ಶುಕ್ರವಾರ, ಸೆಪ್ಟೆಂಬರ್ 17, 2021
22 °C

PV Web Exclusive: ಮನೋಮಯ | ಆಳುವ ಅಭಿಲಾಷೆಯೇ ಅತ್ಯಾಚಾರ

ರಶ್ಮಿ ಎಸ್‌ Updated:

ಅಕ್ಷರ ಗಾತ್ರ : | |

Prajavani

ನಿರ್ಭಯಾ ಪ್ರಕರಣ ಮನಸಿನಿಂದ ನೇಪಥ್ಯಕ್ಕೆ ಸರಿಯುವ ಮೊದಲೇ ಉತ್ತರ ಪ್ರದೇಶದ ಹತ್ರಾಸಿನಲ್ಲಿ 19ರ ಯುವತಿ, ಜೀವಚ್ಛವವಾಗಿ, ಸತ್ತು, ಶವವೂ ಸಿಗದಂತೆ ಮೂಳೆಗಳ ಕುಡಿಕೆಯಾಗಿ ಹೆತ್ತವರ ಕೈ ಸೇರಿದ್ದಾಳೆ.

ಇಡೀ ಸುದ್ದಿಯನ್ನು ಆಗುಹೋಗುಗಳೆಲ್ಲವೂ ಮನಸು ಕಲವಿಲಗೊಳಿಸುತ್ತವೆ. ನಿರ್ಭಯಾನಿಂದ ಈ ಮನಿಶಾವರೆಗೂ ಪೈಶಾಚಿಕ ಕೃತ್ಯ ಎಸಗುವ ಮನಸುಗಳು ಎಂಥವು?

ಈ ಪ್ರಶ್ನೆಗಳ ಬೆನ್ನಟ್ಟಿ ಹೊರಟಾಗ ಸಿಕ್ಕಿದ್ದೆಲ್ಲ ವ್ಯತಿರಿಕ್ತ ಹೇಳಿಕೆಗಳೇ. ಮಹಿಳೆಯರ ಉಡುಗೆತೊಡುಗೆಗಳು ಪ್ರಚೋದನೆ ನೀಡುತ್ತವೆ. ಅವರ ಹಾವಭಾವಗಳು ಪ್ರಚೋದಿಸುತ್ತವೆ.

ಎಳೆಮಗು ಮತ್ತು ವೃದ್ಧೆಯರು ಪ್ರಚೋದನಾತ್ಮಕವಾಗಿ ಉಡುಗೆಗಳನ್ನು ಧರಿಸುತ್ತಾರಾ? ಯಾವ ಪ್ರಚೋದನಾತ್ಮಕ ನಡವಳಿಕೆ ಇವರನ್ನು ಬಲಾತ್ಕರಿಸುವಂತೆ ಮಾಡಿದವು? ಈ ಪ್ರಶ್ನೆಗೆ ಉತ್ತರಗಳಿಲ್ಲ.

ಅವಳ ವರ್ತನೆ, ನಡಾವಳಿ ಸರಿ ಇರಲಿಲ್ಲ, ಅವರೇ ಸಲುಗೆ ನೀಡಿದ್ದರು. ಅವರೇ ಕಾರಣರು... ಇಂಥ ಹತ್ತು ಹಲವು ಸಮಜಾಯಿಷಿಗಳು, ಸಮರ್ಥನೆಗಳು ಸಿಗುತ್ತಲೇ ಹೋದವು. ಆದರೆ ಸ್ವಾಮಿ.. ಯಾವ ಹೆಣ್ಣುಮಗಳೂ ಸಹ, ಬಲಾತ್ಕರಿಸಲು, ಅತ್ಯಾಚಾರ ಮಾಡುವಂತೆ ಪ್ರಚೋದಿಸುವುದಿಲ್ಲ. 

ಯುವಕರಿಗೆ ಉದ್ಯೋಗವಿಲ್ಲ, ನಿರುದ್ಯೋಗಿಗಳಿಗೆ ಮದುವೆ ವಿಳಂಬವಾಗುತ್ತಿರುವುದೇ ಅತ್ಯಾಚಾರಗಳಿಗೆ ಕಾರಣ ಎಂದು ಹಿಂದೊಮ್ಮೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರು ಹೇಳಿದ್ದರು. 

ಆದರೆ ಇದು ಕೇವಲ ಬಯಕೆಯನ್ನು ತೀರಿಸಿಕೊಳ್ಳುವ ಕ್ರಿಯೆಯಲ್ಲ. ಮತ್ತು ಕೇವಲ ಬಾಹ್ಯ ಪ್ರಚೋದನೆಯಿಂದ ದಾಳಿ ಮಾಡುವುದೂ ಇಲ್ಲ.  ಈ ಪ್ರಚೋದನೆ ಒಳಮನಸಿನ ವ್ಯಾಪಾರದ ಫಲ. 

ಇಡೀ ಮನುಕುಲದಲ್ಲಿ ಪುರುಷ ಮತ್ತು ಸ್ತ್ರೀಯರನ್ನು ಕಾಣುವ ದೃಷ್ಟಿಕೋನದ ಫಲ. ಮಿಲನ ಪ್ರಕ್ರಿಯೆಯನ್ನು ಪಡೆಯುವ, ಕೊಡುವ, ಹೊಂದುವ, ಅರ್ಥ ಬರುವ ಪದಗಳಿಂದಲೇ ವಿಶ್ಲೇಷಿಸಲಾಗುತ್ತದೆ. ಇದನ್ನು ಎಲ್ಲಿಯೂ ದೇಹಸಹಜ ಪ್ರಕ್ರಿಯೆ, ಪ್ರೀತಿಯಲ್ಲಿ ಅರಳುವ ಪ್ರಕ್ರಿಯೆ, ಒಗ್ಗೂಡುವ ಕ್ರಿಯೆ ಹೀಗೆ ಹೇಳುವುದಿಲ್ಲ. ಯಾವತ್ತಿದ್ದರೂ ಹೆಣ್ಣು ಪಡೆಯುವ, ಮತ್ತು ಗಂಡು ಕೊಡುವ ಸ್ಥಾನದಲ್ಲಿಯೇ ಇರುವಂಥ ಉಪಮಾನ, ಉಪಮೇಯಗಳು, ರೂಪಕಗಳಲ್ಲಿ ವರ್ಣಿಸಲಾಗಿದೆ.

ಪ್ರಕೃತಿ ಪುರುಷ, ಫಲವಂತಿಕೆ, ಫಲ, ಉತ್ತುವುದು, ಬಿತ್ತುವುದು ಇವುಗಳನ್ನೇ ಸಂಕೇತವಾಗಿ ಬಳಸಲಾಗಿದೆ.  ಈ ಎಲ್ಲ ರೂಪಕಗಳೂ ಹೆಣ್ಣುಮಕ್ಕಳನ್ನು ದುರ್ಬಲರಾಗಿಯೇ ತೋರಿದೆ. ಆದರೆ ನೈಸರ್ಗಿಕವಾಗಿ ಇದು ವ್ಯತಿರಿಕ್ತವಾಗಿದೆ. ಕೊಡುವುದು ಹೆಣ್ಣುಮಗಳ ಕೆಲಸವಾಗಿದೆ. ಪುರುಷನಿಗೆ ಸ್ಖಲನ ಬಿಡುಗಡೆಯ ಪ್ರತೀಕ. ಹೆಣ್ಣುಮಗಳಿಗೆ ಅದು ಸ್ವೀಕರಿಸಿ, ಮಗು ಕೊಡುವ ಪ್ರಕ್ರಿಯೆ. ಇಲ್ಲಿ ಬಲಿಷ್ಠಲಿಂಗವಾಗಬೇಕಿದ್ದ ಮಹಿಳೆ ಪಡೆಯುವ ಪ್ರಕ್ರಿಯೆಯಲ್ಲಿ ದುರ್ಬಲಳಾಗುತ್ತಾಳೆ.

ಪುರುಷರು ತಮ್ಮ ಪೌರುಷವನ್ನು ವಿಜ್ರಂಭಿಸುವಂತೆ, ಈ ಸ್ವತ್ತು ನನಗೆ ಸೇರಿದ್ದು ಎಂಬಂತೆ ಮೇಲುಗೈ ಪಡೆಯುತ್ತಲೇ ಹೋಗುತ್ತಾನೆ. ಪುರುಷಾಹಂಕಾರವೆಂಬುದು ಇಲ್ಲಿಂದಲೇ ಬಲಿಷ್ಠವಾಗುತ್ತ ಹೋಗುತ್ತದೆ.

ಈ ಪುರುಷಾಹಂಕಾರಕ್ಕೆ ಪೆಟ್ಟು ಬಿದ್ದಾಗಲೆಲ್ಲ, ಅವಮಾನ ಸಹಿಸಲಾಗದು. ಹೀಗೆ ಸಹಿಸಲಾಗದ ಅವಮಾನಗಳ ಮೂಟೆಯೊಂದು ಪ್ರತಿಕಾರಕ್ಕೆ ಕಾಯುತ್ತಿರುತ್ತದೆ. ಅದು ಬಲಾತ್ಕಾರದಲ್ಲಿ ಕೊನೆಗೊಳ್ಳಬಹುದು.

ಹೆಣ್ಣುಮಕ್ಕಳನ್ನು ಆಳುತ್ತೇನೆ ಎಂಬ ಅಧಿಕಾರಯುಕ್ತ ಭಾವನೆಯೇ ಮಹಿಳೆಯರ ಮೇಲಿನ ಎಲ್ಲ ಹಿಂಸೆಗಳಿಗೂ ಕಾರಣವಾಗಿದೆ. ಅದು ಹೊಡೆಯುವುದು, ಬಡಿಯುವುದು, ಅಲಕ್ಷಿಸುವುದ, ಅವಜ್ಞೆಗೆ ಒಳಪಡಿಸುವುದು, ಹೀಯಾಳಿಸುವುದು, ಹೀಗಳೆಯುವುದು ಹೀಗೆ ಈ ಎಲ್ಲ ಅಂಶಗಳನ್ನೂ ಒಳಗೊಂಡಿರುತ್ತದೆ.

ಅತ್ಯಾಚಾರ ಹಾಗೂ ಬಲಾತ್ಕಾರಗಳೂ ಹೀಗೆಯೇ. ಅವು ಆ ಕ್ಷಣದ ಪ್ರತಿಕ್ರಿಯೆಗಳಲ್ಲ. ಬಲು ಹಿಂದಿನಿಂದ ಕೂಡಿಟ್ಟ, ಪೇರಿಸಿಟ್ಟ, ಅವಮಾನಗಳ, ಅಸಮಾಧಾನಗಳ ಮೂಟೆ. ಅದಕ್ಕೆ ಒಬ್ಬ ಹೆಣ್ಣುಮಗಳು ಅತ್ಯಾಚಾರಕ್ಕೆ ಒಳಗಾಗಬಹುದು. ಆದರೆ ಅದು ಇಡೀ ಹೆಣ್ಣುಕುಲದ ಮೇಲಿನ ಅಸಮಾಧಾನವಾಗಿರುತ್ತದೆ. ಆ ಪತ್ರೀಕಾರ ಅವರ ಅಧಿಕಾರಯುತ ಮನೋಭಾವದ ಫಲ. 

ಅತ್ಯಾಚಾರವನ್ನು ಸಂಗಾತಿಯಲ್ಲದವರ ಜೊತೆಗಿನ ಬಲವಂತದ ಸಂಭೋಗ ಎಂದು ವ್ಯಾಖ್ಯಾನಿಸಲಾಗಿದೆ. ಒಬ್ಬ ಹೆಣ್ಣುಮಗಳು ಅತ್ಯಾಚಾರಕ್ಕೆ ಒಳಗಾದಾಗ ಮೊದಲ ಹಂತದಲ್ಲಿಯೇ ಅವಳಲ್ಲಿ ಮರಗಟ್ಟುವಿಕೆ ಆರಂಭವಾಗಿರುತ್ತದೆ. ದೈಹಿಕವಾಗಿಯೂ.. ಮಾನಸಿಕವಾಗಿಯೂ.. ಅದೇ ಕಾರಣಕ್ಕೆ ಬಹುತೇಕ ಜನರ ಸಂತ್ರಸ್ತೆಯರು ಅತ್ಯಾಚಾರಿಗಳನ್ನು ಗುರುತಿಸುವಲ್ಲಿ ವಿಫಲರಾಗುತ್ತಾರೆ. ಆ ಕ್ಷಣಕ್ಕೆ ಅವರಲ್ಲಿರುವ ನಿರಾಕರಣದ ಗುಣ (ಡಿನೈಯಲ್‌ ಟೆಂಡೆನ್ಸಿ) ತಾನು, ಬಲಾತ್ಕಾರಕ್ಕೆ ಒಳಗಾಗಿಲ್ಲ ಎಂಬುದನ್ನು ಮೇಲಿಂದ ಮೇಲೆ ಹೇಳುತ್ತಲೇ ಇರುತ್ತದೆ. 

ಆದರೆ ಕೆಲದ ದಿನಗಳ ನಂತರ ಪೋಸ್ಟ್‌ ಟ್ರೌಮ್ಯಾಟಿಕ್‌ ಸ್ಟ್ರೆಸ್‌ ಆ ಆಘಾತದ ನಂತರದ ಒತ್ತಡ, ಸಂತ್ರಸ್ತೆಯ ಮಾನಸಿಕ ಸ್ವಾಸ್ಥ್ಯವನ್ನೇ ಬುಡಮೇಲು ಮಾಡುತ್ತದೆ. 

ಇದು ಸಂತ್ರಸ್ತೆಯ ಮನಃಸ್ಥಿತಿಯಾದರೆ ಅತ್ಯಾಚಾರಿಯ ಮನಃಸ್ಥಿತಿ ಎಲ್ಲವನ್ನೂ ಸಮರ್ಥಿಸಿಕೊಳ್ಳುವ ಹಂತದಲ್ಲಿರುತ್ತದೆ. ತಾನು ಮಾಡಿದ್ದು ಸರಿ. ತನ್ನೆಲ್ಲ ವರ್ತನೆಗಳಿಗೂ ಸಮಜಾಯಿಷಿಗಳನ್ನೂ ಸಮರ್ಥನೆಗಳನ್ನೂ ಹುಡುಕಿಕೊಂಡಿರುತ್ತಾರೆ. ಅಪರಾಧಿ ಭಾವ ಅವರಲ್ಲಿ ಹುಟ್ಟಬೇಕಾದರೆ ಅದಕ್ಕೂ ಹಲವು ದಿನಗಳೇ ಬೇಕಾಗುತ್ತವೆ. 

ಇದೇ ಕಾರಣಕ್ಕೆನೆ ನಿರ್ಭಯಾ ಪ್ರಕರಣದಲ್ಲಿ ಕೆಲದಿನಗಳ ನಂತರ ತಾವು ಮಾಡಿದ್ದು ತಪ್ಪು ಎಂಬಂತೆ ಆರೋಪಿಗಳು ವರ್ತಿಸಿದ್ದರು. ಯುವ ಆರೋಪಿ ಮಾತ್ರ ಅದನ್ನು ಸಮರ್ಥಿಸಿಕೊಳ್ಳುತ್ತಿದ್ದ. 

ಆಕಸ್ಮಿಕವಾಗಿ ದಮನಿತ ಬಯಕೆಗಳೇ ಅತ್ಯಾಚಾರಕ್ಕೆ ಮೂಲ ಎನ್ನುವ ವಾದವನ್ನೇ ನಂಬಿದರೂ ಮುಕ್ತ ಲೈಂಗಿಕತೆ ಇರುವ ದೇಶಗಳಲ್ಲಿಯೂ ಅತ್ಯಾಚಾರಗಳನ್ನು ತಡೆಯಲಾಗುತ್ತಿಲ್ಲವಲ್ಲ, ಕಾರಣ ಏನು?

ಇಂಥ ಪ್ರಶ್ನೆಗಳನ್ನಿರಿಸಿಕೊಂಡಾಗ, ಆಪ್ತ ಸಲಹೆಗಾರ ವಿನೋದ್‌ ಛಬ್ಬಿಯವರ ಮಾತೊಂದು ನೆನಪಾಗುತ್ತದೆ. ತಮ್ಮ ತನುವ ತಾವ ತಣಿಸಿಕೊಳ್ಳುವ, ಸಂತೈಸಿಕೊಳ್ಳುವ ಕ್ರಿಯೆಗಳನ್ನು ಎಲ್ಲಿಯವರೆಗೂ ಸಹಜವೆಂದು ಪರಿಗಣಿಸುವುದಿಲ್ಲವೋ, ಅಲ್ಲೀವರೆಗೂ ಲೈಂಗಿಕ ಕಿರುಕುಳದಂಥ ಕೃತ್ಯಗಳು ಈ ಸಮಾಜದಲ್ಲಿ ಸಾಮಾನ್ಯವಾಗಿರುತ್ತವೆ.

ಅತ್ಯಾಚಾರ ಹಾಗೂ ಬಲಾತ್ಕಾರದಂಥ ಕ್ರಿಯೆಗಳನ್ನು ತಡೆಯಲಾಗುವುದಿಲ್ಲವೇ? ತಡೆಯಬಹುದು. ನಮ್ಮ ಮನೆಯ ಮಕ್ಕಳು ಅವರ ವರ್ತನೆಯನ್ನು ಗಮನಿಸುತ್ತಿದ್ದರೆ, ಖಂಡಿತವಾಗಿಯೂ ತಡೆಯಬಹುದು.

ನಿಮಗೆ ಗಂಡುಮಗುವಿದ್ದರೆ, ಇಂಥವನ್ನು ಹೇಳಲೇಬೇಡಿ:

* ಹುಡುಗರು ಅಳಬಾರದು; ಅಳಲು ನೀನೇನು ಹೆಣ್ಣುಹುಡುಗಿಯೇ?

* ದುಡಿಯುವುದು, ದುಡಿದು ತರುವುದು ಗಂಡುಮಗುವಿನ ಮೂಲ ಕರ್ತವ್ಯ

* ಹೆಣ್ಮಕ್ಕಳ ದುಡಿಮೆಯನ್ನು ಅವಲಂಬಿಸಿರುವೆಯಾ?

* ಹೆಣ್ಮಕ್ಕಳಂತೆ ಯಾಕೆ ಆಡ್ತೀಯಾ?

* ಹೆಣ್ಮಕ್ಕಳಂತೆ ಅಡುಗೆ ಮಾಡುವಲ್ಲಿ ಆಸಕ್ತಿ ಇದೆಯೇ?

* ಹೆಂಡ್ತಿಯ ಮುಂದೆ ತಲೆತಗ್ಗಿಸುವಂತಾಗುವುದು

* ನಿನಗಿಂತ ಆ ಹೆಣ್ಣುಹುಡುಗಿ ಅದೆಷ್ಟು ಜಾಣೆ, ಆಕರ್ಷಕಳು, ಚತುರೆ 

* ಹೀಗೆ ಹೋಲಿಕೆಯಾಧಾರಿತ ದೂಷಣೆಗಳು ಬರಕೂಡದು. ನೀನು ಯಾವ ಕೆಲಸಕ್ಕೂ ಬಾರದವನು ಎಂಬಂಥ ಅರ್ಥದಲ್ಲಿ ಮೂದಲಿಸಬಾರದು.

ಹೆಣ್ಣುಮಕ್ಕಳಿದ್ದರೆ ಈ ಭಾವಗಳು ಬರಗೊಡಬೇಡಿ:

* ಹೆಣ್ಮಕ್ಕಳು ಭೋಗದ ವಸ್ತು

* ಪ್ರದರ್ಶನ ಮತ್ತು ಸೌಂದರ್ಯದಿಂದ ಕೇಡಾಗುವುದು

* ಮುಕ್ತವಾಗಿ ನಡೆದುಕೊಳ್ಳುವುದು ಅಪಾಯಕಾರಿ

* ಚೆಲ್ಲುಚೆಲ್ಲು ವರ್ತನೆಯಿಂದ ಅಪಾಯಕ್ಕೆ ಆಹ್ವಾನ

ಮಕ್ಕಳ ಈ ವರ್ತನೆಗಳನ್ನು ಕಡೆಗಣಿಸದಿರಿ:

 * ಸಿಟ್ಟನ್ನು ಅದುಮಿಡುವಾಗ ತಮ್ಮನ್ನೇ ತಾವು ಹಿಂಸಿಸಿಕೊಂಡರೆ (ಕಚ್ಚಿಕೊಳ್ಳುವುದು, ಮೈ ಪರಚಿಕೊಳ್ಳುವುದು, ಕೂದಲು ಕೀಳುವುದು)
* ಆಕ್ರೋಶವನ್ನು ಅಭಿವ್ಯಕ್ತಿಗೊಳಿಸುವಾಗ ಸಾಧನಗಳನ್ನು ಹಾಳುಗೆಡಹುವುದು (ದಿಂಬುಗಳನ್ನು ಹರಿಯುವುದು, ಬಟ್ಟೆಗಳನ್ನು ಹರಿಯುವುದು, ರಿಮೋಟ್‌ಗಳನ್ನು, ಮೊಬೈಲ್‌ಫೋನ್‌ಗಳನ್ನು ಎಸೆಯುವುದು)

* ಅಳು, ಅವಮಾನಗಳನ್ನು ಸಹಿಸಿಕೊಳ್ಳುವಾಗ ಅವುಡುಗಚ್ಚುವುದು, ಇದ್ದಕ್ಕಿದ್ದಂತೆ ಜನರ ನಡುವಿನಿಂದ ಎದ್ದು ಹೋಗುವುದು

* ಇನ್ನೊಬ್ಬರನ್ನು ಅವಮಾನಿಸುವುದು, ಕೀಳಾಗಿ ಕಾಣುವುದು, ಹಿಂಸೆ ನೀಡಿ ಸಂತೋಷ ಪಡೆಯುವುದು

* ಒಂಟಿಯಾಗಿರುವುದು, ಅಂತರ್ಮುಖಿಯಾಗುವುದು, ಗುಟ್ಟುಗಳನ್ನು ಕಾಪಾಡಿಕೊಂಡಿರುವುದು... 

ಯಾವುದನ್ನು ಹೇಗೆ ವಿಶ್ಲೇಷಿಸಿದರೂ ಹಿಂಸೆ ಅಧಿಕಾರ ಮೂಲದ್ದಾಗಿರುತ್ತದೆ. ಸ್ವಾಮ್ಯತ್ವದ ಭಾವ ಹೆಚ್ಚಾದಷ್ಟೂ ಆಳುವ ಅಭಿಲಾಷೆ ಹೆಚ್ಚಾಗುತ್ತದೆ. ಇವನ್ನು ತಡೆಯಲು ಮಕ್ಕಳಲ್ಲಿ ಸಮಾನ ಭಾವದಿಂದ ಬೆಳೆಸಬೇಕು. ಕೊನೆಯ ಪಕ್ಷ ಮುಂದಿನ ಪೀಳಿಗೆಯಾದರೂ ಇಂಥ ಅಪರಾಧಗಳಿಂದ, ಇಂಥ ಕೃತ್ಯಗಳಿಂದ ದೂರ ಇರಬಹುದು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು