ಶುಕ್ರವಾರ, ಸೆಪ್ಟೆಂಬರ್ 17, 2021
21 °C

ಕೊರೊನಾ ಸೋಂಕು ವಾಸಿಯಾದ 3 ತಿಂಗಳಿನಲ್ಲಿ ಕೂದಲು ಉದುರುವಿಕೆ- ತಜ್ಞರ ಕಳವಳ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಹೆಚ್ಚಿನವರಿಗೆ ಮೂರು ತಿಂಗಳ ಬಳಿಕ ಕೂದಲು ಉದುರುವಿಕೆ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ಈ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲಿ ಅಧಿಕವಾಗಿದೆ.

ಕೋವಿಡ್ ಎರಡನೇ ಅಲೆ ಬಳಿಕ ಈ ರೀತಿಯ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ವರದಿಯಾಗುತ್ತಿವೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.

ಎಲ್ಲ ವಯೋಮಾನದವರಲ್ಲಿಯೂ ಈ ಸಮಸ್ಯೆ ಕಾಡುತ್ತಿರುವುದನ್ನು  ವೈದ್ಯರು ಗುರುತಿಸಿದ್ದಾರೆ. ಕೋವಿಡ್‌ ಪೀಡಿತರಾಗಿದ್ದ ಅವಧಿಯಲ್ಲಿ ದೇಹದಲ್ಲಿನ ಪೋಷಕಾಂಶದ ವ್ಯತ್ಯಯ, ಮಾನಸಿಕ ಹಾಗೂ ದೈಹಿಕ ಒತ್ತಡ, ಅತಿಯಾದ ಔಷಧ ಬಳಕೆ ಸೇರಿದಂತೆ ವಿವಿಧ ಕಾರಣಗಳಿಂದ ಚೇತರಿಸಿಕೊಂಡ ಬಳಿಕ ಕೂದಲು ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತಿವೆ ಎಂದು ವೈದ್ಯಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

‘ವಯಸ್ಕರು ಹಾಗೂ ವೃದ್ಧರಲ್ಲಿ ಈ ಸಮಸ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ದಿನಕ್ಕೆ 30ರಿಂದ 40 ಕೂದಲುಗಳು ಉದುರುತ್ತಿರುವವರಿಗೆ 100ರಿಂದ 200 ಕೂದಲುಗಳು ತಲೆಯ ಎಲ್ಲೆಡೆಯಿಂದ ಉದುರುತ್ತಿವೆ. ಈ ಹಿಂದೆ ವಿರಳವಾಗಿ ಪ್ರಕರಣಗಳು ವರದಿಯಾಗುತ್ತಿದ್ದವು. ಎರಡನೇ ಅಲೆ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರೋಗಿಗಳು ಈ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಅವರನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಕೋವಿಡ್‌ನಿಂದಾಗಿ ಎನ್ನುವುದು ತಿಳಿದುಬಂದಿದೆ. ಈ ಸಮಸ್ಯೆಯನ್ನು ‘ಟೆಲೊಜೆನ್ ಎಫ್ಲುವಿಯಮ್’ ಎನ್ನಲಾಗುತ್ತದೆ’ ಎಂದು ಚರ್ಮ ರೋಗ ತಜ್ಞರು ತಿಳಿಸಿದ್ದಾರೆ.

ಮಹಿಳೆಯರಲ್ಲಿ ಅಧಿಕ: ಇಎಸ್‌ಐ ಆಸ್ಪತ್ರೆ, ಆಸ್ಟರ್ ಸಿಎಂಐ, ಜಿವಿಜಿ ಇನ್ವಿವೊ ಆಸ್ಪತ್ರೆ, ಮಣಿಪಾಲ್, ಫೋರ್ಟಿಸ್ ಸೇರಿದಂತೆ ಪ್ರಮುಖ ಆಸ್ಪತ್ರೆಗಳಲ್ಲಿ ಈ ರೀತಿಯ ಪ್ರಕರಣಗಳು ವರದಿಯಾಗಿವೆ. ಇಎಸ್‌ಐ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಸರಾಸರಿ 25 ಮಂದಿ ಹೊರರೋಗಿಗಳಾಗಿ ಈ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಜಿವಿಜಿ ಇನ್ವಿವೊ ಆಸ್ಪತ್ರೆಯಲ್ಲಿ ಸದ್ಯ 12 ಮಂದಿ ಒಳರೋಗಿಗಳಾಗಿ ದಾಖಲಾಗಿದ್ದಾರೆ.

‘ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಶೇ 90ಕ್ಕೂ ಅಧಿಕ ಮಂದಿಯಲ್ಲಿ ಕೂದಲು ಉದುರುವಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೋವಿಡ್‌ನಿಂದ ವ್ಯಕ್ತಿ ಬಳಲಿದಾಗ ಉಂಟಾಗುವ ಮಾನಸಿಕ ಹಾಗೂ ದೈಹಿಕ ಒತ್ತಡದಿಂದ ಬೆಳವಣಿಗೆಯ ಹಂತದಲ್ಲಿರುವ ಕೂದಲುಗಳು ನಿತ್ರಾಣದ ಹಂತಕ್ಕೆ ಹೋಗುತ್ತವೆ. ಮೂರು ತಿಂಗಳ ಬಳಿಕ ಅವು ಉದುರಲು ಪ್ರಾರಂಭಿಸುತ್ತವೆ’ ಎಂದು ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ. ಗಿರೀಶ್ ಎಂ.ಎಸ್. ತಿಳಿಸಿದರು.

‘ಕೋವಿಡ್‌ನಿಂದ ದೇಹದಲ್ಲಿ ಪೋಷಕಾಂಶದ ಕೊರತೆ ಉಂಟಾಗುತ್ತದೆ. ಇದು ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಕೂದಲು ಉದುರುವಿಕೆಯನ್ನು 7 ಹಂತಗಳಲ್ಲಿ ವಿಭಜಿಸಲಾಗುತ್ತದೆ. ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಎರಡು ಹಂತದಲ್ಲಿ ಕೂದಲು ಉದುರುತ್ತದೆ. ಇದಕ್ಕೆ ಪ್ಲೇಟ್ಲೆಟ್ ರಿಚ್ ಪ್ಲಾಸ್ಮಾ ಸೇರಿದಂತೆ ವಿವಿಧ ಚಿಕಿತ್ಸೆಗಳು ಕೂಡ ಇವೆ’ ಎಂದು ಜಿವಿಜಿ ಇನ್ವಿವೊ ಆಸ್ಪತ್ರೆಯ ಮುಖ್ಯ ಪ್ಲಾಸ್ಟಿಕ್ ಸರ್ಜನ್ ಡಾ. ಗುಣಶೇಖರ್ ವುಪ್ಪಲಪತಿ ವಿವರಿಸಿದರು.

ಕೂದಲು ವೃದ್ಧಿಗೆ ತಜ್ಞರ ಸಲಹೆಗಳು

* ಕೂದಲು ಮೊದಲಿನಂತೆ ಬೆಳವಣಿಗೆ ಹೊಂದಲು ಪೋಷಕಾಂಶ ಹೆಚ್ಚಿಸುವ ಜಿಂಕ್ ಸೇರಿದಂತೆ ವಿವಿಧ ಮಾತ್ರೆಗಳನ್ನು ನೀಡಲಾಗುತ್ತದೆ. ವೈದ್ಯರ ಸಲಹೆ ಪಡೆದು ಸೇವಿಸಬೇಕು

*ಪೌಷ್ಠಿಕ ಆಹಾರ ಸೇವಿಸಬೇಕು

* ಒತ್ತಡ ದೂರವಾಗಲು ದಿನವೂ ವ್ಯಾಯಾಮ, ಯೋಗ ಅಗತ್ಯ

* ಚೆನ್ನಾಗಿ ನಿದ್ದೆ ಹಾಗೂ ವಿಶ್ರಾಂತಿ ‍ಮಾಡಬೇಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು