ಭಾನುವಾರ, ಫೆಬ್ರವರಿ 23, 2020
19 °C

ಕ್ಯಾನ್ಸರ್‌ ಭಯವೇ?ನಿಯಮಿತ ತಪಾಸಣೆ ಮಾಡಿಸಿಕೊಳ್ಳಿ..

ಡಾ. ರಾಜಶೇಖರ್ ಸಿ. ಜಕಾ Updated:

ಅಕ್ಷರ ಗಾತ್ರ : | |

Prajavani

ಹಿಂದೆ ತೀರಾ ಅಪರೂಪದ ಕಾಯಿಲೆ ಎನಿಸಿಕೊಂಡಿದ್ದ ಕ್ಯಾನ್ಸರ್ ಈಗ ಹೆಚ್ಚು ಜನರನ್ನು ಕಾಡುವ ಸಮಸ್ಯೆಯಾಗಿದೆ. ಸಮೀಕ್ಷೆಯೊಂದರ ಪ್ರಕಾರ, ದೇಶದಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುವವರ ಸಂಖ್ಯೆ ಇತ್ತೀಚಿನ ವರ್ಷದಲ್ಲಿ ಶೇ 300ರಷ್ಟು ಹೆಚ್ಚಾಗಿದೆ. ಇದನ್ನು ದೂರ ಇಡಬಹುದಾದ ಮಾರ್ಗಗಳೇನು?

ಮಾರಕ ಕಾಯಿಲೆ ಕ್ಯಾನ್ಸರ್‌ ಗುಣಪಡಿಸಲಾಗದು ಎಂಬ ಭಯ ಬಿಟ್ಟುಬಿಡಿ. ಆರಂಭದಲ್ಲೇ ಪತ್ತೆಯಾದರೆ ಆಧುನಿಕ ಚಿಕಿತ್ಸಾ ಪದ್ಧತಿಗಳಿಂದ ಸಂಪೂರ್ಣ ಗುಣಪಡಿಸಲು ಸಾಧ್ಯ. ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಿದರೆ ಈ ಕಾಯಿಲೆ ಬಗ್ಗೆ ಜಾಗರೂಕರಾಗಿರಬಹುದು. ಇದಕ್ಕೆ ಕಾರಣಗಳು ಹಲವಾರು. ರಾಸಾಯನಿಕ ವಸ್ತುಗಳು ಶರೀರಕ್ಕೆ ಸೇರುವುದು, ಜೀವನಶೈಲಿ, ಜೆನೆಟಿಕ್‌ ಹಾಗೂ ಕುಟುಂಬದ ಕ್ಯಾನ್ಸರ್‌ ಇತಿಹಾಸ ಮೊದಲಾದವು.

ಆಧುನಿಕ ಜೀವನಶೈಲಿ ಮತ್ತು ಒತ್ತಡ ಜನರ ಆಹಾರ ಪದ್ಧತಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಹಿಂದೆಲ್ಲಾ ಸಾಂಪ್ರದಾಯಕವಾಗಿ ಮನೆಗಳಲ್ಲಿ ಆಹಾರವನ್ನು ತಯಾರಿಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಜನರು ಸಿದ್ಧ ಆಹಾರವನ್ನು ಅಥವಾ ಉಪಾಹಾರಗೃಹಗಳಲ್ಲಿ ತಿನ್ನುವುದು ಹೆಚ್ಚು. ಆದರೆ ಆಹಾರದಲ್ಲಿ ಅಪಾಯಕಾರಿ ಅಂಶಗಳಿವೆಯೇ, ಅವು ಯಾವ ರೀತಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಆರ್ಸೆನಿಕ್‌, ಆ್ಯಸ್‌ಬೆಸ್ಟಸ್‌, ಟಾರ್‌ನಂತಹ ರಾಸಾಯನಿಕಗಳು ಕ್ಯಾನ್ಸರ್‌ಗೆ ಕಾರಣ ಎಂಬುದು ಸಾಬೀತಾಗಿದೆ. ಹ್ಯೂಮನ್‌ ಪ್ಯಾಪಿಲೋಮದಂತಹ ವೈರಸ್‌, ಬ್ಯಾಕ್ಟೀರಿಯ ಹಾಗೂ ಪರಾವಲಂಬಿ ಸೂಕ್ಷ್ಮಾಣುಗಳು ಕೂಡ ಕ್ಯಾನ್ಸರ್‌ಗೆ ಕಾರಣ. ಹಾಗೆಯೇ ಹಾರ್ಮೋನ್‌ ಬದಲಾವಣೆ ಕೂಡ ಕ್ಯಾನ್ಸರ್‌ ಅಪಾಯವನ್ನು ತಂದೊಡ್ಡಬಹುದು.

ನಿಯಮಿತ ತಪಾಸಣೆ

ಕ್ಯಾನ್ಸರ್ ಬಂದಾಗ ಶೀಘ್ರದಲ್ಲೇ ಪತ್ತೆಹಚ್ಚುವುದು ಯಾವಾಗಲೂ ಉತ್ತಮ. ಕ್ಯಾನ್ಸರ್‌ ಅಪಾಯ ಇರುವವರು ಅಂದರೆ ಮನೆಯಲ್ಲಿ ಅನುವಂಶೀಯವಾಗಿ ಬರಬಹುದಾದ ಕ್ಯಾನ್ಸರ್‌ ಇರುವವರು, 40 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು, ನಿಯಮಿತ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಪುರುಷರು ಪ್ರಾಸ್ಟೇಟ್‌ಗೆ ಪಿಎಸ್‌ಎ ಮಟ್ಟ ಎಷ್ಟಿದೆ ಎಂದು ರಕ್ತ ಪರೀಕ್ಷೆಯ ಮೂಲಕ ನೋಡಿಕೊಳ್ಳಬಹುದು. ಅದೇ ರೀತಿ ಡಿಎನ್‌ಎ ಪರೀಕ್ಷೆಯೂ ಇದೆ. ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದು ವಿವಿಧ ಕ್ಯಾನ್ಸರ್‌ಗೆ ಪರೀಕ್ಷೆ ಮಾಡಿಸಿಕೊಳ್ಳಬಹುದು.

ಲೇಖಕರು ಸರ್ಜಿಕಲ್ ಅಂಕಾಲಜಿಸ್ಟ್, ಬಿ.ಆರ್. ಲೈಫ್ ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆ

ಮಹಿಳೆಯರಲ್ಲಿ...

ಭಾರತೀಯ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ನಲ್ಲಿ ಶೇ 47.2ರಷ್ಟು ಪ್ರಕರಣಗಳು ಐದು ಬಗೆಯ ಕ್ಯಾನ್ಸರ್‌ ವಿಧಗಳಿಗೆ ಸೇರಿವೆ. ಅವುಗಳೆಂದರೆ..

ಸ್ತನ ಕ್ಯಾನ್ಸರ್‌: ನಗರ ಪ್ರದೇಶದ ಮಹಿಳೆಯರಲ್ಲಿ ಹೆಚ್ಚು ಕಂಡು ಬರುವ ಈ ಕ್ಯಾನ್ಸರ್‌ ಅನ್ನು ಸ್ವಯಂ ಸ್ತನ ಪರೀಕ್ಷೆ, ಮ್ಯಾಮೊಗ್ರಫಿ ಅಥವಾ ಎಂಆರ್‌ಐ ಮಾಡಿಸಿಕೊಳ್ಳುವ ಮೂಲಕ ಆರಂಭದ ಹಂತದಲ್ಲೇ ಕಂಡುಹಿಡಿಯಬಹುದು.

ಗರ್ಭಕೊರಳಿನ (ಸರ್ವಿಕಲ್‌)ಕ್ಯಾನ್ಸರ್‌: ಮಹಿಳೆಯರ ಜನನಾಂಗದಿಂದ ಅಸಾಮಾನ್ಯ ರಕ್ತಸ್ರಾವ ಹಾಗೂ ಬಿಳಿ ಸ್ರಾವ ಕಂಡುಬಂದರೆ ವೈದ್ಯರನ್ನು ಭೇಟಿ ಮಾಡಿ. 60 ವರ್ಷ ವಯಸ್ಸಿನವರೆಗೂ ನಿಯಮಿತವಾಗಿ ಪ್ಯಾಪ್‌ಸ್ಮೀಯರ್‌ ಪರೀಕ್ಷೆ ಮಾಡಿಸಿಕೊಳ್ಳಿ. ಚಿಕ್ಕ ವಯಸ್ಸಿನಲ್ಲಿಯೇ ಹಾಕುವ ಲಸಿಕೆ ಕೂಡ ಈಗ ಲಭ್ಯ.

ಗರ್ಭಕೋಶದ ಕ್ಯಾನ್ಸರ್‌: ಇದು ಗರ್ಭಾಶಯದ ಒಳ ಪದರ ಎಂಡೋಮೆಟ್ರಿಯಂನಲ್ಲಿ ಮೊದಲು ಕಾಣಿಸಿಕೊಳ್ಳಬಹುದು. ಇದು ಈಸ್ಟ್ರೋಜೆನ್‌ ಹಾರ್ಮೋನ್‌ ಅನ್ನು ಅವಲಂಬಿಸಿದೆ. ಋತುಸ್ರಾವ ಏರುಪೇರಾದರೆ, ಋತುಬಂಧದ ನಂತರ ರಕ್ತಸ್ರಾವ ಕಾಣಿಸಿಕೊಂಡರೆ ಕೂಡಲೇ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಿ.

ಅಂಡಾಶಯದ ಕ್ಯಾನ್ಸರ್‌: ಆರಂಭದಲ್ಲಿ ಯಾವುದೇ ಲಕ್ಷಣ ಗೋಚರಿಸದ ಈ ಕ್ಯಾನ್ಸರ್‌ ಬಗ್ಗೆ ಗೊತ್ತಾಗುವುದು ಅಪಾಯದ ಮಟ್ಟ ತಲುಪಿದಾಗ. ಹೊಟ್ಟೆನೋವು, ಬೆನ್ನುನೋವು, ಅಜೀರ್ಣ, ಹೊಟ್ಟೆಯುಬ್ಬರದಂತಹ ಸಮಸ್ಯೆ ಯಾವುದೇ ಚಿಕಿತ್ಸೆಗೆ ಸ್ಪಂದಿಸದಿದ್ದರೆ, ಎರಡು ವಾರಗಳಿಗಿಂತ ಹೆಚ್ಚು ಕಾಲವಿದ್ದರೆ ತಜ್ಞರನ್ನು ಭೇಟಿಯಾಗಿ.

ಕೊಲೊರೆಕ್ಟಲ್‌ ಕ್ಯಾನ್ಸರ್‌: ದೊಡ್ಡ ಕರುಳಿನಲ್ಲಿ ಕಾಣಿಸಿಕೊಳ್ಳುವ ಈ ಕ್ಯಾನ್ಸರ್‌ ಗುದದ್ವಾರದವರೆಗೆ ವ್ಯಾಪಿಸುತ್ತದೆ. 50 ವರ್ಷಗಳ ನಂತರ ಇದು ಕಾಣಿಸಿಕೊಳ್ಳಬಹುದು. ಕೊಲೊನೊಸ್ಕೋಪಿ ಮೂಲಕ ಇದನ್ನು ಕಂಡುಹಿಡಿಯಬಹುದು.

ಮುನ್ನೆಚ್ಚರಿಕೆ ಕ್ರಮಗಳು

ಪೌಷ್ಟಿಕಾಂಶಗಳಿಂದ ಕೂಡಿದ, ರಾಸಾಯನಿಕ ಮುಕ್ತವಾದ, ಕೃತಕ ಬಣ್ಣ, ವಾಸನೆ ಸೇರಿಸದ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ನಾವು ಸೇವಿಸುವ ರಾಸಾಯನಿಕಗಳ ಪ್ರಮಾಣವನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು.

ಮಾಲಿನ್ಯ ಕೂಡ ಕ್ಯಾನ್ಸರ್‌ಗೆ ಕಾರಣವಾಗಬಹುದು. ಇದರಲ್ಲಿರುವ ರಾಸಾಯನಿಕಗಳು ದೇಹವನ್ನು ಸೇರುವ ಮೂಲಕ ಜೀವಕೋಶಗಳಲ್ಲಿ ಬದಲಾವಣೆ ಹಾಗೂ ಅನಿಯಂತ್ರಿತ ಜೀವಕೋಶಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಬಹುದು. ಹೀಗಾಗಿ ಮಾಲಿನ್ಯಗೊಳ್ಳದ ಶುದ್ಧ ನೀರನ್ನು ಕುಡಿಯುವುದು ಮುಖ್ಯ.

ತರಕಾರಿಗಳು ಮತ್ತು ಹಣ್ಣುಗಳನ್ನು ನೇರವಾಗಿ ರೈತರಿಂದ ಅಥವಾ ಸಾವಯವ ಮಾರುಕಟ್ಟೆಗಳಿಂದ ಖರೀದಿಸಿ. ಇದರಿಂದ ರಾಸಾಯನಿಕ ಸೇವನೆಯ ಪ್ರಮಾಣ ಕಡಿಮೆ ಇದೆ ಎಂದು ಖಚಿತಪಡಿಸಿಕೊಳ್ಳಬಹುದು. ಮನೆಯ ಕೈತೋಟದಲ್ಲಿ ಅಗತ್ಯವಾದ ತರಕಾರಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಸುವುದು ಉತ್ತಮ. ಸಂಸ್ಕರಿಸಿದ ಮಾಂಸ ಸೇವನೆಯನ್ನು ಕಡಿಮೆ ಮಾಡುವುದು ಮತ್ತು ನಿಮ್ಮ ಆಹಾರದಲ್ಲಿ ಹೆಚ್ಚು ಸೊಪ್ಪು, ತರಕಾರಿಗಳನ್ನು ಸೇರಿಸುವುದು ಕ್ಯಾನ್ಸರ್‌ನಂತಹ ರೋಗಗಳನ್ನು ತಡೆಗಟ್ಟಲು ಹೆಚ್ಚು ಸಹಕಾರಿ.

ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಿ. ಆದಷ್ಟು ಗಾಜಿನ ಅಥವಾ ಸ್ಟೀಲ್‌ ಪರಿಕರಗಳನ್ನು ಊಟ– ತಿಂಡಿಗೆ ಬಳಸಿ.

ಕ್ಯಾನ್ಸರ್ ಒಳಗೊಂಡಂತೆ ವಿವಿಧ ಕಾಯಿಲೆಗಳಿಗೆ ಬೊಜ್ಜು ಮೂಲ ಕಾರಣ. ನಿಯಮಿತವಾದ ವ್ಯಾಯಾಮ, ಕೊಬ್ಬಿಲ್ಲದ, ಹೆಚ್ಚು ನಾರಿನಂಶವಿರುವ ಆಹಾರದಿಂದ ಬೊಜ್ಜನ್ನು ಕಡಿಮೆ ಮಾಡಬಹುದು. 

ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು