ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೇಲೆ ಸಿಟ್ಯಾಕೋ.. ಸಿಡುಕ್ಯಾಕೋ... ನಿಯಂತ್ರಿಸುವ ಕ್ರಮ ಹೇಗೆ?

Last Updated 10 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಮಕ್ಕಳ ಮೇಲೆ ಕೋಪಗೊಳ್ಳಬಾರದು...ಹೀಗೆಂದು ಹೇಳುವುದು ಸುಲಭ, ಮಾಡುವುದು ಕಷ್ಟ. ಇದು ಬಹುತೇಕ ಹೆತ್ತವರ ಭಾವನೆ. ಆದರೆ ಯಾಕೆ ಕಷ್ಟ? ನಾವು ಕೋಪವನ್ನು ನಿಗ್ರಹಿಸಿಕೊಳ್ಳಲು ಏನಾದರೂ ಪರಿಶ್ರಮ ಪಟ್ಟಿದ್ದೇವೆಯೇ? ದೇಹದಲ್ಲಿ ಬೊಜ್ಜು ಹೆಚ್ಚಾದಾಗ ವ್ಯಾಯಾಮ ಮತ್ತು ಸರಿಯಾದ ಆಹಾರ ಕ್ರಮವನ್ನು ನಿತ್ಯ ಅಭ್ಯಾಸ ಮಾಡಿದರಷ್ಟೇ ತೂಕ ಇಳಿಯುತ್ತದೆ. ಅದೇ ಥರ ಈ ಕೋಪ. ಮನದ ಸಮಾಧಾನಕ್ಕೆ ಅಂಟಿಕೊಂಡ ಬೊಜ್ಜು! ಸೂಕ್ತ ವ್ಯಾಯಾಮದ ಮೂಲಕ ಖಂಡಿತ ಕರಗಿಸಬಹುದು.

ಹೆತ್ತವರೆಂದ ಮೇಲೆ ಕೋಪ ಬಂದೇ ಬರುತ್ತದೆ, ನಿಜ. ಆದರೆ ಆ ಕೋಪವನ್ನು ಬೈದು-ಹೊಡೆದೇ ತೋರಿಸುವ ಅವಶ್ಯಕತೆ ಇದೆಯೇ? ಕಾಲಕಾಲಗಳಿಂದ ಇದನ್ನೇ ನೋಡುತ್ತಾ ಅಭ್ಯಾಸವಾಗಿರುವುದಕ್ಕೆ ನಾವೆಲ್ಲಾ ಹೀಗಾಗಿದ್ದೇವಾ? ಸಿಟ್ಟು ಬಂತೆಂದರೆ ಕೂಗಾಟ, ಬೈದಾಟ, ಹೊಡೆದಾಟ. ಹಾಗಿದ್ದಲ್ಲಿ ತಾಳ್ಮೆ ಬೆಳೆಸಿಕೊಂಡು ಮಕ್ಕಳ ಮೇಲೆ ಬರುವ ಕೋಪವನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸುವುದು ಹೇಗೆ? ಇಲ್ಲಿವೆ ಒಂದಷ್ಟು ಸಾಧ್ಯತೆಗಳು.

ನಮ್ಮ ಅಸಹನೆಗಳನ್ನು ಮಕ್ಕಳ ಮೇಲೆ ಹಾಕಬಾರದು
ನಮಗೆ ವಿಪರೀತ ಕೆಲಸದೊತ್ತಡವಿದೆ. ಆದರೆ ಮಗುವಿಗದು ಗೊತ್ತಾಗದು. ಎಂದಿನಂತೆ ತನ್ನ ಹತ್ತಾರು ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ. ಉತ್ತರಿಸುವ ತಾಳ್ಮೆ ಇಲ್ಲದೆ ಮಗುವಿನ ಮೇಲೆ ರೇಗಾಡಿ ಬಿಡುತ್ತೇವೆ. ಅಂದರೆ ನಮ್ಮ ಅಸಹನೆಗಳನ್ನು ಅನವಶ್ಯಕವಾಗಿ ಮಗುವಿಗೆ ದಾಟಿಸಿರುತ್ತೇವೆ. ಮನಸ್ಸೊಳಗೆ ನಮಗೇ ಶಾಂತಿ ಇಲ್ಲದ್ದಕ್ಕಾಗಿ ಸುತ್ತಲಿರುವ ವ್ಯಕ್ತಿ, ವಾತಾವರಣದ ಮೇಲೂ ಆ ಅಶಾಂತಿ ಹರಡುತೇವೆ. ನಮ್ಮೊಳಗೆ ಎದ್ದಿರುವ ಅಸಹನೆಗಳೇ ಬಹುತೇಕ ಬಾರಿ ಹುಚ್ಚು ಕೋಪದಿಂದ ವರ್ತಿಸುವಂತೆ ಮಾಡಿರುತ್ತದೆ. ಹೀಗಾಗುತ್ತಿದೆ ಎಂದರೆ ನಮ್ಮನ್ನು ನಾವು ತಿದ್ದಿಕೊಳ್ಳಬೇಕಾಗಿದೆ ಎಂದೇ ಅರ್ಥ.

ಒಂದು ನಿಮಿಷ ತಡೆದುಕೊಳ್ಳುವುದು

ವಿಪರೀತ ಕೋಪ ಬಂದು ಹೊಡೆಯಲು ಕೈ ಎತ್ತುವಾಗ, ಬೈಯುವಾಗ ಮೊತ್ತ ಮೊದಲ ಪ್ರತಿಕ್ರಿಯೆ ಕೊಡುವುದಕ್ಕೂ ಮೊದಲು ಒಂದು ನಿಮಿಷ ತಡೆದುಕೊಳ್ಳೋಣ. ಅದರಿಂದ ಮಕ್ಕಳಿಗೆ ಬಹಳವೇ ಒಳ್ಳೆಯದಾಗುತ್ತದೆ. ಜೊತೆಗೆ ನಮಗೂ..!

ಮಗು ಮಾಡಿದ ಯಾವುದೋ ತಪ್ಪಿಗೆ (ಮಹಾಪರಾಧವೇ ಆಗಿರಲಿ ಬೇಕೆಂದರೆ) ನಾನು ಈಗ ಕೊಡುತ್ತಿರುವ ಈ ಶಿಕ್ಷೆ ಸರಿಯಾದದ್ದೇ? ಇದನ್ನೇ ಸಾವಧಾನವಾಗಿ ಹೇಗೆ ಹೇಳಬಹುದು ಎಂಬುದನ್ನು ಯೋಚಿಸೋಣ. ನಾನು ಈ ವಯಸ್ಸಲ್ಲಿ ಹೇಗಿದ್ದೆ? ನಾವೇನು ಸದಾ ಕಾಲ ಹೆತ್ತವರ ಮಾತು ಕೇಳುತ್ತಿದ್ದೆವೇ? ಮೂರು ಹೊತ್ತೂ ಕೂತು ಓದುತ್ತಿದ್ದೆವೇ? ನಾವು ಬಹಳ ಒಳ್ಳೆಯ ಮಕ್ಕಳಾಗಿದ್ದೆವು ಎಂದು ಹೇಳಿಕೊಳ್ಳಬಹುದು. ಆದರೆ ಎಲ್ಲೆಲ್ಲಾ ಎಡವುತ್ತಾ ಬೆಳೆದೆವು ಎಂಬ ಸತ್ಯ ನಮಗೆ ಮಾತ್ರ ಗೊತ್ತಿರುತ್ತದೆ. ಹಾಗಾಗಿ ಒಂದು ಕ್ಷಣ ನಮ್ಮನ್ನು ನಾವು ತಡೆದುಕೊಳ್ಳೋಣ.

ಪರಿಸ್ಥಿತಿ ನಿಭಾಯಿಸಲು ಸಿದ್ಧರಿರುವುದು, ಮನೆಯಲ್ಲಿ ಮಕ್ಕಳಿರುವಾಗ ಒಂದಲ್ಲಾ ಒಂದು ಕೋಪ ಹುಟ್ಟುವಂತಹ ಸನ್ನಿವೇಶ ಹೇಗೋ ಸೃಷ್ಟಿಯಾ ಗಿಯೇ ಆಗುತ್ತದೆ ಎನ್ನುವ ಅರಿವು ಸದಾ ಇರಲೇಬೇಕು. ಹೊಸದಾಗಿ ಸಮಸ್ಯೆ ಹುಟ್ಟಿಕೊಂಡಾಗ ಅದನ್ನು ನಿಭಾಯಿಸಲು ಮಾನಸಿಕವಾಗಿ ತಯಾರಿಲ್ಲದೆ ಇದ್ದಾಗ ಸಿಟ್ಟು ಹೆಚ್ಚು. ಆದರೆ ಹೀಗಾದಾಗ ನಾನು ಶಾಂತವಾಗಿ ಪರಿಸ್ಥಿತಿ ನಿಭಾಯಿಸುತ್ತೇನೆ ಎಂಬ ರೆಕಾರ್ಡರ್ ನಮ್ಮ ತಲೆಯೊಳಗೆ ಮೊದಲೇ ಪ್ಲೇ ಆದರೆ ಅರ್ಧ ಸಮಸ್ಯೆ ಪರಿಹಾರವಾದಂತೆ.

ನಮ್ಮನ್ನೇ ನಾವು ಅವಲೋಕಿಸಿಕೊಳ್ಳುವುದು

ಮಕ್ಕಳಿಗೆ ಬೈದಾಗೆಲ್ಲಾ ನಮ್ಮನ್ನೇ ನಾವು ಮೂರನೇ ವ್ಯಕ್ತಿಯಂತೆ ಗಮನಿಸಿಕೊಳ್ಳಬೇಕು. ‘ಈಗ ನನ್ನ ವರ್ತನೆ ಹೇಗಿತ್ತು? ಕೋಪಕ್ಕೆ ಕಾರಣವಾದ ಮಕ್ಕಳ ನಡತೆಯನ್ನು ತಿದ್ದಲು ಹೀಗಲ್ಲದೆ ಬೇರೇನು ಉಪಾಯ ಮಾಡಬಹುದಿತ್ತು? ನಾನು ಸಿಟ್ಟುಗೊಂಡು ಹೇಳಿದ್ದರಿಂದ ಅವರು ತಿದ್ದಿಕೊಂಡರಾ?’ ಹೀಗೆ ಅವಲೋಕಿಸುವುದನ್ನು ತೀವ್ರವಾಗಿ ಅಭ್ಯಾಸ ಮಾಡಿಕೊಳ್ಳಬೇಕು. ಈ ಕ್ರಮ ನಮ್ಮೊಳಗೆ ಗಟ್ಟಿಯಾಗುತ್ತಾ ಹೋದಂತೆ ಮಕ್ಕಳು ಮಾಡುವ ಅದೆಷ್ಟೋ ತಪ್ಪನ್ನು ತಿದ್ದಲು ಕೋಪವಷ್ಟೇ ಅಸ್ತ್ರವಲ್ಲ ಎನ್ನುವುದೂ ಅರಿವಾಗುತ್ತದೆ.

ಕೋಪ ವ್ಯಕ್ತಪಡಿಸುವ ಸೂಕ್ತ ಮಾರ್ಗ

ಮಕ್ಕಳನ್ನು ನಿಭಾಯಿಸುವಾಗ ಕೋಪ ಬರುತ್ತದೆ ಎಂಬ ಸತ್ಯ ಒಪ್ಪಿಕೊಳ್ಳೋಣ. ಆದರೆ ಕೋಪಗೊಳ್ಳಲು ಅರ್ಹರು ಮತ್ತು ಸಕಾರಣವಿದೆ ಎಂದ ಮಾತ್ರಕ್ಕೆ ಮಕ್ಕಳ ವ್ಯಕ್ತಿತ್ವ ಹಾಗೂ ಗುಣ-ನಡತೆಗಳನ್ನು ಹೀಯಾಳಿಸುವಂತಹ ಮಾತುಗಳನ್ನು ಆಡಲು ಅಧಿಕಾರವಿಲ್ಲ. ಇಂತಹ ಸಿಟ್ಟು ಬಂದ ಸಂದರ್ಭದಲ್ಲಿ ನಮ್ಮ ಅಭಿಪ್ರಾಯವನ್ನು ಹೇಳಬೇಕೆಂದಿದ್ದರೆ ‘ಹಾಗೆ ಮಾಡಬಾರದು, ಇದು ಸರಿಯಲ್ಲ’ ಎಂದು ಶಿಸ್ತಿನ ಧಾಟಿಯಲ್ಲೇ ಹೇಳಬೇಕು. ಯಾವಾಗಲೂ ಇದೇ ಮೊದಲ ಪ್ರಯತ್ನ ಆಗಿರಬೇಕು. ಈ ಅಭ್ಯಾಸವನ್ನು ಮಾಡದ ಕಾರಣ ಪೆಟ್ಟೇ ಪರಮೌಷಧವಾಗಿರುತ್ತದೆ. ಕಟ್ಟುನಿಟ್ಟಿನ ದನಿಯಲ್ಲಿ ಮಾತನಾಡುವುದು ನಿರಂತರ ಅಭ್ಯಾಸದಿಂದ ಬರುವಂಥದ್ದು. ಪ್ರಾಯೋಗಿಕವಾಗಿ ಇದನ್ನು ಮಾಡಲು ಸಾಧ್ಯವೇ ಎನ್ನಿಸುತ್ತದೆ. ಆದರೆ ಹತ್ತು ದಿನದಲ್ಲೇ ಈ ಕ್ರಮದ ಫಲಿತಾಂಶ ಸಿಗಲಾರಂಭಿಸುತ್ತದೆ.

ಮೌನ ಒಳ್ಳೆಯದು

ವಿಪರೀತ ಕೋಪ ಬಂದಾಗ ಬೈಯುವುದು, ಹೊಡೆಯುವುದಕ್ಕಿಂತ ಮೌನವಾಗಿ ಬಿಡುವುದು ಹೆಚ್ಚು ಉಪಯೋಗಕಾರಿ. ಮಾತಿಲ್ಲದೆ ಸುಮ್ಮನಾದಾಗ ಮಕ್ಕಳಿಗೂ ಮಾಡಿದ ತಪ್ಪಿನ ಅರಿವು ಬೇಗನೆ ಆಗುತ್ತದೆ.

ಇವತ್ತು ಹೊಡೆಯುವುದಿಲ್ಲ

ನಿತ್ಯ ವ್ರತದಂತೆ ಹೀಗೊಂದು ಮಂತ್ರ ಹೇಳಬೇಕು- ‘ಇವತ್ತು ಮಕ್ಕಳಿಗೆ ಹೊಡೆಯುವುದಿಲ್ಲ’. ಇವತ್ತು ಒಂದೇ ದಿನ ಹೊಡೆಯದೆ ಇರುವುದು ಕಷ್ಟದ ಕೆಲಸವೇನಲ್ಲ ತಾನೇ? ಈ ಒಂದು ದಿನ ಇಷ್ಟು ಸಾಧಿಸಿದ್ದೇವೆ ಎಂದರೆ ನಾಳೆಯೂ ಅದು ಸಾಧ್ಯ ಎಂದರ್ಥ. ನಾಳೆ ಬೆಳಿಗ್ಗೆ ಮತ್ತೆ ಇದೇ ಮಂತ್ರ ಪುನರುಚ್ಚರಿಸಿದರೆ ಮುಗಿಯಿತು!

ತಾಳ್ಮೆ ಬೆಳೆಸಿಕೊಳ್ಳುವುದು

ಕೋಪ ಬರಬಾರದು ಎಂದರೆ ತಾಳ್ಮೆ ಬೇಕೇ ಬೇಕು. ಇದನ್ನು ಬೆಳೆಸಿಕೊಳ್ಳಲು ಇರುವ ಅತಿ ಮುಖ್ಯ ಮಾರ್ಗ ಎಂದರೆ ಯೋಗ, ಧ್ಯಾನಗಳ ನಿರಂತರ ಅಭ್ಯಾಸ. ಜೊತೆಗೊಂದಷ್ಟು ವ್ಯಾಯಾಮವೂ ಬೇಕು. ಕೋಪ ಬಂದ ಆ ಕ್ಷಣದಲ್ಲಿ ದೀರ್ಘ ಉಸಿರು ಒಳಗೆಳೆದುಕೊಂಡು ಹೊರಗೆ ಬಿಡುವುದನ್ನು ಮನಸ್ಸು ಶಾಂತವಾಗುವ ತನಕ
ಮಾಡಬಹುದು. ಅಂಕೆಗಳನ್ನು ನಿಧಾನವಾಗಿ ಕೋಪ ತಣಿಯುವ ತನಕ ಲೆಕ್ಕ ಹಾಕುವುದು. ಶ್ಲೋಕಗಳನ್ನು ಮನದಲ್ಲೇ ಪಠಿಸುವುದನ್ನೂ
ಅಭ್ಯಾಸ ಮಾಡಬಹುದು.

ಮಕ್ಕಳಿಂದ ಸ್ವಲ್ಪ ಹೊತ್ತು ದೂರ

ಮಕ್ಕಳನ್ನು ಕೆಲ ಹೊತ್ತು ಬಿಟ್ಟಿರಲು ಸಾಧ್ಯವಿರುವವರು ಕೋಪ ಬಂದ ಹೊತ್ತಲ್ಲಿ ಸ್ವಲ್ಪ ಹೊತ್ತು ಒಂಟಿಯಾಗಿ ಕಾಲ ಕಳೆಯಬಹುದು. ಇಲ್ಲವೆಂದರೆ ಮನೆಕೆಲಸದ ಕಡೆ, ಗಾರ್ಡನಿಂಗ್‌ನತ್ತ ಗಮನ ಕೊಡಬಹುದು. ಮನಸ್ಸನ್ನು ಅರಳಿಸುವ ಸಂಗೀತ ಕೇಳುವುದು, ಪುಸ್ತಕಗಳನ್ನು ಓದುವುದು, ಪೇಂಟಿಂಗ್ ಮಾಡುವುದು.. ಹೀಗೆ ನಮ್ಮನ್ನು ನಾವು ಕ್ರಿಯಾಶೀಲ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕೋಪ ಶಮನ ಮಾಡಿಕೊಳ್ಳಲೇಬೇಕು.

ಕೋಪವನ್ನು ನಿಯಂತ್ರಿಸಿಕೊಂಡು ನಿರ್ಧಾರಗಳನ್ನು ತೆಗೆದುಕೊಂಡಾಗ ನಮ್ಮೊಳಗಿನ ಆತ್ಮವಿಶ್ವಾಸ ಹೆಚ್ಚಿ ಎಂಥದ್ದೇ ವಿಷಮ ಪರಿಸ್ಥಿತಿಯೂ ನಿಯಂತ್ರಣಕ್ಕೆ ಸಿಗಲಾರಂಭಿಸುತ್ತದೆ.

ಮಗುವಿಗೆ ಶಿಸ್ತು ಕಲಿಸುವುದೆಂದರೆ ಹೊಡೆಯುವುದಲ್ಲ. ಅದು ಅವರ ಜೀವನವನ್ನೇ ಕುಗ್ಗಿಸಿಬಿಡುತ್ತದೆ. ಶಿಸ್ತಿನ ಮಾತು ಹೇಗೂ ದೂರಾಯಿತು. ಹೆತ್ತವರಾಗಿ ನಮ್ಮ ಉದ್ದೇಶವೇ ಮಕ್ಕಳ ಮನಸ್ಸನ್ನು ಅರಳಿಸುವ ಕಡೆಗೆ ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT