ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ಮಕ್ಕಳ ಮೂತ್ರಕೋಶ ಸಮಸ್ಯೆಗೆ ರೊಬೊಟಿಕ್ ಅಸಿಸ್ಟೆಡ್ ಸರ್ಜರಿ

Last Updated 6 ಜನವರಿ 2021, 13:00 IST
ಅಕ್ಷರ ಗಾತ್ರ

ಮಕ್ಕಳಲ್ಲಿ ಇತ್ತೀಚೆಗೆ ಮೂತ್ರಕೋಶ ಮತ್ತು ಮೂತ್ರನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಿವೆ. ಮೂತ್ರಕೋಶದಲ್ಲಿ ಕಲ್ಲು, ಮೂತ್ರದ ಹರಿವಿಗೆ ತಡೆಯಾಗುವುದು ಮುಂತಾದ ಸಮಸ್ಯೆಗಳು ಮಕ್ಕಳನ್ನು ಹೆಚ್ಚು ಕಾಡುತ್ತಿವೆ. ಇಂತಹ ಸಮಸ್ಯೆಗಳಿಗೆ ಸುಲಭವಾಗಿ, ನೋವಿಲ್ಲದೆ ಮಾಡುವಂತಹ ಶಸ್ತ್ರಚಿಕಿತ್ಸೆ ವಿಧಾನವೆಂದರೆ ‘ರೊಬೊಟಿಕ್ ಅಸಿಸ್ಟೆಡ್ ಸರ್ಜರಿ’. ಈ ಶಸ್ತ್ರಚಿಕಿತ್ಸೆಯ ಸ್ವರೂಪ, ಉಪಯೋಗ ಹಾಗೂ ಮಕ್ಕಳ ಮೂತ್ರಕೋಶದ ಸಮಸ್ಯೆಗಳ ಕುರಿತು ಮಾತನಾಡಿದ್ದಾರೆ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಮುಖ್ಯ ಯೂರಾಲಜಿಸ್ಟ್‌ ಡಾ. ಮನೋಹರ್‌ಟಿ.

* ರೊಬೊಟಿಕ್ ಅಸಿಸ್ಟೆಡ್ ಸರ್ಜರಿ ಎಂದರೇನು?

ರೊಬೊಟಿಕ್ ಅಸಿಸ್ಟೆಡ್ ಸರ್ಜರಿ ಎಂದರೆ ರೊಬೊಟಿಕ್ ವ್ಯವಸ್ಥೆಗಳನ್ನು ಬಳಸಿಕೊಂಡು ಹೆಚ್ಚು ನೋವಿಲ್ಲದೆ ಮತ್ತು ಹೆಚ್ಚು ರಕ್ತಸ್ರಾವವಿಲ್ಲದೆ ಶಸ್ತ್ರಚಿಕಿತ್ಸೆ ಮಾಡುವ ವಿಧಾನ. ಈ ವಿಧಾನವು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಸುಲಭವಾಗಿ ಮಾಡಲು ಶಸ್ತ್ರಚಿಕಿತ್ಸಕರಿಗೆ ಸಹಾಯಕ. ರೊಬೊಟಿಕ್ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ‘ಡಾ ವಿನ್ಸಿ ವಿಧಾನ’ ಹೆಚ್ಚು ಪ್ರಚಲಿತದಲ್ಲಿದೆ. ಇದರ ನಾಲ್ಕನೇ ತಲೆಮಾರಿನ ಮಾದರಿಯನ್ನು ಭಾರತದಲ್ಲಿ ಅನುಸರಿಸಲಾಗುತ್ತಿದೆ. ಈ ವಿಧಾನದ ಮೂಲಕ ತಜ್ಞರು ಚಿಕಿತ್ಸೆಯನ್ನು ಹೆಚ್ಚಿನ ನಿಖರತೆಯಿಂದ ಮಾಡಬಹುದು. ಜೊತೆಗೆ ಶಸ್ತ್ರಚಿಕಿತ್ಸೆ ಮಾಡುವಾಗ ಅಂಗಾಂಗಗಳು ಸ್ಪಷ್ಟವಾಗಿ ಗೋಚರವಾಗುತ್ತವೆ.

* ಯಾವ ಬಗೆಯ ಶಸ್ತ್ರಚಿಕಿತ್ಸೆಗೆ ರೊಬೊಟಿಕ್ ವಿಧಾನವನ್ನು ಅನುಸರಿಸುತ್ತಾರೆ?

ಸಾಮಾನ್ಯವಾಗಿ ಇದನ್ನು ಮೂತ್ರಕೋಶದ ಶಸ್ತ್ರಚಿಕಿತ್ಸೆಗೆ (ಪ್ರಾಸ್ಟೇಟ್, ಬ್ಲಾಡರ್‌ ಹಾಗೂ ಮೂತ್ರಪಿಂಡ), ಸ್ತ್ರೀರೋಗಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ (ರ‍್ಯಾಡಿಕಲ್ ಹಿಸ್ಟರೆಕ್ಟಮಿ, ಮಯೊಕ್ಟಮಿ) ಸಾಮಾನ್ಯ ಶಸ್ತ್ರಚಿಕಿತ್ಸೆ (ವೆಂಟ್ರಲ್‌, ಎಂಜಿನಲ್‌ ಅರ್ನಿಯಾಕ್ಕೆ ಚಿಕಿತ್ಸೆ) ಎದೆಗೂಡಿನ ಶಸ್ತ್ರಚಿಕಿತ್ಸೆ (ಲೊಬೆಕ್ಟಮಿ, ಮೆಡಿಯಾಸ್ಟಿನಲ್ ಮಾಸ್‌), ಹೃದಯದ ಮತ್ತು ಕೊಲಾರೆಕ್ಟಲ್ ಶಸ್ತ್ರಚಿಕಿತ್ಸೆ ಸೇರಿದಂತೆ ಇನ್ನೂ ಹಲವು ಚಿಕಿತ್ಸೆಗೆ ಬಳಸಲಾಗುತ್ತದೆ.

* ಮೂತ್ರಾಂಗ ವ್ಯೂಹ ಹಾಗೂ ಅದರ ಕ್ಯಾನ್ಸರ್‌ ಸಮಸ್ಯೆ ಇರುವ ರೋಗಿಗಳಿಗೆ ರೊಬೊಟಿಕ್‌ ಅಸಿಸ್ಟೆಡ್ ಶಸ್ತ್ರಚಿಕಿತ್ಸೆಯಿಂದ ಯಾವ ಪ್ರಯೋಜನಗಳಿವೆ?

ಈ ಶಸ್ತ್ರಚಿಕಿತ್ಸೆಯನ್ನು ಪ್ರಾಸ್ಟೇಟ್ ಕ್ಯಾನ್ಸರ್, ಜನ್ಮಜಾತ ಸಮಸ್ಯೆಗಳಿಗೆ ಮಾಡಲಾಗುವುದು. ರೊಬೊಟಿಕ್ ಅಸಿಸ್ಟೆಡ್ ಶಸ್ತ್ರಚಿಕಿತ್ಸೆಯಲ್ಲಿ ಸಣ್ಣ ಹಾಗೂ ನಿಖರವಾದ ಜಾಗದಲ್ಲಿ ಗಾಯ ಮಾಡಿ ಅದಕ್ಕೆ ಪುನಃ ಹೊಲಿಗೆ ಹಾಕಬಹುದು. ದೊಡ್ಡ ಜಾಗದಲ್ಲಿ ಗಾಯ ಮಾಡುವ ಅವಶ್ಯಕತೆಯಿಲ್ಲ. ಬೇರೆ ಅಂಗಾಂಗಗಳು ಹಾಗೂ ಸುತ್ತಲಿನ ಅಂಗಾಂಶಗಳಿಗೆ ಹಾನಿಯಾಗುವುದನ್ನು ತಪ್ಪಿಸಬಹುದು. ರಕ್ತದ ಹೊರ ಹರಿವಿನ ಪ್ರಮಾಣವು ಕಡಿಮೆ, ರಕ್ತದ ವರ್ಗಾವಣೆ ಪ್ರಮಾಣ ಕೂಡ ಇದರಲ್ಲಿ ಅತೀ ಕಡಿಮೆ. ಲ್ಯಾಪ್ರೊಸ್ಕೋಪಿಗೆ ಹೋಲಿಸಿದರೆ ಸುತ್ತಮುತ್ತಲಿನ ರಚನೆಗಳಿಗೆ ಉಂಟಾಗುವ ಹಾನಿಯನ್ನು ಸುಮಾರು ಶೇ 50ರಷ್ಟು ಕಡಿಮೆ ಮಾಡಬಹುದಾಗಿದೆ.

* ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಜನ್ಮಜಾತ ಸಮಸ್ಯೆಗಳು ಯಾವುವು? ಮಕ್ಕಳ ಮೂತ್ರಕೋಶ ಸಮಸ್ಯೆಗಳಿಗೆ ಪ್ರಮುಖ ಕಾರಣಗಳೇನು?

ಮೂತ್ರಾಂಗ ವ್ಯೂಹಕ್ಕೆ ಸಂಬಂಧಿಸಿದಂತೆ ಶೇ 90 ರಷ್ಟು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಜನ್ಮಜಾತವಾಗಿರುತ್ತದೆ. ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಅಥವಾ ಶೈಶವಾವಸ್ಥೆಯಲ್ಲಿಯೇ ಈ ಸಮಸ್ಯೆ ಆರಂಭವಾಗಿರುತ್ತದೆ. ಅದರಲ್ಲಿ ಬ್ಲಾಡರ್‌, ಮೂತ್ರನಾಳಗಳು, ಜನನಾಂಗ ಸೇರಿರಬಹುದು. ಕೆಲವೊಮ್ಮೆ ಮೂತ್ರಕೋಶದಲ್ಲಿ ಕಲ್ಲು, ಮೂತ್ರನಾಳದಲ್ಲಿನ ಸೋಂಕಿನಿಂದ ಇಂತಹ ಸಮಸ್ಯೆಗಳು ಕಾಣಿಸಬಹುದು. ಅಲ್ಟ್ರಾಸೌಂಡ್‌ನಿಂದ ಮಗುವಿನ ಜನನಕ್ಕೂ ಮೊದಲು ಜನನಾಂಗ ಮತ್ತು ಮೂತ್ರಕೋಶದಲ್ಲಿನ ಸಮಸ್ಯೆಗಳನ್ನು ಕಂಡುಹಿಡಿಯಬಹುದು. ಕೆಲವೊಮ್ಮೆ ಸಣ್ಣ ಸಮಸ್ಯೆಗಳಿದ್ದಾಗ ಕಂಡುಹಿಡಿಯುವುದು ಕಷ್ಟ. ಜನನದ ನಂತರ ಶಿಶುವಿನ ಬೆಳವಣಿಗೆಯಾಗುತ್ತಿದ್ದಂತೆ ಸಮಸ್ಯೆಯ ರೂಪವು ಸ್ಪಷ್ಟವಾಗಿ ಗೋಚರವಾಗುತ್ತದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಮೂತ್ರಕೋಶದಲ್ಲಿನ ಸೋಂಕಿನ ಕಾರಣದಿಂದ ಇಂತಹ ಸಮಸ್ಯೆಯನ್ನು ಕಂಡುಹಿಡಿಯಬಹುದು.

* ಈ ಸಮಸ್ಯೆ ಹೊಂದಿರುವ ಮಕ್ಕಳ ಬಗ್ಗೆ ಪೋಷಕರು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು?

ಸಾಮಾನ್ಯವಾಗಿ ಮಗು ಮೂತ್ರ ವಿಸರ್ಜಿಸುವಾಗ ಅಳುವುದು ಅಥವಾ ಪದೇ ಪದೇ ಜ್ವರದ ಲಕ್ಷಣಗಳು ಕಾಣಿಸಿಕೊಂಡರೆ ಅದು ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆ ಎಂದು ಗುರುತಿಸಬಹುದು. ಇಂತಹ ಸಮಸ್ಯೆ ಕಾಣಿಸಿಕೊಂಡಾಗ ತಕ್ಷಣಕ್ಕೆ ಮಗುವನ್ನು ವೈದ್ಯರ ಬಳಿ ತೋರಿಸಬೇಕು. ವೈದ್ಯರು ಮಗುವಿನ ಮೂತ್ರಕೋಶದ ಅಂಗಾಂಶಗಳನ್ನು ಪರಿಶೀಲಿಸಿ ಸೂಕ್ತ ಚಿಕಿತ್ಸೆಯನ್ನು ತಿಳಿಸುತ್ತಾರೆ. ಮಕ್ಕಳು ಮೂತ್ರ ವಿಸರ್ಜನೆಗೆ ತಡೆ ಹಿಡಿಯುವುದು ಬ್ಲಾಡರ್‌ನ ಗಾಳಿಗುಳ್ಳೆಗೆ ಕಾರಣವಾಗಬಹುದು. ಅಂತಹ ಸಮಯದಲ್ಲಿ ಪೋಷಕರು ಮಕ್ಕಳಿಗೆ ಸರಿಯಾಗಿ ಮೂತ್ರ ವಿಸರ್ಜಿಸುವ ಕುರಿತು ತಿಳಿವಳಿಕೆ ನೀಡಬೇಕು, ಅಲ್ಲದೇ ಮಕ್ಕಳಲ್ಲಿ ವರ್ತನೆಯಲ್ಲೂ ಬದಲಾವಣೆ ತರಬೇಕು. ಅಂದರೆ ಮಲಗುವ ಮೊದಲು ಹೆಚ್ಚು ನೀರು ಕುಡಿಯದಂತೆ ನೋಡಿಕೊಳ್ಳಬೇಕು, ರಾತ್ರಿ ವೇಳೆ ಹಾಸಿಗೆಯಲ್ಲಿ ಮೂತ್ರ ಮಾಡದೇ ಇದ್ದಾಗ ಹೊಗಳಬೇಕು, ಒಂದು ವೇಳೆ ಹಾಸಿಗೆಯಲ್ಲಿ ಮೂತ್ರ ಮಾಡಿದರೂ ಮಕ್ಕಳ ಮೇಲೆ ರೇಗುವುದು, ಬೇಸರ ಮಾಡಿಕೊಳ್ಳುವುದು ಮಾಡಬಾರದು.

* ಮೂತ್ರಪಿಂಡದ ಸಮಸ್ಯೆ ಇರುವ ಮಕ್ಕಳಿಗೆ ರೊಬೊಟಿಕ್ ಅಸಿಸ್ಟೆಡ್ ಸರ್ಜರಿ ಹೇಗೆ ಸಹಾಯ ಮಾಡುತ್ತದೆ?

ತೆರೆದ ಶಸ್ತ್ರಚಿಕಿತ್ಸೆ ಹಾಗೂ ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗಳು ಮಕ್ಕಳಿಗೆ ಹೆಚ್ಚು ಅಳವಾದ ಗಾಯವಾಗುವಂತೆ ಮಾಡಬಹುದು, ಅಲ್ಲದೇ ಸುತ್ತಲಿನ ಅಂಗಾಂಗಗಳಿಗೆ ಹಾನಿ ಮಾಡಬಹುದು. ಇದರಿಂದ ಮೂತ್ರನಾಳಕ್ಕೆ ತೊಂದರೆಯಾಗಬಹುದು. ಅಲ್ಲದೇ ಇದು ಮಕ್ಕಳಿಗೆ ಹೆಚ್ಚು ನೋವುಂಟು ಮಾಡಬಹುದು. ‌ಮೂತ್ರಕೋಶ ರಚನೆಯು ಮಕ್ಕಳಲ್ಲಿ ಚಿಕ್ಕದಾಗಿದ್ದು ಬಹಳ ಸೂಕ್ಷ್ಮವಾಗಿರುವುದರಿಂದ ಶಸ್ತ್ರಚಿಕಿತ್ಸೆಗೆ ಹೆಚ್ಚಿನ ನಿಖರತೆ ಮುಖ್ಯವಾಗುತ್ತದೆ. ಆ ಕಾರಣಕ್ಕೆ ರೊಬೊಟಿಕ್ ಶಸ್ತ್ರಚಿಕಿತ್ಸೆ ಉಪಯುಕ್ತ. ಮೂತ್ರನಾಳದ ಮರು-ಜೋಡಣೆ ಶಸ್ತ್ರಚಿಕಿತ್ಸೆಗೆ ಒಳಗಾದ ಮಕ್ಕಳಿಗೆ ರಕ್ತಸ್ರಾವ ಅತ್ಯಂತ ಕಡಿಮೆ. ಇದಲ್ಲದೇ ಶೀಘ್ರ ಚೇತರಿಕೆ ಹೊಂದಲು ಈ ವಿಧಾನ ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT