ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ನಿಮಗೆಷ್ಟು ಅಪಾಯಕಾರಿ?

Last Updated 21 ಜೂನ್ 2019, 19:30 IST
ಅಕ್ಷರ ಗಾತ್ರ

ಈಗಾಗಲೆ ಪ್ಲಾಸ್ಟಿಕ್‌ ನಮ್ಮ ನದಿ, ಸಮುದ್ರಗಳನ್ನು ಮಲಿನ ಮಾಡಿದೆ. ನಾವು ತಿನ್ನುವ ಆಹಾರ, ಕುಡಿಯುವ ನೀರು ಹಾಗೂ ಉಸಿರಾಡುವ ಗಾಳಿಯಲ್ಲಿ ಕೂಡ ಅಪಾಯಕಾರಿ ಮೈಕ್ರೊಪ್ಲಾಸ್ಟಿಕ್‌ ಕಣಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಹಾನಿಕರ ರಾಸಾಯನಿಕಗಳಿಂದ ನಮ್ಮ ಮಕ್ಕಳನ್ನು ರಕ್ಷಿಸಲು ಸಾಧ್ಯವೇ? ಪೋಷಕರು ಕೆಲವು ಸಣ್ಣಪುಟ್ಟ ಅಂಶಗಳ ಕಡೆ ಗಮನಹರಿಸಿದರೆ ಅದು ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಅಂತಹ ಕೆಲವು ಸುಲಭ ಸಲಹೆಗಳು ಇಲ್ಲಿವೆ.

ಮೈಕ್ರೊಪ್ಲಾಸ್ಟಿಕ್ ಎಂದರೇನು?

ಐದು ಮಿಲಿಮೀಟರ್‌ಗಿಂತ ಕಡಿಮೆ ದಪ್ಪ ಇರುವ ಪ್ಲಾಸ್ಟಿಕ್‌ ಮೈಕ್ರೊಪ್ಲಾಸ್ಟಿಕ್‌. ಇಂತಹಪ್ಲಾಸ್ಟಿಕ್‌ ನಮ್ಮ ವಾತಾವರಣಕ್ಕೆ ಬೆರೆತು ಸಣ್ಣ ಸಣ್ಣ ರಾಸಾಯನಿಕ ಕಣಗಳಾಗಿ ಬದಲಾಗುತ್ತದೆ. ಪ್ಲಾಸ್ಟಿಕ್‌ ಅಂಶ ಹೆಚ್ಚಾಗಿ ಕರುಳು, ರಕ್ತ, ಶ್ವಾಸಕೋಶ ಮತ್ತು ಪಿತ್ತಜನಕಾಂಗದಲ್ಲೂ ಕಂಡು ಬರುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

ಆರೋಗ್ಯದ ವಿಚಾರದಲ್ಲಿ ತಾಯಂದಿರು ಮೊದಲು ಪ್ಲಾಸ್ಟಿಕ್ ವಸ್ತು ಬಳಕೆಯ ಕುರಿತು ಹೆಚ್ಚು ಜಾಗೃತರಾಗಿರಬೇಕು. ಮಕ್ಕಳ ಆರೈಕೆಯಲ್ಲಿ ಊಟ, ತಿಂಡಿ, ನೀರು ಹೀಗೆ ಎಲ್ಲವನ್ನೂ ನಿರ್ವಹಿಸುವುದು ತಾಯಂದಿರ ಹೊಣೆಯಾಗಿರುತ್ತದೆ. ಅವಸರದಲ್ಲಿ ಬೇಗ ಬೇಗ ಮಕ್ಕಳನ್ನು ರೆಡಿ ಮಾಡಿ ಊಟ, ನೀರು ಎಲ್ಲವನ್ನೂ ಪ್ಲಾಸ್ಟಿಕ್‌ ಡಬ್ಬಿಯಲ್ಲಿಯೇ ತುಂಬಿಸಿ ಕಳುಹಿಸುವ ಅಭ್ಯಾಸವಿರುತ್ತದೆ. ಮುಂದೆ ಇಂತಹ ಹವ್ಯಾಸದಿಂದ ತಾಯಂದಿರ ನಡೆ ಬದಲಾದರೆ ಆರೋಗ್ಯಕರ ಬೆಳವಣಿಗೆಗೆ ಅಡಿಪಾಯವಾಗುತ್ತದೆ.

ಮೊದಲು ನಿಮ್ಮ ಮನೆಯೊಳಗಿನ ಪರಿಸರ ಗಮನಿಸಿ. ನಿಮ್ಮ ಮಕ್ಕಳು ಉಪಯೋಗಿಸುವ ನೀರಿನ ಬಾಟಲ್‌ ಹಾಗೂ ಊಟದ ಡಬ್ಬಿಯು ರಾಸಾಯನಿಕದಿಂದ ಮುಕ್ತವಾಗಿದೆಯೇ ಎಂಬುದು ಗಮನಿಸಿ. ಈಗಾಗಲೆ ನಿಮ್ಮ ಮನೆಗಳಲ್ಲಿ ಅಂಗಡಿಯಲ್ಲಿ ಖರೀದಿಸಿದ ರಾಸಾಯನಿಕ ಅಂಶವಿರುವ ನೀರಿನ ಬಾಟಲ್‌, ಪ್ಲೇಟುಗಳು ಮತ್ತು ತೆಳುವಾದ ಪ್ಲಾಸ್ಟಿಕ್‌‌ ಡಬ್ಬಿಗಳು ಇದ್ದರೆ ಅವುಗಳನ್ನು ಉಪಯೋಗಿಸಬೇಡಿ.

ಪ್ಲಾಸ್ಟಿಕ್‌ ಬಳಕೆಯನ್ನು ನಿತ್ಯ ಜೀವನದಲ್ಲಿ ಕಡಿಮೆ ಮಾಡಲು ಕೆಲವೊಂದು ಸುಲಭ ಕ್ರಮಗಳನ್ನು ಅನುಸರಿಸಬಹುದು.

ಪ್ಲಾಸ್ಟಿಕ್‌ ಬಾಟಲ್‌ ಅಥವಾ ಡಬ್ಬಿಯಲ್ಲಿ ನೀರು ಮತ್ತು ಆಹಾರ ಪದಾರ್ಥಗಳನ್ನು ಸಂಗ್ರಹಿಸುವುದನ್ನು ನಿಲ್ಲಿಸಿ. ಇದಕ್ಕಾಗಿ ಸಾಂಪ್ರದಾಯಿಕ ಸ್ಟೀಲ್‌ ಡಬ್ಬಿ ಮತ್ತು ಜಗ್‌ ಬಳಸಿ. ನೀರಿಗಾಗಿ ಗಾಜಿನ ಲೋಟ, ಬಾಟಲ್‌ ಅಥವಾ ಸಿರಾಮಿಕ್‌ ಪಾತ್ರೆ ಬಳಸಿ.

ಮಕ್ಕಳಿಗೆ ಕೂಡ ಸ್ಟೀಲ್‌ ಡಬ್ಬಿಯಲ್ಲಿ ಊಟ ಕಳಿಸಿ. ಕುಡಿಯುವ ನೀರನ್ನು ಸಹ ಸ್ಟೀಲ್‌ ಬಾಟಲಿಯಲ್ಲಿ ತುಂಬಿಸಿ ಕಳಿಸಿ. ಈ ಬಾಟಲ್‌ ಮತ್ತು ಡಬ್ಬಿಯನ್ನು ಶುಚಿಯಾಗಿ ತೊಳೆದಿಡುವ ಅಭ್ಯಾಸ ಮಾಡಿ.

ಪ್ಲಾಸ್ಟಿಕ್‌ ಕಣಗಳನ್ನು ಫಿಲ್ಟರ್‌ ಮಾಡಲು ರಿವರ್ಸ್‌ ಒಸ್ಮೊಸಿಸ್‌ ಫಿಲ್ಟರ್‌ಗಳು ಬಂದಿವೆ. ನೀರಿನ ಕ್ಯಾನ್‌ ತರಿಸುವ ಬದಲು ನಿಮ್ಮ ಮನೆಯ ಕುಡಿಯುವ ನೀರಿನ ನಲ್ಲಿಗೆ ಈ ಫಿಲ್ಟರ್‌ ಹಾಕಬಹುದು.

ಮೀನು ತಿನ್ನುವ ಅಭ್ಯಾಸ ಇದ್ದವರು ಕಡಲಿನಲ್ಲಿ ಅಥವಾ ನದಿಯಲ್ಲಿ ಹಿಡಿದ ಮೀನಿಗೆ ಆದ್ಯತೆ ನೀಡಿ. ಫಾರ್ಮ್‌ನಲ್ಲಿ ಬೆಳೆದ ಮೀನಿನಲ್ಲಿ ರಾಸಾಯನಿಕ ವಸ್ತು ಸೇರಿಕೊಂಡಿರುತ್ತದೆ.

ಮನೆಯಲ್ಲೇ ಸಿದ್ಧಪಡಿಸಿದ ಆಹಾರ ಯಾವತ್ತಿದ್ದರೂ ಒಳ್ಳೆಯದು. ಅನಿವಾರ್ಯವಾದಾಗ ಸಿದ್ಧ ಆಹಾರ ಅಥವಾ ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಸಿ ತರಿಸಿಕೊಳ್ಳುವ ಆಹಾರದ ಬದಲು ಆದಷ್ಟು ಉಪಾಹಾರಗೃಹದಲ್ಲಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಪ್ಯಾಕ್‌ ಅನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಕಳಿಸುವುದರಿಂದ ಅದು ಆಹಾರದ ಮೂಲಕ ನಿಮ್ಮ ದೇಹವನ್ನು ಸೇರುತ್ತದೆ.

ಮೈಕ್ರೊವೇವ್‌ನಲ್ಲಿ ಬಿಸಿ ಮಾಡುವಾಗ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್‌ ಪಾತ್ರೆಯಲ್ಲಿಡಬೇಡಿ.

ಮಕ್ಕಳಿಗೆ ಆದಷ್ಟು ನೈಸರ್ಗಿಕ ವಸ್ತುಗಳಿಂದ ತಯಾರಾದ ಆಟಿಕೆ ಖರೀದಿಸಿ. ಮಗು ಪ್ಲಾಸ್ಟಿಕ್‌ ಆಟಿಕೆಯನ್ನು ಬಾಯಲ್ಲಿ ಕಚ್ಚಿದರೆ ಅದರ ಕಣಗಳು ಹೊಟ್ಟೆಗೆ ಸೇರಿ ಅಪಾಯ ಉಂಟು ಮಾಡುತ್ತವೆ.

ಹತ್ತಿ, ರೇಷ್ಮೆ ಹಾಗೂ ಲಿನನ್‌ ಉಡುಪನ್ನು ಮಾತ್ರ ಧರಿಸಿ. ಮಕ್ಕಳಿಗೂ ಇದನ್ನೇ ರೂಢಿಸಿ. ಸಿಂಥೆಟಿಕ್‌ ಉಡುಪು ದೇಹಕ್ಕೆ ಅಪಾಯಕಾರಿ.

ಆದಷ್ಟು ಸಾಂಪ್ರದಾಯಿಕ ಸ್ಟೀಲ್‌, ತಾಮ್ರ, ಹಿತ್ತಾಳೆ, ಮಣ್ಣಿನ ಮಡಕೆ, ಗಾಜಿನ ಪಾತ್ರೆಗಳು, ಡಬ್ಬಿಗಳನ್ನು ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT