ಬುಧವಾರ, ಏಪ್ರಿಲ್ 1, 2020
19 °C

ಶ್ರವಣ ದೋಷ: ಶೀಘ್ರ ಪತ್ತೆಯೇ ಪರಿಹಾರ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

Prajavani

ಇಲ್ಲಿ ಕೇಳಿ! ಪ್ರತಿ ಸಾವಿರ ಮಕ್ಕಳಲ್ಲಿ ಒಂದು ಮಗು ಶ್ರವಣ ದೋಷದೊಂದಿಗೆ ಹುಟ್ಟುತ್ತದೆ. ಇದೀಗ ಭುವಿಗೆ ಇಳಿದ ಕಂದನೇ ಆಗಲಿ, ಸಂಧ್ಯಾಕಾಲ ತಲುಪಿದ ಹಿರಿಯರೇ ಇರಲಿ, ಶ್ರವಣ ಶಕ್ತಿ ಜೀವನದ ಗುಣಮಟ್ಟವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಹಾಗೂ ನಿಮ್ಮವರ ಕಿವಿಯ ಮೇಲೆ ಒಂದು ಕಣ್ಣಿರಲಿ. ಈ ಬಗ್ಗೆ ಕೆಲವು ಮಹತ್ವದ ಸಲಹೆ–ಸೂಚನೆಗಳನ್ನು ಕೊಟ್ಟಿದ್ದಾರೆ ಡಾ. ಎಸ್‌.ಆರ್‌. ಚಂದ್ರಶೇಖರ್ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ಕೇಂದ್ರದ ಪಿನ್ಸಿಪಾಲ್‌ ಡಾ. ರಶ್ಮಿ ಭಟ್‌.

* ಶ್ರವಣ ದೋಷ ಕಾಣಿಸಿಕೊಳ್ಳಲು ಇರುವ ಮುಖ್ಯ ಕಾರಣಗಳೇನು?
ವಯಸ್ಸು, ಅನಾರೋಗ್ಯ, ಕೆಲವು ಔಷಧಿಗಳು, ವೈದ್ಯಕೀಯ ಇತಿಹಾಸ ಸೇರಿದಂತೆ ಕೆಲವು ಪರಿಸ್ಥಿತಿಗಳು ಶ್ರವಣ ನಷ್ಟಕ್ಕೆ ಕಾರಣವಾಗುತ್ತವೆ. ಇತ್ತೀಚೆಗೆ ನಮ್ಮ ಸುತ್ತಲಿನ ವಾತಾವರಣ, ಅಂದರೆ ನಾವು ವಾಸಿಸುವ ಅಥವಾ ಕೆಲಸ ಮಾಡುವ ಸ್ಥಳದಲ್ಲಿನ ನಿರಂತರವಾದ ಶಬ್ದ ಮಾಲಿನ್ಯವೂ ಕಿವುಡುತನಕ್ಕೆ ಕಾರಣವಾಗುತ್ತಿದೆ.

ಇನ್ನು ಹುಟ್ಟಿದ ಮಕ್ಕಳಲ್ಲಿ ಜಾಂಡೀಸ್‌, ವಂಶವಾಹಿ, ಸೋಂಕು ಮುಂತಾದ ಕಾರಣಗಳಿಂದ ಶ್ರವಣ ದೋಷದ ಸಮಸ್ಯೆ ಎದುರಾಗುತ್ತದೆ. ರಕ್ತಸಂಬಂಧಿಗಳಲ್ಲಿ ಮದುವೆಯಾಗುವುದೂ ಸಹ ಮಕ್ಕಳ ಶ್ರವಣ ದೋಷಕ್ಕೆ ಬಹುಮುಖ್ಯ ಕಾರಣ ಎನ್ನುವುದನ್ನು ಮರೆಯಬಾರದು. ಹುಟ್ಟಿದ ತಕ್ಷಣ ಮಕ್ಕಳು ಅಳದಿದ್ದರೆ ಕಾಕ್ಲಿಯರ್‌ಗೆ ರಕ್ತ ಪೂರೈಕೆ ಆಗದೇ ಇರುವುದೂ ಸಹ ಅಪಾಯದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

*‌ ಶ್ರವಣ ದೋಷವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದು ಹೇಗೆ?
ಮಗು ಹುಟ್ಟಿದ ಕೆಲ ದಿನಗಳಲ್ಲೇ ಶ್ರವಣ ದೋಷ ಪರೀಕ್ಷೆಯನ್ನು ನಡೆಸಬೇಕು. ಅದನ್ನು ಒಎಇ (Oto acoustic Emissions) ಪರೀಕ್ಷೆ ಎನ್ನಲಾಗುತ್ತದೆ. ಇತರ ದೇಶಗಳಲ್ಲಿ ಹುಟ್ಟಿದ ಎರಡನೇ ದಿನಕ್ಕೇ ಈ ಪರೀಕ್ಷೆಯಿಂದ ಮಕ್ಕಳ ಶ್ರವಣ ಸಾಮರ್ಥ್ಯವನ್ನು ಅಳೆಯಲಾಗುತ್ತದೆ. ಈ ಪದ್ಧತಿ ನಮ್ಮಲ್ಲಿನ್ನೂ ಅಷ್ಟೊಂದು ಮಹತ್ವ ಪಡೆದುಕೊಂಡಿಲ್ಲ.

ಇನ್ನು ವೃದ್ಧರಲ್ಲಿನ ಶ್ರವಣ ದೋಷವನ್ನು ಕುಟುಂಬದವರು, ಸ್ನೇಹಿತರು ಸಾಧ್ಯವಾದಷ್ಟು ಬೇಗ ಗುರುತಿಸಬೇಕು. ಮಾತನ್ನು ಅವರು ಮತ್ತೊಮ್ಮೆ ಮಗದೊಮ್ಮೆ ಕೇಳಿದಾಗ ತಮಾಷೆ ಮಾಡಿ ಸುಮ್ಮನಾಗದೇ ಪರೀಕ್ಷೆಗೆ ಕರೆದೊಯ್ಯಬೇಕು. ಶ್ರವಣದೋಷದ ತೀವ್ರತೆ ಹೆಚ್ಚಿದಂತೆ ಅದರ ಚಿಕಿತ್ಸೆ ಸವಾಲಾಗುತ್ತ ಹೋಗುತ್ತದೆ.

* ಶ್ರವಣ ದೋಷದ ಪ್ರಮಾಣವನ್ನು ಅಳೆಯುವುದು ಹೇಗೆ?
ಶ್ರವಣ ದೋಷದ ಪ್ರಮಾಣವನ್ನು ಅಳೆಯಲು ನಿರ್ದಿಷ್ಟ ಪರೀಕ್ಷೆಗಳಿವೆ. ತೊಂದರೆ ಹೊರಕಿವಿಯಲ್ಲಿದೆಯೆ, ಮಧ್ಯಕಿವಿಯಲ್ಲಿದೆಯೇ ಅಥವಾ ಒಳಕಿವಿಯಲ್ಲಿದೆಯೇ ಎನ್ನುವುದನ್ನು ನೋಡಬೇಕಾಗುತ್ತದೆ. ಒಂದೇ ಕಿವಿ ಸಮಸ್ಯೆಗೆ ಒಳಪಟ್ಟಿದೆಯೇ ಅಥವಾ ಎರಡೂ ಕಿವಿಗಳಲ್ಲಿ ತೊಂದರೆ ಇದೆಯೇ ಎನ್ನುವುದೂ ಮುಖ್ಯ. ಇದನ್ನೆಲ್ಲ ಪರೀಕ್ಷಿಸಿ ಶ್ರವಣ ದೋಷದ ಪ್ರಮಾಣವನ್ನು ಅಳೆಯಲಾಗುತ್ತದೆ. ಹೊರಕಿವಿ ಅಥವಾ ಮಧ್ಯಕಿವಿಯಲ್ಲಿ ತೊಂದರೆ ಇದ್ದರೆ ಅದನ್ನು ಕಂಡಕ್ಟಿವ್ ಲಾಸ್ (Conductive Hearing Loss) ಎನ್ನಲಾಗುತ್ತದೆ. ಗುಗ್ಗೆ, ಸೋಂಕು ಇತ್ಯಾದಿ ಬಾಹ್ಯ ಕಾರಣಗಳಿಂದ ಈ ಸ್ಥಿತಿ ಉಂಟಾಗುತ್ತದೆ. ಔಷಧ ಅಥವಾ ಶಸ್ತ್ರಚಿಕಿತ್ಸೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದು.

ಒಳಕಿವಿಯ ಕಾಕ್ಲಿಯ ಅಥವಾ ನರದಲ್ಲಿ ಉಂಟಾಗುವ ಸಮಸ್ಯೆಗಳಿಂದ ಉಂಟಾಗುವ ದೋಷಕ್ಕೆ ಸಂವೇದನಾಶೀಲ ಶ್ರವಣ ನಷ್ಟ (sensorineural hearing loss) ಎನ್ನಲಾಗುತ್ತದೆ. ಇದಕ್ಕೆ ಕಾಕ್ಲಿಯದಲ್ಲಿನ ಕೋಶಗಳ ಸಾಯುವಿಕೆ, ವಯಸ್ಸಾಗುವುದು ಅಥವಾ ತೀವ್ರತರವಾದ ಶಬ್ದಗಳಿಗೆ ಒಡ್ಡಿಕೊಳ್ಳುವುದು ಕಾರಣ. ಕೆಲವೊಮ್ಮೆ ಈ ಎರಡೂ ದೋಷಗಳು ಒಟ್ಟಿಗೇ ಕಾಣಿಸಿಕೊಳ್ಳಬಹುದು. ಈ ರೀತಿಯ ಮಿಶ್ರ ಶ್ರವಣದೋಷದ ತೀವ್ರತೆಯನ್ನು ಆಧರಿಸಿ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ.

* ಚಿಕಿತ್ಸೆ ಅಥವಾ ಪರಿಹಾರ ಮಾರ್ಗಗಳೇನು?
ಶೀಘ್ರ ಪತ್ತೆ ಹಚ್ಚುವುದೇ ಮೊದಲ ಪರಿಹಾರ ಮಾರ್ಗ ಎಂದು ಹೇಳಬಹುದು. ಎಷ್ಟು ಬೇಗ ಸಮಸ್ಯೆಯನ್ನು ಗುರುತಿಸುತ್ತೇವೆಯೊ ಗುಣಮುಖವಾಗುವ ಸಾಧ್ಯತೆ ಅಷ್ಟು ಹೆಚ್ಚುತ್ತದೆ.ಕೆಲವು ಸಂದರ್ಭಗಳಲ್ಲಿ ಔಷಧಿಗಳೇ ಕೆಲಸ ಮಾಡುತ್ತವೆ. ಕೆಲವರಿಗೆ ಶ್ರವಣ ಸಾಧನಗಳ ಅಗತ್ಯ ಬೀಳುತ್ತದೆ. ಇನ್ನೂ ಕೆಲವರಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಶಸ್ತ್ರಚಿಕಿತ್ಸೆಯೇ ಅನಿವಾರ್ಯವಾಗುತ್ತದೆ.

* ಏನಿದು ಕಾಕ್ಲಿಯರ್‌ ಇಂಪ್ಲಾಂಟ್‌?
ಕಾಕ್ಲಿಯರ್ ಇಂಪ್ಲಾಂಟ್ ಒಂದು ಸಣ್ಣ, ಆದರೆ ಅಷ್ಟೇ ಸಂಕೀರ್ಣವಾದ ಎಲೆಕ್ಟ್ರಾನಿಕ್ ಸಾಧನವಾಗಿದ್ದು, ಇದು ಶ್ರವಣದೋಷವುಳ್ಳ ವ್ಯಕ್ತಿಗೆ ಶಬ್ದದ ಪ್ರಜ್ಞೆಯನ್ನು ಒದಗಿಸಲು ಸಹಾಯ ಮಾಡುತ್ತದೆ. ಸಾಧನದ ಒಂದು ಭಾಗವನ್ನು ಕಿವಿಯ ಹಿಂದೆಯೂ, ಇನ್ನೊಂದು ಭಾಗ ಶಸ್ತ್ರಚಿಕಿತ್ಸೆಯ ಮೂಲಕ ಚರ್ಮದ ಅಡಿಯಲ್ಲಿಯೂ ಇರಿಸಲಾಗುತ್ತದೆ. ಈ ಶಸ್ತ್ರಚಿಕಿತ್ಸೆಗೆ 2–3 ಗಂಟೆ ಹಿಡಿಯುತ್ತದೆ. ನಂತರ ಸುಮಾರು ಒಂದು ತಿಂಗಳ ನಂತರ ಸಾಧನವನ್ನು ಅಳವಡಿಸಲಾಗುತ್ತದೆ.

* ಕಾಕ್ಲಿಯರ್‌ ಇಂಪ್ಲಾಂಟ್‌ ಶಸ್ತ್ರಚಿಕಿತ್ಸೆ ತುಂಬಾ ದುಬಾರಿಯಲ್ಲವೆ?
ಹೌದು, ₹6 ಲಕ್ಷದಿಂದ 12 ಲಕ್ಷದವರೆಗೆ ವೆಚ್ಚ ಬರಬಹುದು. ಆದರೆ ಇದಕ್ಕೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ನಿಧಿಯಿಂದ, ರಾಜ್ಯದ ಮುಖ್ಯಮಂತ್ರಿಗಳ ನಿಧಿಯಿಂದ ಧನ ಸಹಾಯ ಲಭ್ಯವಿದೆ. ನಮ್ಮ ಸಂಸ್ಥೆಯಿಂದ ಸಾಕಷ್ಟು ಜನರಿಗೆ ಇದರ ಲಾಭ ದೊರಕುವಂತೆ ಮಾಡಿದ್ದೇವೆ.

* ಚಿಕಿತ್ಸೆಯ ನಂತರ ಮಕ್ಕಳು ಥೆರಪಿಗೆ ಒಳಪಡುವ ಅಗತ್ಯವಿದೆಯೇ?
ಹೌದು, ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚಿಕಿತ್ಸೆಯ ನಂತರ ಆಡಿಟರಿ ವರ್ಬಲ್‌ ಥೆರಪಿಗೆ (ಎವಿಪಿ) ಒಳಪಡಿಸುವುದು ಮುಖ್ಯ. ಸಾಧನ ಅಥವಾ ಶಸ್ತ್ರಚಿಕಿತ್ಸೆ ಮಕ್ಕಳಿಗೆ ಶಬ್ದಗಳು ಕೇಳುವಂತೆ ಮಾಡುತ್ತವೆ. ಆದರೆ ಆ ಶಬ್ದಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನು ಕಲಿಸಲು ಥೆರಪಿ ಸಹಾಯ ಬೇಕೇಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು