ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮನಸ್ಸಿಗೆ ನೋವಾದರೆ ಹಲ್ಲುಗಳಿಗೂ ನೋವು!

Published 17 ಜೂನ್ 2024, 23:18 IST
Last Updated 17 ಜೂನ್ 2024, 23:18 IST
ಅಕ್ಷರ ಗಾತ್ರ

ಸುಮಾರು ಒಂದು ವರ್ಷದಿಂದ ತಪಸ್ಸಿಗೆ ಕೂರುವಂತೆ ಕುಳಿತು ‘ನೀಟ್’ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಸಮೀಕ್ಷಾ, ಅಂದು ದಂತ ಚಿಕಿತ್ಸಾಲಯಕ್ಕೆ ಬಂದಿದ್ದಳು. ಒಸಡು ಮತ್ತು ಹಲ್ಲುಗಳ ಆಸುಪಾಸಿನ ಅಂಗಾಂಶದಲ್ಲಿ ಉರಿಯೂತ ಮತ್ತು ನೋವು ಅವಳ ಸಮಸ್ಯೆ.

ಪರಿಚಿತರ ಮಗ ಗಗನ್ ಭಾರತೀಯ ಸೇನೆಯಲ್ಲಿ ಸೈನಿಕ. ತವರೂರಿಗೆ ಬಂದಿದ್ದ ಆತನೂ ಈ ಬಾರಿ ಅಂತಹದ್ದೇ ಸಮಸ್ಯೆಗಾಗಿ ದಂತವೈದ್ಯರನ್ನು ಸಂಪರ್ಕಿಸಿದ್ದ.

ಕೆಲವು ತಿಂಗಳುಗಳ ಹಿಂದೆಯಷ್ಟೇ ಪತಿಯ ಹಠಾತ್ ಅಗಲಿಕೆಯಿಂದ ನೊಂದಿದ್ದ ಸಂಬಂಧಿ ರಾಣಿಯ ಸಮಸ್ಯೆಯೂ ಒಸಡುಗಳ ಉರಿಯೂತವೇ ಆಗಿತ್ತು.

ಮೇಲಿನ ಮೂರೂ ಸನ್ನಿವೇಶಗಳಲ್ಲಿ ಗಮನಿಸಬೇಕಾದ ಸಾಮಾನ್ಯ ಅಂಶ ಮಾನಸಿಕ ಒತ್ತಡ ಮತ್ತು ಪರಿದಂತದ ಅಂಗಾಂಶಗಳ ಉರಿಯೂತ.

ಮಾನಸಿಕ ಒತ್ತಡವು ಅಧಿಕ ರಕ್ತದೊತ್ತಡ, ಮಧುಮೇಹದಂತಹ ಅಸಾಂಕ್ರಾಮಿಕ ಕಾಯಿಲೆಗಳಿಗೆ ನೇರವಾಗಿ ಕಾರಣವಾಗಬಲ್ಲದು ಎಂದು ಕೇಳಿದ್ದೇವೆ. ಅದು ದಂತಾರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಬಹುದು ಎನ್ನುತ್ತಾರೆ, ದಂತತಜ್ಞರು.

ಒತ್ತಡ ಹೇಗೆ ಅಪಾಯ?

ಬದುಕಿನಲ್ಲಿ ವೃತ್ತಿ, ಪ್ರವೃತ್ತಿ, ಕುಟುಂಬ, ಸ್ನೇಹಿತ ವರ್ಗ – ಎಲ್ಲವನ್ನೂ ನಿಭಾಯಿಸುವಾಗ ಒತ್ತಡಕ್ಕೊಳಗಾಗುವುದು ಸಹಜ. ಈ ಮಾನಸಿಕ ಕುಗ್ಗುವಿಕೆಯು ಕೆಲವೊಮ್ಮೆ ಅಲ್ಪಾವಧಿಯದ್ದೂ, ಇನ್ನು ಕೆಲವೊಮ್ಮೆ ದೀರ್ಘಾವಧಿಯದ್ದೂ ಆಗಿರಬಹುದು. ದೀರ್ಘ ಸಮಯದವರೆಗೆ ಕಾಡುವ ಮಾನಸಿಕ ಒತ್ತಡವು ಶರೀರದಲ್ಲಿ ಕೆಲವು ಮುಖ್ಯ ಬದಲಾವಣೆಗಳನ್ನು ತರುತ್ತದೆ. ಒತ್ತಡದಿಂದ ಮುಖ್ಯವಾಗಿ ಪ್ರಚೋದನೆಗೆ ಒಳಗಾಗುವ ಕೇಂದ್ರ ನರಮಂಡಲವು ಹೈಪೋಥ್ಯಾಲಾಮಸ್ ಮತ್ತು ಪಿಟ್ಯುಟರಿ ಗ್ರಂಥಿಗಳನ್ನೂ ಪ್ರಚೋದಿಸುತ್ತದೆ. ಪಿಟ್ಯುಟರಿಯಿಂದ ಪ್ರಚೋದನೆಗೊಂಡ ಅಡ್ರೆನಲ್ ಗ್ರಂಥಿಯು ಕಾರ್ಟಿಸಾಲ್ ಎಂಬ ರಸದೂತವನ್ನು ಹೆಚ್ಚು ಸ್ರವಿಸಲು ಆರಂಭಿಸುತ್ತದೆ. ಹೆಚ್ಚಾದ ಕಾರ್ಟಿಸಾಲ್ ಹಲವು ಬಗೆಯಲ್ಲಿ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಮುಖ್ಯವಾಗಿ ಪ್ರತಿಕಾಯಗಳ ಪ್ರಮಾಣವನ್ನು ಕಡಿಮೆ ಮಾಡುವುದಲ್ಲದೆ ರೋಗಾಣುಗಳೊಂದಿಗೆ ಹೋರಾಡುವ ಜೀವಕೋಶಗಳ ಕ್ಷಮತೆಯನ್ನೂ ಕ್ಷೀಣಿಸುತ್ತದೆ. ಅಷ್ಟೇ ಅಲ್ಲ, ಲಾಲಾರಸದ ಆಮ್ಲೀಯತೆಯಲ್ಲಿ ವ್ಯತ್ಯಾಸ ತರುವುದರ ಜೊತೆಗೆ ‘ಎ‘ ಬಗೆಯ ಪ್ರತಿಕಾಯಗಳ ಸ್ರವಿಸುವಿಕೆಯನ್ನೂ ಕುಗ್ಗಿಸುತ್ತದೆ. ಈ ಎಲ್ಲ ಅಂಶಗಳು ಸೋಂಕಿನ ಹೆಚ್ಚಳಕ್ಕೆ ಎಡೆಮಾಡಿಕೊಡುತ್ತವೆ.

ಭಾವನೆಗಳ ತೀವ್ರ ಏರುಪೇರಿನಿಂದಾಗಿ ಪ್ರಚೋದನೆಗೊಳ್ಳುವ ಮತ್ತೊಂದು ನರವ್ಯೂಹವು ರಕ್ತನಾಳಗಳನ್ನು ಕಿರಿದಾಗಿಸುವುದರಿಂದ ಪರಿದಂತ ಅಂಗಾಂಶಗಳಿಗೆ ಆಮ್ಲಜನಕ ಹಾಗೂ ಪೌಷ್ಟಿಕಾಂಶಗಳ ಪೂರೈಕೆಯಲ್ಲಿಯೂ ವ್ಯತಯವಾಗುತ್ತದೆ. ಇದು ಸಹ ಸೋಂಕನ್ನು ಮತ್ತಷ್ಟು ಆಹ್ವಾನಿಸುತ್ತದೆ.

ಒತ್ತಡದಿಂದಾಗಿ ಹೆಚ್ಚು ಸ್ರವಿಸಲ್ಪಡುವ ನರವಾಹಕಗಳಾದ ‘ಎಪಿನೆಫ್ರಿನ್’, ‘ನಾರ್‌ಎಪಿನೆಫಿನ್’, ‘ನ್ಯೂರೋಕೈನಿನ್’ ಮೊದಲಾದ ಅಂಶಗಳು ರೋಗನಿರೋಧಕ ವ್ಯವಸ್ಥೆಯ ಜೀವಕೋಶಗಳನ್ನು ಪ್ರಚೋದಿಸುತ್ತವೆ. ಸಹಜಕ್ಕಿಂತಲೂ ಹೆಚ್ಚು ಕ್ರಿಯಾಶೀಲವಾಗುವ ಈ ಜೀವಕೋಶಗಳು ಪರಿದಂತದ ಅಂಗಾಂಶದ ಹಾನಿಗೂ ಕಾರಣವಾಗುತ್ತವೆ.

ಮನಸ್ಸಿನ ಚಿಂತೆ ಮತ್ತು ದುಗುಡಗಳು ಅಂಗಾಂಶಗಳ ದುರಸ್ಥಿ ಪ್ರಕ್ರಿಯೆಯ ಮೇಲೆಯೂ ಪರಿಣಾಮ ಬೀರಬಲ್ಲವು. ಈ ಸಂದರ್ಭದಲ್ಲಿ ಹೆಚ್ಚು ಸ್ರವಿಸಲ್ಪಡುವ ಪ್ರೋಟಿಯೇಸ್ ಮತ್ತು ಪ್ರೋಸ್ಟಾಗ್ಲ್ಯಾಂಡಿನ್ ಎಂಬ ಅಂಶಗಳು ಮೂಳೆ ಮತ್ತು ಸಂಯೋಜಕ ಅಂಗಾಂಶದ ದುರಸ್ಥಿಯನ್ನು ನಿಧಾನಿಸುತ್ತವೆ. ಹಾಗಾಗಿ ಸೋಂಕಿನ ನಿಯಂತ್ರಣ ಇನ್ನಷ್ಟು ತಡವಾಗುತ್ತದೆ.

ದೈನಂದಿನ ಅಭ್ಯಾಸಗಳು

ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಪಕವಾಗಿ ಮತ್ತು ಪ್ರಾಯೋಗಿಕವಾಗಿ ನಿಭಾಯಿಸಲು ಅಸಮರ್ಥರಾಗುವವರು ಒತ್ತಡದಿಂದ ಬಳಲುತ್ತಾರೆ. ಇಂತಹವರು ಮನಸ್ಸಿನ ತುಮುಲದಿಂದ ಹೊರ ಬರಲು ಮದ್ಯಪಾನ ಮತ್ತು ಧೂಮಪಾನದಂತಹ ದುರಭ್ಯಾಸಗಳ ದಾಸರಾಗುತ್ತಾರೆ. ಇದರಿಂದಲೂ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆ ಶಿಥಿಲಗೊಳ್ಳುತ್ತದೆ. ಧೂಮಪಾನದಿಂದ ದೇಹವನ್ನು ಸೇರುವ ನಿಕೋಟಿನ್, ರಕ್ತನಾಳಗಳನ್ನು ಕುಗ್ಗಿಸಿ ಅಂಗಾಂಶಗಳಿಗೆ ಆಮ್ಲಜನಕ ಮತ್ತು ಪೌಷ್ಟಿಕಾಂಶಗಳ ಪೂರೈಕೆಯಲ್ಲಿ ವ್ಯತಯವನ್ನುಂಟುಮಾಡುತ್ತದೆ. ಅಲ್ಲದೆ ಈ ಎರಡೂ ಅಭ್ಯಾಸಗಳಿಂದಾಗಿ ವ್ಯಕ್ತಿಯ ನಿದ್ದೆ ಮತ್ತು ವಿಶ್ರಾಂತಿಯೂ ಅಸ್ತವ್ಯಸ್ತಗೊಳ್ಳುತ್ತವೆ. ಇಂತಹ ವ್ಯಕ್ತಿಗಳು ಆರೋಗ್ಯಸಮಸ್ಯೆಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಮಾಡಿಸುವಲ್ಲಿಯೂ ನಿರಾಸಕ್ತಿ ತೋರುತ್ತಾರೆ.

ಮನಸ್ಸು ಸ್ತಿಮಿತದಲ್ಲಿಲ್ಲದಿದ್ದಾಗ ವ್ಯಕ್ತಿಯು ಹಲ್ಲು, ನಾಲಿಗೆ, ತುಟಿ, ಗಲ್ಲಗಳ ಒಳ ಭಾಗವನ್ನು ಕಚ್ಚುವುದು, ನಾಲಿಗೆಯನ್ನು ಮೇಲ್ದವಡೆಗೆ ಒತ್ತುವುದು, ಉಗುರು ಕಚ್ಚುವುದು, ಬೆರಳು ಚೀಪುವುದು, ಪೆನ್ನು, ಪೆನ್ಸಿಲ್ ಇತ್ಯಾದಿ ಸಾಮಗ್ರಿಗಳನ್ನು ಬಾಯಿಯ ಒಳಗೆ ತೂರಿಸಿಕೊಳ್ಳುವುದು ಮೊದಲಾದ ಅಭ್ಯಾಸಗಳಿಗೂ ಅರಿವಿಲ್ಲದಂತೆಯೇ ಶರಣಾಗುತ್ತಾರೆ. ಇದರಿಂದ ಕೂಡ ಹಲ್ಲು ಮತ್ತು ಪರಿದಂತದ ಅಂಗಾಂಶಗಳಿಗೆ ಸೋಂಕು ತಗಲುತ್ತದೆ.

ಮನೋವ್ಯಾಕುಲತೆಯಿಂದ ಬಳಲುವ ವ್ಯಕ್ತಿಯ ಆಹಾರಾಭ್ಯಾಸವೂ ಬಾಯಿಯ ಅನಾರೋಗ್ಯಕ್ಕೆ ಪೂರಕವಾಗಿರುತ್ತದೆ. ಅವರು ಹೆಚ್ಚು ಪಿಷ್ಟಾಂಶ, ಸಕ್ಕರೆ ಮತ್ತು ಸಿಹಿ ತಿನಿಸುಗಳು, ಮೆತ್ತಗಿನ ಆಹಾರಗಳು, ಜಿಡ್ಡಿನ ಪದಾರ್ಥಗಳನ್ನು ಹೆಚ್ಚು ಸೇವಿಸುತ್ತಾರೆ. ಇದೂ ಕೂಡ ದಂತಕ್ಷಯ ಮತ್ತು ಒಸಡುಗಳ ಸೋಂಕಿಗೆ ಪರೋಕ್ಷವಾಗಿ ಕಾರಣವಾಗುತ್ತವೆ.

ಚಿಕಿತ್ಸಾಲಯದಲ್ಲಿ

ಪದೇ ಪದೇ ಪರಿದಂತದ ಅಂಗಾಂಶದ ಉರಿಯೂತಕ್ಕೆಂದು ಬರುವ ರೋಗಿಗಳೊಡನೆ ದಂತತಜ್ಞರು ಆಪ್ತವಾಗಿ ಮಾತನಾಡಿ ಅವರ ಜೀವನಶೈಲಿಯ ಬಗ್ಗೆ ತಿಳಿಯುವ ಪ್ರಯತ್ನ ಮಾಡಬೇಕು. ಅವರು ಒತ್ತಡದಿಂದ ಬಳಲುತ್ತಿದ್ದಾರೆ ಎಂಬ ಸೂಕ್ಷ್ಮ ಕಂಡು ಬಂದರೆ ಆ ಬಗ್ಗೆ ಸಲಹೆಗಳನ್ನು ನೀಡಬೇಕು. ಅಗತ್ಯವಿದ್ದರೆ ಆಪ್ತಸಮಾಲೋಚಕರಲ್ಲಿ ಅಥವಾ ಮನೋವೈದ್ಯರಲ್ಲಿ ಸಲಹೆಯನ್ನು ತೆಗೆದುಕೊಳ್ಳುವಂತೆಯೂ ಸೂಚಿಸಬೇಕು.

 ಒಂದಿಷ್ಟು ಸಲಹೆಗಳು

• ಕೆಲಸಗಳನ್ನು ಆದ್ಯತೆಯ ಮೇರೆಗೆ ಮಾಡಿ.
• ಎಲ್ಲ ಕೆಲಸಗಳನ್ನು ಸಮರ್ಪಕವಾಗಿ ನಿಭಾಯಿಸಲು ವೇಳಾಪಟ್ಟಿಯನ್ನು ಹಾಕಿಕೊಳ್ಳಿ.
• ನಿಯಮಿತ ವ್ಯಾಯಾಮವನ್ನು ತಪ್ಪಿಸದಿರಿ.
• ಪೌಷ್ಟಿಕ ಆಹಾರಸೇವನೆಯನ್ನು ಮರೆಯದಿರಿ.
• ಉತ್ತಮ ಸ್ನೇಹಿತರನ್ನು ಸಂಪಾದಿಸಿ, ಅವರೊಡನೆ ನಿಮ್ಮ ಮಾನಸಿಕ ತುಮುಲಗಳನ್ನು ಹಂಚಿಕೊಳ್ಳಿ.
• ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿರಿ.

ಕಂದಕ(ಟ್ರೆಂಚ್)ಗಳಲ್ಲಿ ಅಡಗಿಕೊಂಡು ಯುದ್ಧಮಾಡುವ ಸೈನಿಕರಲ್ಲಿ ಸಾಮಾನ್ಯವಾಗಿ ಕಂಡು ಬರುವ ತೀವ್ರತರವಾದ ಒಸಡಿನ ಹುಣ್ಣು ಮತ್ತು ಉರಿಯೂತವನ್ನು ‘ಟ್ರೆಂಚ್ ಮೌತ್’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT