ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಿಯ ಚಳಿಗೆ ಮಾಗದಿರಲಿ ಚರ್ಮ: ಚಳಿಗಾಲಕ್ಕೆ ನೀವು ಮಾಡಬೇಕಾದ ಕೆಲಸಗಳೇನು?

Last Updated 15 ನವೆಂಬರ್ 2021, 21:30 IST
ಅಕ್ಷರ ಗಾತ್ರ

ಇಳೆಯು ಹಚ್ಚ ಹಸಿರ ಒಡವೆಯಿಂದ ನಳನಳಿಸುತ್ತದೆ. ಗದ್ದೆಯ ಬೆಳೆ ಮಾಗುವ, ಕೊಯಿಲಿಗೆ ಸಜ್ಜಾಗುವ ದಿನ. ಸಂಭ್ರಮಿಸುವ ಬದಲು ಗಡಗಡ ನಡುಗುವುದೇಕೆ? ನಲುಗದಿರುವ ಉಪಾಯಗಳೇನು?

‘ಅಗೋ ನೋಡಿರಿ! ನಳನಳಿಸುವ ನೈದಿಲೆಗಳಿಲ್ಲದ ಸರೋವರಗಳ ಕಂಡಿರಾ? ಪ್ರಶಾಂತ ಜಲಪಾತಳಿಯ ಮೇಲೆ ಹಬೆಯಾಡುತ್ತಿರುವ ಹಿಮದ ಹೊಗೆ ಕಂಡಿರಾ? ಹೆಂಗಳೆಯರ ಮುಡಿ ತುಂಬ ಘಮಘಮಿಸುವ ಪರಿಮಳದ ಧೂಪದ ಹೊಗೆ! ಮುಖದ ಮೇಲಿದೆ ದಪ್ಪನೆಯ ಚಂದದ ಚಂದನ ಲೇಪನ!’

ಅಬ್ಬ, ಅದೆಂತಹ ಉಪಮೆಗಳಿವು! ವಿಶ್ವದ ಅತ್ಯಂತ ಪ್ರಾಚೀನ ಪರಿಸರ ಕವಿ ಯಾರು ಗೊತ್ತೇ? ಕಾಳಿದಾಸನ ಋತುಸಂಹಾರದ ಹೇಮಂತ ಋತು ಬಣ್ಣನೆಯ ಸಾಲುಗಳಿವು. ಹೇಮಂತದ ಚುಮುಚುಮು ಚಳಿಗೆ ಹೆಂಗಳೆಯರ ಕೂದಲು–ಚರ್ಮದ ಆರೋಗ್ಯಪಾಲನೆಯ ಒಳ ನೋಟಗಳಿವು.

ಹೊರಗಿನ ತಾಪಮಾನ ತೀರ ಕುಸಿಯುವ ದಿನಗಳು. ರೊಯ್ಯನೆ ಬೀಸುವ ಗಾಳಿಯಂತೂ ಇನ್ನಷ್ಟು ಚಳಿ ತರುವ ಕಚಗುಳಿ. ರೋಮಗಳು ನೆಟ್ಟಗಾಗುವವು. ದೇಹ ಗಡಗಡನೆ ಕಂಪಿಸುವ ಚಳಿ. ಋತುವಿನ ಹೆಸರೇ ಹೇಮಂತ. ಹಿಮಗಾಳಿಯ ಝಂಝಾವಾತಕ್ಕೆ ಹೆಪ್ಪುಗಟ್ಟುವ ನೆತ್ತರು. ನಡು ಇರುಳಿನ ಹೃದಯಾಘಾತದ ಭಯ ಹೆಚ್ಚುವ ಚಳಿಗಾಲ. ಒಂದೆಡೆ ವಾಸ್ತವವಾಗಿ ಆರೋಗ್ಯ ಕುದುರಿಸಲಿರುವ ಅವಕಾಶ ನಿಜ. ಆದರೆ ಹೊಸ ಪೀಳಿಗೆಯ ಮಂದಿಗೆ ಅಷ್ಟೊಂದು ವ್ಯವಧಾನವಿದೆಯೇ? ವಿಸರ್ಗ ಅಂದರೆ ಬಲವನ್ನು ದೇಹವು ಹೆಚ್ಚಿಸಿಕೊಳ್ಳುವ ಕಾಲ. ವರ್ಷ, ಶರತ್ ಮತ್ತು ಹೇಮಂತ ಋತುಗಳು ಆಯುರ್ವೇದಸಂಹಿತೆ ಪ್ರಕಾರ ವಿಸರ್ಗ ಋತುತ್ರಯ. ಭೂಮಿ ಮತ್ತು ದೇಹದ ಆಹ್ಲಾದಮಯ ದಿನಗಳಿವು. ಇಳೆಯು ಹಚ್ಚ ಹಸಿರೊಡವೆಯಿಂದ ನಳನಳಿಸುತ್ತದೆ. ಗದ್ದೆಯ ಬೆಳೆ ಮಾಗುವ, ಕೊಯಿಲಿಗೆ ಸಜ್ಜಾಗುವ ದಿನ. ಸಂಭ್ರಮಿಸುವ ಬದಲು ಗಡಗಡ ನಡುಗುವುದೇಕೆ? ನಲುಗದಿರುವ ಉಪಾಯಗಳೇನು?

‘ಸ್ಪರ್ಶನೇಭ್ಯೋ ಅಧಿಕಃ ವಾಯುಃ’ ಎಂಬ ಶ್ಲೋಕ ಖಂಡವಿದೆ. ದೇಹದಲ್ಲಿ ಮೆದುಳು ಮತ್ತು ನರವ್ಯೂಹವನ್ನು ವಾತಸ್ಥಾನ ಎಂದು ಗುರುತಿಸುವೆವು. ‘ತ್ವಚ್ಯಶ್ಚ ಪರಮೋಭ್ಯಂಗಃ’ ಎಂಬ ಆಯುರ್ವೇದ ಉಪದೇಶವಿದೆ. ದೀವಳಿಗೆಯಿಂದ ಆರಂಭ ಅಂತಹ ಅಭ್ಯಂಗ ಸ್ನಾನ. ನಿರಂತರವಾಗಿ ಇಂತಹ ಚರ್ಮದ ಉಪಚಾರ, ಉಪಕಾರ ಮಕರ ಸಂಕ್ರಾಂತಿ ಪರ್ಯಂತ ಸಾಗುವ ಸ್ಪಷ್ಟ ಸೂಚನೆಗಳಿವೆ. ಯಾವ ಎಣ್ಣೆ ಹಚ್ಚುವಾ ಎಂದರೆ ಎಳ್ಳೆಣ್ಣೆಯೇ ಪ್ರಶಸ್ತ. ದೀಪಾವಳಿಯಿಂದ ಸಂಕ್ರಾಂತಿಯ ತನಕ ಸತತವಾಗಿ ಎಳ್ಳಿನ ಬಳಕೆಯಿಂದ ಲಾಭವಿದೆ. ಹಿಂದಿನ ಕಾಲದಲ್ಲಿ ಜಟ್ಟಿಗಳು ಎಳ್ಳೆಣ್ಣೆ ಕುಡಿಯುತ್ತಿದ್ದರು. ಅನಂತರ ಗರಡಿ ಸಾಮ ವರಸೆ ಮಾಡುತ್ತಿದ್ದ ಇತಿಹಾಸ ವಿಜಯನಗರದ ಅರಸ ಕೃಷ್ಣದೇವರಾಯರ ಕಾಲದ್ದು. ಚಿತ್ರದುರ್ಗದ ಕೋಟೆಯ ಎಣ್ಣೆ ಹೊಂಡ ಮತ್ತು ತುಪ್ಪದ ಕೊಳದ ಬಗ್ಗೆ ಗೊತ್ತೇ? ಇದರ ಹಿಂದೆ ಜನ ಸಮುದಾಯದ ಆರೋಗ್ಯ ಕಾಳಜಿ ಇದೆ. ಬಡವ, ಬಲ್ಲಿದರೆಲ್ಲರಿಗೆ ಎಣ್ಣೆ ತುಪ್ಪ ಧಾರಾಳವಾಗಿ ದೊರಕಿಸುವ ಆಳರಸೊತ್ತಿಗೆಯ ಅಕ್ಕರೆ ಇದೆ. ಚಳಿಗಾಲದಲ್ಲಿ ಹೈನುಗಾರಿಕೆಯ ಉಬ್ಬರವಿದೆ. ಅದನ್ನು ಹೇರಳ ಬಳಸಿದ ಜನ ಸಮುದಾಯ ಗಟ್ಟಿಮುಟ್ಟಾಗಲೆಂಬ ನಾಯಕರ ಆಶಯ ಶ್ಲಾಘನೀಯ. ಚರ್ಮದ ಬಿರುಸುತನ, ಕೂದಲಿನ ಪೆಡಸುತನಕ್ಕೆ ಪೂಸುವ ಎಣ್ಣೆ, ತುಪ್ಪದುಪಚಾರ, ಉಪಕಾರ ಖಂಡಿತ ಶಾಶ್ವತವಾದ ಆರೋಗ್ಯ ಸೋಪಾನ.

ಕಾರ್ತಿಕದ ದೀಪೋತ್ಸವಗಳೆಲ್ಲ ಮೈಮನ ಮುದವೀಯುವ ಕಾರಿರುಳ ಸಂಭ್ರಮಾಚರಣೆ. ಕವಿ ಕಾಳಿದಾಸನ ಮಾತೇ ಇದೆ. ‘ಉತ್ಸವ ಪ್ರಿಯಾಃ ಖಲು ಮನುಷ್ಯಾಃ!’ ಚಳಿಗಾಲದ ದಿನಗಳು ನಿಧಾನವಾಗಿ ಕಫೋದ್ರೇಕಕ್ಕೆ ಹಾದಿಯಾಗುತ್ತದೆ. ಅದನ್ನು ತಪ್ಪಿಸಲು ಮುಂಜಾನೆ ಬೇಗ ಏಳುವ ರಿವಾಜು ರೂಢಿಸಿಕೊಳ್ಳಿರಿ. ಧನುರ್ಮಾಸದ ಪೂಜೆ, ಪಾರಾಯಣದ ಹಿಂದೆ ಅಂತಹ ಸತ್ಯಗಳಿವೆ. ನಸುಕಿನ ದಿನಚರ್ಯೆ ಖಂಡಿತ ಲಾಭದಾಯಕ. ರಕ್ತಸಂಚಾರದ ಅಡಚಣೆಗೆ ಕಡಿವಾಣ. ಕಫ ಸೇರದಂತೆ ಮುನ್ನೆಚ್ಚರಿಕೆ ಕ್ರಮ. ಪ್ರಸಾದರೂಪದ ಹುಗ್ಗಿ, ಹೆಸರುಪಾಯಸಗಳು ಪಚನಕ್ಕೆ ಲಘು. ಹೇಮಂತದ ದಿನಗಳು ಖಂಡಿತ ಗುರು ಆಹಾರ ಪಚನಕಾರಿ ಎಂಬ ಚರಕಸಂಹಿತೆಯ ಸೊಲ್ಲಿದೆ. ಹಾಗಾಗಿ ತುಪ್ಪ ತಿಂದರೆ ಜೀರ್ಣಿಸುವ ಕಸುವು ನಮ್ಮ ಅಗ್ನಿಗಿದೆ. ದೇಹಕ್ಕೆ ಬೇಕಾದ ಜಿಡ್ಡು ದೊರೆತರೆ ಚರ್ಮ, ಉಗುರು, ಕೂದಲಿಗೆ ಸೊಂಪುತನ ಖಂಡಿತ. ಮಾಘಸ್ನಾನ, ಕೋಜಾಗರೀ ವ್ರತದ ಜಾಗರಣೆ ಕೂಡ ಆರೋಗ್ಯ ಕಾಳಜಿಗೆ ಪೂರಕ. ನಸುಕಿನ ಜಾವದ ಮುಸುಕೊಳಗಿನ ನಿದ್ದೆ ತೊರೆಯುವಾ. ಹಕ್ಕಿಗಳೇಳುವ ಸಮಯದ ಉದಯ ರಾಗ ಹಾಡುವಾ. ಆರೋಗ್ಯದ ಬದುಕು ಬಾಳುವಾ.

ಹೊಸ ಧಾನ್ಯಗಳು ಲಭ್ಯವಿರುವ ಈ ದಿನಗಳಲ್ಲಿ ಅವುಗಳನ್ನು ಬಳಸಲು ಅಡ್ಡಿಯಿಲ್ಲ. ಕಬ್ಬಿನ ಬಳಕೆಗೆ ಒತ್ತಿದೆ. ಕಬ್ಬಿನ ತಾಜಾ ಹಾಲು ಕುಡಿಯಿರಿ. ಸಂಕ್ರಾಂತಿಯ ತನಕ ಎಳ್ಳು, ಕಬ್ಬು ತಿನ್ನಲಡ್ಡಿಯಿಲ್ಲ. ಬೆಲ್ಲ, ಕಾಳು ಮೆಣಸಿನ ಪಾನಕ ಪಾನಯೋಗ್ಯ. ಕುಡಿಯುವ ನೀರು ಕೋಬೆಚ್ಚನೆಯದಾಗಿರಲಿ. ಸ್ನಾನದ ನೀರೂ ಹಾಗೆಯೇ ಇರಲಿ. ತುಂಬ ಬಿಸಿಯಾದ ನೀರಿನ ಸ್ನಾನದಿಂದ ಚರ್ಮದ ಜಿಡ್ಡು ಒಣಗೀತು. ಜೇನಿನ ಬಳಕೆಗೆ ಒತ್ತು ನೀಡಿರಿ. ನೆಲಮಾಳಿಗೆಯ ಒಳಗೆ ಬೆಚ್ಚಗೆ ವಾಸಿಸುವ ವಿಧಾನ ಹಿಂದೆ ಇತ್ತು. ಚರ್ಮದ ದಿರಸು, ಉಣ್ಣೆ ಕಂಬಳಿ, ರೇಷ್ಮೆಯ ದಪ್ಪನೆ ಹಾಸಿಗೆಯಲ್ಲಿ ಮಲಗಿ; ಅವೇ ಹೊದಿಕೆ ಹೊದೆಯುವ ಪರಿಪಾಠವಿತ್ತು. ಚರ್ಮದ ತೇವಾಂಶ ಕಾಪಿಡುವ ಮತ್ತು ನೆತ್ತರ ಚಲನೆಗೆ ಅನುಕೂಲ ಮಾಡುವ ಕ್ರಮಗಳಿವು. ಕಾಳಿದಾಸ ವಿವರಿಸಿದ ಗಂಧ, ಚಂದನ, ಅಗುರು ಲೇಪನಗಳು ಚರಕ ಸಂಹಿತೆಯ ಪಾಠಗಳೇ ಸೈ. ಚರ್ಮದ ಆರೋಗ್ಯಕ್ಕೆ ಅಂದು ಅವು ರೂಢಿಯಲ್ಲಿದ್ದವು. ಗುಲಾಬಿ ಜಲ ಸಹಿತ ಮುಲ್ತಾನೀ ಮಿಟ್ಟಿ ಅಂದರೆ ಗೋಪೀಚಂದನ ಮುಖಲೇಪದಿಂದ ಮುಖದ ಕಾಂತಿಯನ್ನು ಕಾಪಾಡಲು ಶಕ್ಯ. ಬಿರಿದ ತ್ವಚೆ ಹೊಸ ಕಾಯಿಲೆಗೆ ಕಾರಣವಾದೀತು. ತ್ವಚೆಯ ಆರೋಗ್ಯ ಪಾಲನೆಗೆ ಒತ್ತು ನೀಡಿ ದೇಹದ ಅತಿ ದೊಡ್ಡ ಅವಯವವೆನಿಸಿದ ಚರ್ಮ ರೋಗ ತಡೆಯುವಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT