ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ: ಮಾಲಿನ್ಯಕಾರಕ ಕಣ ಹೆಚ್ಚಿದಲ್ಲಿ ಅಪಾಯ-ಆರೋಗ್ಯ ತಜ್ಞರ ಎಚ್ಚರಿಕೆ

ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಗಾಳಿಯ ಗುಣಮಟ್ಟದಲ್ಲಿ ವ್ಯತ್ಯಾಸ
Last Updated 14 ನವೆಂಬರ್ 2020, 20:49 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ನಗರದಲ್ಲಿ ಕಳೆದ ಕೆಲ ವರ್ಷಗಳಿಂದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಹೊಗೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯಕಾರಕ ಕಣಗಳು (ಪಿಎಂ 2.5 ಮತ್ತು ಪಿಎಂ 10) ಕಾಣಿಸಿಕೊಳ್ಳುತ್ತಿವೆ. ಈ ಬಾರಿ ಆ ಕಣಗಳು ನಿಗದಿತ ಮಟ್ಟವನ್ನು ದಾಟಿದಲ್ಲಿ ಕೊರೊನಾ ಸೋಂಕಿತರು ಹೆಚ್ಚಿನ ಅಪಾಯ ಎದುರಿಸಬೇಕಾಗುತ್ತದೆ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಎಚ್ಚರಿಸಿದ್ದಾರೆ.

ಕೋವಿಡ್‌ ಕಾಣಿಸಿಕೊಂಡ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಪ್ರಮಾಣ ಇಳಿಕೆ ಕಂಡಿದೆ. ಬಹುತೇಕ ಐಟಿ–ಬಿಟಿ ಕಂಪನಿಗಳು ಕಚೇರಿಗಳನ್ನು ಪುನರಾರಂಭಿಸಲು ನಿರಾಸಕ್ತಿ ತೋರಿಸಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸವನ್ನು ಮುಂದುವರಿಸಲು ಸೂಚಿಸಿವೆ. ಇದರಿಂದಾಗಿ ಹೊರಗಡೆಯ ಸಂಚಾರ ಕೂಡ ಕಡಿಮೆಯಾಗಿದೆ. ಪರಿಣಾಮ ಹೆಬ್ಬಾಳ, ಜಯನಗರ, ಸೆಂಟ್ರಲ್ ಸಿಲ್ಕ್‌ ಬೋರ್ಡ್‌, ನಗರ ರೈಲು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ತಿಂಗಳ ಬಹುತೇಕ ದಿನಗಳು 100ರ ಗಡಿ ದಾಟುತ್ತಿದ್ದ ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯೂಐ), ಈಗ ಸಮಾಧಾನಕರ ಹಾಗೂ ಉತ್ತಮ ಹಂತವನ್ನು ತಲುಪಿವೆ.

ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳಿಂದ ಉತ್ಪತ್ತಿಯಾಗುವ ಮಾಲಿನ್ಯಕಾರಕ ಹೊಗೆಯು ಗಾಳಿಯನ್ನು ಸೇರುವುದರಿಂದ ವಾಯುಮಾಲಿನ್ಯ ಹೆಚ್ಚುತ್ತಿದೆ. ಕಳೆದ ಮೂರು ವರ್ಷಗಳಿಂದ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ದೀಪಾವಳಿ ಸಂದರ್ಭದಲ್ಲಿ ಪಿಎಂ 10 ಹಾಗೂ ಪಿಎಂ 2.5 ಕಣಗಳಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದೆ. ಈ ಕಣಗಳು 2.5 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಕಣಗಳಾಗಿರುವುದರಿಂದ ಕಣ್ಣಿಗೆ ಗೋಚರಿಸುವುದಿಲ್ಲ. 1 ಸಾವಿರ ಲೀಟರ್ ಗಾಳಿಯಲ್ಲಿ ಪಿಎಂ 10 ಪ್ರಮಾಣ 100 ಮೈಕ್ರೊ ಗ್ರಾಂ ಹಾಗೂ ಪಿಎಂ 2.5 ಪ್ರಮಾಣ 60 ಮೈಕ್ರೊ ಗ್ರಾಂ ಮೀರಬಾರದು.

ಅನಾರೋಗ್ಯ ಸಮಸ್ಯೆ ಹೆಚ್ಚಳ: ‘ಚಳಿಗಾಲದಲ್ಲಿ ತಾಪಮಾನ ಕಡಿಮೆಯಾಗಿ, ತೇವಾಂಶ ಹೆಚ್ಚುವುದರಿಂದ ದೂಳಿನ ಕಣಗಳು ಆಕಾಶಕ್ಕೆ ಹೋಗದೆ ತಳಮಟ್ಟದಲ್ಲೇ ಗಾಳಿಯಲ್ಲಿ ತೇಲಾಡುತ್ತಿರುತ್ತವೆ. ಜೋರಾದ ಗಾಳಿ ಬೀಸಿದಾಗ ಈ ದೂಳಿನ ಕಣಗಳು ಹರಡಿ, ಹೆಚ್ಚು ವಾಯುಮಾಲಿನ್ಯ ಉಂಟಾಗಲು ಕಾರಣವಾಗುತ್ತವೆ. ಪಟಾಕಿಯ ವಿಷಕಾರಿ ಹೊಗೆ ಈ ಗಾಳಿಯನ್ನು ಸೇರಿದಾಗ ಮಲಿನಕಾರಕ ಕಣಗಳು ಗಾಳಿಯಲ್ಲಿ ಉಳಿಯುತ್ತವೆ. ಇದರಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾಗಿ ಪಟಾಕಿಯ ಬದಲು ಹಣತೆ ಹಚ್ಚಿ, ಹಬ್ಬ ಆಚರಿಸಬೇಕು’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ತಿಳಿಸಿದರು.

‘ವಾಯುಮಾಲಿನ್ಯ ನೇರವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಶ್ವಾಸಕೋಶದ ಜತೆಗೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಕೂಡ ಕಾರಣವಾಗುತ್ತದೆ. ಚಳಿಗಾಲದಲ್ಲಿ ವೈರಾಣುಗಳು ಹೆಚ್ಚು ಕಾಡಲಿವೆ. ಪಟಾಕಿ ಹೊಗೆಯಿಂದ ಮಾಲಿನ್ಯ ಹೆಚ್ಚಿದಲ್ಲಿ ಕೋವಿಡ್‌ ಹರಡುವ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಕೋವಿಡ್‌ ರೋಗಿಗಳಿಗೆ ಸಮಸ್ಯೆ ಹೆಚ್ಚಾಗಿ, ಚೇತರಿಸಿಕೊಳ್ಳಲು ಹೆಚ್ಚಿನ ದಿನಗಳು ಬೇಕಾಗುತ್ತವೆ’ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಎಚ್ಚರಿಸಿದರು.

‘ಪಟಾಕಿಯ ಹೊಗೆಯಿಂದ ಕಣ್ಣಿನ ನವೆ, ಚರ್ಮದ ಅಲರ್ಜಿ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಶ್ವಾಸಕೋಶದ ಕ್ಯಾನ್ಸರ್‌, ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕ್ಯಾನ್ಸರ್ ಕಾರಕ ಕಣಗಳು ಕೂಡ ಪಟಾಕಿಯ ಹೊಗೆಯಲ್ಲಿ ಇರುತ್ತವೆ. ಕೋವಿಡ್ ಕಾಲದಲ್ಲಿ ಪಟಾಕಿ ಸಿಡಿಸಿದರೆ ಸೋಂಕಿತರ ಶ್ವಾಸಕೋಶಕ್ಕೆ ಇನ್ನಷ್ಟು ಹಾನಿಯಾಗಿ, ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು’ ಎಂದು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಸಿ. ನಾಗರಾಜ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT