ಬುಧವಾರ, ಫೆಬ್ರವರಿ 26, 2020
19 °C

ದೀಪಕ್‌ ಚಾಹರ್ ಫಿಟ್‌ನೆಸ್‌ ಗುಟ್ಟು

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಅಪ್ಪನ ಆಸೆಯಂತೆ ಮಧ್ಯಮವೇಗದ ಬೌಲರ್‌ ಆಗಿ ರೂಪುಗೊಂಡ ದೀಪಕ್ ಚಾಹರ್ ಅವರನ್ನು ಗಾಯದ ಸಮಸ್ಯೆ ಕಾಡಿತ್ತು. ಅದರಿಂದಾಗಿ ಅವರ ಕ್ರಿಕೆಟ್ ಜೀವನವೇ ಕೊನೆಯಾಗುವ ಹಂತ ತಲುಪಿತ್ತು. ಆದರೆ ಬೆನ್ನು ನೋವನ್ನೂ ಗೆದ್ದರು, ಜನರ ಮನವನ್ನೂ ಗೆದ್ದು ಈಗ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭರವಸೆ ಮೂಡಿಸಿದ್ದಾರೆ.

ಹದಿನೈದು ವರ್ಷಗಳ ಹಿಂದಿನ ಮಾತು. ರಾಜಸ್ಥಾನದ ಪುಟ್ಟ ಊರಿನ ಕ್ರಿಕೆಟ್ ಅಕಾಡೆಮಿಯಲ್ಲಿ ಲೋಕೇಂದ್ರಸಿಂಗ್ ಚಹಾರ್ ಅವರು ಶಿಸ್ತಿನ ಕೋಚ್ ಆಗಿದ್ದವರು. ತಮ್ಮ ಮಗ ದೀಪಕ್ ಚಹಾರ್‌ನನ್ನು ಸ್ವಿಂಗ್ ಬೌಲರ್‌ನನ್ನಾಗಿ ರೂಪಿಸಲು ಪಣತೊಟ್ಟವರು. ತಮ್ಮ ಆರ್ಥಿಕ ಮುಗ್ಗಟ್ಟನ್ನೂ ಲೆಕ್ಕಿಸದೇ ಪ್ರತಿದಿನವೂ ಹೊಸ ಚೆಂಡಿನಲ್ಲಿಯೇ ಮಗನಿಗೆ ಅಭ್ಯಾಸ ಮಾಡಿಸುತ್ತಿದ್ದರು. ಅದಕ್ಕಾಗಿ ಅವರು ಖರೀದಿಸಿದ ಚೆಂಡುಗಳಿಗೆ ಲೆಕ್ಕವನ್ನು ಅವರು ಇಟ್ಟಿಲ್ಲ. ಆದರೆ ಅವರು ಇಟ್ಟ ವಿಶ್ವಾಸವನ್ನು ಮಗ ದೀಪಕ್ ಹುಸಿ ಮಾಡಲಿಲ್ಲ.

ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ತನ್ನ ಅಪ್ಪ ಹೆಮ್ಮೆಯಿಂದ ಬೀಗುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಮತ್ತೊಬ್ಬ ಪರಿಣಾಮಕಾರಿ ಸ್ವಿಂಗ್ ಬೌಲರ್‌ ಆಗುವ ನಿರೀಕ್ಷೆ ಮೂಡಿಸಿದ್ದಾರೆ.

ಹೋದ ಭಾನುವಾರ ನಾಗಪುರದ ವಿದರ್ಭ ಕ್ರಿಕೆಟ್ ಅಂಗಳದಲ್ಲಿ, ‘ಇವತ್ತು ಜಸ್‌ಪ್ರೀತ್ ಬೂಮ್ರಾ ಆಡುತ್ತಿಲ್ಲ. ಅವರ ಮೇಲಿರುವಷ್ಟೇ ವಿಶ್ವಾಸ ನಿನ್ನ ಮೇಲೆಯೂ ಇದೆ. ಅವರಷ್ಟೇ ಪರಿಣಾಮಕಾರಿ ನೀನಾಗಬೇಕು’ ಎಂದು ನಾಯಕ ರೋಹಿತ್ ಶರ್ಮಾ ಅವರು ಹೇಳಿದ್ದ ಮಾತುಗಳಿಗೆ ದೀಪಕ್ ಪುಳಕಿತರಾಗಿದ್ದರು.

ಅದರ ನಂತರ ನಡೆದಿದ್ದು ಇತಿಹಾಸ. ವಿಸಿಎ ಅಂಗಳದ ಹೊನಲು ಬೆಳಕು ನಂದುವ ಹೊತ್ತಿಗೆ ದೀಪಕ್ ಬೆಳಕು ಎಲ್ಲೆಡಯೂ ಚೆಲ್ಲಿತ್ತು. ಅವತ್ತು ಬಾಂಗ್ಲಾದೇಶ ತಂಡದ ಎದುರು ಅವರು ಹಾಕಿದ್ದು ಕೇವಲ 3.2 ಓವರ್‌ಗಳು ಮಾತ್ರ. ಕೊಟ್ಟಿದ್ದು ಏಳು ರನ್‌ಗಳನ್ನು. ಆದರೆ ಕಬಳಿಸಿದ್ದು ಅರ್ಧ ಡಜನ್ ವಿಕೆಟ್‌ಗಳನ್ನು. ಅದರಲ್ಲಿಯೂ ಒಂದು ಹ್ಯಾಟ್ರಿಕ್‌. ಇದು ಚುಟುಕು ಕ್ರಿಕೆಟ್‌ನಲ್ಲಿ ಶ್ರೇಷ್ಠ ಸಾಧನೆಯಾಗಿ ದಾಖಲಾಯಿತು. ಲಂಕಾದ ಅಜಂತಾ ಮೆಂಡಿಸ್ ಎಂಟು ರನ್ ನೀಡಿ ಆರು ವಿಕೆಟ್ ಗಳಿಸಿದ್ದ ಸಾಧನೆಯು ಹಿಂದೆ ಸರಿಯಿತು.

ಛಲದ ಆಟ ಹೊಸತಲ್ಲ

ಉತ್ತರಪ್ರದೇಶದ ಆಗ್ರಾದಲ್ಲಿ ಜನಿಸಿದ್ದ ದೀಪಕ್ ತನ್ನ ಅಪ್ಪನ ಆಸೆಯಂತೆ ಕ್ರಿಕೆಟಿಗನಾಗಿ ಬೆಳೆದರು. ಆದರೆ, ಅವರು ಈ ಮಟ್ಟಕ್ಕೆ ಬೆಳೆಯಲು ಸವೆಸಿದ ಹಾದಿ ಸುಗಮವಾಗಿರಲಿಲ್ಲ. ಅವಮಾನ, ನಿರಾಶೆ, ಗಾಯದ ಸಮಸ್ಯೆಗಳು ಕಾಡಿದವು. ಆದರೂ ಜಗ್ಗದ, ಕುಗ್ಗದ ದೀಪಕ್ ಈಗ ಕಣ್ಮಣಿಯಾಗಿದ್ದಾರೆ.

ಅವರ ಕ್ರಿಕೆಟ್ ಜೀವನ 2008ರಲ್ಲಿಯೇ ಅಂತ್ಯ ಕಾಣುವ ಪರಿಸ್ಥಿತಿ ಎದುರಾಗಿತ್ತು. 2008ರಲ್ಲಿ ಐಪಿಎಲ್‌ನ ರಾಜಸ್ಥಾನ್ ರಾಯಲ್ಸ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಅವರು ಭಾಗವಹಿಸಿದ್ದರು. ಆಗ ತಂಡದ ನಿರ್ದೇಶಕರಾಗಿದ್ದ ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್ ದೀಪಕ್ ಅವರನ್ನು ಆಯ್ಕೆ ಮಾಡಿರಲಿಲ್ಲ. ಅಷ್ಟೇ ಅಲ್ಲ. ‘ನೀನು ಕ್ರಿಕೆಟಿಗನಾಗಲು ನಾಲಾಯಕ್’ ಎಂದು ಹಂಗಿಸಿ ಅವಮಾನ ಮಾಡಿದ್ದರು. ಆದರೆ ದೀಪಕ್‌ ಮನದಲ್ಲಿ ಅಂದು ಹತ್ತಿದ ಛಲದ ಕಿಡಿ ಇಂದಿಗೂ ಆರಿಲ್ಲ.

2010ರಲ್ಲಿ ರಾಜಸ್ಥಾನ ತಂಡದ ಪರ ರಣಜಿ ಟ್ರೋಫಿ ಟೂರ್ನಿಯಲ್ಲಿ ಮಿಂಚಿನ ಸಂಚಲನ ಮೂಡಿಸಿದ ದೀಪಕ್ ಆಟಕ್ಕೆ ಆಯ್ಕೆದಾರರೂ ಮನಸೋತರು. ಹೈದರಾಬಾದ್ ಎದುರಿನ ಪಂದ್ಯದಲ್ಲಿ ಅವರು 10 ರನ್‌ಗಳಿಗೆ 8 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು. ಆದರೂ ಭಾರತ ತಂಡದಿಂದ ಅವರಿಗೆ ಬುಲಾವ್ ಬರಲೇ ಇಲ್ಲ.

ಯಾವಾಗ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಿಂಚಲು ಆರಂಭಿಸಿದರೋ ಆಗ ಜನರಿಗೆ ಪರಿಚಯವಾದರು. ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಅವಕಾಶ ಕೊಟ್ಟ ಮಹೇಂದ್ರಸಿಂಗ್ ಧೋನಿಯು ದೀಪಕ್ ಪಾಲಿಗೆ ‘ಗುರು’ವಾದರು. ಉತ್ತರಪ್ರದೇಶದ ಪ್ರವೀಣಕುಮಾರ್ ಅವರ ಮಾದರಿಯಲ್ಲಿಯೇ ಸ್ವಿಂಗ್ ಪ್ರಯೋಗಿಸುವ ದೀಪಕ್‌ ಚಾಣಾಕ್ಷ ಬೌಲರ್‌ ಆಗಿ ಹೊರಹೊಮ್ಮಿದರು.

ಟಿ20 ಪರಿಣತ ಮಧ್ಯಮವೇಗಿಯಾಗಿ ರೂಪುಗೊಂಡರು. ಕೇವಲ ನಾಲ್ಕು ಓವರ್‌ಗಳಲ್ಲಿ ಎದುರಾಳಿ ತಂಡದ ಆರು ವಿಕೆಟ್‌ಗಳನ್ನು ಗಳಿಸುವುದು ಸರಳವಲ್ಲ. ಗಾಯದ ಸಮಸ್ಯೆ ಮತ್ತು ಫಿಟ್‌ನೆಸ್‌ ಕೊರತೆಯನ್ನು ಪರಿಹರಿಸಿಕೊಂಡಿರುವ ದೀಪಕ್ ಸದ್ಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿಯೂ ಮಿಂಚುತ್ತಿದ್ದಾರೆ. 27ರ ಹರೆಯದ ದೀಪಕ್ ಇದೇ ಲಯದಲ್ಲಿ ಮುಂದುವರೆದರೆ 2020ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಗೆಲುವಿಗೆ ರೂವಾರಿಯೂ ಆಗಬಹುದು.

ಅದೆಲ್ಲಕ್ಕಿಂತಲೂ ಮುನ್ನ ಅವರಿಗೆ ಏಕದಿನ ಮತ್ತು ಟಿ20 ಟೂರ್ನಿಗಳಲ್ಲಿ ಹೆಚ್ಚು ಆಡುವ ಅವಕಾಶಗಳು ಸಿಗಬೇಕು. ಅವರು ಇದುವರೆಗೆ ಆಡಿದ್ದು ಕೇವಲ ಒಂದು ಏಕದಿನ ಪಂದ್ಯ. ಅದೂ ಹೋದ ವರ್ಷ. ಕೇವಲ ಏಳು ಚುಟುಕು ಪಂದ್ಯಗಳಲ್ಲಿ ಅವರು 14 ವಿಕೆಟ್ ಗಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು