ಗುರುವಾರ , ಏಪ್ರಿಲ್ 15, 2021
20 °C

ಶ್ರಾವಣದ ಹೊಸ್ತಿಲಪೂಜೆಗೆ ಹತ್ತು ಹೂಗಳು

ಡಾ. ಗೀತಾ ಸತ್ಯ Updated:

ಅಕ್ಷರ ಗಾತ್ರ : | |

ಆಗ ನಾನು ಪುಟ್ಟ ಬಾಲಕಿ. ‘ಧೋ ಧೋ’ ಎಂದು ಆಗಸದಿಂದ ಜಲಪಾತದಂತೆ ಸುರಿಯುವ ನಟ್ಟ ನಡು ಮಳೆಗಾಲದ ದಿನಗಳವು. ಅಮ್ಮ ಮಾಡುತ್ತಿದ್ದ ಹೊಸ್ತಿಲಪೂಜೆಯನ್ನು ಕುತೂಹಲದಿಂದ ಗಮನಿಸುತ್ತಿದ್ದೆ. ಅಮ್ಮ ಮಿಂದು ಮಡಿಯಾಗಿ ಬರುತ್ತಿದ್ದರು. ಹೊಳೆಯುವ ಹಿತ್ತಾಳೆಯ ಗಿಂಡಿ ತುಂಬ ನೀರು. ಅದರಿಂದ ಮನೆಯ ಹೆಬ್ಬಾಗಿಲ ಹೊಸ್ತಿಲು ತೊಳೆಯುತ್ತಿದ್ದರು. ತೇವದ ಜೇಡಿಯ ಕಡ್ಡಿಗಳಿಂದ ನಾನಾ ಚಿತ್ತಾರಗಳನ್ನು, ಪದ್ಮ, ಗರಿಕೆಯ, ಚಕ್ರದ ಆಕಾರಗಳನ್ನು ಬರೆಯುತ್ತಿದ್ದರು. ಹೊಸ್ತಿಲಿಗೆ ಅರಸಿನ–ಕುಂಕುಮದ ಸಿಂಗಾರ. ಅನಂತರ ಹಚ್ಚುವ ದೀಪಾಲಂಕಾರ. ಬಾಳೆಲೆಯಲ್ಲಿ ತುಂಬಿದ ಸಸ್ಯಗಳನ್ನು, ಹೂವುಗಳನ್ನು ಹೊಸ್ತಿಲ ಇಕ್ಕೆಲದಲ್ಲಿ ಹರಡಿ ನಮಸ್ಕರಿಸುತ್ತಿದ್ದರು. ದಿನಕ್ಕೊಂದು ಬಗೆಯ ನೈವೇದ್ಯದ ಪ್ರಸಾದದ ರುಚಿ. ಅದು ಹಲಸಿನ ಬೀಜದ್ದೋ ಬಾಳೆಯ ಹಣ್ಣಿನದೋ ಇರುತ್ತಿತ್ತು. ಮಳೆಗಾಲದಲ್ಲಿ ಹಸಿವೆ ಹೆಚ್ಚೇ ಇರುತ್ತದೆಯಲ್ಲ. ಅಂತಹ ತಿಂಡಿಗಳು ಮತ್ತು ಹೊಸ್ತಿಲಪೂಜೆ ಅಮ್ಮನ ಅಡುಗೆಯ ಮಾಸದ ನೆನಪುಗಳಾಗಿವೆ.

ಹೊಸ್ತಿಲಪೂಜೆ ಮುಗಿಯುವ ತನಕ ಯಾರೊಬ್ಬರೂ ಅತ್ತಿಂದಿತ್ತ ದಾಟಬಾರದು. ಅಂತಹ ಕಾಯುವ ಘನಕಾರ್ಯ ಕೂಡ ನನ್ನದಾಗಿತ್ತು. ಅನಂತರದ ದಿನಗಳಲ್ಲಿ ಅಮ್ಮ ನನಗೇ ಹೇಳತೊಡಗಿದರು. ಅವರು ಪೂಜೆಗೆ ಬಳಸುತ್ತಿದ್ದ ಗಿಡಮೂಲಿಕೆಗಳನ್ನು ನಾನೇ ಅಂಗಳ, ಮನೆ ಹಿಂದಣ ಗುಡ್ಡದಲ್ಲಿ ಅರಸತೊಡಗಿದೆ. ಅದರ ಹೆಸರುಗಳನ್ನೂ ಅವರಿಂದಲೇ ಕೇಳಿ ತಿಳಿಯುತ್ತಿದ್ದೆ. ಒಂದೆರಡು ಬಾರಿ ತಪ್ಪು ಗಿಡಗಳು ಸಂಗ್ರಹವಾದಾಗ ಅವರಿಂದ ಅಕ್ಕರೆಯ ಬೈಗುಳವನ್ನೂ ಪಡೆದಿದ್ದೆ. ಅನಂತರ ಕರಾರುವಾಕ್ಕಾಗಿ ಎಲ್ಲ ಸಸ್ಯಗಳನ್ನೂ ಗುರುತಿಸುವ ಛಾತಿಯನ್ನು ಕಲಿತೆ. ಬಾಳೆಯ ಎಲೆಯ ತುಂಬ ಅಂತಹ ಸಸ್ಯಗಳನ್ನು ಗುಡ್ಡೆ ಹಾಕಿಕೊಂಡು ಹೊಸ್ತಿಲ ಬಳಿ ಇಡುತ್ತಿದ್ದೆನು. ಇಂದು ಅಮ್ಮನಿಲ್ಲ. ಆದರೆ ಆಕೆ ಹೊಸ್ತಿಲಪೂಜೆಗೆ ಬಳಸುತ್ತಿದ್ದ ಎಲ್ಲ ಬಗೆಯ ಸಸ್ಯಗಳೂ ಜೀವರಕ್ಷಕ ಸಂಜೀವಿನಿಯಾಗಿವೆ. ವಿಶೇಷವಾಗಿ ಮಹಿಳೆಯರ ಆರೋಗ್ಯವನ್ನು ಕಾಪಾಡುವ ಹಸುರುಮದ್ದುಗಳಾಗಿವೆಯಲ್ಲ!

ಅಗೋ, ಅದು ಆನೆಮೊಗದ ಗಣೇಶನ ಪೂಜೆಗೊದಗುವ, ಆತನಿಗೆ ಅತಿಶಯ ಪ್ರೀತಿಯ ಗರಿಕೆ. ಅದರ ಎಳೆಯ ಚಿಗುರು ಆಯ್ದು ತಂದು ಹೊಸ್ತಿಲಿನ ಮೇಲೆ ಅದೇ ರೀತಿಯ ಚಿತ್ತಾರ ಸಹ ಬರೆದು ಪೂಜೆಗೆ ಬಳಸುವೆವು. ಹದಿ ಹರೆಯದ ಕಿಶೋರಿಯಾಗಿದ್ದಾಗ ಮೊದಲ ಬಾರಿ ಮುಟ್ಟಿನ ಸ್ರಾವದ ದಿನಗಳಲ್ಲಿ ಏಳೇಳು ದಿನ ಕೆಂಪನೆಹೋಗಿತ್ತಲ್ಲ. ಎಳೆ ಎಳೆ ಗರಿಕೆ ತಂದು ಅಮ್ಮ ರುಬ್ಬುಕಲ್ಲಲ್ಲಿ ಅರೆದು ರಸವನ್ನು ತೆಗೆದು ಲೋಟ ತುಂಬ ಕುಡಿಸಿದರು. ಮುಟ್ಟಿನ ಸ್ರಾವ ತಟ್ಟನೆ ನಿಂತಿತ್ತಲ್ಲ! ಹಾಗಾದರೆ ಅದೇ ಕಾರಣಕ್ಕೆ ನಾವು ಇಂತಹ ಹುಲ್ಲಿನ ದೂರ್ವೆಯ ಪೂಜೆ ಬಳಕೆ ಮಾಡುತ್ತಿದೇವೆಯೆ? ಮಳೆಗಾಲದಲ್ಲಿ ನೀರು ಕುಡಿಯುವುದು ಸಹಜವಾಗಿ ಕಡಿಮೆ. ಹಾಗಾಗಿ ಉರಿಮೂತ್ರ, ಮೂತ್ರಕೋಶದ ಸೋಂಕು, ಮೂತ್ರದ ಕಲ್ಲಿನ ತೊಂದರೆ ಉಲ್ಬಣ. ದೂರ್ವೆಯನ್ನು ಅರೆದು ಕುಡಿಸಿ ಮನೆಮದ್ದಿನ ಮೂಲಕ ಅಂತಹ ತೊಂದರೆ ನೀಗುವ ಬಗ್ಗೆ ಅಮ್ಮನಿಂದ ಕೇಳಿ ತಿಳಿದವಳು ನಾನು.


ಭೃಂಗರಾಜ

ಹೊಸ್ತಿಲಪೂಜೆಯ ಮತ್ತೊಂದು ಗಿಡ ಸಹದೇವೀ. ನೇರಳೆಬಣ್ಣದ ಚಂದದ ಗೊಂಡೆಯಾಕಾರದ ಹೂವು. ವೇದಕಾಲದಿಂದ ಮಾನವಸಮುದಾಯವು ಸಹದೇವಿಯ ಬಳಕೆ ಮಾಡುತ್ತಿದ್ದರು. ಮುಟ್ಟಿನ ನೋವಿನ ಪರಿಹಾರಕ್ಕೆ ಸೊಂಟಕ್ಕೆ ಕಟ್ಟುವ ಮೂಲಿಕೆ ಇದಾಗಿತ್ತಂತೆ. ಅದರ ಹಾರ್ಮೋನು ಸುರಿತದ ಶಕ್ತಿ ಬಗ್ಗೆ ಇನ್ನೂ ಅರಿತವರಿಲ್ಲ. ಆ ಬಗ್ಗೆ ಅಧ್ಯಯನ ನಡೆದೇ ಇಲ್ಲ.

ಬಿಳಿಯ ಪುಟಾಣಿಹೂವಿನ ಸುಂದರ ಸಸ್ಯದ ಹೆಸರು ‘ಗರುಗ’. ಕಾಡಿಗ್ಗರುಗ, ಭೃಂಗರಾಜ ಹೆಸರಿನ ಹೂವು ಇಂದಿಗೂ ಮಹಿಳೆಯರಿಗೆ ಪರಿಚಿತ. ನೀಳಕೇಶರಾಶಿಗೆ ಈ ಗಿಡದ ಸಂಬಂಧ ತಳುಕು ಹಾಕಿಕೊಂಡಿದೆ. ಕಬ್ಬಿಣದಂಶ ಹೇರಳವಾಗಿರುವ ಈ ಗಿಡವನ್ನು ಆಯುರ್ವೇದವು ಉತ್ತಮ ಲಿವರ್ ಟಾನಿಕ್ ಎಂದು ಭಾವಿಸಿದೆ. ಅದರ ತಂಬುಳಿಯು ರಾಜ್ಯದಾದ್ಯಂತ ಮಹಿಳೆಯರಿಗೆ ಪರಿಚಿತ ಹಸಿರುಖಾದ್ಯ.

ಇನ್ನೆರಡು ಸಸ್ಯಗಳ ಹೆಸರು ಓದಿರಿ. ಮೊದಲನೆಯದು ‘ಹರಿಕಾಂತಾ’, ಎರಡನೆಯದು ‘ಲಕ್ಷ್ಮಣಾ’! ಹರಿಕಾಂತವನ್ನು ‘ವಿಷ್ಣುಕಾಂತಿಸೊಪ್ಪು’ ಎಂದೂ ಕರೆಯುವರು. ಗೋಕುಲದೊಡೆಯನಿಗೆ ಪಚ್ಚೆನೀಲದೊಡವೆ ಇದು. ಅಂತಹ ಸುಂದರ ಹೂಬಿಡುವ ನೆಲದ ಮೇಲೆ ಚಕ್ರಾಕಾರ ಬೆಳೆಯುತ್ತಾ ಹರಡುವ ಸಸ್ಯ. ಶ್ರಾವಣದ ವಿಶೇಷ ಹಬ್ಬ ಗೋಕುಲಾಷ್ಟಮಿ. ಅಂದು ಕೃಷ್ಣಾರ್ಚನೆಗೆ ಬೇಕಾದ ಸಸ್ಯ ಇದು. ಆಯುರ್ವೇದಸಂಹಿತೆಗಳ ಪ್ರಕಾರ ಮಳೆಗಾಲದ ಶೀತಜ್ವರ, ವಿಷಮಜ್ವರ ಪರಿಹಾರಿ ಹರಿಕಾಂತೆಯನ್ನು ‘ಮೇಧ್ಯ ರಸಾಯನ’, ಅಂದರೆ ‘ನೆನಪಿನ ಮೂಲಿಕೆ’ ಎಂದೇ ಪರಿಗಣಿಸಲಾಗಿದೆ. ‘ಲಕ್ಷ್ಮಣಾ’ ಎಂಬ ಬಿಳಿ ಹೂಬಳ್ಳಿಯನ್ನು ಕೇರಳಿಗರು ವಿಶೇಷ ಚಿಕಿತ್ಸೋಪಯೋಗಿ ಬಳ್ಳಿ ಎಂದು ಭಾವಿಸುವರು. ಗರ್ಭಪೋಷಿಣೀ ಎಂದು ಈ ಸಸ್ಯಕ್ಕೆ ವಿಶೇಷ ಮಹತ್ವ ಇದೆ.

ಬಿಳಿ ಹಿಂಡಿಗಿಡ ಎಂದು ಕರೆಯಿಸಿಕೊಳ್ಳುವ ಪಾಷಾಣಭೇದಿ ಹೆಸರಿನ ಎರಡಡಿ ಎತ್ತರದ ಸಸ್ಯದ ಲ್ಯಾಟಿನ್ ಹೆಸರು ‘ಏರುವಾ ಲಾನಾಟಾ’. ಹೆಸರೇ ತಿಳಿಸುವಂತೆ ಮೂತ್ರಕೋಶದ ಕಲ್ಲು, ಉರಿಮೂತ್ರ, ಮೂತ್ರಕಟ್ಟು ಕಳೆಯುವ ಅಂಗಳದ ಸಂಜೀವಿನಿ ಇದು. ‘ಮುಸಲೀ’ ಎಂದರೆ ಕಡೆಗೋಲಿನಾಕಾರದ ದಪ್ಪ ಗಡ್ಡೆಯ ಅಂದದ ಚಿನ್ನದ ಬಣ್ಣದ ಹೂಗಿಡ, ನೆಲತೆಂಗು ಎಂಬ ಸಾರ್ಥಕ ಹೆಸರು ಬರಲು ತೆಂಗಿನ ಗರಿಯಾಕಾರದ ಪುಟಾಣಿ–ಎಲೆ ಕಾರಣ. ಎಂತಹ ಅಪೌಷ್ಟಿಕತೆ ಇರಲಿ, ಹಾರ್ಮೋನು ಬದಲಾದ ಸ್ಥಿತಿ ಇರಲಿ, ನೆಲತೆಂಗು ಬಳಕೆಯಿಂದ ಫಲವತ್ತತೆ ಹೆಚ್ಚುವುದು ಶತಃಸಿದ್ಧ. ಅಂತಹ ಮೂಲಿಕೆ ಬಳಕೆ ನನ್ನಮ್ಮನಿಗೆ ತಿಳಿದಿತ್ತು. ಅಚ್ಚರಿ ಎಂದರೆ ಆಕೆಯ ಒಡಲಿನಲ್ಲಿ ಒಂಬತ್ತು ತಿಂಗಳು ಬೆಚ್ಚನೆ ಮಲಗಿದ ಹದಿನೈದನೆಯ ಕೂಸು ನಾನು! ಅಬ್ಬ, ಅದೇನು ತಾಕತ್ತು! ಅದೇನು ಗಟ್ಟಿಗಾತಿಯಾಗಿದ್ದರು ನನ್ನಮ್ಮ! ಅಮ್ಮನ ಮಂಡಿನೋವಿಗೆ ಒದಗುತ್ತಿದ್ದ ಬಳ್ಳಿಯ ಪರಿಚಯ ಅದರ ಪೂಜಾರ್ಹ ಸ್ಥಾನವನ್ನು ದಕ್ಕಿಸಿ ಕೊಟ್ಟಿರಬೇಕು.

‘ಮಿಂಚುಬಳ್ಳಿ’ ಎಂಬ ಆ ಬಳ್ಳಿಯ ತಮಿಳು ಹೆಸರು ಮಡಕತ್ತಾನ್. ಕೆಲವು ಸಮುದಾಯದವರು ಅಂತಹ ಇಡೀ ಬಳ್ಳಿಯನ್ನು ಅಕ್ಕಿಯ ಸಂಗಡ ರುಬ್ಬಿ ದೋಸೆಮಾಡಿ ತಿನ್ನುತ್ತಿದ್ದರಂತೆ. ಮಳೆಗಾಲದ ಕಾಲುನೋವು, ಕೀಲುನೋವಿಗೆ ಈ ಮಡಕತ್ತಾನ್ ಸಂಜೀವಿನಿಯೇ ಸೈ! ನನಗೆ ಬೋರಾಗುವಷ್ಟು ಬಾರಿ ಅಮ್ಮನ ಕೈಯಲ್ಲಿ ಇಲಿಕಿವಿಗಿಡದ ತಂಬುಳಿ ಊಟ ಮಾಡಿದವಳು ನಾನು. ಹೊಸ್ತಿಲಪೂಜೆಯ ಸಂದರ್ಭದಲ್ಲಿ ಅಂತಹ ಚಿನ್ನದ ಬಣ್ಣದ ಹೂಗಿಡದ ಚಿಗುರು ಬಳಕೆಯಾಗುತ್ತದೆ. ದಶಪುಷ್ಪದ ಪಟ್ಟಿಯಲ್ಲಿ ಕೊನೆಯದು ಆದರೆ ಅತಿ ಮುಖ್ಯ ಸಸ್ಯ ಒಳಮುಚ್ಚುಗ. ನನ್ನ ಪರಮಾಪ್ತ ಗೆಳತಿ ಜಾನಕಿಯ ಸಂಗಡ ತೋಟ, ಗದ್ದೆ, ಗುಡ್ಡ ಓಡಾಡುವಾಗಲೆಲ್ಲ ಈ ಸುಂದರ ಚಕ್ರಾಕಾರದ ಹಳದಿಹೂವಿನ ಸಸ್ಯವನ್ನು ಮುಟ್ಟುತ್ತಿದ್ದೆ. ಅದರ ಎಲೆಗಳು ಒಳಭಾಗಕ್ಕೆ ಮುದುಡಿ ಸಂಕೋಚಗೊಳ್ಳುವುದನ್ನು ಕಂಡು ಚಪ್ಪಾಳೆ ತಟ್ಟಿ ನಗುತ್ತಿದ್ದೆವು. ಹೊಸ್ತಿಲಪೂಜೆಗೆ ಆಯ್ದು ತರುವಾಗ ಅದು ಮುಚ್ಚಿರುತ್ತಿತ್ತು. ಕೊಂಚ ಕಾಲದಲ್ಲಿ ಮತ್ತೆ ಅರಳುತ್ತಿತ್ತು. ‘ಬಯೋಫೈಟಂ ಸೆನ್ಸಿಟಿವಂ’ ಎಂಬ ದ್ವಿನಾಮದ ಈ ಸಸ್ಯದ ತಾಂತ್ರಿಕ, ವೈದಿಕ ಮತ್ತು ವೈದ್ಯಕೀಯ ಬಳಕೆ ಬಗ್ಗೆ ಈಗ ತಿಳಿದಿದೆ.

ಇಷ್ಟೇ ಅಲ್ಲ; ಪರಶುರಾಮ ಸೃಷ್ಟಿಯೆಂದು ಖ್ಯಾತಿ ಪಡೆದ ಕರಾವಳಿ ನಾಡಿನ ಅಸಂಖ್ಯ ಸಸ್ಯಗಳು ಅಂದು ಮತ್ತು ಇಂದಿಗೂ ಶ್ರಾವಣದಲ್ಲಿ ಹೊಸ್ತಿಲಪೂಜೆಯ ಸಂದರ್ಭದಲ್ಲಿ ಮಾನಿನಿಯರ ಮನಃಪಟಲದಲ್ಲಿ ಮೂಡುತ್ತವೆ; ಆದರೆ ಹಸಿರಭೂಮಿಯಲ್ಲಿ ಈ ಮಾಸದಲ್ಲಿ ಮಾತ್ರ ಅರಳುತ್ತವೆ. ಅಂತಹ ಸಸ್ಯಗಳನ್ನು ಹುಡುಕಿ ತಂದು ಪೂಜೆಯನ್ನು ಕೈಗೊಳ್ಳುತ್ತಾರೆ. ಅದರ ವೈದ್ಯಕೀಯ ಬಳಕೆ ಮತ್ತು ಸಂಶೋಧನೆ ಇಂದಿನ ಅಗತ್ಯ. ಚೂಡಿಪೂಜೆಗೆ ಬಳಸುವ ರತ್ನಗಂಧೀಹೂಗಿಡಕ್ಕೆ ‘ರಾಜಮಲ್ಲಿಗೆ’ ಎಂಬ ಹೆಸರಿದೆ. ‘ಅಸೀಸಲ್ಪಿನಿಯ ಪಲ್ಚೆರಿಮಾ’ ಎಂಬ ಈ ಗಿಡವು ಮುಳ್ಳುಪೊದರು. ಮಂಡ್ಯಭಾಗದಲ್ಲಿ ‘ಕೆಂಜೇರಲು’ ಹೆಸರಿನ ಈ ಸಸ್ಯದ ಜನಪದ ಬಳಕೆ ಚರ್ಮದ ಕಾಯಿಲೆಗಿದೆ. ವಿಚಿತ್ರ ಅಂದರೆ ‘ಕೆಂಜೇರಲು’ ಎಂಬ ಗಂಭೀರರೋಗವನ್ನು ಜನಪದರು ಗುರುತಿಸಿ ಅದಕ್ಕೆಈ ಸಸ್ಯವನ್ನು ಬಳಸುವ ಜಾಣ್ಮೆ ಗಮನಾರ್ಹ. ಇದು ಆಯುರ್ವೇದದಲ್ಲಿ ಉಲ್ಲೇಖವಿರದ ಗಿಡ. ಇದರ ಸೋದರಸಸ್ಯದ ಹೆಸರು ‘ಸಿಸಲ್ಪಿನಿಯಾ ಸಪ್ಪನ್’. ಕೇರಳದ ಎಲ್ಲ ಹೋಟೆಲ್‍ನಲ್ಲಿ ಗಾಜಿನ ಲೋಟ ತುಂಬ ಕೆಂಪುರಂಗಿನ ಬಿಸಿನೀರನ್ನು ನೀಡುವರು. ಅಂತಹ ರಂಗಿನ ಮೂಲ ಈ ಸಪ್ಪನ್ ಕಾಂಡದ ಚಕ್ಕೆ. ಅದು ಚರ್ಮರೋಗ ತಡೆಯಬಲ್ಲ ‘ಟ್ಯಾನಿನ್’ ಮೂಲವೂ ಆಗಿದೆ. ‘ಅಡಿಯಾಂಟಂ ಲುನುಲೇಟಂ’ ಎಂಬ ಜರಿಗಿಡವಿದೆ. ರಾಮಾಯಣದಲ್ಲಿ ಉಲ್ಲೇಖಿಸಿರುವ ಸಂಜೀವಿನಿಯ ಒಂದು ಮೂಲ ಎಂದು ಭಾವಿಸಲಾದ ‘ಸೆಲಾಜಿನೆಲ್ಲ’ ಎಂಬ ಮತ್ತೊಂದು ಜರಿಗಿಡ ಹೊಸ್ತಿಲಿನಲ್ಲಿಟ್ಟು ನೆನೆಯುವ ನಮ್ಮಮ್ಮನ ಮೌಖಿಕ ಪರಂಪರೆ ಇಂದು ಕವಲು ಹಾದಿಯಲ್ಲಿದೆ. ನಗರದ ಅಬ್ಬರದ ಜೀವನದಲ್ಲಿ ಇವೆಲ್ಲ ಮರೆತು ಹೋಗುತ್ತಿದೆ. ಇದು ಕಾಲ ನಿಯಮವೇ? ಅಥವಾ ಇಂದಿನ ವೇಗದ ಜೀವನಕ್ಕೆ ಅಪ್ರಸ್ತುತವೇ?


ಡಾ. ಗೀತಾ ಸತ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು