಾತ, ಪೆಟ್ಟು, ಮೂಳೆ ಮುರಿತ, ಪಾರ್ಶ್ವವಾಯು, ಅಂಗವೈಕಲ್ಯ ಮೊದಲಾದ ಸಮಸ್ಯೆಗಳಿಂದ ಬಳಲಿದ ವ್ಯಕ್ತಿಗೆ ಪುನರ್ವಸತಿ ಕಲ್ಪಿಸಲು ನೆರವಾಗುತ್ತದೆ. ವಿವಿಧ ವಿಧಾನಗಳನ್ನು ಬಳಸಿ ವ್ಯಕ್ತಿ ಮೊದಲಿನಂತಾಗಲು ಈ ಚಿಕಿತ್ಸೆ ಸಹಕರಿಸುತ್ತದೆ. ಎಷ್ಟೋ ಬಾರಿ ದೈನಂದಿನ ಜೀವನದಲ್ಲಿ ನಾವು ನಿಲ್ಲುವಾಗ, ನಡೆಯುವಾಗ ಕುಳಿತುಕೊಳ್ಳುವಾಗ ಅನುಸರಿಸುವ ತಪ್ಪು ಕ್ರಮಗಳಿಂದ ಉಂಟಾದ ನೋವು, ಪೆಡಸುತನ ಮೊದಲಾದ ಸಮಸ್ಯೆಗಳಿಗೆ ಈ ಚಿಕಿತ್ಸಾ ಕ್ರಮ ಪವಾಡದಂತೆ ಕೆಲಸ ಮಾಡಬಲ್ಲದು.

ಸ್ನಾಯುಗಳ ಹಿಗ್ಗುವಿಕೆ ಮತ್ತು ಕುಗ್ಗುವಿಕೆ ಮತ್ತು ಆ ಮೂಲಕ ಚಲನೆಗಳು ಅವು ಸುತ್ತುವರೆದ ಮೂಳೆ, ಆಸುಪಾಸಿನ ಕೀಲುಗಳು, ರಕ್ತ ಪರಿಚಲನೆ, ನರಗಳ ಪ್ರಚೋದನೆ ಮೊದಲಾದ ಅಂಶಗಳ ಮೇಲೆ ಅವಲಂಬಿತವಾಗಿರುತ್ತವೆ. ಯಾವುದೇ ಅಂಶದಲ್ಲಿ ವ್ಯತ್ಯಯವಾದಾಗ ಅವುಗಳ ಕಾರ್ಯಕ್ಷಮತೆ ಕ್ಷೀಣಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಸ್ನಾಯುಗಳು ಮೊದಲಿನ ಕಾರ್ಯಕ್ಷಮತೆಯನ್ನು ಪಡೆಯುವಲ್ಲಿ ಫಿಸಿಯೋಥೆರಪಿ ಪಾತ್ರ ಮಹತ್ವದ್ದು.

ಯಾವ ಸಮಸ್ಯೆಯಲ್ಲಿ ಫಿಸಿಯೋಥೆರಪಿ?

• ಮೂಳೆಗಳು ಮುರಿತಕ್ಕೊಳಗಾದಾಗ ಎಲುಬು ಮತ್ತು ಕೀಲು ತಜ್ಞರು ಸೂಕ್ತ ಶಸ್ತçಚಿಕಿತ್ಸೆ ಅಥವ ಇತರ ವಿಧಾನಗಳಿಂದ ಮೂಳೆಗಳನ್ನು ಮೊದಲಿನಂತೆ ಕೂಡಿಸುತ್ತಾರೆ. ಆದರೆ ಮೂಳೆ ಗಟ್ಟಿಯಾದ ಅಂಗಾಂಶವಾಗಿರುವುದರಿಂದ, ಮುರಿದ ಭಾಗಗಳು ಕೂಡಿಕೊಳ್ಳಲು ಕನಿಷ್ಠ ಮೂರರಿಂದ ಹನ್ನೆರಡು ವಾರಗಳೇ ಬೇಕಾಗಬಹುದು. ಅಲ್ಲಿಯವರೆಗೆ ಅದಕ್ಕೆ ಹೊಂದಿಕೊಂಡಂತಹ ಸ್ನಾಯುಗಳ ಚಲನೆಯನ್ನು ನಿರ್ಬಂಧಿಸಲಾಗಿರುತ್ತದೆ. ಬಹು ದಿನಗಳವರೆಗೆ ಚಲನೆಯಿಲ್ಲದ ಸ್ನಾಯುಗಳು ಸಂಪೂರ್ಣ ಬಿಗಿತಕ್ಕೊಳಗಾಗುವುದು ಸಹಜ. ಈ ಸ್ನಾಯುಗಳನ್ನು ಒಮ್ಮೆಲೇ ಚಲನೆಗೆ ಕೊಂಡೊಯ್ಯುವುದು ಕಠಿಣ. ಇಂತಹ ಸಂದರ್ಭಗಳಲ್ಲಿ ಫಿಸಿಯೋಥೆರಪಿ ತಜ್ಞರು ನಿಧಾನವಾಗಿ ಮತ್ತು ಹಂತ ಹಂತವಾಗಿ ಆ ಸ್ನಾಯುಗಳನ್ನು ಚಲನೆಗೆ ಅಣಿ ಮಾಡುತ್ತಾರೆ. ತಮ್ಮ ಕೈಗಳಿಂದ ಅಥವಾ ಸರಳ ಉಪಕರಣಗಳ ನೆರವಿನಿಂದ ಇದನ್ನು ಸಾಧಿಸುತ್ತಾರೆ. ಈ ಪ್ರಕ್ರಿಯೆ ಸ್ನಾಯುಗಳು ಮೊದಲಿನಂತಾಗಿ ವ್ಯಕ್ತಿ ಸ್ವತಂತ್ರವಾಗಿ ನಡೆದಾಡಲು ಬಹು ಮುಖ್ಯ.

• ಮಂಡಿ ಮರುಜೋಡಣೆ ಮತ್ತು ಚಪ್ಪೆ ಮೂಳೆ ಮರುಜೋಡಣೆಯ ನಂತರವೂ ಆ ಭಾಗದ ಸ್ನಾಯುಗಳಿಗೆ ಮೊದಲಿನ ಚಲನೆಯನ್ನು ತರಲು ಫಿಸಿಯೋಥೆರಪಿ ಬಹಳ ಮುಖ್ಯ. ತಜ್ಞರ ಸಲಹೆಯ ಮೇರೆಗೆ ಆಸ್ಪತ್ರೆಯಿಂದ ಮನೆಗೆ ತೆರಳಿದ ಮೇಲೆಯೂ ಸರಳ ವ್ಯಾಯಾಮಗಳನ್ನು ಮುದುವರೆಸುವುದು ಉತ್ತಮ.

• ವ್ಯಕ್ತಿ ಪಾರ್ಶ್ವವಾಯುವಿಗೆ ತುತ್ತಾದಾಗ ಶರೀರದ ಕೆಲವು ಭಾಗದ ಸ್ನಾಯುಗಳು ಸಂಪೂರ್ಣ ನಿಷ್ಕಿçಯಗೊಳ್ಳಬಹುದು. ಮೆದುಳಿನ ಯಾವ ಭಾಗದಲ್ಲಿ ಮತ್ತು ಎಷ್ಟು ತೀವ್ರವಾಗಿ ರಕ್ತ ಪರಿಚಲನೆಯಲ್ಲಿ ವ್ಯತ್ಯಯವಾಗಿದೆ ಎನ್ನುವ ಅಂಶದ ಮೇಲೆ ಸ್ನಾಯುಗಳ ಶಕ್ತಿ ಕುಂಠಿತವಾಗಿರುತ್ತದೆ. ಆದರೆ ತಕ್ಷಣವೇ ಆರಂಭಿಸುವ ಫಿಸಿಯೋಥೆರಪಿ ಚಿಕಿತ್ಸೆಯು ಸ್ವಲ್ಪ ಮಟ್ಟಿನ ಸ್ನಾಯುಗಳ ಬಲವನ್ನು ಹೆಚ್ಚಿಸಿ ವ್ಯಕ್ತಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ನೆರವಾಗಬಹುದು.

• ದೊಡ್ಡ ಮಟ್ಟದ ಶಸ್ತçಚಿಕಿತ್ಸೆಗಳಿಗೊಳಗಾಗಿ ಅಥವಾ ಇತರ ಕಾರಣಗಳಿಗಾಗಿ ತುರ್ತುಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುವಾಗ ವ್ಯಕ್ತಿ ಬಹು ದಿನಗಳವರೆಗೆ ಹಾಸಿಗೆಯಿಂದ ಎದ್ದು ನಡೆದಾಡಲು ಸಾಧ್ಯವಾಗದಿರಬಹುದು. ಈ ರೀತಿ ಚಲನೆಯಿಲ್ಲದ ಸ್ನಾಯುಗಳ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸರ್ವೇಸಾಮಾನ್ಯ. ಇದು ಬಹಳ ಅಪಾಯ. ಇಲ್ಲಿಯೂ ಫಿಸಿಯೋಥೆರಪಿ ತಜ್ಞರು ಕಾಲುಗಳ ಸ್ನಾಯುಗಳಿಗೆ ಕನಿಷ್ಠ ಚಲನೆಯನ್ನು ಮಾಡಿಸುತ್ತಾ ಮುಂಬರುವ ಅಪಾಯವನ್ನು ತಡೆಯಬಲ್ಲರು.

• ಸುಟ್ಟಗಾಯಗಳಿಂದ ಗುಣಮುಖರಾಗುವಾಗ ಸ್ನಾಯು ಬಿಗಿತಕ್ಕೊಳಗಾಗದಂತೆಯೂ ಸರಳ ವ್ಯಾಯಮಗಳನ್ನು ಮಾಡಿಸುವಲ್ಲಿ ಈ ಚಿಕಿತ್ಸೆ ಮುಖ್ಯ.

• ಅಸ್ತಮ ಮತ್ತು ಶ್ವಾಸಕೋಶದ ಸಮಸ್ಯೆಯಿಂದ ಬಳಲುವವರಲ್ಲಿ ಎದೆಯ ಭಾಗದ ಸ್ನಾಯುಗಳಿಗೆ ನಿಯಮಿತ ಚಲನೆಯನ್ನು ಕೊಡುವ ಮತ್ತು ಧೀರ್ಘ ಉಸಿರಾಟವನ್ನು ಮಾಡಿಸುವ ವ್ಯಾಯಾಮಗಳು ವ್ಯಕ್ತಿ ಶೀಘ್ರ ಗುಣಮುಖವಾಗುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.

• ಗರ್ಭಿಣಿ ಸ್ತಿçÃಯರಲ್ಲಿ ಸರಳ ವ್ಯಾಯಾಮಗಳ ಅಭ್ಯಾಸದಿಂದ ಪ್ರಸವ ಸುಲಭವಾಗುತ್ತದೆ. ಪ್ರಸವದ ಬಳಿಕ ಮಾಡುವ ವ್ಯಾಯಾಮಗಳು ಗರ್ಭಕೋಶ ಮತ್ತಿತರ ಅಂಗಾAಗಗಳು ಮೊದಲಿನ ಸುಸ್ಥಿತಿ ತಲುಪಲು ಫಿಸಿಯೋಥೆರಪಿ ನೆರವಾಗುತ್ತದೆ.

• ಆಟಗಾರರಲ್ಲಿ ಸ್ನಾಯುಗಳು ಶಕ್ತಿಯುತವಾಗಿರಲು ಮತ್ತು ಸುಲಭವಾಗಿ ಮತ್ತೆ ಮತ್ತೆ ಪೆಟ್ಟಿಗೆ ಒಳಗಾಗದಿರಲು ಫಿಸಿಯೋಥೆರಪಿ ತಜ್ಞರು ತರಬೇತಿ ನೀಡಬಲ್ಲರು. ಅಷ್ಟೇ ಅಲ್ಲದೆ ಆಟಕ್ಕೆ ಮೊದಲು ಮತ್ತು ನಂತರ ಸ್ನಾಯುಗಳಿಗೆ ಆಯಾಸವಾಗದಂತೆ ಮಾಂಸಖAಡಗಳನ್ನು ಹಿಗ್ಗಿಸುವ ನಿರ್ದಿಷ್ಟ ವ್ಯಾಯಾಮಗಳನ್ನೂ ಅವರು ತಿಳಿಸಿಕೊಡಬಲ್ಲರು.

• ದೇಹದ ಯಾವುದೇ ಭಾಗದಲ್ಲಿನ ನೋವಿನ ತೀವ್ರತೆಯನ್ನು ಕಡಿಮೆ ಮಾಡುವ ವಿಶೇಷ ವಿಭಾಗ ಫಿಸಿಯೋಥೆರಪಿ. ಬೆನ್ನು, ಕುತ್ತಿಗೆ, ಭುಜ, ಪಾದ, ಹಿಮ್ಮಡಿ, ಕೈಕಾಲುಗಳ ನೋವಿಗೆ ಸೂಕ್ತ ವಿಧಾನವನ್ನು ಬಳಸಿ ಹಿತಕರ ಅನುಭವವನ್ನು ನೀಡುವ ಶಕ್ತಿ ಈ ಚಿಕಿತ್ಸೆಗೆ ಇದೆ. ಇದಕ್ಕಾಗಿ ತಜ್ಞರು ಶಾಖ ಮತ್ತು ಶಬ್ದ ತರಂಗಗಳನ್ನು ಬಳಸುತ್ತಾರೆ. ಕೆಲವೊಮ್ಮೆ ಮೇಣ ಮತ್ತು ಜಲ ಚಿಕಿತ್ಸೆಯೂ ಬೇಕಾಗಬಹುದು. ಸೂಕ್ತ ಮುಲಾಮು ಅಥವ ಎಣ್ಣೆಯನ್ನು ಬಳಸಿ ದೇಹದ ಭಾಗವನ್ನು ಕೈಗಳಿಂದ ಅಥವ ಉಪಕರಣಗಳ ನೆರವಿನಿಂದ ತಿಕ್ಕುವುದು ಅಥವ ಉಜ್ಜುವುದು ಸಹ ಹಲವು ಬಗೆಯ ನೋವುಗಳನ್ನು ಕಡಿಮೆ ಮಾಡಬಲ್ಲದು.

• ಕೆಲವು ನರರೋಗಗಳಲ್ಲಿ ತೀವ್ರತರವಾದ ಸ್ನಾಯುಗಳ ಬಿಗಿತ/ ಪೆಡಸುತನವನ್ನು ಕಡಿಮೆ ಮಾಡಲು ವಿದ್ಯುತ್ ಪ್ರಚೋದನೆಯನ್ನು ಕೊಡುವಂತಹ ಚಿಕಿತ್ಸಾ ಕ್ರಮಗಳೂ ಫಿಸಿಯೋಥೆರಪಿಯಲ್ಲಿ ಲಭ್ಯವಿವೆ..

• ಅನೇಕ ಸಂದರ್ಭಗಳಲ್ಲಿ ಚಿಕಿತ್ಸಕರು ಮೂಲ ಸಮಸ್ಯೆಯನ್ನು ಅರಿತು ಅಲ್ಲಿ ತಿದ್ದು ಪಡಿ ಮಾಡುವುದು ಮತ್ತು ಸ್ನಾಯುಗಳನ್ನು ಶಕ್ತಿಯುತಗೊಳಿಸುವ ಸರಳ ವ್ಯಾಯಾಮಗಳ ಬಗ್ಗೆ ಅರಿವು ಮೂಡಿಸುವುದೇ ಸಮಸ್ಯೆಯನ್ನು ಸರಿ ಪಡಿಸಲು ಹಾಗೂ ನೋವು ಮರುಕಳಿಸದಿರಲು ನೆರವಾಗುತ್ತವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT