ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಶಿಯಲ್ ಮೀಡಿಯಾ: ಬೇಕಿತ್ತು ಈ ಬ್ರೇಕ್!

Last Updated 18 ಅಕ್ಟೋಬರ್ 2021, 22:30 IST
ಅಕ್ಷರ ಗಾತ್ರ

ಎಂಟು ವರ್ಷದ ಮಿತ್ರಳಿಗೆ ಮತ್ತು ಅವಳ ತಂಗಿ ನೇತ್ರಳಿಗೆ ಅಂದು ಖುಷಿಯೋ ಖುಷಿ. ಅಮ್ಮನ ಜೊತೆ ಪಗಡೆಯಾಟ ಆಡುತ್ತಾ ಒಂದೂವರೆ ಗಂಟೆಯಾಯಿತು. ಅಮ್ಮನ ಚಿತ್ತ ಮೊದ ಮೊದಲು ಮೊಬೈಲ್ ಮೇಲೆ ಇದ್ದರೂ, ಈಗಂತೂ ಒಂದು ಗಂಟೆಯಿಂದ ಮೊಬೈಲ್ ಮುಟ್ಟೇ ಇಲ್ಲ. ಒಂದೆರಡು ಬಾರಿ ‘ಈ ವಾಟ್ಸ್‌ಆ್ಯಪ್‌, ಫೇಸ್‍ಬುಕ್ ಕೆಲಸವೇ ಮಾಡುತ್ತಿಲ್ಲವಲ್ಲ’ ಎಂದು ಗೊಣಗಿದರಾದರೂ ಮತ್ತೆ ಪಗಡೆಯಾಟದಲ್ಲಿ ಮಕ್ಕಳೊಂದಿಗೆ ಮಕ್ಕಳಾಗಿ ಆಡುತ್ತಿದ್ದಾಳೆ ಅಮ್ಮ. ಅಪ್ಪ ಬಂದವನೂ ‘ಯಾಕೋ ಈ ನೆಟ್‍ವರ್ಕ್ ಸರಿ ಇಲ್ಲ’ ಎಂದು ಇವರೊಂದಿಗೇ ಕುಳಿತು ಇವರಾಡುವುದನ್ನು ಮೊದಲ ಬಾರಿ ನೋಡಿ ಆನಂದಿಸಿದ. ಮಧ್ಯದಲ್ಲಿ ಎಲ್ಲರೂ ಊಟದ ಮೇಜಿನ ಸುತ್ತ ಕುಳಿತು ಮೊಬೈಲ್‍ನ ‘ಟನ್ ಟನ್’ ತೊಂದರೆ ಇಲ್ಲದೆ ಊಟ ಮಾಡಿದರು ಕೂಡ. ಆಮೇಲೆ, ಮಲಗುವುದಕ್ಕೂ ಮುಂಚೆ ಮಕ್ಕಳಿಗೆ ಅಮ್ಮನಿಂದ ಕಥೆಯ ವಾಚನವೂ ಆಯಿತು. ಮಕ್ಕಳು ದಿಲ್‍ಖುಷ್.

ಬೇಕಿತ್ತು ಈ ಬ್ರೇಕ್ !

ಅಕ್ಟೋಬರ್ 4ರ ಸೋಮವಾರದಂದು ಮಿತ್ರ–ನೇತ್ರರ ಅನುಭವ ಹಲವಾರು ಕುಟುಂಬಗಳಲ್ಲಾಗಿರುವುದು ಖಂಡಿತ. ಅಂದು ರಾತ್ರಿ ಒಂಬತ್ತು ಗಂಟೆಗೆ ಜಗತ್ತಿನಾದ್ಯಂತ ಫೇಸ್‍ಬುಕ್ ಕುಟುಂಬದ ಆ್ಯಪ್‍ಗಳು ಅಂದರೆ ಫೇಸ್‍ಬುಕ್, ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಮ್‌ಗಳು ಥಟ್ ಎಂದು ತಟಸ್ಥವಾದವು. ಸುಮಾರು ಆರು ಗಂಟೆಗಳ ಅವಧಿಗೆ ಅವ್ಯಾವೂ ಕೆಲಸ ಮಾಡಲಿಲ್ಲ. ಹಲವರ ಪಾಲಿಗೆ ಜಗತ್ತೇ ಇಲ್ಲವಾಯಿತು!

ಇಪ್ಪತ್ತೊಂದನೇ ಶತಮಾನದಲ್ಲಿ ಹೇಗೆ ನಮಗೆ ತಂತ್ರಜ್ಞಾನ ಇಲ್ಲದ ಜೀವನ ಊಹಿಸಲಾಗದೋ, ಹಾಗೆ ಸಾಮಾಜಿಕ ಜಾಲತಾಣ(ಸೋಶಿಯಲ್ ಮೀಡಿಯಾ)ಗಳು ಇಲ್ಲದೆ ಕಳೆವ ದಿನವನ್ನು ಊಹಿಸುವುದೂ ಕಷ್ಟವೆನಿಸುತ್ತದೆ. ಆದರೂ ಈ ಸೋಶಿಯಲ್ ಮೀಡಿಯಾದಿಂದ ಕೆಲವು ಗಂಟೆಗಳ ಬ್ರೇಕ್ ಅಗತ್ಯವಿತ್ತು. ಸೋಶಿಯಲ್ ಮೀಡಿಯಾ ಇಲ್ಲದೆ ಕಾಲ ಕಳೆಯುವುದು ಸಾಧ್ಯವಿದೆ ಎಂದು ಅರಿತಂತಾಯ್ತು. ಮನಸ್ಸು ಡೀಟಾಕ್ಸ್ ಆಗಲು ಸಮಯ ನೀಡಿದ ಹಾಗಾಯಿತು. ಮೊಬೈಲ್‍ನಿಂದ ತಲೆಯೆತ್ತಿ ಸುತ್ತಮುತ್ತಲ ಜಗತ್ತನ್ನು ನೋಡಿದಂತಾಯ್ತು. ಮನೆಯ ಕುಟುಂಬದ ಸದಸ್ಯರೊಂದಿಗೆ ಕುಳಿತು, ಸಂತಸದಿಂದ ಮಾತನಾಡುವುದಕ್ಕೆ ಪುರುಸೊತ್ತು ಸಿಕ್ಕಿತು. ಒಟ್ಟಿಗೆ ಕುಳಿತು ಊಟ ಮಾಡುವುದನ್ನು ಮರೆತೇ ಹೋಗಿರುವ ನಮಗೆ, ಹಾಗೆ ಮಾಡಲು ಇದೊಂದು ಅವಕಾಶವಾದಂತಾಯ್ತು.

ಇದೂ ‘ವರ್ತನಾ ವ್ಯಸನ’ ಆಗಬಹುದು!

ಇಂದು ಕೇವಲ ಒಂದು ಬಟನ್ ಒತ್ತುವುದರಿಂದ ಜಗತ್ತಿನ ಇನ್ನೊಂದು ಮೂಲೆಯಲ್ಲಿರುವ ನಮ್ಮ ಸ್ನೇಹಿತರ ಜೊತೆ ಮಾತನಾಡಬಹುದು, ಸಂಬಂಧಗಳನ್ನು ಸ್ಥಾಪಿಸಬಹುದು. ನಮ್ಮ ಪ್ರತಿಭೆಯನ್ನು ತೋರಿಸಿ ಭೇಷ್ ಪಡೆಯಬಹುದು. ಹೀಗೆ ಒಂದೇ ಎರಡೇ ಸೋಶಿಯಲ್ ಮೀಡಿಯಾದ ಲಾಭಗಳು? ಆದರೆ ನೆನಪಿಡಿ! ಈ ಸೋಶಿಯಲ್ ಮೀಡಿಯ ಎರಡು ಅಲುಗಿನ ಕತ್ತಿಯಿದ್ದಂತೆ. ಸೋಶಿಯಲ್ ಮೀಡಿಯಾ ಕೂಡ ಮಾದಕವಸ್ತುಗಳಂತೆ ವ್ಯಸನವಾಗಬಹುದು. ಹದಿಹರೆಯದ ವಿದ್ಯಾರ್ಥಿಗಳಲ್ಲಂತೂ ಇದೊಂದು ಕ್ರೇಜ್ ಆಗಿಬಿಟ್ಟಿದೆ. ಮನೋವೈದ್ಯಕೀಯ ಶಾಸ್ತ್ರದ ಪ್ರಕಾರ ‘ವರ್ತನಾ ವ್ಯಸನ’ಗಳಲ್ಲಿ (Behavioural Addiction) ಇದೂ ಒಂದು. ಈ ವ್ಯಸನದಿಂದಾಗಿ ಕಲಿಕೆಯಲ್ಲಿ ತೊಂದರೆ, ಕುಟುಂಬದ ಬಗ್ಗೆ ನಿರ್ಲಕ್ಷ್ಯ, ಉದ್ಯೋಗದಲ್ಲಿ ಸಮಸ್ಯೆ, ಒಂಟಿಯಾಗಿರುವಿಕೆ, ಕುತ್ತಿಗೆ ನೋವು, ದೃಷ್ಟಿದೋಷಗಳು, ನಿದ್ರೆಯ ಸಮಸ್ಯೆಗಳು ಮುಂತಾದ ಸಮಸ್ಯೆಗಳು ಕಾಡಬಹುದು.

ಸೋಶಿಯಲ್ ಮೀಡಿಯಾ ಬಳಕೆಗೆ ಸಂಬಂಧಪಟ್ಟಂತೆ ಈ ಕೆಳಗಿನ ಯಾವುದಾದರೂ ಪ್ರಶ್ನೆಗಳಿಗೆ ಉತ್ತರ ಹೌದಾದಲ್ಲಿ ತಕ್ಷಣವೇ ಎಚ್ಚೆತ್ತುಕೊಳ್ಳಿ.
1) ದಿನದಲ್ಲಿ ಗಂಟೆಗಟ್ಟಲೆ ಈ ಸೋಶಿಯಲ್ ಮೀಡಿಯಾ ಬಳಸುತ್ತಿರುವಿರಾ?
2) ಯಾವಾಗಲೂ ಫೇಸ್‍ಬುಕ್, ವಾಟ್ಸ್ಆ್ಯಪ್‌ಗಳ ಬಗ್ಗೆಯೇ ಮನಸ್ಸು ಯೋಚಿಸುತ್ತದೆಯೇ? ‘ಫೋಟೊಗೆ ಲೈಕ್ ಬಂತೇ?’ ‘ಯಾರು ಕಮೆಂಟ್ ಮಾಡಿದರು?’ ಎಂದು ಸದಾ ಮೊಬೈಲ್ ನೋಡುತ್ತೀರೇ?
3) ಯಾವಾಗ ಇಂಟರ್ನೆಟ್ ಇಲ್ಲವೋ ಆಗ ಮನಸ್ಸು ಚಡಪಡಿಸುತ್ತದೆಯೇ?
4) ಯಾವಾಗಲೂ ಈ ಸೋಶಿಯಲ್ ಮೀಡಿಯಾ ಬೇಕೇ ಬೇಕೆಂಬ ಅತಿಯಾದ ಹಂಬಲ ಕಾಡುತ್ತದೆಯೇ?
5) ದಿನೇ ದಿನೇ ಇದರ ಬಳಕೆ ಹೆಚ್ಚುತ್ತಿದೆಯೇ?
6) ಎಲ್ಲಾ ಹಾನಿಕಾರಕ ಪರಿಣಾಮಗಳನ್ನು ತಿಳಿದೂ, ಸೋಶಿಯಲ್ ಮೀಡಿಯಾ ಬಳಕೆಗೆ ಕಡಿವಾಣ ಹಾಕಲಾಗುತ್ತಿಲ್ಲವೇ?

ಪರಿಹಾರ ಇದೆಯೇ?

ಸೋಶಿಯಲ್ ಮೀಡಿಯಾಗಳನ್ನು ಸಂಪೂರ್ಣವಾಗಿ ಬಿಡುವ ಅಗತ್ಯವಿಲ್ಲ. ಆದರೆ ಅದರಲ್ಲಿ ಕಳೆಯುವ ಸಮಯಕ್ಕೆ ನಾವು ಮಿತಿ ಹಾಕಿಕೊಳ್ಳಬೇಕಿದೆ.

ಜನರ, ಸಂಬಂಧಗಳ ಬದಲೀ ವ್ಯವಸ್ಥೆಯಾಗಿ ನಾವು ಈ ಸೋಶಿಯಲ್ ಮೀಡಿಯಾಗಳನ್ನು ಬಳಸಬಾರದು.

ಮನೆಯಲ್ಲಿ, ಊಟ ಮಾಡುವ ಸಮಯದಲ್ಲಿ ಡೇಟಾ ಆಫ್ ಮಾಡುವ ಪ್ರವೃತ್ತಿ ಬೆಳೆಸಿಕೊಂಡರೆ ಒಳಿತು.

ರಾತ್ರಿಯಂತೂ ಮಲಗುವುದಕ್ಕೆ ಒಂದು ಗಂಟೆ ಮುಂಚೆ ಮೊಬೈಲ್‌ ಅನ್ನು ನೋಡದಿದ್ದರೆ ಆಹ್ಲಾದಕರವಾದ ನಿದ್ರೆ ಬರುವುದು ಖಂಡಿತ.

ಆಗಾಗ ಈ ಮೊಬೈಲ್‍ನ ಡೇಟಾ ಆಫ್ ಮಾಡಿ ನಮ್ಮ ಮನೋಬಲವನ್ನು ಪರೀಕ್ಷಿಸುವುದೂ ಅಗತ್ಯ.

ಹದಿಹರೆಯದ ಮಕ್ಕಳಿಗಂತೂ ಈ ಸೋಶಿಯಲ್ ಮೀಡಿಯಾ ಬಳಕೆಯ ಬಗ್ಗೆ, ಅದರ ಸಾಧಕ ಬಾಧಕಗಳ ಬಗ್ಗೆ ಸವಿವರವಾಗಿ ತಿಳಿಸುವುದು ಅವಶ್ಯಕ.


ವಾಟ್ಸ್‌ಆ್ಯಪ್‌, ಫೇಸ್‍ಬುಕ್, ಇನ್‍ಸ್ಟಾಗ್ರಾಂ ಇಲ್ಲದೇ ಜಗತ್ತನ್ನು ಕಲ್ಪಿಸಿಕೊಳ್ಳುವುದಕ್ಕೆ ಹಲವರಿಗೆ ಕಷ್ಟ. ಈ ಆರು ಗಂಟೆಗಳ ಕಾಲ, ಸೋಶಿಯಲ್ ಮೀಡಿಯಾಗೆ ಬ್ರೇಕ್ ಬಿತ್ತಲ್ಲ, ಅದು ನಮಗೆ ಸಾಕಷ್ಟು ಕಲಿಸಿದೆ. ಅಸಾಧ್ಯ ಎಂದುಕೊಂಡದ್ದು ಸಾಧ್ಯವಿದೆ ಎಂದು ತೋರಿಸಿದೆ. ಸೋಶಿಯಲ್ ಮೀಡಿಯಾದ ಹೊರಗೆ ಜಗತ್ತಿತ್ತು; ಈಗ ಇದೆ; ಮತ್ತೆ ಮುಂದೆಯೂ ಇರುತ್ತದೆ ಎಂಬುದನ್ನು ದೃಢಪಡಿಸಿದೆ. ಸಂತಸದಿಂದಿರಲು ಕೇವಲ ಸೋಶಿಯಲ್ ಮೀಡಿಯಾದ ಲೈಕ್‍ಗಳು ಬೇಕಿಲ್ಲ. ಮೊಬೈಲ್ ಆಫ್ ಮಾಡಿ, ಸುತ್ತಮುತ್ತಲಿನ ಸಹೃದಯರೊಂದಿಗೆ ಬೆರೆಯಬೇಕಷ್ಟೆ! ಹೊರಗಣ್ಣು ಮುಚ್ಚಿ, ಮನಸ್ಸಿನ ಒಳಗಣ್ಣು ತೆರೆದು ನೋಡಬೇಕಷ್ಟೇ!!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT